ಸಾವಯವ ಕೃಷಿಯ ಉದ್ಯಮಶೀಲತೆಗೆ ಉತ್ತೇಜನ


ಮಳೆಯನ್ನು ಅವಲಂಭಿಸಿದ ರೈತರ ಪರಿಸ್ಥಿತಿ ಯಾವಾಗಲೂ ಸೂಕ್ಷ್ಮವಾಗಿರುತ್ತದೆ. ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವಲ್ಲಿ ಬದ್ಧತೆಯೊಂದಿಗೆ ಹಲವರ ನೆರವು ಬೇಕಾಗುತ್ತದೆಸೆಬಾಸ್ಟಿಯನ್ಇದಕ್ಕೊಂದು ಉದಾಹರಣೆ. ಸಾವಯವ ಕೃಷಿ ಪದ್ಧತಿಗಳಿಗೆ ಬದಲಾಗಲು ರೈತರಿಗೆ ಮಾದರಿಯಾಗುವ ಮೂಲಕ ನೆರವು ನೀಡುತ್ತಿದ್ದಾರೆ.


ಸಾವಯವ ಕೃಷಿಯ ಉತ್ತೇಜನದಲ್ಲಿ ಸಾವಯವ ಅಥವಾ ಜೈವಿಕ ಒಳಸುರಿಯುವಿಕೆಗಳ ಬಳಕೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಸಾಂಪ್ರದಾಯಿಕ ಕೃಷಿಯಲ್ಲಿ, ರಾಸಾಯನಿಕ ಒಳಸುರಿಯುವಿಕೆಗಳು ಬೆಳೆಯನ್ನು ಪೋಷಿಸಲು ಮತ್ತು ರಕ್ಷಿಸಲು ನೇರವಾಗಿ ಪರಿಣಾಮ ಬೀರುತ್ತದೆಯೆಂದು ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಇದಕ್ಕೆ ವಿರುದ್ಧವಾಗಿ, ಸಾವಯವ ಕೃಷಿಯಲ್ಲಿ, ಒಳಸುರಿಯುವಿಕೆಗಳನ್ನು ಮಣ್ಣನ್ನು ಪೋಷಿಸಲು ಮತ್ತು ಕೀಟಗಳನ್ನು ನಿಯಂತ್ರಣದಲ್ಲಿಡಲು ಬಳಸಲಾಗುತ್ತದೆ. ಈ ಪ್ರಯತ್ನದಲ್ಲಿ ಸಾವಯ ಕೃಷಿಗೆ ಹೊರಳಿಕೊಳ್ಳಬೇಕೆಂದು ಬಯಸುವ ರೈತರು ಎರಡು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದು ಒಳಸುರಿಯುವಿಕೆಗಳ ಲಭ್ಯತೆ, ಎರಡನೆಯದು ಉತ್ಪನ್ನದ ಗುಣಮಟ್ಟ.

ಇತ್ತೀಚಿನ ವರ್ಷಗಳಲ್ಲಿ, ಕೆಲವು ನವೀನ ಉದ್ಯಮಶೀಲ ರೈತರು ಗುಣಮಟ್ಟದ ಜೈವಿಕ ಉತ್ಪನ್ನಗಳನ್ನು ಉತ್ಪಾದಿಸಲು ಸೂಕ್ತವಾದ ಉತ್ಪಾದನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಇತರ ರೈತರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಸಾವಯವ ಕೃಷಿಯ ಬಗ್ಗೆ ರೈತರಲ್ಲಿ ಹೆಚ್ಚುತ್ತಿರುವ ಅರಿವಿನ ಲಾಭವನ್ನು ಅವರು ಪಡೆದರು. ವಿವಿಧ ರೀತಿಯ ಸಾವಯವ ಹಾಗೂ ಜೈವಿಕ ಒಳಸುರಿಯುವಿಕೆಗಳನ್ನು ತಯಾರಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಸೆಬಾಸ್ಟಿಯನ್ ಅಂತಹ ರೈತ ಉದ್ಯಮಿಗಳಲ್ಲಿ ಒಬ್ಬರು. ಅವರು ಸಾವಯವ ಒಳಸುರಿಯುವಿಕೆಗಳನ್ನು ಯಶಸ್ವಿಯಾಗಿ ಉತ್ಪಾದಿಸುತ್ತಿದ್ದು ಈ ಪ್ರದೇಶದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.

ಸೆಬಾಸ್ಟಿಯನ್ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ವೈಯಂಪಟ್ಟಿ ಬ್ಲಾಕ್‌ನಲ್ಲಿರುವ ಮುಗವನೂರ್ ಗ್ರಾಮದ ಸಣ್ಣ ರೈತ. ಅವರು ನಾಲ್ಕೂವರೆ ಎಕರೆ ಕೃಷಿ ಭೂಮಿ ಹೊಂದಿದ್ದು, ಎರಡೂವರೆ ಎಕರೆ ಮಳೆಯಾಶ್ರಿತ ಭೂಮಿಯಾಗಿದೆ. ಅವರು ಎರಡು ಎಕರೆ ಭೂಮಿಗೆ ಬಾವಿ ಹಾಗೂ ಕೊಳವೆಬಾವಿಯ ಮೂಲಕ ನೀರನ್ನು ಒದಗಿಸುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಬರಗಾಲದ ಆವರ್ತಕ ವರ್ಷಗಳು ಕೃಷಿಗೆ ಸವಾಲೊಡ್ಡಿತ್ತು. ಆದ್ದರಿಂದ ಅವರು ಹೆಚ್ಚು ನೀರು ಬೇಡುವ ಭತ್ತದ ಕೃಷಿಯನ್ನು ಕಡಿಮೆಮಾಡಿ ಬಳ್ಳಿ ತರಕಾರಿಗಳಾದ ಹೀರೆಕಾಯಿ, ಪಡವಲ ಕಾಯಿ, ಹೀರೆಕಾಯಿ ಬೆಳೆಯಲು ಆರಂಭಿಸಿದರು. ಈ ಬಳ್ಳಿಗಳ ನೆರಳಲ್ಲಿ ಅವರು ಟೊಮೊಟೊ ಬೆಳೆಯುವ ಹೊಸ ಪದ್ಧತಿಯನ್ನು ಆರಂಭಿಸಿದರು. ಈ ವಿನೂತನ ಆವಿಷ್ಕಾರವನ್ನು ಪರಿಣಾಮಕಾರಿ ಎಂದು ಗುರುತಿಸಿ 2012ರಲ್ಲಿ ನಾರ್ವೆ ಮತ್ತು TNAUನ ಕ್ಲೈಮಾ ಅಡಾಪ್ಟ್‌ ಪ್ರೋಗ್ರಾಂನಲ್ಲಿ ಸೇರಿಸಲಾಗಿದೆ.

ಸಾವಯವ ಕೃಷಿಯ ಪಯಣ

ತಮಿಳುನಾಡಿನ ಪ್ರಸಿದ್ಧ ಸಾವಯವ ಕೃಷಿ ಪ್ರತಿಪಾದಕರಾದ ದಿವಂಗತ ಶ್ರೀ ನಮ್ಮಾಳ್ವಾರ ಅವರು ಸ್ಥಾಪಿಸಿರುವ ವನಗಂ ಸಮೀಪವೇ ಇವರು ಇರುವುದು. 2013 ರಲ್ಲಿ, ಸುರುಮಾನ್‌ಪಟ್ಟಿ ಗ್ರಾಮದಲ್ಲಿ ವನಗಂನ ಪರಿಸರ ಫಾರ್ಮ್‌ನಲ್ಲಿ ನಡೆಸಿದ ಪರಿಸರ ಕೃಷಿಯ 5 ದಿನಗಳ ಕೋರ್ಸ್‌ನಲ್ಲಿ ಭಾಗವಹಿಸಿದ್ದರು. ಇದು ಕೃಷಿಯ ಕಡೆಗಿನ ಅವರ ದೃಷ್ಟಿಕೋನವನ್ನೇ ಬದಲಾಯಿಸಿತು.

ಸ್ಥಳೀಯ ಎನ್‌ಜಿಒ ಅಹಿಂಸಾ ಆಯೋಜಿಸಿದ್ದ ಸಮಗ್ರ ಕೀಟ ನಿರ್ವಹಣೆ ಕುರಿತ ತರಬೇತಿಯಲ್ಲೂ ಸೆಬಾಸ್ಟಿಯನ್ ಭಾಗವಹಿಸಿದ್ದರು. ಇದು AME (ಅಗ್ರಿಕಲ್ಚರ್ ಮ್ಯಾನ್ ಎಕಾಲಜಿ) ನ ತಾಂತ್ರಿಕ ಮಾರ್ಗದರ್ಶನದೊಂದಿಗೆ 1990 ರ ದಶಕದ ಉತ್ತರಾರ್ಧದಲ್ಲಿ ತಮಿಳುನಾಡಿನಲ್ಲಿ IPM ವಿಧಾನಗಳನ್ನು ಕೈಗೆತ್ತಿಕೊಂಡ ಪ್ರವರ್ತಕ ಸಂಸ್ಥೆಗಳಲ್ಲಿ ಒಂದಾಗಿದ್ದು ವೈಯಂಪಟ್ಟಿ ಬ್ಲಾಕ್‌ನಲ್ಲಿ ಪರಿಸರ ಕೃಷಿಯ ಪ್ರಚಾರಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ನಂತರ, ಅವರು ನಬಾರ್ಡ್ ಮತ್ತು ಅಹಿಂಸದಿಂದ ಉಳವರ ಮಂದ್ರಂನ ಸಕ್ರಿಯ ಸದಸ್ಯರಾದರು. ವನಗಂ ಮತ್ತು ಅಹಿಂಸಾದ ಒಡನಾಟದಿಂದ ಉತ್ತೇಜಿತರಾದ ಸೆಬಾಸ್ಟಿಯನ್ ಸಾವಯವ ಕೃಷಿಯ ಕಡೆಗೆ ದೃಢವಿಶ್ವಾಸದಿಂದ ಮುಂದುವರೆದರು. ಅವರು ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಒಂದು ವರ್ಷದಲ್ಲಿ ಅವರು ತಮ್ಮ ಸಂಪೂರ್ಣ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಸಾವಯವ ವಿಧಾನಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡರು.

ಸೃಜನಶೀಲತೆಗೆ ಒದಗಿದ ಬಿಕ್ಕಟ್ಟು

ಅವರ ನಂಬಿಕೆಗೆ ಸವಾಲೆಸೆಯುವಂತೆ ಸತತ ಬರಗಾಲ ಮತ್ತು ಒಣಹವೆಯು ಎದುರಾಯಿತು. ಇದು ಸಾವಯವ ಕೃಷಿಕನಾಗುವ ಅವರ ಕನಸನ್ನು ಭಗ್ನಗೊಳಿಸಿತು. ಸತತವಾಗಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಮಳೆಯಾಶ್ರಿತ ಭೂಮಿಯಲ್ಲಿ ಕೃಷಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬಾವಿ ಹಾಗೂ ಕೊಳವೆಬಾವಿಗಳು ಬತ್ತಿದ್ದರಿಂದ ನೀರಾವರಿ ಕಷ್ಟಸಾಧ್ಯವಾಗಿ ಏನೂ ಬೆಳೆಯಲು ಸಾಧ್ಯವಾಗಲಿಲ್ಲ. ತರಕಾರಿಗಳನ್ನು ಉಳಿಸಿಕೊಳ್ಳಲು ಸೆಬಾಸ್ಟಿಯನ್‌ ನೀರನ್ನು ಹೊತ್ತುತಂದು ಗಿಡಗಳಿಗೆ ಉಣಿಸಬೇಕಾಯಿತು.

ಈ ಸಮಯದಲ್ಲಿ, ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯವು ಪುದುಕೊಟ್ಟೈ ಜಿಲ್ಲೆಯ ಕುಡುಮಿಯನ್ಮಲೈನಲ್ಲಿರುವ ಅಣ್ಣಾ ತೋಟಗಾರಿಕೆ ಫಾರ್ಮ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ತರಬೇತಿಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದರು. ಈ ತರಬೇತಿಯು ಜೈವಿಕ ಒಳಸುರಿಯುವಿಕೆಗಳ ಉತ್ಪಾದನೆ ಹಾಗೂ ಮಾರಾಟದಿಂದ ಹೇಗೆ ರೈತರು ಬದಲಿ ಆದಾಯ ಗಳಿಸಬಹುದು ಎನ್ನುವುದರ ಕಡೆ ಗಮನಕೇಂದ್ರೀಕರಿಸಿತ್ತು. ತರಬೇತಿಯು ಅವರಿಗೆ ಜೈವಿಕ ಒಳಸುರಿಯುವಿಕೆಗಳ ಉತ್ಪಾದನಾ ಉದ್ಯಮಕ್ಕೆ ಮುಂದಾಗಲು ಒಳನೋಟಗಳನ್ನು, ಐಡಿಯಾಗಳನ್ನು ನೀಡಿತು ಇದನ್ನವರು ತಮ್ಮ ಕೃಷಿಬಿಕ್ಕಟ್ಟಿಗೆ ಪರಿಹಾರವಾಗಿ ಸ್ವೀಕರಿಸಿದರು. ಹೀಗಾಗಿ ಅವರು ಕೃಷಿಯಿಂದ ಜೈವಿಕ ಒಳಸುರಿಯುವಿಕೆಗಳ ಉತ್ಪಾದನೆ ಮತ್ತು ಮಾರ್ಕೆಟಿಂಗ್‌ ಕಡೆಗೆ ಗಮನಹರಿಸಿದರು.

ನನ್ನ ಬಳಿ ಸಾವಯವ ಕೃಷಿ ಕೈಗೊಳ್ಳಲು ಸಾಕಾಗುವಷ್ಟು ಭೂಮಿಯಿದ್ದರೂ ನೀರಿನ ಅಭಾವದಿಂದ ಅದರಲ್ಲಿ 50%ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯವಿತ್ತು. ಅದೇ ಸಮಯದಲ್ಲಿ ಸಾವಯವ ಕೃಷಿಯ ಕಡೆ ಆಸಕ್ತಿಯಿದ್ದ ಕೆಲವು ರೈತರು ತಮಗೆ ಜೈವಿಕ ಒಳಸುರಿಯುವಿಕೆಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ ಎನ್ನುವ ಅಲವತ್ತು ತೋಡಿಕೊಂಡರು. ಹಾಗಾಗಿ ಅವುಗಳ ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡೆ. ಇದು ನನಗೊಂದು ಆದಾಯವನ್ನು ತಂದುಕೊಡುವುದರ ಜೊತೆಗೆ ಸಾವಯವ ಕೃಷಿ ಕಡೆಗೆ ಹೊರಳುತ್ತಿರುವ ರೈತರಿಗೆ ಸಹಾಯ ಮಾಡಿದ ಖುಷಿಯನ್ನು ಕೊಟ್ಟಿತು”, ಎಂದು ಸೆಬಾಸ್ಟಿಯನ್‌ ಹೇಳುತ್ತಾರೆ.

ಜೈವಿಕ ಒಳಸುರಿಯುವಿಕೆ ಉತ್ಪಾದನೆ ಮತ್ತು ಆದಾಯ

ಪ್ರಸ್ತುತ, ಅವರು ತಮ್ಮ ಜಮೀನಿನಲ್ಲಿ ಲಭ್ಯವಿರುವ ಕಚ್ಚಾ ವಸ್ತುಗಳ ಆಧಾರದ ಮೇಲೆ ದಸಗವ್ಯ, ಪಂಚಗವ್ಯ, ಫಿಶ್ ಅಮಿನೋ ಆಸಿಡ್, ಎರೆಹುಳು ಗೊಬ್ಬರ, ಗಿಡಮೂಲಿಕೆಗಳ ಕೀಟ ನಿವಾರಕ ಮಿಶ್ರಣದಂತಹ ಜೈವಿಕ ಒಳಸುರಿಯುವಿಕೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರು ಹಾಗೂ ಬೆಳೆ ತ್ಯಾಜ್ಯಗಳನ್ನು ಕಚ್ಚಾವಸ್ತುಗಳಾಗಿ ಬಳಸಲಾಗುತ್ತಿದ್ದು ಸೀಮಿತ ವಸ್ತುಗಳನ್ನು ಮಾತ್ರ ಹೊರಗಿನಿಂದ ತರಲಾಗುತ್ತದೆ. ಅವರ ಬಳಿ ಎರಡು ದೇಸಿ ಹಸು (ಮಾನಪಾರೈ ಎನ್ನುವ ದೇಸಿ ತಳಿ) ಮತ್ತು ಒಂದು ಜರ್ಸಿ ಹಸು ಇದೆ. ದೇಸಿ ಹಸುಗಳ ಗಂಜಲ ಮತ್ತು ಸಗಣಿಯನ್ನು ಜೈವಿಕ ಒಳಸುರಿಯುವಿಕೆಗಳ ತಯಾರಿಕೆಗೆ ಬಳಸುತ್ತಾರೆ.

ಅವರ ಉದ್ಯಮಶೀಲ ಕೌಶಲ್ಯಗಳನ್ನು ಗಮನಿಸಿ ಕೃಷಿ ಇಲಾಖೆಯವರು ಎರಡು ಟನ್‌ ಸಾಮರ್ಥ್ಯದ ಎರೆಹುಳುಗೊಬ್ಬರದ ಗುಂಡಿಗಳನ್ನು ನಿರ್ಮಿಸಲು ನೆರವು ನೀಡಿದೆ. ಅದೇ ರೀತಿ ಅಹಿಂಸ ಹಾಗೂ ಸ್ಥಳೀಯ ಎನ್‌ಜಿಒಗಳು ಸಿಂಪಡಣೆಗಳೊಂದಿಗೆ ದಸಗವ್ಯ, ಪಂಚಗವ್ಯ, ಫಿಶ್‌ ಅಮಿನೊ ಆಸಿಡ್‌ ಮತ್ತು ಗಿಡಮೂಲಿಕೆಗಳ ಕೀಟನಾಶಕ ಮಿಶ್ರಣ ತಯಾರಿಕೆಗೆ ನೆರವು ನೀಡಿದೆ.

ಅವರ ಪತ್ನಿ, ಇಬ್ಬರು ಮಕ್ಕಳನ್ನು ಒಳಗೊಂಡಂತೆ ಇಡೀ ಕುಟುಂಬ ಇದರಲ್ಲಿ ತೊಡಗಿಕೊಂಡಿದೆ. ಅವರು ತಮ್ಮ ಇಬ್ಬರು ಮಕ್ಕಳಿಗೂ ಗಿಡಮೂಲಿಕೆಗಳನ್ನು ಗುರುತಿಸುವುದು, ಅವುಗಳ ಉಪಯೋಗದ ಕುರಿತು ತರಬೇತಿ ನೀಡಿದ್ದಾರೆ. ಗಿಡಮೂಲಿಕೆಗಳು ಮತ್ತು ಕಚ್ಚಾ ವಸ್ತುಗಳ ಸಂಗ್ರಹ, ಜೈವಿಕ ಒಳಸುರಿಯುವಿಕೆಗಳ ತಯಾರಿಕೆ, ನಿಯಮಿತ ಮೇಲ್ವಿಚಾರಣೆ, ನಿರ್ವಹಣೆ, ಮಾರ್ಕೆಟಿಂಗ್‌ನಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ.

ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಿದ ನಂತರ, ಪ್ರಸ್ತುತ ಸೆಬಾಸ್ಟಿಯನ್ ಅವರು ವಾರ್ಷಿಕವಾಗಿ 100 ಲೀಟರ್ ದಸಗವ್ಯ, 100 ಲೀಟರ್ ಪಂಚಗವ್ಯ, 20 ಲೀಟರ್ ಫಿಶ್ ಅಮಿನೋ ಆಸಿಡ್, 100 ಲೀಟರ್ ಗಿಡಮೂಲಿಕೆ ಕೀಟ ನಿವಾರಕ ಮಿಶ್ರಣ ಮತ್ತು 2000 ಕೆಜಿ ಎರೆಹುಳು ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ. ಜೈವಿಕ ಒಳಸುರಿಯುವಿಕೆಗಳ ಮಾರಾಟದಿಂದ ವಾರ್ಷಿಕ ರೂ. 60000 ಗಳಿಸುತ್ತಿದ್ದಾರೆ. ಅವರ ಖರೀದಿದಾರರ ಪಟ್ಟಿಯಲ್ಲಿ ಸುಮಾರು 60-70 ರೈತರಿದ್ದಾರೆ. ಅವರಲ್ಲಿ 20 ಜನರು ನಿಯಮಿತ ಖರೀದಿದಾರರಾಗಿದ್ದಾರೆ.

ಬಹುತೇಕ, 90% ಜೈವಿಕ ಒಳಸುರಿಯುವಿಕೆಗಳನ್ನು ತಮ್ಮ ಫಾರಂ ಗೇಟ್‌ನಲ್ಲಿಯೇ ಮಾರಾಟ ಮಾಡಲಾಗುತ್ತದೆ. ಉಳಿದದ್ದನ್ನು ತಮ್ಮ ಫೋನ್‌ ಸಂಪರ್ಕದ ಮೂಲಕ ಮಾರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ ನಂತರ ಇವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೈವಿಕ ಒಳಸುರಿಯುವಿಕೆಗಳನ್ನು ತಯಾರಿಸಲು ಹಾಗೂ ಬಳಸಲು ಆಸಕ್ತಿ ಇರುವ ರೈತರಿಗೆ ಸಲಹೆಯನ್ನೂ ನೀಡುತ್ತಾರೆ.

ಮಿನಿ ಲ್ಯಾಬ್

2018-19 ನೇ ಸಾಲಿನಲ್ಲಿ ಕೃಷಿ ಇಲಾಖೆಯು ರೈತರ ಒಟ್ಟಾಗಿ ಮಾಡಬಹುದಾದ ಕೆಲಸಗಳನ್ನು ಬಲಪಡಿಸಲು ಮತ್ತು ಅವರ ಉದ್ಯಮಶೀಲತಾ ಕೌಶಲ್ಯವನ್ನು ಹೆಚ್ಚಿಸಲು ರಾಜ್ಯ ಮಟ್ಟದ ತರಬೇತಿಯನ್ನು ಆಯೋಜಿಸಿದೆ. ಸೆಬಾಸ್ಟಿಯನ್‌ ಎಫ್‌ಪಿಒದ ಸದಸ್ಯರಾಗಿ ಉಳಿದ 70 ರೈತರೊಂದಿಗೆ ತರಬೇತಿಯಲ್ಲಿ ಭಾಗವಹಿಸಿದರು. ತರಬೇತಿಯ ನಂತರ, ಸೆಬಾಸ್ಟಿಯನ್ ಅವರು ಮೆಟಾರೈಜಿಯಂ ಅನಿಸೊಪ್ಲಿಯೇ ಎಂಬ ಶಿಲೀಂಧ್ರದ ಎಂಟೊಮೊಪಾಥೋಜೆನ್ ಉತ್ಪಾದನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು. ಇದು ಮಣ್ಣಿನಲ್ಲಿ ವಾಸಿಸುವ ಕೀಟಗಳು ಮತ್ತು ಸಂಬಂಧಿತ ಬೇರು ಕೊಳೆಯುವ ಸಮಸ್ಯೆಗಳಿಗೆ ಜೈವಿಕ ನಿಯಂತ್ರಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.‌ ಅವರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಿನಿ ಲ್ಯಾಬ್ ಸ್ಥಾಪಿಸಲು ಹಾಗೂ ಮೆಟಾರೈಜಿಯಂ ಉತ್ಪಾದಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಅವರ ಸ್ಥಳಕ್ಕೆ ಕ್ಷೇತ್ರ ಭೇಟಿ ನೀಡಿ ತಮ್ಮ ಗುಂಪಿನ ಸದಸ್ಯರೊಂದಿಗೆ ಸಂವಾದ ನಡೆಸಿ ಮಿನಿ ಲ್ಯಾಬ್ ಸ್ಥಾಪನೆಗೆ ಯೋಜನೆಯನ್ನು ಅಂತಿಮಗೊಳಿಸಿದರು. ಲ್ಯಾಬ್‌ ಸ್ಥಾಪನೆಗೆ ಬೇಕಾದ ವಸ್ತುಗಳು ಅಂದರೆ ಟೇಬಲ್‌ಗಳು, ಪ್ರೆಶರ್‌ ಕುಕ್ಕರ್‌, ಯುವಿ ಲೈಟುಗಳು, ಬಕೇಟುಗಳು, ಕಂಟೈನರ್‌ಗಳನ್ನು ಕೊಳ್ಳಲು ಒಟ್ಟು ರೂ. 70,200 ನೀಡಿದರು. ಸೆಬಾಸ್ಟಿಯನ್ ಅವರು ವಾರ್ಷಿಕವಾಗಿ ಸುಮಾರು 50 ಕೆಜಿ ಮೆಟಾರೈಜಿಯಂ ಅನ್ನು ಉತ್ಪಾದಿಸುತ್ತಿದ್ದು ಸುಮಾರು ರೂ. 9000 ಗಳಿಸುತ್ತಿದ್ದಾರೆ.

ಹೀಗಿದ್ದೂ ಮಾರ್ಕೆಟಿಂಗ್‌ ಸವಾಲುಗಳಿವೆ. ಕೃಷಿ ಇಲಾಖೆಯು ನೇರವಾಗಿ ಮೆಟಾರೈಜಿಯಂ ಅನ್ನು ರೈತರಿಗೆ ಮಾರಾಟ ಮಾಡುತ್ತಿದ್ದು ಆಕರ್ಷಕ ಪ್ಯಾಕಿಂಗ್ ಮತ್ತು ಬ್ರಾಂಡ್ ಹೆಸರನ್ನು ಹೊಂದಿದೆ. ಸೆಬಾಸ್ಟಿಯನ್‌ ಅವರಂತಹ ರೈತರಿಗೆ ಇಲಾಖೆಯೇ ಪ್ರತಿಸ್ಪರ್ಧಿಯಾಗಿದೆ. ಇವರ ಉತ್ಪನ್ನಗಳು ಚೆನ್ನಾಗಿ ಪ್ಯಾಕ್‌ ಆಗಿರುವುದಿಲ್ಲ ಒಳ್ಳೆಯ ಹೆಸರು ಇರುವುದಿಲ್ಲ. ಈ ಮಾರ್ಕೆಟಿಂಗ್‌ ಸವಾಲನ್ನು ಜಯಿಸಲು ಸೆಬಾಸ್ಟಿಯನ್‌ ಖರೀದಿ ಬೆಂಬಲವನ್ನು ನಿರೀಕ್ಷಿಸಿದರು.

ಉಪಸಂಹಾರ

 ಸಾವಯವದ ಮೂಲಕ, ತಮ್ಮ ಮಣ್ಣಿನ ಆರೋಗ್ಯವನ್ನು ಸುಧಾರಿಸಿರುವುದನ್ನು ನೋಡಿ ಸೆಬಾಸ್ಟಿಯನ್ ಮತ್ತು ಇತರ ರೈತರು ಸಂತೋಷಗೊಂಡಿದ್ದಾರೆ. ಜೈವಿಕ ಒಳಸುರಿಯುವಿಕೆಗಳ ಬಳಕೆಯಿಂದಾಗಿ ಮಣ್ಣಿನ ಜೀವಜಗತ್ತು ಮರುಹೂರಣಗೊಳ್ಳುತ್ತದೆ. ಬೆಳೆ ಆರೋಗ್ಯ ಸುಧಾರಣೆಗೊಂಡು ಕೀಟಬಾಧೆ ಕಡಿಮೆಯಾಗಿ ಕುಟುಂಬಕ್ಕೆ ಸುರಕ್ಷಿತ, ಸ್ವಾದಿಷ್ಟ ಆಹಾರ ದೊರಕುತ್ತದೆ.

ಸೆಬಾಸ್ಟಿಯನ್‌ ಅವರ ಅನುಭವಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತಿರುಚನಾಪಳ್ಳಿಯ ವೆಲನ್ಅರಂಗಂ ಎನ್ನುವ ಆಕಾಶವಾಣಿಯ ಕೃಷಿ ಕಾರ್ಯಕ್ರಮದಲ್ಲೂ ಪ್ರಸಾರವಾಯಿತು. ಸೆಬಾಸ್ಟಿಯನ್‌ ಅವರು ಈ ಪ್ರದೇಶದ ಉದ್ಯಮಶೀಲರಿಗೆ ಮಾದರಿಯಾಗಿ ಹೊರಹೊಮ್ಮಿದರು.

ವಿಕ್ಟರ್‌ ಐ ಮತ್ತು ಸುರೇಶ ಕಣ್ಣಾ ಕೆ


Victor. I,

Secretary,  AHIMSA,

No. 1-207 C, Sona Complex, Main road, Vaiyampatti, 621 315

Trichy District, Tamil Nadu,

Email: info@ahimsa.ngo

 

Suresh Kanna. K,

Senior Team Member,

Kudumbam,

113/118, Subramaniyapuram,

Trichy 620 020

Email: kannasuresh71@gmail.com

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೧ ; ಮಾರ್ಚ್‌ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...