MFPಗಳ ಮೌಲ್ಯವರ್ಧನೆ ಬುಡಕಟ್ಟು ಸಮುದಾಯದ ಸಬಲೀಕರಣಕ್ಕೆ ಸಮರ್ಥ ಸಾಧನ


 MFP ಗಳ ಮೌಲ್ಯವರ್ಧನೆಯು ಅರಣ್ಯ ಉತ್ಪನ್ನಗಳ ಸಾಮರ್ಥ್ಯ ಮತ್ತು ಮೌಲ್ಯವನ್ನು ಬಳಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಇದು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ. ಸರ್ಕಾರದ ಬೆಂಬಲದೊಂದಿಗೆ ತಳಮಟ್ಟದ ಸಂಸ್ಥೆಗಳಿಗೆ ನೆರವು ನೀಡಿದರೆ ಬುಡಕಟ್ಟು ಮತ್ತು ಅಂಚಿನಲ್ಲಿರುವ ಸಮುದಾಯಗಳ ಜೀವನೋಪಾಯದ ಅವಕಾಶಗಳನ್ನು ಉತ್ತಮಗೊಳಿಸಬಹುದು.


ವಯನಾಡ್ ಪ್ರಮುಖ ಬುಡಕಟ್ಟು (ಆದಿವಾಸಿ) ಪ್ರಾಬಲ್ಯದ ಜಿಲ್ಲೆಯಾಗಿದೆ. ಜೀವನೋಪಾಯದ ಸಂಪ್ರದಾಯಗಳು, ಉಪಭಾಷೆ, ಸಾಂಸ್ಕೃತಿಕ ಆಚರಣೆಗಳು ಮತ್ತು ಸಮಾಜೋ-ಆರ್ಥಿಕ ಸಂಬಂಧಗಳ ವಿಷಯದಲ್ಲಿ ಗಣನೀಯ ವೈವಿಧ್ಯತೆಯನ್ನು ಹೊಂದಿರುವ 12 ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿದೆ. ಬುಡಕಟ್ಟು ಆರ್ಥಿಕತೆಯ ವೈಶಿಷ್ಟ್ಯತೆಯ ಆಧಾರದ ಮೇಲೆ ಆದಿವಾಸಿಗಳನ್ನು ಹಲವಾರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ ಅರಣ್ಯ ಅವಲಂಬಿತ ಸಮುದಾಯವು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಕಾಲಾನಂತರದಲ್ಲಿ ಅರಣ್ಯ-ಅವಲಂಬಿತ ಸಮುದಾಯಗಳು ಅವುಗಳಿಗೆ ವಿಶಿಷ್ಟವಾದ ಬದುಕುಳಿಯುವ ಸವಾಲುಗಳನ್ನು ಎದುರಿಸುತ್ತಿವೆ. ಹವಾಮಾನ ವೈಪರೀತ್ಯಗಳು, ಅರಣ್ಯ ಉತ್ಪನ್ನಗಳ ಪ್ರವೇಶಕ್ಕೆ ನಿರ್ಬಂಧ, ಕಡಿಮೆ ಮಾರುಕಟ್ಟೆ ಬೆಲೆ ಮತ್ತು ಅರಣ್ಯ ಉತ್ಪನ್ನಗಳ ಹೊರತೆಗೆಯುವಿಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳು ಇಂತಹ ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಅಂಶಗಳು ಅರಣ್ಯ ಅವಲಂಬಿತ ಸಮುದಾಯಗಳ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಟಕುಗೊಳಿಸಿದವು.

ಸಣ್ಣ ಅರಣ್ಯ ಉತ್ಪನ್ನಗಳ (MFP) ಸಂಗ್ರಹವು ಸವಾಲಿನದ್ದಾಗಿದೆ. ಅವುಗಳನ್ನು ಸಂಸ್ಕರಿಸದಿದ್ದಲ್ಲಿ ಅಲ್ಪ ಆದಾಯವನ್ನು ನೀಡುತ್ತದೆ. ಈ ಉತ್ಪನ್ನಗಳ ಸಂಗ್ರಹಣೆಯಲ್ಲಿ ಅವರು ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡರೂ ಕಡಿಮೆ ಮಾರುಕಟ್ಟೆ ಮೌಲ್ಯ, ಅಸಮರ್ಪಕ ಅಳತೆವಿಧಾನಗಳು, ದಲ್ಲಾಳಿಗಳ ಕಮಿಷನ್‌, ಕೆಲವು ಉತ್ಪನ್ನಗಳ ಕಡಿಮೆ ಶೆಲ್ಫ್‌ ಅವಧಿ, ಋತುಗಳ ಏರುಪೇರು, ಸಂಗ್ರಹಣಾ ಸೌಲಭ್ಯದ ಕೊರತೆ, ಮಾರುಕಟ್ಟೆಯ ಅಗತ್ಯಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಉತ್ಪನ್ನದ ಪ್ಯಾಕೇಂಜಿಗ್‌ಗೆ ಹಣದ ಕೊರತೆಯಂತಹ ಸಮಸ್ಯೆಗಳು ಕಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿದ್ದರೂ ಕೂಡ ಉತ್ಪನ್ನವು ಬೇಗ ಕೊಳೆತುಹೋಗುವುದರಿಂದ ಆದಿವಾಸಿಗಳು ಅದನ್ನು ಕಡಿಮೆ ಬೆಲೆಗೆ ಮಾರುವ ಒತ್ತಡವಿರುತ್ತದೆ. ಇದರಿಂದಾಗಿ ಅವರು ಬಡತದಲ್ಲಿ ಉಳಿಯುತ್ತಾರೆ.

ಕೈಗೊಳ್ಳಲಾದ ಕ್ರಮ

ಚೀಯಂಬಮ್ 73 ಎನ್ನುವ ಪ್ರದೇಶವು ಕೇರಳದ ವಯನಾಡ್ ಜಿಲ್ಲೆಯ ಪೂತಾಡಿ ಗ್ರಾಮ ಪಂಚಾಯತ್‌ನಲ್ಲಿದೆ. ಇದು ಸರ್ಕಾರಿ ಸ್ವಾಮ್ಯದ ತೋಟವಾಗಿದ್ದು, ಇದನ್ನು ನಂತರ ಪನಿಯನ್, ಕಟುನಾಯಕನ್ ಮತ್ತು ಮುಳ್ಳುಕ್ರುಮ ಸಮುದಾಯದ ಪ್ರಾಬಲ್ಯವಿರುವ 302 ಭೂರಹಿತ ಬುಡಕಟ್ಟು ಕುಟುಂಬಗಳಿಗೆ ವಿತರಿಸಲಾಯಿತು. ಅರಣ್ಯ-ಅವಲಂಬಿತ ಸಮುದಾಯವಾಗಿರುವುದರಿಂದ, ಕಟುನಾಯಕನ್ ಕುಟುಂಬಗಳು ಈ ಪ್ರದೇಶದಲ್ಲಿ MFP ಸಂಗ್ರಹಣೆಯನ್ನೇ ಹೆಚ್ಚು ಅವಲಂಬಿಸಿವೆ. ಬುಡಕಟ್ಟು ಪ್ರದೇಶಗಳು ಇರುವ ಸ್ಥಳ, ಪ್ರಕೃತಿಯೊಂದಿಗಿನ ನಿಕಟ ಸಂಪರ್ಕದಿಂದಾಗಿ ಈ ಎರಡು ಸಮುದಾಯಗಳು ಸಹ ಜೀವನೋಪಕ್ಕಾಗಿ MFP ಗಳ ಸಂಗ್ರಹಣೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದರೆ ಅವರು ಸಾಂಪ್ರದಾಯಿಕವಾಗಿ ಅರಣ್ಯ-ಅವಲಂಬಿತ ಸಮುದಾಯವಲ್ಲ.

ಕೇರಳದ ವಯನಾಡ್‌ನಲ್ಲಿರುವ ಸಮುದಾಯ ಕೃಷಿ ಜೀವವೈವಿಧ್ಯ ಕೇಂದ್ರ, ಎಂ ಎಸ್ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವು ಎಂಎಫ್‌ಪಿಯ ಮೌಲ್ಯವರ್ಧನೆಯ ಕುರಿತು ಕ್ರಮವನ್ನು ಕೈಗೊಂಡಿದೆ. ಸರಿಯಾದ ಮಾರುಕಟ್ಟೆ ಸಂಪರ್ಕದ ಕೊರತೆಯಿಂದಾಗಿ ನಷ್ಟವನ್ನು ಕಡಿಮೆ ಮಾಡುವುದು, ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯವರ್ತಿಗಳನ್ನು ದೂರವಿಡುವುದು  ಮಾತ್ರವಲ್ಲದೆ ಮೌಲ್ಯವರ್ಧನೆಯ ಮೂಲಕ MFP ಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು ಪ್ರಯತ್ನಿಸುವುದು ಮತ್ತು MFP ಗಳನ್ನು ಕೇವಲ ಸಂಗ್ರಹಿಸುವುದಲ್ಲದೆ ಜೀವನೋಪಾಯದ ಅವಕಾಶವಾಗಿ ಪರಿವರ್ತಿಸುವುದು. ಇದನ್ನು ನಬಾರ್ಡ್ ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಂಟಿ ಬೆಂಬಲದೊಂದಿಗೆ ಕಾರ್ಯಗತಗೊಳಿಸಲಾಗಿದೆ

MFP ಗಳ ಸಂಗ್ರಹಣೆ ಮತ್ತು ಮೌಲ್ಯವರ್ಧನೆಗೆ ಸಂಬಂಧಿಸಿದ ಅಂತರ ಮತ್ತು ಸಮಸ್ಯೆಗಳನ್ನು ಗುರುತಿಸಲು 2018 ರಿಂದ ಸರಣಿ ಕ್ಷೇತ್ರ ಅಧ್ಯಯನಗಳು ಮತ್ತು ತರಬೇತಿಗಳನ್ನು ಕೇಂದ್ರವು ಆಯೋಜಿಸಿದೆ. ತರಬೇತಿಗಳನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗಿದೆ; ಮೊದಲನೆಯದಾಗಿ MFP ಗಳ ಮೇಲೆ ಜ್ಞಾನ ಆಧಾರಿತ ತರಬೇತಿ, ಎರಡನೆಯದಾಗಿ ಮೌಲ್ಯವರ್ಧನೆಯ ಮೇಲೆ ಕೌಶಲ್ಯ ಆಧಾರಿತ ತರಬೇತಿ (ಮಾಡುವ ಮೂಲಕ ಕಲಿಕೆ) ಮತ್ತು ಅಂತಿಮವಾಗಿ ಉತ್ಪಾದನೆ ಮತ್ತು ಮಾರುಕಟ್ಟೆಯ ಮೇಲೆ ತರಬೇತಿಯನ್ನು ಆಯೋಜಿಸಲಾಯಿತು.

ಬುಡಕಟ್ಟು ಸಮುದಾಯದ 6 ಮಹಿಳೆಯರು ಮತ್ತು 4 ಪುರುಷರೊಂದಿಗೆ ‘ವನಮಲ್ಲಿಕಾ’ ಹೆಸರಿನ ಸ್ವಸಹಾಯ ಸಂಘವನ್ನು ರಚಿಸಲಾಯಿತು. ಮೌಲ್ಯವರ್ಧನೆ, ಉತ್ಪನ್ನದಲ್ಲಿ ಗರಿಷ್ಠ ಪೋಷಕಾಂಶಗಳನ್ನು ಉಳಿಸಿಕೊಳ್ಳುವುದು, ಸಂರಕ್ಷಕಗಳು ಮತ್ತು ಕಲಬೆರಕೆಗಳ ಬಳಕೆಯನ್ನು ಕಡಿಮೆ ಮಾಡುವುದು, ಆಹಾರ ಸಂಸ್ಕರಣೆ ಮತ್ತು ಕಾಲೋಚಿತವಾಗಿ ಲಭ್ಯವಿರುವ, ಹಾಳಾಗುವ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತರಬೇತಿಗಳನ್ನು ನೀಡಲಾಯಿತು. ತರಬೇತಿಯ ಅಂಶಗಳು ಕುಟುಂಬದ ಪೌಷ್ಟಿಕಾಂಶದ ಭದ್ರತೆ ಮತ್ತು ಆದಾಯ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿವೆ. ಅದರೊಂದಿಗೆ MFP ಗಳ ಸಂಸ್ಕರಣೆ ಮತ್ತು ಮೌಲ್ಯ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಲಾಯಿತು.

ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಅಗತ್ಯವನ್ನು ಪೂರೈಸಲು, ಸೀಮಿತ ಬಜೆಟ್ ನಿಬಂಧನೆಯೊಂದಿಗೆ ಘಟಕವನ್ನು ಪ್ರಾರಂಭಿಸಲಾಯಿತು. ಮೌಲ್ಯವರ್ಧನೆಯು ಸ್ವಸಹಾಯ ಗುಂಪಿನ ಸದಸ್ಯರಿಗೆ ಪೂರಕ ಆದಾಯ ಉತ್ಪಾದನೆಯ ಚಟುವಟಿಕೆಯಾಗಿದ್ದು ಅದನ್ನು ನಿಯಮಿತ ಆದಾಯದ ಮೂಲವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅದನ್ನು ಸ್ಥಿರವಾದ ಉದ್ಯೋಗ ಚಟುವಟಿಕೆಯನ್ನಾಗಿ ಮಾಡಲು ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ಘಟಕವು ಪಪ್ಪಾಯಿ, ಶುಂಠಿ, ಹಲಸು ಮತ್ತು ಕಾಫಿ ಇವುಗಳಿಗೆಲ್ಲ ಸಾಮೂಹಿಕವಾಗಿ ಮೌಲ್ಯವರ್ಧನೆಯನ್ನು ಮಾಡುತ್ತಿದೆ. ಗುಂಪು ಅಭಿವೃದ್ಧಿಪಡಿಸಿದ ಮತ್ತು ಮಾರಾಟ ಮಾಡುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಕೋಷ್ಟಕ 1 ರಲ್ಲಿ ನೀಡಲಾಗಿದೆ.

Table  1 Value addition of MFPs by Vanamallika SHG

ಕ್ರ.ಸಂ MFP ಗಳು ಮೌಲ್ಯವರ್ಧಿತ ಉತ್ಪನ್ನಗಳು
ನೆಲ್ಲಿಕಾಯಿ ಉಪ್ಪಿನಕಾಯಿ, ನೆಲ್ಲಿಕಾಯೊಂದಿಗೆ ಜೇನುತುಪ್ಪ, ನೆಲ್ಲಿ ಕ್ಯಾಂಡಿ, ಒಣಗಿಸಿದ ನೆಲ್ಲಿ, ನೆಲ್ಲಿಕಾಯಿ ಪುಡಿ, ಔಷಧೀಯ ಉದ್ದೇಶಕ್ಕಾಗಿ ನೆಲ್ಲಿಕಾಯಿ ಬೀಜ
ಜೇನುತುಪ್ಪ ಸಂಸ್ಕರಿಸಿದ ಜೇನು (ಬಿಸಿಮಾಡಿ, ಶೋಧಿಸಿ, ಎರಡು ಬಾರಿ ಕುದಿಸೋ ವಿಧಾನ)
ಹಲಸು ಪಾಯಸ, ಹಲಸಿನ ವರಟ್ಟಿ, ಬಿರಿಯಾನಿ, ಪಕೋಡ, ಸಮೋಸ, ಹಲಸಿನ ಬೀಜದ ಪುಡಿ
ಶುಂಠಿ ಒಣಗಿದ ಶುಂಠಿ, ಶುಂಠಿ ಪುಡಿ, ಶುಂಠಿ ಕಾಫಿ
ಗೆಣಸು ಗೆಣಸಿನ ಚೌಚೌ
ಕರಬೇವು ಕರಬೇವಿನ ಪುಡಿ, ಕರಬೇವು ಹುಣಸೆ ಮಿಶ್ರಣದ ಪುಡಿ
ನುಗ್ಗೆ ನುಗ್ಗೆ ಸೊಪ್ಪಿನ ಪುಡಿ

ತರಬೇತಿಯ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರುಕಟ್ಟೆ ಬೆಂಬಲವನ್ನು ಸಹ ಒದಗಿಸಲಾಯಿತು. ಅವರು ಈಗಾಗಲೇ ದೊಡ್ಡ ಪ್ರಮಾಣದ ಮೌಲ್ಯವರ್ಧನೆಯಲ್ಲಿ ತೊಡಗಿರುವ ಜನರು ಮತ್ತು ಸುತ್ತಮುತ್ತಲಿನ ರೈತ ಉತ್ಪಾದಕರ ಸಂಘಟನೆ (ಎಫ್‌ಪಿಒ) ಸದಸ್ಯರೊಂದಿಗೆ ಸಂಪರ್ಕ ಸಾಧಿಸಿರುವುದರಿಂದ ಬುಡಕಟ್ಟು ಸಮುದಾಯಕ್ಕೆ ಅವರ ಕಚ್ಚಾ ವಸ್ತುಗಳು ಅಥವಾ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದೆ. ಪ್ರಸ್ತುತ ಸ್ವಸಹಾಯ ಸಂಘವು ಎರಡು ಪ್ರಮುಖ ಮಾರುಕಟ್ಟೆ ತಂತ್ರಗಳನ್ನು ಅಂದರೆ ಉತ್ಪನ್ನಗಳ ನೇರ ಮಾರಾಟ ಮತ್ತು ಎರಡನೆಯದು ರಾಜ್ಯದಾದ್ಯಂತ ಹರಡಿರುವ ವಿವಿಧ ಇಕೋಶಾಪ್‌ಗಳು/ಸಾವಯವ ಉತ್ಪನ್ನ ಮಳಿಗೆಗಳನ್ನು ಬಳಸಿಕೊಳ್ಳುವುದನ್ನು ಅನುಸರಿಸುತ್ತಿದೆ. ಇದಿನ್ನೂ ಮೊಳಕೆಯೊಡುವ ಹಂತವಾಗಿದ್ದು ಮುಂಬರುವ ವರ್ಷಗಳಲ್ಲಿ ಹೆಚ್ಚು ಯಶಸ್ವಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪರಿಣಾಮ

ಇದು ಹೊಸಕ್ರಮವಾಗಿರುವುದರಿಂದ ಕುಟುಂಬದ ಮಟ್ಟದಲ್ಲಿನ ಉತ್ಪನ್ನಗಳ ಪರಿಣಾಮವನ್ನು ಕಂಡುಕೊಳ್ಳುವುದು ಕಷ್ಟ. ಇಲ್ಲಿಯವರೆಗೆ ನಡೆಸಿರುವ ಅಧ್ಯಯನದ ಆಧಾರದ ಮೇಲೆ ಕಾಡುಕೂವೆ ಪುಡಿ ಹೆಚ್ಚು ಬೇಡಿಕೆ ಹೊಂದಿದೆ ಎಂದು ಹೇಳಬಹುದಾಗಿದೆ. ಏಕೆಂದರೆ ಕಲಬೆರೆಕೆಯಿಲ್ಲದ ಕಾಡುಕೂವೆ ಪುಡಿ ಮಾರುಕಟ್ಟೆಯಲ್ಲಿ ಸಿಗುವುದು ಕಷ್ಟ. ಇದು ಸಂಸ್ಕರಣೆಗೆ ಸಂಬಂಧಿಸಿದ್ದಾಗಿದೆ. ಉತ್ಪನ್ನವು ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರೂ ಸಹ, ಸಾಂಪ್ರದಾಯಿಕ ಸಂಸ್ಕರಣಾ ವಿಧಾನಗಳು ಸಮಯ ತೆಗೆದುಕೊಳ್ಳುವ ಕಾರಣದಿಂದಾಗಿ ಉತ್ಪಾದನೆಯು ಬಹಳ ಕಡಿಮೆ. ಕಾಡಿನಲ್ಲಿ ಕಾಡುಕೂವೆ ಯಥೇಚ್ಛವಾಗಿದ್ದರೂ ಕೂಡ ಕಚ್ಚಾ ಉತ್ಪನ್ನಕ್ಕೆ ಬೆಲೆ ಕಡಿಮೆಯಿರುವುದರಿಂದ ಸಮುದಾಯದವರು ಅದರ ಸಂಗ್ರಹಕ್ಕೆ ಹಿಂದೇಟು ಹಾಕುತ್ತಾರೆ. ಆದರೆ ಈಗ ಯಂತ್ರೋಪಕರಣಗಳು ಲಭ್ಯವಿದ್ದು ಅದನ್ನು ಸಂಸ್ಕರಿಸುವುದು ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸುಲಭವಾಗಿದೆ. ಇದು ಸಮುದಾಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಕಳೆದ ವರ್ಷ ಸಂಸ್ಕರಿಸಿದ ೨೦ಕೆಜಿ ಕಾಡುಕೂವೆಯನ್ನು ಕೆಜಿಗೆ ರೂ.೧೫೦೦ರಂತೆ ಮಾರಾಟಮಾಡಲಾಯಿತು. ಒಟ್ಟಾರೆಯಾಗಿ, ಕಳೆದ ವರ್ಷದಲ್ಲಿ MFP ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದ ವಹಿವಾಟು ಸುಮಾರು ಒಂದು ಲಕ್ಷ ರೂಪಾಯಿಗಳಾಗಿದೆ.

ಮೌಲ್ಯವರ್ಧನೆಯ ಪ್ರಯತ್ನವು ಬುಡಕಟ್ಟು ಮಹಿಳೆಯರ ಆರ್ಥಿಕತೆಗೆ ಸಹಾಯ ಮಾಡಿತು. ಗುಂಪು ರಚನೆ ಮತ್ತು ಜಂಟಿ ಪ್ರಯತ್ನವು ಸಮುದಾಯದಲ್ಲಿ ಅವರ ಸಾಮಾಜಿಕ ಮತ್ತು ಆರ್ಥಿಕ ಒಗ್ಗಟ್ಟನ್ನು ಸುಧಾರಿಸಲು ಸಹಾಯ ಮಾಡಿತು. ಸಮುದಾಯದಿಂದ MFP ಗಳನ್ನು ಖರೀದಿಸುವುದು, ಕಚ್ಚಾ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟವನ್ನು ಸುಗಮಗೊಳಿಸುವಲ್ಲಿ ಬೆಂಬಲ ಮತ್ತು ಸದಸ್ಯರಲ್ಲಿ ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಕೈಗೊಂಡಕ್ರಮಗಳ ಯತ್ನಗಳು ಸಮುದಾಯದಲ್ಲಿ ಗುಂಪಿನ ಸದಸ್ಯರ ಸ್ವಾಭಿಮಾನವನ್ನು ಬಹಳಮಟ್ಟಿಗೆ ಸುಧಾರಿಸಿತು. ಇದು ಅವರು ತಮ್ಮ ಶಕ್ತಿ ಹಾಗೂ ಸಾಮರ್ಥ್ಯವನ್ನು ತಮ್ಮ ಮತ್ತು ಸಮುದಾಯದ ಜೀವನೋಪಾಯದ ಅವಕಾಶಗಳನ್ನು ಉತ್ತಮರೀತಿಯಲ್ಲಿ ಸೃಷ್ಟಿಸಿಕೊಳ್ಳಲು ಕಾರಣವಾಯಿತು. ಕೇಂದ್ರದಿಂದ ವಿವಿಧ ತರಬೇತಿ ಮತ್ತು ಸಾಮರ್ಥ್ಯ-ವರ್ಧನೆಯ ಚಟುವಟಿಕೆಗಳ ಮೂಲಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆದ ನಂತರ ತಂತ್ರಜ್ಞಾನದೊಂದಿಗಿನ ಅವರ ಅನುಭವವು ಅವರನ್ನು ನುರಿತ ಮತ್ತು ಸಬಲ ಕಾರ್ಮಿಕರನ್ನಾಗಿಸಿತು.

ಏಕಾಏಕಿ ಕಾಣಿಸಿಕೊಂಡ ಕೋವಿಡ್‌ ಬುಡಕಟ್ಟು ಸಮುದಾಯದಲ್ಲೂ ಕೂಲಿಕಾರರ ಸಮಸ್ಯೆಯನ್ನು ಸೃಷ್ಟಿಸಿತು. ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ವನಮಲ್ಲಿಕ ಸ್ವಸಹಾಯ ಸಂಘದ ಸದಸ್ಯರು ಮೌಲ್ಯವರ್ಧನೆಯ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟದಿಂದ ಸಾಕಷ್ಟು ಒಳ್ಳೆಯ ಆದಾಯವನ್ನು (ವ್ಯಕ್ತಿಗೆ ರೂ.೬೦೦) ಗಳಿಸಲು ಸಾಧ್ಯವಾಯಿತು. ಸ್ವಸಹಾಯ ಗುಂಪಿನ “ಪೌಷ್ಟಿಕಾಂಶ ಭರಿತ” ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ವಿವಿಧ ವೇದಿಕೆಗಳಲ್ಲಿ ಆಹಾರೋತ್ಸವದ ಮೂಲಕ ನೀಡಲಾಯಿತು. ಇದು ಗ್ರಾಹಕರಲ್ಲಿ ಜಾಗೃತಿಯುಂಟು ಮಾಡಲು ನೆರವಾಯಿತು. ವನಮಲ್ಲಿಕ ಗುಂಪಿನ ಉತ್ಪನ್ನಗಳು ಮನೆಯಲ್ಲಿ ತಯಾರಿಸಿದ, ಸಹಜವಾದ, ಸಾವಯವ ಉತ್ಪನ್ನಗಳಾದ್ದರಿಂದ ತಿನ್ನಲು ಸುರಕ್ಷಿತ ಎಂದು ಗ್ರಾಹಕರಿಗೆ ಖಾತ್ರಿಯಾಯಿತು.

 ಸವಾಲುಗಳು ಮತ್ತು ಭವಿಷ್ಯದ ಪ್ರಯತ್ನಗಳು

ಕೋವಿಡ್‌ನಿಂದಾಗಿ ಮತ್ತೆಮತ್ತೆ ಹೇರಲಾಗುತ್ತಿದ್ದ ನಿರ್ಬಂಧಗಳು ಮೌಲ್ಯವರ್ಧನೆಯ ಪ್ರಕ್ರಿಯೆಯಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದೆ. ಕೋವಿಡ್‌ ಮೌಲ್ಯವರ್ಧನೆ ಉತ್ಪನ್ನಗಳ ಕಚ್ಚಾವಸ್ತುಗಳ ಬೇಡಿಕೆಯನ್ನು ಹೆಚ್ಚಿಸಿದೆ. ಸ್ವಸಹಾಯ ಸಂಘಗಳು ತಯಾರು ಮಾಡುವ ಮೌಲ್ಯವರ್ಧಿತ ಉತ್ಪನ್ನಗಳ ಕಚ್ಚಾವಸ್ತುಗಳು ಕೆಲವು ಋತುಗಳಲ್ಲಿ ಮಾತ್ರ ಸಿಗುವಂತಹದ್ದು. ಉದಾಹರಣೆಗೆ ಕಾಡುಕೂವೆ, ನೆಲ್ಲಿಕಾಯಿ, ಜೇನುತುಪ್ಪ, ಮಾವು, ಹಲಸಿನ ಬೀಜ ಇತ್ಯಾದಿ. ಬಹುಬೇಗ ಕೊಳೆತುಹೋಗುವ ಈ ಪ್ರಾಕೃತಿಕ ವಸ್ತುಗಳನ್ನು ಇಡೀ ವರ್ಷ ಸಂಗ್ರಹಿಸಲು ತಂತ್ರಜ್ಞಾನ ಹಾಗೂ ದುಬಾರಿ ಸೌಲಭ್ಯಗಳು ಬೇಕಾಗುತ್ತದೆ. ಜೊತೆಗೆ ಕಚ್ಚಾವಸ್ತುಗಳು ಹತ್ತಿರದಲ್ಲಿ ಸುಲಭವಾಗಿ ಸಿಗುವಂತಿದ್ದರೆ ಆಗ ಘಟಕವು ಸುಸ್ಥಿರವಾಗಿ ಕಾರ್ಯನಿರ್ವಹಿಸುತ್ತದೆ. ಆಗ ಮೌಲ್ಯವರ್ಧನೆಯು ಲಾಭದಾಯಕವಾಗಿರುತ್ತದೆ.

“ಪೌಷ್ಟಿಕಾಂಶ ಭರಿತ” ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ವಿವಿಧ ವೇದಿಕೆಗಳಲ್ಲಿ ಆಹಾರೋತ್ಸವದ ಮೂಲಕ ನೀಡಲಾಯಿತು. ಇದು ಗ್ರಾಹಕರಲ್ಲಿ ಜಾಗೃತಿಯುಂಟು ಮಾಡಲು ನೆರವಾಯಿತು.

ಅಸಮರ್ಪಕ ಶೇಖರಣಾ ಸೌಲಭ್ಯಗಳು, ಕಡಿಮೆ ದರ್ಜೆಯ ಪ್ಯಾಕಿಂಗ್ (ಅಸಮರ್ಪಕ ಪ್ಯಾಕಿಂಗ್ ಶೆಲ್ಫ್ ಲೈಫ್ ಹಾಗೂ ಗ್ರಾಹಕರ ಆಸಕ್ತಿಯನ್ನು ಕಡಿಮೆ ಮಾಡುತ್ತದೆ), ಜಾಹೀರಾತಿನಂತಹ ಮಾರ್ಕೆಟಿಂಗ್ ತಂತ್ರಗಳ ಕೊರತೆಯು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಲಾಗದಿರುವ ಮಿತಿಗಳೆಂದು ಗುರುತಿಸಲಾಗಿದೆ. ಇದರೊಂದಿಗೆ ಕೋವಿಡ್‌ ಮರುಕಳಿಸಿದ್ದು ಉತ್ಪನ್ನಗಳ ಪೂರೈಕೆಯ ಸರಪಳಿಯನ್ನು ತುಂಡರಿಸಿತು. ಇದು ನಿಜಕ್ಕೂ ಕಷ್ಟಕರ ಪರಿಸ್ಥಿತಿಯಾಗಿತ್ತು.

ಬುಡಕಟ್ಟು ಸಮುದಾಯದಗಳು ಸರಿಯಾದ ಸಮಯದಲ್ಲಿMFPಗಳ ಕೊಯ್ಲು ಮಾಡಲು ಸಾಧ್ಯವಾಗದೆ ಹೋದದ್ದು ಅವುಗಳ ಲಭ್ಯತೆಯ ಕೊರತೆಯನ್ನುಂಟುಮಾಡಿತು. ಆದಿವಾಸಿ ಸಮುದಾಯವು ಸಾಂಪ್ರದಾಯಿಕವಾಗಿ ಅಂಚಿನಲ್ಲಿರುವ ಸಮುದಾಯವಾಗಿದ್ದು ಅವರು ಹೆಚ್ಚಿನ ಕೌಶಲ್ಯಗಳನ್ನು ಹೊಂದಿಲ್ಲ. ಹೀಗಾಗಿ ವೃತ್ತಿಪರವಾಗಿ ಚಟುವಟಿಕೆಗಳನ್ನು ಕೈಗೊಳ್ಳುವುದು ಕಷ್ಟ. ಇದು ಉತ್ಪಾದನೆಯಿಂದ ಹಿಡಿದು ವಿತರಣೆಯವರೆಗೆ ಪರಿಣಾಮ ಬೀರುತ್ತದೆ. ಉತ್ಪನ್ನ ಅಭಿವೃದ್ಧಿ ಮತ್ತು ವಿತರಣೆಯ ವಿವಿಧ ಹಂತಗಳಲ್ಲಿ ಗುಂಪಿನ ಸದಸ್ಯರ ಸಬಲೀಕರಣಕ್ಕೆ ಆರಂಭದಲ್ಲಿ ಬಾಹ್ಯ ನೆರವು ಅವಶ್ಯಕ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಸರ್ಕಾರದ ಬೆಂಬಲದೊಂದಿಗೆ ತಳಮಟ್ಟದ ಸಂಸ್ಥೆಗಳು ಬುಡಕಟ್ಟು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ನೆರವು ನೀಡುವುದರಿಂದ ಅವರಿಗೆ ಉತ್ತಮ ಜೀವನೋಪಾಯಗಳನ್ನು ಸೃಷ್ಟಿಸುತ್ತದೆ.

ಕೃತಜ್ಞತೆಗಳು

ಲೇಖಕರು ಕ್ಷೇತ್ರಮಟ್ಟದಲ್ಲಿ ಶ್ರೀಮತಿ ಬುಷಾರ, ಶ್ರೀಮತಿ ಬಿಂದು ಜೋಸಫ್‌, ಶ್ರೀ ನೌಶಿಕ್ಮತ್ತು ಶ್ರೀಮತಿ ಪದ್ಮಿನಿ ಶಿವದಾಸ್ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. ಯೋಜನೆಯು ಬರಲಿರುವ ವರ್ಷಗಳಲ್ಲಿ ಯಶಸ್ವಿಯಾಗಲಿದೆ ಎನ್ನುವ ಆಶಾಭಾವನೆಯನ್ನು ಹೊಂದಿದ್ದಾರೆ.

ಅರ್ಚನ ಭಟ್ಮತ್ತು ವಿಪಿನ್ದಾಸ್


 Archana Bhatt

Scientist, Community Agrobiodiversity Centre,

MSSRF, Wayanad, Kerala

Email:  archanabhatt1991@gmail.com

 

Vipindas

Development Associate

Community Agrobiodiversity Centre,

MSSRF, Wayanad, Kerala

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ‌೨ ; ಜೂನ್೨೦‌೨೧

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...