ಹಸಿರು ಭಾರತಕ್ಕಾಗಿ ಹಸಿರು ಹಬ್ಬ


ಗ್ರಾಮೀಣ ಸಮುದಾಯಗಳಲ್ಲಿ ಮರಗಳನ್ನು ನೆಡುವುದು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡುವ ಸಲುವಾಗಿಯೇ ಹಸಿರು ಹಬ್ಬದಂತಹ  ಹಬ್ಬಗಳನ್ನು ಏರ್ಪಡಿಸಲಾಯಿತು.


ಫೋಟೊ : ಮರ ಆಧಾರಿತ ಬೇಸಾಯ ವ್ಯವಸ್ಥೆ – ಒಂದು ಕಿರುನೋಟ

ವಿಶ್ವದಾದ್ಯಂತ ೧೨೩ ವಿಶೇಷ ದಿನಗಳನ್ನು ಬೇರೆ ಬೇರೆ ವಿಷಯಗಳಿಗಾಗಿ ಆಚರಿಸಲಾಗುತ್ತದೆ. ಇದರಲ್ಲಿ ಮೂರು ದಿನಗಳನ್ನು ಮಣ್ಣು ಮತ್ತು ಗಿಡಗಳಿಗಾಗಿಯೇ ಮೀಸಲಿಡಲಾಗಿದೆ. ವಿಶ್ವ ಅರಣ್ಯ ದಿನ (ಮಾರ್ಚ್‌ ೨೧), ವಿಶ್ವ ಭೂ ದಿನ (ಏಪ್ರಿಲ್‌ ೨೨) ಮತ್ತು ವಿಶ್ವ ಪರಿಸರ ದಿನ (ಜೂನ್‌ ೫). ಈ ವಿಶೇಷ ಸಂದರ್ಭಗಳ ಆಚರಣೆಯನ್ನು ಹೊರತುಪಡಿಸಿದರೆ ಸಾಮಾನ್ಯ ಜನರು ಗಿಡಗಳ ಮಹತ್ವ, ಅವುಗಳ ಉಪಯೋಗ ಕುರಿತು ಚರ್ಚಿಸುವುದು ಅತಿವಿರಳ.

ಮರಗಳನ್ನು ನೆಡುವುದು ಎಲ್ಲ ನಾಗರೀಕರ ಕರ್ತವ್ಯ. ಪ್ರತಿಯೊಬ್ಬರು ಆರೋಗ್ಯವಾಗಿರಲು ಸ್ವಚ್ಛ ಗಾಳಿ ಮತ್ತು ಪರಿಸರ ಅಗತ್ಯ. ವಿಶ್ವಪರಿಸರ ದಿನದಂತಹ ವಿಶೇಷ ದಿನಗಳಂದು ಸಾಂಕೇತಿಕವಾಗಿ ಗಿಡಗಳನ್ನು ನೆಡಲಾಗುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಗಿಡಗಳು ಆಹಾರವನ್ನು ಒದಗಿಸುತ್ತದೆ. ವಿಷಾನಿಲವನ್ನು ಹೀರಿಕೊಂಡು ಗಾಳಿಯನ್ನು ಸ್ವಚ್ಛವಾಗಿಡುತ್ತದೆ. ದೇಶದಲ್ಲಿ ಕನಿಷ್ಠ ೩೩% ಅರಣ್ಯ ಪ್ರದೇಶವಿರಬೇಕು. ಆದರೆ ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ೨೦%ಗಿಂತಲೂ ಕಡಿಮೆ ಅರಣ್ಯ ಪ್ರದೇಶವಿದೆ. ಆದ್ದರಿಂದ ಮರಗಳನ್ನು ನೆಡುವುದು ಮತ್ತು ಅವುಗಳನ್ನು ಕಾಪಾಡುವುದು ಎರಡೂ ಕೂಡ ಮಹತ್ವದ್ದಾಗಿದೆ.

 ಹಸಿರು ಹಬ್ಬ

ಬಿಎಐಎಫ್‌ನವರು ಕಳೆದ ಮೂರು ದಶಕಗಳಿಂದ ವೃಕ್ಷಾಧಾರಿತ ಅಭಿವೃದ್ಧಿ ಕಾರ್ಯಕ್ರಮಗಳಾದ ಜಲಾನಯನ ಅಭಿವೃದ್ಧಿ, ವೃಕ್ಷಾಧಾರಿತ ಕೃಷಿ, ನರ್ಸರಿ ಇತ್ಯಾದಿಗಳಂತಹ ಮರ ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಅದರ ಪ್ರಕಾರ ಮರಗಳನ್ನು ನೆಡುವುದನ್ನು ಕೃಷಿ ಸಮುದಾಯಗಳು ಮತ್ತು ಸಾಮಾನ್ಯ ಜನರ ಬದುಕಿನ ಅವಿಭಾಜ್‌ ಅಂಗವನ್ನಾಗಿ ಮಾಡಬೇಕು. ಮರಗಳನ್ನು ನೆಡುವುದು ಸಮುದಾಯದ ಸಹಭಾಗಿತ್ವದಲ್ಲಿ ನಡೆಯಬೇಕು. ಹಳ್ಳಿ ಮತ್ತು ನಗರಗಳಲ್ಲಿ ಆಚರಿಸುವ ಉಳಿದ ಹಬ್ಬಗಳಂತೆ ಮರ ನೆಡುವುದು ಕೂಡ ಹಬ್ಬವಾಗಬೇಕು.

ಗ್ರಾಮೀಣ ಸಮುದಾಯಗಳಲ್ಲಿ ಗಿಡನೆಡುವಿಕೆಯನ್ನು ದೊಡ್ಡ ಮಟ್ಟದಲ್ಲಿ ಜನಪ್ರಿಯಗೊಳಿಸಲು ಬಿಎಐಫ್‌ನ ಸುಸ್ಥಿರ ಬದುಕು ಮತ್ತು ಅಭಿವೃದ್ಧಿ ಸಂಸ್ಥೆ, ಕರ್ನಾಟಕದವರು ೨೦೦೧ರಿಂದ ಅವರ ಯೋಜನೆಗಳು ನಡೆಯುತ್ತಿರುವಲ್ಲೆಲ್ಲ ಹಸಿರು ಹಬ್ಬವನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಮರಗಳನ್ನು ನೆಡುವ ಈ ಕಾರ್ಯಕ್ರಮದಲ್ಲಿ ಹಳ್ಳಿಯ ಎಲ್ಲ ವರ್ಗದ ಜನರನ್ನೂ ಒಳಗೊಳ್ಳಲಾಗುತ್ತದೆ. ಧಾರ್ಮಿಕ ಮುಖಂಡರು, ರಾಜಕೀಯ ಧುರೀಣರು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ಇಲಾಖೆಗಳು ಇತ್ಯಾದಿಗಳು ಎಲ್ಲರನ್ನೂ ಒಳಗೊಳ್ಳುತ್ತಾರೆ. ದಿವಂಗತ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು, ಆದಿಚುಂಚನಗಿರಿ ಮಠ, ದಿವಂಗತ ಶ್ರೀ. ಶ್ರೀ. ಸಿದ್ಧಲಿಂಗೇಶ್ವರ ಸ್ವಾಮೀಜಿಗಳು ತೋಂಟದಾರ್ಯ ಮಠ, ಸ್ಥಳೀಯ ಎಂಎಲ್‌ಎಗಳು, ಪರಿಸರವಾದಿಗಳು ಮತ್ತು ರಾಜಕೀಯಧುರೀಣರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಿಡ ನೆಡುವಿಕೆಯ ಮಹತ್ವ ಮತ್ತು ಮರಗಳನ್ನು ಕಾಪಾಡುವ ಅಗತ್ಯದ ಕುರಿತು ಜನಜಾಗೃತಿ ಮೂಡಿಸಿದರು. ಇತರೆ ಎನ್‌ಜಿಒಗಳು, ರೈತ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮತ್ತು ಗ್ರಾಮ ಮಟ್ಟದ ಸಂಸ್ಥೆಗಳು ಇದನ್ನು ಅನುಕರಿಸಿದವು.

ಚೌಕ : ಹಸಿರು ಹಬ್ಬದ ಪ್ರಮಾಣವಚನ

“ಮರಗಳು ಕೃಷಿಯ ಅವಿಭಾಜ್ಯ ಅಂಗ. ಈ ಗ್ರಾಮದ ನಿವಾಸಿಗಳಾದ ನಾವು ನಮ್ಮ ಗ್ರಾಮದಲ್ಲಿ ಪ್ರತಿವರ್ಷವೂ ಹಸಿರುಹಬ್ಬವನ್ನು ಆಚರಿಸುತ್ತೇವೆ. ನಾವೆಲ್ಲ ಒಟ್ಟಾಗಿ ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಸಂರಕ್ಷಿಸುತ್ತೇವೆ ಎಂದು ನಮ್ಮ ಗ್ರಾಮದೇವತೆಯ ಹೆಸರಿನಲ್ಲಿ ಪ್ರಮಾಣ ಮಾಡುತ್ತಿದ್ದೇವೆ. ಈ ಹಬ್ಬದಲ್ಲಿ ನಮ್ಮ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಮತ್ತು ನೆರೆಹೊರೆಯ ಹಳ್ಳಿಯವರನ್ನು ಸೇರಿಸಿಕೊಳ್ಳುತ್ತೇವೆ”.

ಫೋಟೊ : ಲೇಖಕರು   ಮೈಲಾನಹಳ್ಳಿ ಗ್ರಾಮದಲ್ಲಿ ಹಸಿರುಹಬ್ಬದ ಉದ್ಘಾಟನೆ

 ಸಾಮಾನ್ಯವಾಗಿ ಸಮುದಾಯದೊಂದಿಗೆ ಮಾತನಾಡಿ ಜೂನ್‌ – ಜುಲೈ ತಿಂಗಳಿನಲ್ಲಿ ಹಸಿರುಹಬ್ಬಕ್ಕೊಂದು ದಿನವನ್ನು ನಿಗದಿಮಾಡಲಾಗುತ್ತದೆ. ಹತ್ತಿರದ ಹಳ್ಳಿಗಳವರು, ಶಾಲಾ ಮಕ್ಕಳು, ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ. ಹಿಂದಿನ ದಿನವೇ ನೆಡಲು ಸಸಿಗಳು, ವೇಗವಾಗಿ ಬೆಳೆಯುವ ಗಿಡಗಳ ಬೀಜಗಳು, ಆಯ್ದ ಭೂಮಿಯಲ್ಲಿ ಗುಂಡಿಯನ್ನು ತೋಡಿ ಸಿದ್ಧವಾಗಿಡಲಾಗುತ್ತದೆ. ಬೆಳಿಗ್ಗೆ ಇದರಲ್ಲಿ ಭಾಗವಹಿಸುವವರೆಲ್ಲರೂ ಒಟ್ಟಾಗಿ ಮೆರವಣಿಗೆಯಲ್ಲಿ ನಿಗದಿತ ಸ್ಥಳವನ್ನು ತಲುಪುತ್ತಾರೆ. ಅಲ್ಲಿ ಸಸಿಗಳಿಗೆ ಪೂಜೆಯನ್ನು ಸಲ್ಲಿಸಿ ಗಿಡಗಳನ್ನು ನೆಡುವ ಮೊದಲು ಹಸಿರುಹಬ್ಬದ ಪ್ರಮಾಣ ವಚನವನ್ನು ಮಾಡುತ್ತಾರೆ (ಚೌಕ ೧ನ್ನು ನೋಡಿ).

 ವಿವಿಧ ತಳಿಗಳು  ಮತ್ತು ಅವುಗಳ ಪರಿಣಾಮ

ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಲ ಆವರಣದಲ್ಲಿ ಬೇವಿನ ಮರಗಳನ್ನು ನೆಡುವುದರಿಂದ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ನಗರಗಳಲ್ಲಿ ಕದಂಬ, ಬಿಲ್ವಾರ ಮತ್ತು ಬಾಗೆ ಮರಗಳನ್ನು ನೆಡುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು. ಕಸದ ಗುಂಡಿಗಳು ಮತ್ತು ಕೊಳಚೆನೀರಿನ ಮೋರಿಗಳ ಸಮೀಪ ಸಂಪಿಗೆ, ಆಕಾಶ ಮಲ್ಲಿಗೆ ಮತ್ತು ಪಾರಿಜಾತ ಮರಗಳನ್ನು ನೆಡುವುದರಿಂದ ಕೆಟ್ಟವಾಸನೆಯನ್ನು ತಗ್ಗಿಸಬಹುದು. ಚಪ್ಪಂಗದ ಮರ, ಬೀಟೆ, ಪೇರಲೆ ಮತ್ತು ಸಂಪಿಗೆ  ಮರಗಳು ವಾಯುಮಾಲಿನ್ಯವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇವುಗಳನ್ನು ಪಟ್ಟಣಗಳಲ್ಲಿ ನೆಡಬೇಕು ಎಂದು ಬನರಾಸ್‌ ಹಿಂದೂ ವಿಶ್ವವಿದ್ಯಾಲಯವು ತಾನು ನಡೆಸಿದ ಅಧ್ಯಯನದ ಆಧಾರದ ಮೇಲೆ ಹೇಳಿದೆ.

ಫೋಟೊ : ಲೇಖಕರು   ಕರ್ನಾಟಕದ ಮೈಲಾನಹಳ್ಳಿಯಲ್ಲಿ ಹಸಿರು ಹಬ್ಬದ ಉದ್ಘಾಟನೆ

ಹಸಿರು ಬೇಲಿಯು ಇಂಗಾಲದ ಪರಿಣಾಮವನ್ನು ತಗ್ಗಿಸುವುದರೊಂದಿಗೆ ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಕಾರಿಯಾಗಿದೆ. ಮಳೆಗಾಲದಲ್ಲಿ ತೋಟ ಹಾಗೂ ಜಮೀನಿನ ಗಡಿಗಳಲ್ಲಿ ಗೊಬ್ಬರದ ಗಿಡ, ಎರಿಥ್ರಿನ (ಮಂದಾರ), ಸುಬಾಬುಲ್‌, ಲಂಟಾನ ಇತ್ಯಾದಿಗಳನ್ನು ನೆಡಬೇಕು. ಅದೇ ರೀತಿ ಬೇಗ ಬೆಳೆಯುವಂತಹ ಅಗಸೆ, ಸುಬಾಬುಲ್ ಮತ್ತು ಗೊಬ್ಬರ ಗಿಡದ ಬೀಜಗಳನ್ನು ನೆಡಬಹುದು. ಇವು ವೇಗವಾಗಿ ಬೆಳೆಯುತ್ತವೆ. ಗಿಡಗಳನ್ನು ನೆಟ್ಟ ಎರಡನೆಯ ವರ್ಷದಿಂದ ಈ ಹಸಿರು ಬೇಲಿಯು ಅಗಾಧ ಪ್ರಮಾಣದಲ್ಲಿ ಜೈವಿಕ ತ್ಯಾಜ್ಯವನ್ನು ಒದಗಿಸುತ್ತದೆ. ಇದನ್ನು ಗೊಬ್ಬರ ತಯಾರಿಕೆಗೆ ಬಳಸಬಹುದು. ಸ್ವಲ್ಪ ಸಮಯದಲ್ಲೇ ಇತರೇ ಗಿಡಗಳು ಇವುಗಳ ಸನಿಹ ಬೆಳೆಯಲಾರಂಭಿಸುತ್ತದೆ.

ಗೊಬ್ಬರದ ಗಿಡ, ಸುಬಾಬುಲ್, ಎರಿಥ್ರಿನ (ಮಂದಾರ) ಮತ್ತು ಅಗಸೆ ಗಿಡಗಳ ಸಸಿಗಳನ್ನು ಇಲ್ಲವೇ ಬೀಜಗಳನ್ನು ಮಳೆಗಾಲದಲ್ಲಿ ನೆಡಬಹುದು, ಇವು ಜಾನುವಾರುಗಳಿಗೆ ಒಳ್ಳೆಯ ಮೇವನ್ನು ಒದಗಿಸುವುದಲ್ಲದೆ ಇವುಗಳ ಎಲೆಗಳನ್ನು ಗೊಬ್ಬರವಾಗಿ ಬಳಸಬಹುದು. ಇದಕ್ಕೆ ತಗಲುವ ವೆಚ್ಚ ಅತ್ಯಲ್ಪ. ರೈತರಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿ ಬೀಜಗಳನ್ನು ಒದಗಿಸಬೇಕು.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮೂಲಕ ಜೈವಿಕ ಇಂಧನ ತಳಿಗಳನ್ನು ಖಾಸಗಿ ಹಾಗೂ ಸರ್ಕಾರಿ ಭೂಮಿಗಳನ್ನು ಬೆಳೆಯುವುದನ್ನು ಪ್ರಚುರಪಡಿಸುತ್ತಿದೆ.

ಹುಲಗಲ, ಲಕ್ಷ್ಮೀ ತರು, ದೊಡ್ಡ ಹರಳು/ಬೆಟ್ಟದ ಹರಳು/ಔಡಲ, ಇಪ್ಪೆ ಇತ್ಯಾದಿ ತಳಿಗಳನ್ನು ರೈತರಿಗೆ ಹಸಿರು ಹೊನ್ನು ಮತ್ತು ಬರಡು ಬಂಗಾರ ಯೋಜನೆಯಡಿ ವಿತರಿಸಲಾಯಿತು. ತಮ್ಮ ಹೊಲದ ಬದುಗಳಲ್ಲಿ ಮತ್ತು ಇತರೆಡೆ ಇವುಗಳನ್ನು ನೆಡುವಂತೆ ಪ್ರೋತ್ಸಾಹಿಸಲಾಯಿತು. ಇವುಗಳ ಬೀಜಗಳಷ್ಟೇ ಎಲೆಗಳು ಕೂಡ ಪ್ರಯೋಜನಕಾರಿ. ಇದನ್ನು ಜೈವಿಕತ್ಯಾಜ್ಯವಾಗಿ ಬಳಸಹುದು. ಇದರಿಂದ ಹವಾಮಾನ ಬದಲಾವಣೆಯ ಕಾಲದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ತಗ್ಗಿಸಬಹುದು.

ವ್ಯಾಪಕ ಪ್ರಚಾರ

ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಆವರಣದಲ್ಲಿ, ದೇವಸ್ಥಾನದ ಆವರಣದಲ್ಲಿ, ಪಾಳು ಭೂಮಿಯಲ್ಲಿ, ರಸ್ತೆ ಬದಿಗಳಲ್ಲಿ ಇತ್ಯಾದಿ ಕಡೆಗಳಲ್ಲಿ ಗಿಡಗಳನ್ನು ನೆಡುವಂತೆ ಪ್ರೋತ್ಸಾಹಿಸಬೇಕು. ಗಿಡಗಳನ್ನು ನೆಡುವುದು ಹೇರಿಕೆಯಾಗುವುದರ ಬದಲು ಸಂಸ್ಕೃತಿಯಾಗಬೇಕು. ಇದಕ್ಕೆ ಸಮುದಾಯವು ಒಟ್ಟಾಗಿ ಮುಂದಾಗಬೇಕು. ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳು, ಯುವಕ ಸಂಘಗಳು, ಶಾಲಾ ಮಕ್ಕಳು ಎಲ್ಲರನ್ನೂ ಸೇರಿಸಿಕೊಂಡು ನಿರಂತರವಾಗಿ ಗಿಡನೆಡುವ ಚಟುವಟಿಕೆಗಳನ್ನು ಮಾಡಬೇಕು. ರೈತರು ಬರಡು ಭೂಮಿಯಲ್ಲಿ ಕೃಷಿ ಅರಣ್ಯ ಇಲಾಖೆಯವರ ಸಹಾಯವನ್ನು ಪಡೆದು ಮರ ಆಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಲಭ್ಯವಿರುವ ಜಾಗಕ್ಕೆ ತಕ್ಕಂತೆ ಹಿತ್ತಲಲ್ಲಿ ಕನಿಷ್ಠ ಒಂದು ಇಲ್ಲವೇ ಎರಡು ಮರಗಳನ್ನು ನೆಡಬಹುದು. ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಲು ಎಕರೆಯೊಂದರಲ್ಲಿ ಕನಿಷ್ಠ ೨೦೦ರಿಂದ ೩೦೦ ಮರಗಳಿರುವುದು ಕಡ್ಡಾಯ ಎನ್ನುವ ನಿಯಮ ತರಬೇಕು. ಮರಗಳು ಮಾತ್ರ ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ತಗ್ಗಿಸಿ ಹವಾಮಾನ ಬದಲಾವಣೆಯ ತೊಂದರೆಗಳನ್ನು ಸರಿಪಡಿಸಬಲ್ಲುದು.

ಎಂ ಎನ್ಕುಲಕರ್ಣಿ


M N Kulkarni

Addl. Chief Programme Executive

BAIF,

Koneru Lakshmaiah Street,

Mogalarajpuram,

Vijayawada, Andhra Pradesh.

E-mail: mnkulkarni65@gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೧; ಸಂಚಿಕೆ : ೪; ಡಿಸೆಂಬರ್‌ ೨೦೧೯

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...