ಸೆಕೆಂಡರಿ ಅಗ್ರಿಕಲ್ಚರ್ ಮಧ್ಯಭಾರತದ ಬುಡುಕಟ್ಟು ಜನಾಂಗದವರ ಸಬಲೀಕರಣ


ಸೆಕೆಂಡರಿ ಅಗ್ರಿಕಲ್ಚರ್ಮುಖ್ಯವಾಗಿ ಕೃಷಿ ಕೆಲಸಗಳನ್ನುಆಧರಿಸಿದ್ದು ರೈತರ ಆದಾಯ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಮೌಲ್ಯವರ್ಧನೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಜನ್ಮಧ್ಯಪ್ರದೇಶದ ಸಹಾರಿಯ ಬುಡಕಟ್ಟಿನವರಿಗೆ ಸೂಕ್ತ ಸಲಹೆ, ಪ್ರಾಯೋಗಿಕ ತರಬೇತಿ, ಮಾರುಕಟ್ಟೆ ಸಂಪರ್ಕ ಇವುಗಳನ್ನು ನೀಡುವ ಮೂಲಕ ಅವರಿಗೆ ಉತ್ತಮ ಆದಾಯ ಗಳಿಸಲು ಸಹಾಯ ಮಾಡಿತು.


ಸೆಕೆಂಡರಿ ಕೃಷಿಯು ರೈತರ ಆದಾಯವನ್ನು ದ್ವಿಗುಣಿಸಿಕೊಳ್ಳಲು ಮತ್ತು ಕೃಷಿಯ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಆಯ್ಕೆಗಳನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಕೃಷಿಯ ಕ್ರಿಯಾತ್ಮಕ ವಿಸ್ತರಣೆಯು ರೈತರ ಆದಾಯವನ್ನು ಹೆಚ್ಚಿಸಲು ಒಂದು ಹಾದಿಯಾಗಿದೆ. ಸಣ್ಣ ಹಾಗೂ ಭೂರಹಿತರು ಕಾಡಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮ ಜೀವನಾಧರಕ್ಕಾಗಿ ಅವಲಂಭಿಸಿರುತ್ತಾರೆ. ಇದರೊಂದಿಗೆ ರೈತ ಕುಟುಂಬಗಳು ತಮ್ಮ ಬಿಡುವಿನ ವೇಳೆಯನ್ನು ಬಳಸಿಕೊಳ್ಳುವುದು ಸೆಕೆಂಡರಿ ಕೃಷಿಯ ಅನುಕೂಲವಾಗಿದೆ. ಗ್ರಾಮೀಣರ ಕೃಷಿಯೇತರ ಚಟುವಟಿಕೆಗಳು ಇದರ ಭಾಗವಾಗಿದೆ. ಇದು ಲಭ್ಯವಿರು ಮಾನವ ಸಂಪನ್ಮೂಲಗಳನ್ನು, ತಂತ್ರಜ್ಞಾನಗಳನ್ನು ಮತ್ತು ಸ್ಪರ್ಧಾತ್ಮಕತೆಯನ್ನು ಬಳಸಿಕೊಂಡು ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಇದರಲ್ಲಿ ಭಾಗಿಯಾದವರಿಗೆ ಸಾಕಷ್ಟು ಆದಾಯವನ್ನು ತಂದುಕೊಡುತ್ತದೆ.

ಸೆಲ್ಫ್‌ ರಿಲಯೆಂಟ್‌ ಇನ್ಶಿಯೇಟೀವ್ಸ್‌ ಥ್ರೂ ಜಾಯಿಂಟ್‌ ಆಕ್ಷನ್‌ (ಶ್ರೀಜನ್)‌ ಅಂತರಾಷ್ಟ್ರೀಯ ಖ್ಯಾತಿಯ ಎನ್‌ಜಿಒ. ಇದು ಮಧ್ಯಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಸಹಾರಿಯ ಬುಡಕಟ್ಟಿನವರಿಗೆ ತಮ್ಮ ಜೀವನಕ್ರಮವನ್ನು ಉತ್ತಮಗೊಳಿಸಿಕೊಳ್ಳಲು ಮೌಲ್ಯವರ್ಧನೆಯಂತಹ ಆಯ್ಕೆಯನ್ನು ಕೊಟ್ಟಿದೆ. ಇವರು ಹೆಚ್ಚುವರಿ ಆದಾಯ ಗಳಿಸುವುದರೊಂದಿಗೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕಾಡುಗಳನ್ನು ಸಂರಕ್ಷಿಸಲು ನೆರವಾಗಿದೆ. ಭಾರತ ಸರ್ಕಾರವು ಮುಖ್ಯವಾಗಿ ಮಧ್ಯಪ್ರದೇಶದ ಮೊರೆನಾ, ಶಿಯೋಪುರ್, ಭಿಂಡ್, ಗ್ವಾಲಿಯರ್, ಡಾಟಿಯಾ, ಶಿವಪುರಿ, ವಿದಿಶಾ ಮತ್ತು ಗುನಾ ಜಿಲ್ಲೆಗಳಲ್ಲಿ ಕಂಡುಬರುವ ಸಹರಿಯಾ ಬುಡಕಟ್ಟುಗಳನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳೆಂದು (PVTG) ಎಂದು ವರ್ಗೀಕರಿಸಿದೆ. ಸಹಾರಿಯಾಗಳು ಸಾಂಪ್ರದಾಯಿಕವಾಗಿ ಕಾಡಿನಲ್ಲೇ ಬದುಕುತ್ತಿದ್ದವರು. ಇವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಇವರ ಮುಖ್ಯ ಉದ್ಯೋಗ ಬೇಟೆ ಮತ್ತು ಅಂಟು, ಕಾಚು, ಬೀಡಿ ಎಲೆ, ಜೇನು, ಇಪ್ಪೆ ಮತ್ತಿತರ ಔಷಧೀಯ ಗಿಡಮೂಲಿಕೆಗಳನ್ನು ಕಾಡಿನಿಂದ ಸಂಗ್ರಹಿಸಿ ಮಾರಾಟ ಮಾಡುವುದು. ಈ ಬುಡಕಟ್ಟಿನ ಹಲವರು ಕೃಷಿಕರಾಗಿದ್ದು ಗೋಧಿ, ಜೋಳ, ಸಜ್ಜೆ, ಉದ್ದು, ತೊಗರಿಯನ್ನು ಬೆಳೆಯುತ್ತಾರೆ.

ಕಾಡಿನ ಬೆಂಕಿ ಎಂದು ಕರೆಯಲಾಗುವ ಮುತ್ತುಗ ಶಿವಪುರಿ ಪ್ರದೇಶದ ಕಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಮರ. ಈ ಪ್ರದೇಶದಲ್ಲಿ ಹೆಕ್ಟೇರಿಗೆ ಸರಿಸುಮಾರು ೧೭ ಮುತ್ತುಗದ ಮರಗಳಿವೆ ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಈ ಮರದ ಎಲ್ಲ ಭಾಗಗಳನ್ನು (ಹೂವು, ಎಲೆಗಳು, ಬೀಜಗಳು, ಅಂಟು) ಆದಾಯಕ್ಕಾಗಿ ಬಳಸುತ್ತಾರೆ. ಈ ಮರದ ಅಂಟು ಬಹುಪಯೋಗಿ ವಸ್ತು. ಇದಕ್ಕೆ ಹಲವು ಬಗೆಯ ಔಷಧೀಯ ಗುಣಗಳಿವೆ. ಈ ಅಂಟನ್ನು ಸಂಗ್ರಹಿಸಲು ವಿಶೇಷ ಪರಿಣಿತಿ ಬೇಕು. ಸಹಾರಿಯ ಬುಡಕಟ್ಟಿನವರು ಇದರಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ.

ಡಬ್ಲ್ಯೂಪಿಜಿ ಸದಸ್ಯರ ತರಬೇತಿ ನಡೆಯುತ್ತಿದೆ

ಈ ಪ್ರದೇಶದಲ್ಲಿ ಕೃಷಿಯು ಮಳೆಯಾಶ್ರಿತವಾಗಿರುವುದರಿಂದ ಖಾರಿಫ್‌ ಬೆಳೆಯ ನಂತರ ರೈತರಿಗೆ ಬೇರೆ ಯಾವುದೇ ಕೃಷಿ ಕೆಲಸವಿರುವುದಿಲ್ಲ. ಈ ಸಮಯದಲ್ಲಿ ರೈತರು ಮುತ್ತುಗದ ಮರದಿಂದ ಅಂಟು ಹಾಗೂ ಹೂಗಳನ್ನು ಸಂಗ್ರಹಿಸುತ್ತಾರೆ. ಡಿಸಂಬರ್‌ ಇಂದ ಫೆಬ್ರವರಿವರೆಗಿನ ಸಮಯವು ಅಂಟು ಸಂಗ್ರಹಕ್ಕೆ ಸೂಕ್ತ ಸಮಯ. ಅಂಟು ಸಂಗ್ರಹದ ಇಡೀ ಪ್ರಕ್ರಿಯೆಯು ಶ್ರಮದಾಯಕವಾದದ್ದು. ಅಂಟಿನ ಸಂಗ್ರಹಕ್ಕೆ ಸೂಕ್ತವಾದ ಮರದ ಆಯ್ಕೆ ಮಾಡುವುದು ಸಮಯ ಹಾಗೂ ಕೌಶಲವನ್ನು ಬೇಡುತ್ತದೆ. ದುರದೃಷ್ಟವಶಾತ್‌ ರೈತರಿಗೆ ಈ ಅರಣ್ಯಾಶ್ರಿತ ಚಟುವಟಿಕೆಗಳಿಂದ ಉತ್ತಮ ಆದಾಯ ಸಿಗುವುದಿಲ್ಲ. ಅವರು ಉದ್ಯೋಗಕ್ಕೆ ಹತ್ತಿರದ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ.

 

೨೦೧೯ರ ಚಳಿಗಾಲದ ಹೊತ್ತಿಗೆ ಶ್ರೀಜನ್‌ ಆರಂಭವಾಗಿ ಆರು ತಿಂಗಳಾಗಿತ್ತು. ಆಗಲೇ ಅದು ಮುತ್ತುಗ ಮರದ ಅಂಟಿನ ಉಪಯೋಗಗಳು ಹಾಗೂ ರೈತರ ಆದಾಯ ಹೆಚ್ಚಳದ ದಾರಿಯ ಕುರಿತು ವಿಸ್ತೃತ ಅಧ್ಯಯನಕ್ಕೆ ಮುಂದಾಯಿತು. ಅಧ್ಯಯನದಲ್ಲಿ ಶಿವಪುರಿ ಜಿಲ್ಲೆಯಲ್ಲಿ ಅಂಟಿನ ಉತ್ಪಾದನೆ ಹೆಚ್ಚಿದ್ದು ಅದಕ್ಕೆ ಮಾರುಕಟ್ಟೆ ಕೂಡ (ಸುಮಾರು ೪೦ಕೋಟಿ) ಚೆನ್ನಾಗಿರುವುದು ತಿಳಿದುಬಂದಿತು. ಸ್ಥಳೀಯ ಮಾರುಕಟ್ಟೆಯಲ್ಲದೆ ಇಂದೋರ್‌, ನೀಮುಚ್‌, ದೆಹಲಿ, ಜೋಧಪುರ ಮತ್ತು ವಡೋದ್ರಾಗಳು ಈ ಅಂಟಿಗೆ ಉತ್ತಮ ಮಾರುಕಟ್ಟೆ ಪ್ರದೇಶಗಳು. ಸ್ಥಳೀಯ ದಲ್ಲಾಳಿಗಳು ಬುಡಕಟ್ಟಿನ ರೈತರು ತರುತ್ತಿದ್ದ ಅಂಟನ್ನು ಕಡಿಮೆ ತೂಕ ಮಾಡಿ ಕಡಿಮೆ ಬೆಲೆಗೆ ಕೊಳ್ಳುವ ಮೂಲಕ ಅವರಿಗೆ ಮೋಸ ಮಾಡುತ್ತಿದ್ದದ್ದು ಅಧ್ಯಯನದಲ್ಲಿ ಕಂಡುಬಂದಿತು. ಸ್ಥಾಪಿತ ಮಾರುಕಟ್ಟೆಗಳಿಗೂ ಈ ರೈತರಿಗೂ ಸಂಪರ್ಕ ಏರ್ಪಡಿಸುವ ಮೂಲಕ ಅವರಿಗೆ ೨೦% ಇಂದ ೩೦% ಹೆಚ್ಚುವರಿ ಆದಾಯ ಬರುವಂತೆ ಮಾಡಬಹುದು. ಜೊತೆಗೆ ಅಂಟಿನ ಸಂಗ್ರಹಣೆಯ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಬಹುದು ಎನ್ನುವುದು ಅಧ್ಯಯನದಿಂದ ತಿಳಿದುಬಂದಿತು.

 ಜೊತೆಯಾಗಿ ಕ್ರಮಿಸಿದ ಹಾದಿ

ಶ್ರೀಜನ ಮಹಿಳಾ ಸ್ವಸಹಾಯ ಸಂಘಗಳ ಜೊತೆ ಕೈಜೋಡಿಸಿ ಮಧ್ಯಪ್ರದೇಶ ಸರ್ಕಾರದ ಗ್ರಾಮೀಣ ಜೀವನೋಪಾಯ ಮಿಷನನ್ನು ಶಿವಪುರಿಯ ಕರೆರ ಹಳ್ಳಿಗಳಲ್ಲಿ ಪ್ರಚುರಪಡಿಸಿತು. ಸ್ವಸಹಾಯ ಗುಂಪುಗಳ ನೆರವಿನಿಂದ ಈಗಾಗಲೇ ಅಂಟು ಸಂಗ್ರಹಣೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಗುರುತಿಸುವುದು ಸುಲಭವಾಯಿತು. ಪ್ರತಿ ಹಳ್ಳಿಯಲ್ಲಿ ಅಂಟುಸಂಗ್ರಹಣೆಗೆಂದೇ ಮಹಿಳಾ ಉತ್ಪಾದಕರ ಗುಂಪನ್ನು ರಚಿಸಲಾಯಿತು. ಸೆಂಟ್ರಲ್‌ ಆಗ್ರೋ ಫಾರೆಸ್ಟ್ರಿ ರಿಸರ್ಚ್‌ ಇನ್ಸ್‌ಟ್ಯೂಟ್‌ನ ವಿಜ್ಞಾನಿಗಳು ಈ ಗುಂಪಿನ ಸದಸ್ಯರಿಗೆ ಅಂಟು ಸಂಗ್ರಹಣೆ, ಒಣಗಿಸುವಿಕೆ ಹಾಗೂ ಶುದ್ಧಮಾಡುವ ವಿಧಾನಗಳ ಕುರಿತು ತರಬೇತಿ ನೀಡಿದರು. ಕಾಂಡಗಳನ್ನು ಆಳವಾಗಿ ಕತ್ತರಿಸುವುದಕ್ಕೆ ಬದಲಾಗಿ ಚಿಕ್ಕದಾಗಿ ಕತ್ತರಿಸುವುದು, ಕತ್ತರಿಸುವ ಮೊದಲು ಅದನ್ನು ಸ್ವಚ್ಛಗೊಳಿಸುವುದು ಇಂತಹ ಸರಳವಾದ ಸೂಚನೆಗಳು ಅಂಟಿನ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಹಾಯಮಾಡಿತು. ಈ ಸದಸ್ಯರಿಗೆ ಪುಸ್ತಕವನ್ನಿಟ್ಟು ದಾಖಲೆಗಳನ್ನು ನಿರ್ವಹಿಸುವುದು, ತೂಕವನ್ನು ಗುರುತುಮಾಡಿಕೊಳ್ಳುವುದು, ದರದ ಲೆಕ್ಕಾಚಾರ ಇವುಗಳ ನಿರ್ವಹಣೆಯ ಕುರಿತು ತರಬೇತಿ ನೀಡಲಾಯಿತು. ಅಂಟು ಕೊಯ್ಲಿನಲ್ಲಿ ಅವರ ಸುಸ್ಥಿರ ಪದ್ಧತಿಯು ಸಮುದಾಯದ ಒಟ್ಟಾರೆ ಅಂಟು ಸಂಗ್ರಹಣೆ ಹಾಗೂ ಗುಣಮಟ್ಟದಲ್ಲಿ (೩೦%) ಹೆಚ್ಚಳ ತಂದಿತು.

ಸ್ವಸಹಾಯಗುಂಪುಗಳು ಮಹಿಳಾ ಉತ್ಪಾದಕರ ಗುಂಪನ್ನು ರೂಪಿಸಿ ಗ್ರಾಮ ಮಟ್ಟದಲ್ಲಿ ಸಂಗ್ರಹಣಾ ಕೇಂದ್ರವನ್ನು(ವಿಎಲ್‌ಸಿಸಿ) ಪ್ರತಿ ಹಳ್ಳಿಯಲ್ಲಿ ಸ್ಥಾಪಿಸಿ ಸ್ವಸಹಾಯ ಗುಂಪುಗಳೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಡಲಾರಂಭಿಸಿದವು. ಮಹಿಳಾ ಉತ್ಪಾದಕರ ಗುಂಪಿನ ಸದಸ್ಯರು ಕಾಡಿನಿಂದ ಸಂಗ್ರಹಿಸಿದ ಉತ್ಪನ್ನಗಳನ್ನು ತಮ್ಮ ಮನೆಗಳಲ್ಲಿ ಸ್ವಚ್ಛಗೊಳಿಸಿ ಒಣಗಿಸಿ ಕೊಡಲು ನಿರ್ಧರಿಸಿದರು. ಮೊದಲ ಹಂತದ ಸ್ವಚ್ಛತೆ ಹಾಗೂ ಒಣಗಿಸುವಿಕೆಯ ನಂತರ ಸದಸ್ಯರು ತಮ್ಮ ಉತ್ಪನ್ನಗಳನ್ನು ತಮ್ಮ ಹಳ್ಳಿಗಳಲ್ಲಿ ಮಾರಾಟ ಮಾಡಿದರು. ಮೊದಲ ವರ್ಷ ಹಳ್ಳಿಗರು ೭೩೨ಕೆಜಿ ಅಂಟನ್ನು ಮಾರಾಟ ಮಾಡಿದರು.

ಗ್ರಾಮ ಮಟ್ಟದ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿದ ನಂತರ ಸದಸ್ಯರಲ್ಲಿ ನಾಯಕತ್ವದ ಕೌಶಲವುಳ್ಳವರು ತಮ್ಮ ಉತ್ಪನ್ನಗಳನ್ನು ಮಾರಾಟಮಾಡುವ ಹೊಣೆ ಹೊತ್ತರು. ಅವರು ದಲ್ಲಾಳಿಗಳ ಮಧ್ಯಪ್ರವೇಶವನ್ನು ಎಲ್ಲ ಹಂತದಲ್ಲಿ ತಡೆಗಟ್ಟಲು ನಿರ್ಧರಿಸಿದರು. ವ್ಯಾಪಾರ ತರಬೇತಿ ಮತ್ತು ಶ್ರೀಜನ್‌ನ ನಿರಂತರ ಪ್ರೋತ್ಸಾಹದಿಂದ ಮಹಿಳಾ ಸದಸ್ಯರು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕಲು ಆರಂಭಿಸಿದರು. ಶ್ರೀಜನ ತಂಡದ ಸಹಕಾರದೊಂದಿಗೆ ಮಹಿಳೆಯರು ಇಂದೋರ್‌, ನೀಮುಚ್‌, ದೆಹಲಿ, ಜೋಧಪುರ್‌, ವಡೋದ್ರಾ ನಗರಗಳಲ್ಲಿನ ಮಾರುಕಟ್ಟೆಯನ್ನು ತಲುಪಿದರು. ಇದರಿಂದ ೨೦% ಹೆಚ್ಚಿನ ಬೆಲೆಯನ್ನು ಪಡೆಯುವಂತಾಯಿತು. ಉತ್ಪಾದನೆಯ ಹೆಚ್ಚಳ, ಹೆಚ್ಚಿನ ಬೆಲೆ, ಉತ್ತಮ ಸಂಸ್ಥೆಯಿಂದಾಗಿ ಹಳ್ಳಿಗರು ಮಹಿಳಾ ಉತ್ಪಾದಕರ ಸಂಘದೊಂದಿಗೆ ೪೫೦೦ ಕೆಜಿ ಅಂಟನ್ನು ಮಾರಾಟ ಮಾಡಿದರು.

ಮಹಿಳಾ ಉತ್ಪಾದಕರ ಗುಂಪು ತಮ್ಮ ಸಭೆಗಳಲ್ಲಿ ಸದಸ್ಯರಿಂದ ಕನಿಷ್ಠ ಬೆಲೆ ಹಾಗೂ ಗುಣಮಟ್ಟದ ಅಂಟನ್ನು ತೆಗೆದುಕೊಳ್ಳಲು ಸಮ್ಮತಿಸಿದವು. ಸದಸ್ಯರು ಬಂದ ಲಾಭದಲ್ಲಿ ೫೦% ಗ್ರಾಮ ಮಟ್ಟದ ಸಂಗ್ರಹಣಾ ಕೇಂದ್ರಕ್ಕೆ ಮಾರಾಟ ಮಾಡಿದ ಸದಸ್ಯರಿಗೆ ವಿತರಿಸಿದವು. ಉಳಿದ ೫೦% ಗುಂಪಿನ ಖರ್ಚುವೆಚ್ಚಕ್ಕಾಗಿ ಉಳಿಸಿಕೊಂಡವು. ಸದಸ್ಯರ ಉತ್ಪನ್ನಗಳು ಮಹಿಳಾ ಉತ್ಪಾದಕರ ಗುಂಪಿನ ಗುಣಮಟ್ಟಕ್ಕೆ ತಕ್ಕಂತೆ ಇಲ್ಲದಿದ್ದಲ್ಲಿ ಇಲ್ಲವೇ ಸದಸ್ಯರಿಗೆ ತಮ್ಮ ಉತ್ಪನ್ನಗಳನ್ನು ಗುಂಪಿಗೆ ಮಾರಾಟ ಮಾಡಲು ಇಷ್ಟವಿಲ್ಲದಿದ್ದಲ್ಲಿ ಅದನ್ನು ನೇರವಾಗಿ ಮಾರುಕಟ್ಟೆಯಲ್ಲಿ ಇಲ್ಲವೇ ಸ್ಥಳೀಯ ದಲ್ಲಾಳಿಗಳಿಗೆ ಮಾರುವ ಸ್ವಾತಂತ್ರ್ಯವಿದೆ.

ದಯಾಬತಿಯ ಕತೆ

ದಯಾಬತಿ ಆದಿವಾಸಿ, ಅವಳ ಗಂಡ ತಮ್ಮ ಇಬ್ಬರು ಮಕ್ಕಳೊಂದಿಗೆ ಶಿವಪುರಿ ಜಿಲ್ಲೆಯ ಸಿಮ್ರಾ ಎನ್ನುವ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಅವರ ಬಳಿ ಕೇವಲ ಅರ್ಧ ಎಕರೆ ಜಮೀನಿದೆ. ಅದರಲ್ಲಿ ಬೆಳೆಯುವುದು ಅತ್ಯಲ್ಪ ಹೀಗಾಗಿ ತಮ್ಮ ಜೀವನಕ್ಕಾಗಿ ಅವರು ಕೂಲಿಯಾಳುಗಳಾಗಿ ಕೆಲಸ ಮಾಡುವುದರೊಂದಿಗೆ ಕಾಡನ್ನು ಅವಲಂಬಿಸಿದ್ದಾರೆ. ದಯಾಬತಿ ಮತ್ತವಳ ಗಂಡ ಕಾಡಿನಿಂದ ಅಂಟನ್ನು ಸಂಗ್ರಹಿಸಿ ಸ್ಥಳೀಯವಾಗಿ ಕೊಳ್ಳುವವರಿಗೆ ಕೆಜಿಗೆ ರೂ.೭೦-೮೦ರಂತೆ ಮಾರುತ್ತಿದ್ದರು. ಅವರಿಗೆ ಹತ್ತಿರದ ಕಾಡು ೨ ಕಿಮೀ ದೂರದಲ್ಲಿತ್ತು. ಅಂಟನ್ನು ಸಂಗ್ರಹಿಸಲು ಕಾಡಿನೊಳಗೆ ಹೋಗಬೇಕಿತ್ತು. ದಯಾಬತಿ ಮುಂಜಾನೆ ಬೇಗ ಎದ್ದು ಅಡುಗೆ ಮಾಡಿಟ್ಟು ಅಂಟನ್ನು ಸಂಗ್ರಹಿಸಲು ಕಾಡಿಗೆ ಹೋದರೆ ಸಂಜೆ ಮರಳುತ್ತಿದ್ದಳು. ದಿನವೊಂದಕ್ಕೆ ಅವಳು ಸರಾಸರಿ ೩-೪ ಕೆಜಿ ಅಂಟನ್ನು ಸಂಗ್ರಹಿಸುತ್ತಿದ್ದಳು.ಶ್ರೀಜನದ ಕಾರ್ಯಕ್ರಮಗಳ ಕುರಿತು ತಿಳಿದ ಮೇಲೆ ಆಕೆ ಮಹಿಳಾ ಉತ್ಪಾದಕರ ಗುಂಪಿನ ಸಕ್ರಿಯ ಸದಸ್ಯಳಾದಳು. ಅವಳ ಆಸಕ್ತಿ ಹಾಗೂ ನಾಯಕತ್ವದ ಗುಣಗಳನ್ನು ನೋಡಿ ಅವಳನ್ನು ಕೇಂದ್ರದ ಮುಖ್ಯಸ್ಥೆಯನ್ನಾಗಿ ಮಾಡಲಾಯಿತು. ಅವಳಿಗೆ ದಾಖಲೆಗಳನ್ನು ಹೇಗೆ ನಿರ್ವಹಿಸುವುದು, ಇ- ತೂಕ ಯಂತ್ರದ ನಿರ್ವಹಣೆ ಹಾಗೂ ಪಾವತಿಗಳ ಕುರಿತು ತರಬೇತಿ ನೀಡಲಾಯಿತು.ಒಂದು ಋತುವಿನಲ್ಲಿ ಆಕೆ ಗ್ರಾಮ ಮಟ್ಟದ ಸಂಗ್ರಹಣಾ ಕೇಂದ್ರದಲ್ಲಿ ೧೭೧ ಕೆಜಿ ಅಂಟನ್ನು ಕೆಜಿಗೆ ರೂ.೧೦೫ರಂತೆ ಮಾರಿದಳು. ಇದರಿಂದ ಮೂರು ತಿಂಗಳಲ್ಲಿ ರೂ.೧೮,೮೪೭ ಗಳಿಸಿದಳು. ಗ್ರಾಮೀಣ ಮಟ್ಟದ ಸಂಗ್ರಹಣಾ ಕೇಂದ್ರಕ್ಕೆ ಮಾರಾಟ ಮಾಡಿದ್ದರಿಂದ ರೂ.೪,೨೭೫ ಲಾಭಗಳಿಸಿದಳು. ಇದರಿಂದ ಉತ್ಸಾಹಿತಳಾಗಿ ಆತ್ಮವಿಶ್ವಾಸದಿಂದ ದಯಾಬತಿ ಮೊದಲೆಲ್ಲ ನಾನೇನು ಮಾಡುತ್ತಿದ್ದೇನೆ ಎಂದು ಗೊತ್ತಿರಲಿಲ್ಲ. ಉಳಿದವರು ಮಾಡಿದ್ದನ್ನೇ ಮಾಡುತ್ತಿದ್ದೆ. ಆದರೀಗ ಪಿಡಬ್ಲ್ಯೂಜಿ ಸೇರಿದ ಮೇಲೆ ಕಾಡು ಹಾಗೂ ಮರಗಳಿಗೆ ಹಾನಿ ಮಾಡದೆ ಹೆಚ್ಚಿನ ಅಂಟನ್ನು ಸಂಗ್ರಹಿಸುವುದು ಹೇಗೆ, ನನ್ನ ಉತ್ಪನ್ನಕ್ಕೆ ಹೆಚ್ಚಿನ ಹಣ ಪಡೆಯುವುದು ಹೇಗೆ ಎನ್ನುವುದನ್ನು ಕಲಿತೆ”.

 ಫಲಿತಾಂಶ

ಶಿವಪುರಿ ಜಿಲ್ಲೆಯ ಆದಿವಾಸಿ ಮಹಿಳೆಯರು ಮಹಿಳಾ ಉತ್ಪಾದಕರ ಗುಂಪನ್ನು ಸ್ಥಾಪಿಸಿ ಎರಡು ವರ್ಷಗಳಾದವು. ಅದರ ಫಲಿತಾಂಶ ಮಾತ್ರ ಅದ್ಭುತವಾಗಿದೆ. ಎರಡು ಹಳ್ಳಿಗಳಿಂದ ಶುರುವಾದ ಗುಂಪು ಐದು ಹಳ್ಳಿಗಳಿಗೆ ವಿಸ್ತರಿಸಿ ೭೦ ಸದಸ್ಯರಿಂದ ೩೦೦ ಸದಸ್ಯರಾದರಿಗೆ ಹೆಚ್ಚಿತು. ಪ್ರತಿ ಋತುವಿನಲ್ಲಿ ಪ್ರತಿ ಸದಸ್ಯರಿಂದ ಸರಿಸುಮಾರು ೧೦ ರಿಂದ ೨೦ ಕೆಜಿ ಅಂಟು ಸಂಗ್ರಹಿಸಲಾಯಿತು. ಆರಂಭದಲ್ಲಿ ಸಂಗ್ರಹಣೆ ಕಡಿಮೆಯಿದ್ದರೂ ಕ್ರಮೇಣ ಪ್ರತಿ ಸದಸ್ಯರ ಸರಾಸರಿ ಸಂಗ್ರಹಣೆ ೪೦ ಕೆಜಿಯಷ್ಟಾಯಿತು. ವೈಜ್ಞಾನಿಕ ವಿಧಾನವನ್ನು ಅನುಸರಿಸಿದ್ದರಿಂದ ಅಂಟು ಸಂಗ್ರಹಣೆಯು ಹೆಚ್ಚಿತು. ದಲ್ಲಾಳಿಗಳ ಮಧ್ಯಸ್ಥಿಕೆಯನ್ನು ತಪ್ಪಿಸಿ ನೇರ ಮಾರಾಟ ಮಾಡಿದ್ದರಿಂದ ಉತ್ತಮ ಬೆಲೆ (ರೂ.೭೦-೮೦ ರಿಂದ ೧೦೦-೧೨೦) ಕೂಡ ಬಂತು. ಇದರಿಂದ ಸದಸ್ಯರ ಆದಾಯವು ರೂ.೧೦೦೦ ದಿಂದ ರೂ.೪೦೦೦-೪೫೦೦ಕ್ಕೆ ಹೆಚ್ಚಿತು.

ಕೋಷ್ಟಕ : ಡಬ್ಲ್ಯೂಪಿಜಿಗಳ ಕಾರ್ಯಪ್ರದರ್ಶನ

ಚಟುವಟಿಕೆಗಳು 2019-20 2020-21
ಒಟ್ಟು ಹಳ್ಳಿಗಳು 2 7
ಒಟ್ಟು ಸದಸ್ಯರು 70 300
ಕಾರ್ಯಕ್ಷೇತ್ರದ ವಿಸ್ತೀರ್ಣ 45 ಹೆಕ್ಟೇರ್‌ಗಳು 280 ಹೆಕ್ಟೇರ್‌ಗಳು
ಪ್ರತಿ ಋತುವಿನಲ್ಲಿ ಸದಸ್ಯರ ಸರಾಸರಿ ಅಂಟು ಮಾರಾಟ 10 ಕೆಜಿ 15-20 ಕೆಜಿ
ಪ್ರತಿ ಕೆಜಿಗೆ ಸಂದ ಸರಾಸರಿ ಬೆಲೆ ರೂRs. 70 – 80 ರೂ. 100 – 120
ಪ್ರತಿ ಋತುವಿನಲ್ಲಿ ಸದಸ್ಯರ ಸರಾಸರಿ ಆದಾಯ ರೂ. 980 ಸರಾಸರಿ ರೂ 4000 ರೂ-. 4500

 ಶ್ರೀಜನ ಪಲಾಶದ(ಮುತ್ತುಗ) ಅಂಟಿನ ಮೌಲ್ಯವರ್ಧನೆಯತ್ತ ಗಮನಹರಿಸಿದ್ದು ಪರಿಣಾಮ ಬೀರಿದೆ. ಇದು ಮುಖ್ಯವಾಗಿ ವಲಸೆಯನ್ನು ತಡೆಗಟ್ಟಿದೆ. ಕೃಷಿ ಚಟುವಟಿಕೆಗಳು ಇಲ್ಲದ ಸಮಯದಲ್ಲೂ ಆದಾಯದ ಮಾರ್ಗಗಳು ತೆರೆದದ್ದರಿಂದ ರೈತರು ಹಳ್ಳಿಗಳಲ್ಲೇ ಉಳಿದರು. ಅಂಟು ಸಂಗ್ರಹಣೆ ಮಹಿಳಾ ಸದಸ್ಯರ ಕೆಲಸವಾದ್ದರಿಂದ ಶ್ರೀಜನ ಗಂಡಸರಿಗೆ ತರಕಾರಿ ಕೃಷಿ ತರಬೇತಿ ನೀಡಿತು. ಈ ತರಬೇತಿಯು ಹವಾಮಾನಕ್ಕೆ ತಕ್ಕಂತಹ ಕೃಷಿ ಹಾಗೂ ಜೈವಿಕ ಒಳಸುರಿಯುವಿಕೆಗಳ (ಬೀಜಾಮೃತ, ಜೀವಾಮೃತ, ಘನಜೀವಾಮೃತ) ಬಳಕೆಯ ಕಡೆ ಗಮನನೀಡಿತು. ಇದರಿಂದ ಅವರು ಲಭ್ಯವಿರು ನೀರು ಹಾಗೂ ಕುಟುಂಬದವರೇ ಸೇರಿ ತರಕಾರಿ ಬೆಳೆಯುವ ಮೂಲಕ ಉತ್ತಮ ಆದಾಯ ಪಡೆದರು. “ನಮ್ಮ ಭೂಮಿಯಲ್ಲಿ ನಾವೇ ಕೆಲಸ ಮಾಡುವುದು ಚೆನ್ನ. ಈಗ ನಾವು ಬೆಳೆದದ್ದನ್ನೇ ನಾವು ಉಣ್ಣುತ್ತಿದ್ದೇವೆ. ತರಕಾರಿಗಳ ಲಭ್ಯತೆ ಹೆಚ್ಚಿರುವುದರಿಂದ ಬೆಲೆ ಕೂಡ ಕಡಿಮೆಯಾಗಿದೆ” ಎಂದು ರಾಜಗಢದ ರಾಧಾ ರಾಣಿ ಮಹಿಳಾ ಉತ್ಪಾದಕ ಸಮೂಹದ ಶಾರದಾ ಬಾಯಿ ಹೇಳುತ್ತಾರೆ. ಇವರ ಕುಟುಂಬದವರು ಕಳೆದ ವರ್ಷ ೩೫ ಕೆಜಿ ಅಂಟನ್ನು ಮಾರಾಟಮಾಡಿದ್ದಾರೆ.

ಹಳ್ಳಿಯ ಅಂಟು ಸಂಗ್ರಹಣಾ ಕೇಂದ್ರದಲ್ಲಿ ಅಂಟಿನ ಸಂಗ್ರಹಣೆ

ಸೂಕ್ತ ಸಲಹಾ ಸೇವೆ, ಪ್ರಾಯೋಗಿಕ ತರಬೇತಿ ಹಾಗೂ ಮಾರುಕಟ್ಟೆ ಸಂಪರ್ಕ ವು ಶ್ರೀಜನದ ಪ್ರಮುಖ ಅಂಶಗಳು.

ಶ್ರೀಜನ ಹಾಗೂ ವಿಜ್ಞಾನಿಗಳ ಪ್ರವೇಶಿಕೆಯಿಂದ ಪಲಾಶ ಅಂಟಿನ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿತು. ಜೊತೆಗೆ ಹಳ್ಳಿಗಳಲ್ಲಿನ ಕೃಷಿ ಪದ್ಧತಿಗಳಲ್ಲೂ ಬದಲಾವಣೆ ಕಂಡು ಬಂದಿತು. ರೈತರು ಬೀಜಗಳ ಗುಣಮಟ್ಟ, ವಿವಿಧ ಬೆಳೆಗಳ ಕುರಿತು ಮಾತನಾಡಲಾರಂಭಿಸಿದರು. ಜೊತೆಗೆ ಸುಧಾರಿತ ಕೃಷಿ ಪದ್ಧತಿಗಳನ್ನು ಕಲಿಯಬಯಸಿದರು. ಅವರು ದೇಶದ ಸಣ್ಣ ಹಾಗೂ ಬಡ ರೈತರಾದರೂ ಅವರ ಕೃಷಿ ಪದ್ಧತಿಗಳಲ್ಲಿ ಸ್ವಲ್ಪ ಮಟ್ಟಿಗಿನ ಸುಧಾರಣೆಯನ್ನು ಕಾಣುತ್ತಿದ್ದೇವೆಎಂದು ಶ್ರೀಜನದ ಪ್ರಾಜೆಕ್ಟ್‌ ಮ್ಯಾನೇಜರ್‌ ಶ್ರೀ ಸಂದೀಪ್‌ ಹೇಳುತ್ತಾರೆ.

ವಿವಿಧ ಮಾರುಕಟ್ಟೆಗಳ ಸಂಪರ್ಕ, ಬೆಲೆ ಚೌಕಾಸಿ ಹಾಗೂ ವ್ಯಾಪಾರ ಚರ್ಚೆಗಳು ಸ್ಥಳೀಯ ಮಹಿಳಾ ನಾಯಕಿಯರನ್ನು ಸಬಲರನ್ನಾಗಿಸಿತು. ಅವರು ವ್ಯಾಪಾರದಲ್ಲಿನ ಲಾಭ, ಸುಸ್ಥಿರತೆ ಹಾಗೂ ಆದಾಯ ಕುರಿತು ಮಾತನಾಡಲಾರಂಭಿಸಿದರು. ಅಂತಹ ಮಹಿಳಾ ನಾಯಕಿಯರ ಸಂಖ್ಯೆ ಕಡಿಮೆಯಿದ್ದರೂ ಕೂಡ ಗುಂಪು ಚರ್ಚೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ  ಅವರ ಸಮಾಜೋಆರ್ಥಿಕ ಸ್ಥಾನಮಾನವು ಹೆಚ್ಚಿತು. ನಮ್ಮ ಮಹಿಳಾ ಉತ್ಪಾದಕರ ಗುಂಪು ಹೊಸದು. ನಾವು ವ್ಯಾಪಾರಕ್ಕೆ ಹೊಸಬರು. ಆದರೂ ರೈತ ಉತ್ಪಾದಕರ ಕಂಪನಿ ಹೊಂದುವ ಬಗ್ಗೆ ಯೋಚಿಸುತ್ತಿದ್ದೇವೆ. ಇದರಿಂದ ನಮ್ಮ ವ್ಯಾಪಾರ ಹೆಚ್ಚುತ್ತದೆಎಂದು ಸಿಮ್ಮಾರ ಗ್ರಾಮೀಣ ಮಟ್ಟದ ಸಂಗ್ರಹಣಾ ಕೇಂದ್ರದ ಮುಖ್ಯಸ್ಥೆ ದಯಾಬತಿ ಆದಿವಾಸಿ ಹೇಳುತ್ತಾಳೆ. ಈ ಯಶಸ್ಸಿನಿಂದ ಉತ್ತೇಜನಗೊಂಡು ಶ್ರೀಜನ ಇದೇ ಮಾದರಿಯನ್ನು ಬುಂದೇಲಖಂಡದ ಉಳಿದ ಪ್ರದೇಶಗಳಲ್ಲಿ ಸರ್ಕಾರದ ನೆರವಿನಿಂದ ಸ್ಥಾಪಿಸಲು ಯೋಜಿಸಿದೆ.

ಉಪಸಂಹಾರ

ಸಣ್ಣ ರೈತರ ಆದಾಯ ಹೆಚ್ಚಬೇಕೆಂದರೆ ಮಾರುಕಟ್ಟೆಯು ವಿಸ್ತಾರವಾಗಬೇಕು. ಸೆಕೆಂಡರಿ ಕೃಷಿಯು ಮುಖ್ಯವಾಗಿ ಕೃಷಿ ಕಾರ್ಯ ಹಾಗೂ ಆದಾಯ ಹೆಚ್ಚಳದೊಂದಿಗೆ ರೈತರ ನಡುವಿನ ಸ್ಪರ್ಧಾತ್ಮಕತೆಗೆ ಒತ್ತು ನೀಡುತ್ತದೆ. ಮೌಲ್ಯವರ್ಧನೆಗೆ ಒತ್ತು ನೀಡುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ನೆರವು ನೀಡುತ್ತದೆ. ಸೂಕ್ತ ಸಲಹಾ ಸೇವೆ, ಪ್ರಾಯೋಗಿಕ ತರಬೇತಿ, ಮಾರುಕಟ್ಟೆ ಸಂಪರ್ಕ ಇವು ಶ್ರೀಜನದ ಮುಖ್ಯ ಅಂಶಗಳು. ಹಳ್ಳಿಗರು ಬದಲಾದ ದೃಷ್ಟಿಕೋನದಿಂದಾಗಿ ಸಣ್ಣ ಭೂಮಿಯೇ ಆದರೂ ತಮ್ಮ ಪದ್ಧತಿಗಳನ್ನು ಬದಲಿಸಿಕೊಳ್ಳುವ ಮೂಲಕ ಉತ್ತಮ ಲಾಭ ಗಳಿಸಬಹುದು ಎನ್ನುವುದನ್ನು ಅರಿತರು.  ಬಡ ಸಮುದಾಯಗಳ ನಡುವೆ ನಡೆಸಿದ ಸೆಕೆಂಡರಿ ಕೃಷಿಯ ಮೌಲ್ಯವರ್ಧನೆಯ ಪ್ರಯೋಗ  ಯಶಸ್ವಿಯಾಗಿ ರೈತರು ತಮ್ಮ ಸಣ್ಣ ಭೂಮಿಯ ಮೂಲಕ ಕೂಡ ತಮ್ಮ ದೃಷ್ಟಿಕೋನಗಳನ್ನು ಬದಲಿಸಿಕೊಳ್ಳುವ ಮೂಲಕ ಲಾಭ ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿತು. ಜೊತೆಗೆ ಮಹಿಳಾ ಸಬಲೀಕರಣದೊಂದಿಗೆ ಗ್ರಾಮ ಮಟ್ಟದ ಆರ್ಥಿಕತೆಯನ್ನು ಕೂಡ ಸುಧಾರಿಸಿತು. ಸೆಕೆಂಡರಿ ಕೃಷಿಗೆ ಉತ್ತೇಜನ ನೀಡೋನ ಮತ್ತು ಕೃಷಿಯನ್ನು ಕೃಷಿಭೂಮಿ ಹಾಗೂ ಕೃಷಿಋತುವಿನಾಚೆಗೂ ಬೆಳೆಸೋಣ.

ಪರಾಮರ್ಶನ ಕೃತಿಗಳು

Anupama, Butea (Butea monosperma) Palash Tree Health Benefits and Medicinal Uses. 2019, Bimbima,  available at https://www.bimbima.com/herbs/butea-monosperma/4539

Dalwai, A., Secondary agriculture is of primary importance, 10th August 2020, Financial Express, page 8, available on  https://www.financialexpress.com/opinion/secondary-agriculture-is-of-primary-importance/2049891

Dey, K., Secondary agriculture: The shift Indian farming needs, 20th December 2019, Financial Express, Available at https://www.financialexpress.com/opinion/secondary-agriculture-the-shift-indian-farming-needs/1807044

ನೀರಜ್‌ ಕುಮಾರ್‌, ಮೊಹಮದ್‌ ಜಹೀದ್‌ ಮತ್ತು ಪ್ರಸನ್ನ ಖೇಮರಿಯ


Niraj Kumar

Professor of Rural Management, XIM University,

Bhubaneswar, India.

Email: prof.nkumar@gmail.com

 

Mohd. Zahid

Team Leader, SRIJAN

New Delhi, India.

Email: mohdzahid@srijanindia.org

 

Prasanna Khemaria

CEO, SRIJAN

New Delhi, India.

Email: prasanna@srijanindia.org

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ೨ ; ಜೂನ್‌ ೨೦‌೨೧

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...