ಅಪಾಯಮುಕ್ತ ಕೃಷಿ ಮಹಿಳೆಯರ ನೇತೃತ್ವದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಮಾದರಿ


ಮಹಿಳೆಯರು ಏನನ್ನು ಬೆಳೆಯಬೇಕು, ಯಾವ ಒಳಸುರಿಯುವಿಕೆಗಳನ್ನು ಬಳಸಬೇಕು, ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರ ಪಡೆದಾಗಕೃಷಿಯಲ್ಲಿ ಹಾಗೂ ಜೀವನೋಪಾಯ ಕ್ರಮದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ.


ಮಹಾರಾಷ್ಟ್ರದಲ್ಲಿ, ಆಹಾರ ಬೆಳೆ ಬೆಳೆಯಲು ಬಳಸಲಾಗುತ್ತಿರುವ ಭೂಮಿಯ ಪ್ರಮಾಣ 12% ರಷ್ಟು ಕುಗ್ಗಿದೆ. ಕಳೆದ ಮೂರು ದಶಕಗಳಲ್ಲಿ ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಬಳಸಲಾಗುತ್ತಿರುವ ಭೂಮಿಯ ಪ್ರಮಾಣ ದ್ವಿಗುಣಗೊಂಡಿದೆ. ಮರಾಠವಾಡದಲ್ಲಿನ ನೀರಿನ ಅಭಾವದಿಂದಾಗಿ ಈ ಬೆಳೆಗಳನ್ನು ಬೆಳೆಯುವುದು ಕಷ್ಟ. ಆದರೂ, ಈ ಬರಪೀಡಿತ ಪ್ರದೇಶದ ಹಲವಾರು ಸಣ್ಣ ಮತ್ತು ಅತಿ ಸಣ್ಣ ರೈತರು ತಮಗಾಗಿ ಆಹಾರವನ್ನು ಬೆಳೆಯುವ ಬದಲು ಸೋಯಾಬೀನ್ ಮತ್ತು ಕಬ್ಬಿನಂತಹ ಹೆಚ್ಚು ನೀರನ್ನು ಬಯಸುವ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳನ್ನು ಬೆಳೆಯುವುದರಿಂದ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಹೈಬ್ರಿಡ್‌ ಬೀಜಗಳು ಇವುಗಳಿಂದ ಕೃಷಿ ವೆಚ್ಚ ಹೆಚ್ಚುತ್ತದೆ. ಮರಾಠವಾಡದಲ್ಲಿ ಸುಮಾರು 80% ನಷ್ಟು ಕೃಷಿಯೋಗ್ಯ ಭೂಮಿ ಮಳೆಯಾಶ್ರಿತವಾಗಿರುವುದರಿಂದ, ಮಳೆ ಕೈಕೊಟ್ಟಾಗ ನೀರಿನ ಅವಶ್ಯಕತೆಯಿರುವ ವಾಣಿಜ್ಯ ಬೆಳೆಗಳು ವಿಫಲಗೊಳ್ಳುವ ಅಪಾಯ ಹೆಚ್ಚು. ಒಳಸುರಿಯುವಿಕೆಗಳನ್ನು ಖರೀದಿಸಲು ಸಾಲ ಪಡೆದು ಕೇವಲ ಒಂದು ಬಗೆಯ ಬೆಳೆ ಬೆಳೆಯುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚು ನಷ್ಟ ಅನುಭವಿಸುತ್ತಾರೆ. ಇದು ಹೆಚ್ಚಾಗಿ ಕುಟುಂಬದಲ್ಲಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ಭೂ ಒಡೆತನದ ಹಕ್ಕಾಗಲಿ, ಹಣಕಾಸು, ಮಾರುಕಟ್ಟೆ, ನೀರು, ಸರ್ಕಾರದ ವಿಸ್ತರಣಾ ಸೇವೆಗಳ ಲಭ್ಯತೆ ಇರುವುದಿಲ್ಲ.

ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು

ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ಗ್ರಾಮೀಣ ಮಹಿಳೆಯರು ಕೃಷಿ ಕಾರ್ಮಿಕರಾಗಿ ಮುಖ್ಯ ಪಾತ್ರ ವಹಿಸುತ್ತಾರೆ. ಸಮಯ, ಶ್ರಮ ಮತ್ತು ತಿಳಿವಳಿಕೆಯ ಅಪಾರ ಕೊಡುಗೆಯ ಹೊರತಾಗಿಯೂ ಅವರನ್ನು ರೈತರೆಂದು ಗುರುತಿಸುವುದಿಲ್ಲ. ಏನು ಮತ್ತು ಹೇಗೆ ಬೆಳೆಯಬೇಕು, ಎಲ್ಲಿ ಮಾರಾಟ ಮಾಡಬೇಕು ಎಂಬುದರ ಕುರಿತು ಗಂಡಸರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಳೆ ಕೀಳುವುದು, ಕೊಯ್ಲು ಮಾಡುವಂತಹ ಕಡಿಮೆ ಕೌಶಲ್ಯದ ಕೆಲಸಗಳನ್ನು ಹೆಂಗಸರಿಗೆ ನೀಡಲಾಗುತ್ತದೆ. ಈ ಮೂಲಭೂತ ಉದ್ದೇಶದೊಂದಿಗೆ, ಎಸ್‌ಎಸ್‌ಪಿ ಎನ್ನುವ ಎನ್‌ಜಿಒ ಮಹಿಳೆಯರ ನೇತೃತ್ವದ ಹವಾಮಾನ ಸ್ಥಿತಿಸ್ಥಾಪಕ ಕೃಷಿ ಮಾದರಿಯನ್ನು (WCRF) ರೂಪಿಸಿದೆ. ಇದರ ಮೂಲಕ ಮಹಿಳೆಯರನ್ನು ಕೃಷಿ ಕಾರ್ಮಿಕರಿಂದ ನಾಯಕಿಯರಾಗಿಸುವ ಮೂಲಕ ಸಬಲೀಕರಣದ ಹಾದಿಯತ್ತ ಕೊಂಡೊಯ್ಯುತ್ತದೆ.

ಮಹಿಳೆಯರು ಬದಲಾವಣೆಯ ಹರಿಕಾರರಾಗಿ ಕೃಷಿಯು ಆರ್ಥಿಕವಾಗಿ ಲಾಭದಾಯಕ ಉದ್ಯಮ ಎನ್ನುವುದನ್ನು ಖಾತ್ರಿಗೊಳಿಸಿದೆ

ಮಹಿಳೆಯರಿಗೆ ಕುಟುಂಬದ ಆಹಾರ ಮತ್ತು ಪೌಷ್ಟಿಕಾಂಶದ ಹೆಚ್ಚಿನ ಅರಿವಿರುತ್ತದೆ. ಆದ್ದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ತರಬೇತಿ ಪಡೆದಾಗ, ಅವರು ನೈಸರ್ಗಿಕ ಕೃಷಿ ಒಳಸುರಿಯುವಿಕೆಗಳನ್ನು ಬಳಸಿಕೊಂಡು ದೇಸಿ ಧಾನ್ಯಗಳು, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳನ್ನು ಬೆಳೆಯಲು ಆಯ್ಕೆ ಮಾಡುತ್ತಾರೆ. ಇವು ಅಲ್ಪಾವಧಿಯ ಬೆಳೆಗಳಾಗಿದ್ದು, ಬೆಳೆಗೆ ನೀರಿನ ಅವಶ್ಯಕತೆ ಕಡಿಮೆ. ನೀರಿನ ಅಭಾವವನ್ನು ಎದುರಿಸುವ ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿದ್ದು ಬರಗಾಲದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಆಹಾರದ ಲಭ್ಯತೆಯಿರುತ್ತದೆ. ಸಾಂಪ್ರದಾಯಿಕವಾಗಿ, ಹೆಂಗಸರು ಮನೆಯಲ್ಲಿ ಪಶುಪಾಲಕರು – ಜಾನುವಾರುಗಳಿಗೆ ಮೇವನ್ನು ತಯಾರಿಸುವುದರಿಂದ ಹಿಡಿದು ಹಾಲು ಹಿಂಡುವುದು, ಬೆರಣಿ ತಟ್ಟುವವರೆಗೆ ಎಲ್ಲವನ್ನೂ ಮಾಡುತ್ತಾರೆ. ಎಸ್‌ಎಸ್‌ಪಿಯ ಮಾದರಿಯು ಮಹಿಳೆಯರ ಈ ತಿಳಿವಳಿಕೆಯನ್ನೇ ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜೈವಿಕ ಗೊಬ್ಬರ ತಯಾರಿಸುವ ತರಬೇತಿ ನೀಡುತ್ತದೆ. ಮಹಿಳೆಯರು ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಸಾವಯವ ಒಳಸುರಿಯುವಿಕೆಗಳ ವ್ಯವಸ್ಥೆ ಮಾಡಲು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಕೀಟನಾಶಕಗಳನ್ನು ತಯಾರಿಸಲು ನಮಗೆ 10 ವಿಧದ ಎಲೆಗಳು ಬೇಕಾದರೆ ಹತ್ತೂ ಎಲೆಗಳು ಸಿಗುವವರೆಗೂ ಮಹಿಳೆಯರು ನಿಲ್ಲುವುದಿಲ್ಲ; ಗಂಡಸರು ಒಂಬತ್ತು ಎಲೆಗಳು ಸಿಕ್ಕರೆ ಅಷ್ಟೇ ಸಾಕು ಎಂದುಕೊಳ್ಳುತ್ತಾರೆ,” ಒಸ್ಮಾನಾಬಾದ್‌ನ ತುಗಾಂವ್‌ನ ರೂಪಾಲಿ ವಿಕಾಸ್ ಶೆಂಡಗೆ ಹೇಳುತ್ತಾರೆ. ಇಂದು, ನಾವು ಭೇಟಿಯಾಗುವ ಹೆಚ್ಚಿನ ರೈತರು ಜೈವಿಕ ಒಳಸುರಿಯುವಿಕೆಗಳ ಬಳಕೆಯಿಂದ ತಮ್ಮ ಮಣ್ಣಿನ ಗುಣಮಟ್ಟ ಸುಧಾರಿಸಿದೆ ಎಂದು ಹೇಳುತ್ತಾರೆ. ಅದು ಹೆಚ್ಚು ತೇವಾಂಶವನ್ನು ಉಳಿಸಿಕೊಳ್ಳಲು, ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಕಡಿಮೆ ನೀರನ್ನು ಬಳಸಲು ಅವರಿಗೆ ಸಹಾಯ ಮಾಡುತ್ತದೆ.

ನಿರ್ಮಾಣಸಬಲೀಕರಣಸುಸ್ಥಿರ ಮಾದರಿ

ಎಸ್‌ಎಸ್‌ಪಿಯ WCRF ತತ್ವವು ನಿರ್ಮಾಣ, ಸಬಲೀಕರಣ ಮತ್ತು ಸುಸ್ಥಿರ ಎನ್ನುವ ಮೂರು ಹಂತಗಳನ್ನು ಆಧರಿಸಿದೆ. ಮೊದಲಿಗೆ, SSP ಸಮುದಾಯ-ಆಧಾರಿತ ಸಂಪನ್ಮೂಲಗಳು, ಪ್ರಮುಖ ಪಾಲುದಾರರು, ರೈತರು ಒಳಗೊಳ್ಳುವಂತಹ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಕಾಲಾನಂತರದಲ್ಲಿ ಅವುಗಳನ್ನು ಪರಿಷ್ಕರಿಸುತ್ತದೆ. ಕಾರ್ಯಾಚರಣಾ ಮಾದರಿಯ ಈ ಹಂತದಲ್ಲಿ, SSP ಸರ್ಕಾರದ ಯೋಜನೆಗಳ ನೆರವಿನೊಂದಿಗೆ ರೈತರ ಸಹಯೋಗದೊಂದಿಗೆ ಕೃಷಿ ಹೊಂಡಗಳು, ಸಮುದಾಯ ಟ್ಯಾಂಕುಗಳು, ಪ್ರದರ್ಶನ ಫಾರ್ಮ್‌ಗಳಂತಹ ಸಮುದಾಯ ಸ್ವತ್ತುಗಳನ್ನು ರೂಪಿಸುತ್ತದೆ. ಕಾರ್ಯಾಚರಣಾ ಮಾದರಿಯ ಎರಡನೇ ಹಂತದಲ್ಲಿ, ಎಸ್‌ಎಸ್‌ಪಿ ಈ ವ್ಯವಸ್ಥೆಯ ಪ್ರಮುಖ ಪಾತ್ರಧಾರಿಗಳಾದ ರೈತರಿಗೆ ತರಬೇತಿ ನೀಡಿ ಅವರನ್ನು ಸಮರ್ಥರನ್ನಾಗಿಸುತ್ತದೆ. ಇದಕ್ಕಾಗಿ ಸಮುದಾಯ ಆಧರಿತ ಸಂಪನ್ಮೂಲಗಳಾದ ಕೃಷಿ ಸಂವಾದ ಸಹಾಯಕರನ್ನು ಬಳಸಿಕೊಳ್ಳುತ್ತದೆ. SSP ಈ ತರಬೇತುದಾರರನ್ನು ಸ್ಥಳೀಯ ಕೃಷಿ ಪರಿಣಿತರನ್ನಾಗಿಸುತ್ತದೆ. ಅಂತಿಮವಾಗಿ ರೈತರನ್ನು ATMA ಜೊತೆಗೆ ಒಗ್ಗೂಡಿಸುವ ಮೂಲಕ ಅವರುಗಳು ನೋಂದಾಯಿತ ರೈತ ಗುಂಪುಗಳಿಗಾಗಿ ಇರುವ ಸರ್ಕಾರಿ ಯೋಜನೆಗಳ ಲಾಭ ಪಡೆಯುವಂತೆ ಮಾಡುತ್ತದೆ. ಈ ಯೋಜನೆಗಳ ಸಹಾಯದಿಂದ, ರೈತ ಗುಂಪುಗಳು ತಮ್ಮ ಕೃಷಿ ಆಧಾರಿತ ಉದ್ಯಮಗಳನ್ನು ವಿಸ್ತರಿಸಿಕೊಳ್ಳುತ್ತವೆ, ಮಾರುಕಟ್ಟೆ ಸಂಪರ್ಕಗಳು ಸುಧಾರಣೆಗೊಳ್ಳುತ್ತವೆ. ಇದು ಅವರ ಕೆಲಸವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸಮುದಾಯ ಆಧಾರಿತ ಸಂಪನ್ಮೂಲಗಳು ಸ್ಥಳೀಯ ಮಹಿಳೆಯರು. ಕಾರ್ಯಕ್ರಮ ಮುಗಿದ ನಂತರವೂ ತಿಳಿವಳಿಕೆ, ನೆರವನ್ನು ಮುಂದುವರೆಸಲಾಗುತ್ತದೆ. ರೈತ ಗುಂಪುಗಳು ಮತ್ತು ಸಮುದಾಯ-ಆಧಾರಿತ ಸಂಪನ್ಮೂಲಗಳನ್ನು ಒಳಗೊಂಡಂತೆ ಪ್ರಮುಖ ಪರಿಸರ ವ್ಯವಸ್ಥೆಗೆ ಸಂಬಂಧಿಸಿದವರು ತಮ್ಮನ್ನು ದತ್ತು-ಸಿದ್ಧ ಸಾಮಾಜಿಕ ಬಂಡವಾಳದಂತೆ ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ದಾನಿ ಸಂಸ್ಥೆಗಳು ಹೂಡಿಕೆ ಮಾಡಬಹುದು.

ಚಿತ್ರ 1: WCRF ಮಾದರಿಯ ಘಟಕಗಳು

 

 

 

 

ಫೋಟೊ: ಮಹಿಳೆಯರಿಗೆ ಸಹಜವಾಗಿಯೇ ಕುಟುಂಬದ ಆಹಾರ ಹಾಗೂ ಪೌಷ್ಟಿಕಾಂಶದ ತಿಳಿವಿರುತ್ತದೆ

ಕ್ಷೇತ್ರದಲ್ಲಿ

CRF ಮಾದರಿಯು ಕೃಷಿ ಪದ್ಧತಿಗಳಲ್ಲಿ ನಾಲ್ಕು ಪ್ರಮುಖ ಬದಲಾವಣೆಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ – ನಗದು ಬೆಳೆಗಳಿಂದ ಆಹಾರ ಬೆಳೆಗಳಿಗೆ ಬದಲಾವಣೆ, ರಾಸಾಯನಿಕದಿಂದ ಜೈವಿಕ ಒಳಸುರಿಯುವಿಕೆಗಳಿಗೆ ಬದಲಾವಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಮತ್ತು ಕೃಷಿ-ಸಂಬಂಧಿತ ವ್ಯವಹಾರಗಳ ಮೂಲಕ ವೈವಿಧ್ಯಮಯ ಜೀವನೋಪಾಯಗಳನ್ನು ರೂಪಿಸುವುದು. ಈ ಬದಲಾವಣೆಗಳನ್ನು ತರಲು, ಮಹಿಳೆಯರು ನಿರಂತರವಾಗಿ ಕುಟುಂಬದ ಆಹಾರ ಮತ್ತು ಪೌಷ್ಠಿಕಾಂಶದ ನಿರ್ವಾಹಕರಾಗಲು ತಮ್ಮ ಪಾರಂಪರಿಕ ತಿಳಿವಳಿಕೆಯನ್ನು ಬಳಸಬೇಕು. ಈ ತಿಳಿವಳಿಕೆಯು ಏನನ್ನು ಬೆಳೆಯಬೇಕು, ಯಾವ ಒಳಸುರಿಯುವಿಕೆಗಳನ್ನು ಬಳಸಬೇಕು ಮತ್ತು ಯಾವ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಯೋಚಿಸಿ ನಿರ್ಧರಿಸಲು ಸಹಾಯ ಮಾಡುತ್ತದೆ.

ಮಹಿಳೆಯರ ನೇತೃತ್ವದ ಹವಾಮಾನ ಸ್ಥಿತಿಸ್ಥಾಪಕ ಕೃಷಿ (WCRF) ಮಾದರಿಯು ಮಹಿಳೆಯರನ್ನು ರೈತತನ್ನಾಗಿ, ನಾಯಕಿಯರನ್ನಾಗಿ ಮತ್ತು ತಮ್ಮ ಜಮೀನಿನಲ್ಲಿ ಸುರಕ್ಷಿತ ಆಹಾರ ಬೆಳೆಯುವ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಬದಲಾವಣೆಯ ಹರಿಕಾರರನ್ನಾಗಿಸಲು ಪ್ರಯತ್ನಿಸುತ್ತದೆ. ಮಾದರಿಯು ನಾಲ್ಕು ಪ್ರಮುಖ ಆಯಾಮಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ: ಮಾರುಕಟ್ಟೆ ಸಂಪರ್ಕಗಳು, ಮಹಿಳಾ ರೈತರ ಒಕ್ಕೂಟ, ತಂತ್ರಜ್ಞಾನದ ಒಳಗೊಳ್ಳುವಿಕೆ ಮತ್ತು ನೀರಿನ ಸಮರ್ಥ ಬಳಕೆಗೆ ನೀರಾವರಿ ಮಾದರಿಗಳು. ಇದು ಉತ್ಪಾದಕತೆಯ ಸುಧಾರಣೆ, ಆದಾಯ ಹೆಚ್ಚಳ, ಕುಟುಂಬದ ಆರೋಗ್ಯ ಮತ್ತು ಪೋಷಣೆಯನ್ನು ಹೆಚ್ಚಿಸುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

 ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮಾದರಿಯು ಪ್ರತಿ ಋತುವಿನಲ್ಲಿ ಜೈವಿಕ ಒಳಸುರಿಯುವಿಕೆಗಳ ಬಳಕೆಯ ಮೂಲಕ ಕುಟುಂಬದ ಸಣ್ಣ ಭೂಮಿಯಲ್ಲಿ 6-8 ಆಹಾರ ಬೆಳೆಗಳನ್ನು ಬೆಳೆಯಲು ಉತ್ತೇಜಿಸುತ್ತದೆ. ಇದಕ್ಕೆ ಕೇಂದ್ರೀಕೃತ ಪ್ರಯತ್ನ, ಕಾಳಜಿ, ಬದ್ಧತೆ ಮತ್ತು ಸಮಯ ಬೇಕಾಗುತ್ತದೆ – ಈ ಗುಣ ಗಂಡಸರಲ್ಲಿ ಇರುವುದಿಲ್ಲ. ಆದ್ದರಿಂದ, ಎಸ್‌ಎಸ್‌ಪಿಯ ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮಾದರಿಯು ಮಹಿಳೆಯರಿಗೆ ತಮ್ಮ ಕುಟುಂಬಗಳ ತುಂಡು ಭೂಮಿಯ ಮೇಲಿನ ಕೃಷಿ ಹಕ್ಕುಗಳನ್ನು ಪಡೆಯಲು ಪ್ರೋತ್ಸಾಹಿಸುತ್ತದೆ – ಸಾಮಾನ್ಯವಾಗಿ ಈ ಭೂಮಿ ಅರ್ಧ ಅಥವಾ ಒಂದು ಎಕರೆ ಇರುತ್ತದೆ. ಇದರಲ್ಲಿ ಕುಟುಂಬದ ಬಳಕೆಗಾಗಿ ಸ್ಥಳೀಯ ತರಕಾರಿಗಳು, ರಾಗಿ ಮೊದಲಾದ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಬಹುದಾಗಿದೆ. ಈ ಮಾದರಿಯು ತರಬೇತಿ ಹಾಗೂ ನೈಸರ್ಗಿಕ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಉತ್ತೇಜಿಸುತ್ತದೆ. ನೀರಿನ ಮಿತಬಳಕೆ ಮತ್ತು ಮಣ್ಣಿನ ಆರೋಗ್ಯ ಸಂರಕ್ಷಣೆಯೊಂದಿಗೆ ಉಳಿತಾಯವನ್ನು ಖಾತ್ರಿಗೊಳಿಸುತ್ತದೆ.

 ಮಹಿಳೆಯರನ್ನು ಗ್ರಾಮ ಮಟ್ಟದಲ್ಲಿ 20 ಸದಸ್ಯರ ಅನೌಪಚಾರಿಕ ಗುಂಪುಗಳಾಗಿಸಲಾಗಿದೆ. ಪ್ರತಿ ಗುಂಪನ್ನು ಗುಂಪಿನ ಇಬ್ಬರು ಸದಸ್ಯರು ಮುನ್ನಡೆಸುತ್ತಾರೆ. ಅವರು ಗುಂಪಿನ ಚಟುವಟಿಕೆಗಳನ್ನು ಮುನ್ನಡೆಸುವ ಹಾಗೂ ಗ್ರಾಮ ಮಟ್ಟದ ಸಮುದಾಯ ಸಂಚಾಲಕರೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

 ಕಲಿಕೆಗೆ ಭಾಗವಹಿಸುವ ವಿಧಾನವನ್ನು ಅನುಸರಿಸಿ ತರಬೇತಿಗಳನ್ನು ನೀಡಲಾಗುತ್ತದೆ. ತರಬೇತಿಯ ಕೊನೆಯಲ್ಲಿ ಉತ್ಪಾದಕ ಗುಂಪುಗಳೆಂದು ಪದವಿ ನೀಡಲಾಗುತ್ತದೆ. ಮೊದಲ ಎರಡು ಋತುವಿನಲ್ಲಿ ಹೊಸ ಅಳವಡಿಕೆದಾರಳು ತನ್ನ ಕುಟುಂಬದ ಭೂಮಿಯಲ್ಲಿ ಉಳುವ ಹಕ್ಕನ್ನು ಪಡೆದು ತನ್ನ ತಿಳಿವಳಿಕೆ ಹಾಗೂ ಕೌಶಲಗಳೊಂದಿಗೆ ಕಾಲೋಚಿತ ಆಹಾರ ಬೆಳೆಗಳನ್ನು ಬೆಳೆಸುವಲ್ಲಿ ಸಕ್ರಿಯಳಾಗುತ್ತಾಳೆ. ಇದು ಸ್ಥಳೀಯವಾಗಿ ಲಭ್ಯವಿರುವ ಬೀಜಗಳನ್ನು ಗುರುತಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ತಯಾರಿಸುವುದನ್ನು ಒಳಗೊಂಡಿರುತ್ತದೆ. ಜೈವಿಕ ಒಳಸುರಿಯುವಿಕೆಗಳಿಗಾಗಿ ಜಾನುವಾರುಗಳನ್ನು ಸಾಕುತ್ತಾರೆ. ಇದರಿಂದ ಕುಟುಂಬದ ಆಹಾರ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ.

ಚೌಕ 1

ಉಸ್ಮಾನಾಬಾದ್‌ನ ಆಶಾ ಹಜಗುಡೆ ಎಂಬುವರು ಸಂಕಷ್ಟದಲ್ಲಿದ್ದರು. ಅವರು ಸರ್ಕಾರದ PMKSY ಯೋಜನೆಯ ಅಡಿಯಲ್ಲಿ ಹನಿ ನೀರಾವರಿಯನ್ನು ಪಡೆಯಲು ಬಯಸಿದ್ದರು. ಆದರೆ ಹನಿ ನೀರಾವರಿ ವ್ಯವಸ್ಥೆಯನ್ನು ಪಡೆಯಲು ಮೊದಲಿಗೆ ರೂ. 30,000 ಹೂಡಿಕೆ ಮಾಡಬೇಕಾಗಿತ್ತು. ರೈತರು ಈ ಸೇವೆ ಅಥವಾ ಉತ್ಪನ್ನವನ್ನು ಖರೀದಿಸಿದ ನಂತರ ಸರ್ಕಾರದ ಸಬ್ಸಿಡಿ ಮೊತ್ತವು ಖಾತೆಗೆ ಜಮಾ ಆಗುತ್ತದೆ. ಕುಟುಂಬಕ್ಕೆ ಇದು ದೊಡ್ಡ ಮೊತ್ತ.

ಆಶಾಗೆ ಹನಿನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು CRFನಿಂದ ರೂ. 25,000 ಕಡಿಮೆ ಬಡ್ಡಿಯ ಸಾಲ ದೊರತದ್ದರಿಂದ ಅನುಕೂಲವಾಯಿತು. “ನಾನು ಕೇವಲ ರೂ. 5,000ವನ್ನಷ್ಟೇ ಹೂಡಿಕೆ ಮಾಡಬೇಕಾಯಿತು,” ಎಂದು ಆಶಾ ನೆನಪಿಸಿಕೊಳ್ಳುತ್ತಾರೆ. CRF 2009 ರಲ್ಲಿ ಆರಂಭವಾಯಿತು. ಬ್ಯಾಂಕ್‌ ಸಾಲಗಳ ಮೂಲಕ ಇದಕ್ಕೆ ಸಂಪನ್ಮೂಲ ಒದಗಿಸಲಾಗುತ್ತದೆ. SHG ಫೆಡರೇಶನ್ ಸಶಕ್ತ್ ಸಖಿ ಸಂಸ್ಥೆಯು ಒಸ್ಮಾನಾಬಾದ್ ಮತ್ತು ತುಳಜಾಪುರ ಬ್ಲಾಕ್‌ಗಳಲ್ಲಿ ಇದರ ನಿರ್ವಹಣೆ ಮಾಡುತ್ತದೆ.

 

ಮೂರನೇ ಋತುವಿನಲ್ಲಿ, ವರ್ಷ-ವಯಸ್ಸಿನ ದತ್ತುದಾರರು ಸಾಮಾನ್ಯವಾಗಿ ತನ್ನ ನಿಯಂತ್ರಣದಲ್ಲಿರುವ ಭೂಮಿಯನ್ನು ವಿಸ್ತರಿಸುತ್ತಾರೆ ಮತ್ತು ಗೃಹ ಬಳಕೆಯ ಅಗತ್ಯಗಳನ್ನು ಪೂರೈಸಿದ ನಂತರ ಮಾರುಕಟ್ಟೆಯ ಹೆಚ್ಚುವರಿ ಹೊಂದಲು ಸಾಕಷ್ಟು ಉತ್ಪಾದನೆಯನ್ನು ಹೆಚ್ಚಿಸುತ್ತಾರೆ (ಬಾಕ್ಸ್ 2 ನೋಡಿ).

ವರ್ಷದ ನಂತರ ರೈತಮಹಿಳೆಯರು ತಮ್ಮ ನಿಯಂತ್ರಣದಲ್ಲಿರುವ ಭೂಮಿಯನ್ನು ವಿಸ್ತರಿಸಿಕೊಳ್ಳುತ್ತಾರೆ. ಗೃಹಬಳಕೆಯ ಅಗತ್ಯಗಳ ಪೂರೈಕೆಯೊಂದಿಗೆ ಮಾರುಕಟ್ಟೆಯಲ್ಲಿ ಮಾರಲು ಬೇಕಾಗುವಷ್ಟು ಹೆಚ್ಚುವರಿ ಉತ್ಪಾದನೆಗೆ ಮುಂದಾಗುತ್ತಾರೆ (ನೋಡಿ ಚೌಕ 2). ಇದರೊಂದಿಗೆ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಜೈವಿಕ ಒಳಸುರಿಯುವಿಕೆಗಳು, ಕೋಳಿ ಸಾಕಣೆ, ಡೈರಿ, ಮೇಕೆ ಸಾಕಾಣಿಕೆ ಮೊದಲಾದ ಕೃಷಿ ಆಧಾರಿತ ಉದ್ಯಮಗಳನ್ನು ಕೈಗೊಳ್ಳುತ್ತಾರೆ. ನಾಲ್ಕನೇ ಹಾಗೂ ಅಂತಿಮ ಋತುವಿನಲ್ಲಿ, SSP ಮಹಿಳಾ ರೈತರಿಗೆ ಕಾನೂನುಬದ್ಧವಾಗಿ ಭೂ ಹಕ್ಕು ಪಡೆಯಲು ಸಹಾಯ ಮಾಡುತ್ತದೆ. ಇದರಿಂದ ಅವರು ತಮ್ಮ ಹೆಸರಿನಲ್ಲಿಯೇ ಸರ್ಕಾರದ ಯೋಜನೆಗಳನ್ನು ಪಡಯಲು ಸಹಾಯವಾಗುತ್ತದೆ. ಇದರೊಂದಿಗೆ, ಆರಂಭದಲ್ಲಿ ರಚಿಸಲಾದ ಅನೌಪಚಾರಿಕ ರೈತ ಗುಂಪುಗಳು ಯೋಜನೆಗಳ ಲಾಭ ಪಡೆಯುವುದನ್ನು ಮುಂದುವರೆಸಲು ಅವುಗಳಿಗೆ ATMAನೊಂದಿಗೆ ನೋಂದಾಯಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಸಾಮೂಹಿಕ ವಹಿವಾಟುಗಳನ್ನು ನಡೆಸಲು ರೈತ ಉತ್ಪಾದಕ ಕಂಪನಿಗಳನ್ನು ಪ್ರಾರಂಭಿಸಲು ಆಯ್ದ ಗುಂಪುಗಳಿಗೆ ತರಬೇತಿ ನೀಡಲಾಗುತ್ತದೆ.

 ಸಮುದಾಯ ಸ್ಥಿತಿಸ್ಥಾಪಕ ನಿಧಿ

ಸಮುದಾಯ ಸ್ಥಿತಿಸ್ಥಾಪಕ ನಿಧಿ (CRF) ಸಮುದಾಯಗಳ ಒಡೆತನದಲ್ಲಿ ನಿರ್ವಹಿಸಲ್ಪಡುವ ಕಡಿಮೆ ಬಡ್ಡಿಗೆ ಸಾಲ ನೀಡುವ ನಿಧಿಯಾಗಿದೆ. ಇದು ರೈತರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡದೆಯೇ ಸರ್ಕಾರದ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. CRF ಮಹಿಳಾ ಗುಂಪುಗಳಿಗೆ ತ್ವರಿತವಾಗಿ ಸುಲಭದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ವಿಧಾನ. CRF ರೈತರು ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ (ನೋಡಿ ಚೌಕ 1). CRF ರೈತ ಗುಂಪುಗಳಿಗೆ ಲಭ್ಯವಿದ್ದು ಸಾಲವನ್ನು ಗುಂಪಿನ ಮಾನದಂಡಗಳಿಗೆ ಅನುಗುಣವಾಗಿ ರೈತರಿಗೆ ನೀಡಲಾಗುತ್ತದೆ. CRF ಸಾಲದ ಬ್ಯಾಂಕಿನ ಬಡ್ಡಿದರಕ್ಕಿಂತ ಕಡಿಮೆಯಿದ್ದು ಉತ್ಪನ್ನ ಇಲ್ಲವೇ ಸೇವೆಯನ್ನು ಪಡೆಯುವುದಕ್ಕೂ ಮೊದಲೇ ಖಾತೆಗೆ ಜಮೆಯಾಗುತ್ತದೆ. CRF ಸಾಲಕ್ಕೆ ಅರ್ಜಿ ಸಲ್ಲಿಸಿದ ಎಂಟು ದಿನಗಳೊಳಗೆ ಹಣವು ರೈತರ ಖಾತೆಗೆ ಜಮೆಯಾಗುತ್ತದೆ. ಇದಕ್ಕೆ ಆಕೆ ವರ್ಷಕ್ಕೆ 8% ಬಡ್ಡಿ ಪಾವತಿಸಬೇಕು. CRF ಮೇವು ಖರೀದಿಸಲು, ಜಲಕೃಷಿ ಮಾಡಲು, ತರಕಾರಿ ಬೆಳೆಯಲು ಸಾಲ ನೀಡಲು ರೈತರಿಗೆ ಸಾಲ ನೀಡುತ್ತದೆ. ಇವುಗಳಿಗೆ MFI ಅಥವ ಬ್ಯಾಂಕುಗಳಲ್ಲಿ ಸಾಲ ಸಿಗುವುದಿಲ್ಲ.

ಚೌಕ 2: ಒಂದು ಎಕರೆ ಕೃಷಿ ಮಾದರಿಯು ನಗದು ಬೆಳೆಗಳಿಂದ ವೈವಿಧ್ಯಮಯ ಸಾವಯವ ಕೃಷಿಗೆ ಬದಲಾವಣೆಯನ್ನು ಪ್ರಚುರಪಡಿಸುತ್ತದೆನಮ್ಮ ಒಂದು ಎಕರೆಯಲ್ಲಿಸೋಯಾಬಿನ್ ಬೆಳೆಯುತ್ತಿದ್ದೆವು. ರಾಸಾಯನಿಕ ಕೀಟನಾಶಕ ಬಳಸುತ್ತಿದ್ದೆವು. ಆದಾಯದಲ್ಲಿ ಶೇ. 30%ರಷ್ಟು ಉಳಿಸಿದ್ದರೆ ಹೆಚ್ಚು. ತರಬೇತಿಯ ನಂತರ ನನಗೆ 10,000 ಚದುರ ಅಡಿ ಭೂಮಿ ಕೊಡುವಂತೆ ನನ್ನ ಗಂಡನನ್ನು ಒಪ್ಪಿಸಿದೆ. ಅಲ್ಲಿ ನಾನು ಕಲಿತಿದ್ದನ್ನು ಪ್ರಯೋಗಿಸಿದೆ,” ಎಂದು ಮಹಾರಾಷ್ಟ್ರದ ಲಾತೂರ್ ಗೌರ್ಎನ್ನುವ ಹಳ್ಳಿಯ ಅರ್ಚನಾ ತಾವಡೆ ಹೇಳುತ್ತಾರೆ. ವೈವಿಧ್ಯಮಯ ಬೆಳೆಗಳು, ತರಕಾರಿಗಳು, ಧಾನ್ಯಗಳನ್ನು ಜೈವಿಕ ಗೊಬ್ಬರ ಬಳಸಿ ಬೆಳೆದಾಗ ಇಳುವರಿ ಮೂರು ಪಟ್ಟು ಹೆಚ್ಚಾದುದನ್ನು ಕಂಡು ಅರ್ಚನಾ ಅಚ್ಚರಿಗೊಂಡಳು. ಲಾಭಗಳಿಕೆಯೊಂದಿಗೆ ಆಕೆ ತನ್ನ ಕುಟುಂಬಕ್ಕೆ ಪೌಷ್ಟಿಕಾಂಶಭರಿತ ಆಹಾರವನ್ನು ಒದಗಿಸಿದ್ದಳು. ಈ ಯಶಸ್ಸಿನಿಂದ ಸ್ಪೂರ್ತಿಗೊಂಡು ಅರ್ಚನಾಳ ಗಂಡ ಒಂದು ಎಕರೆ ಸಾವಯವ ಕೃಷಿ ಮಾದರಿಯನ್ನು ಅಳವಡಿಸಿಕೊಂಡ. ತರಕಾರಿಗಳು, ಕಾಳುಗಳು, ಧಾನ್ಯಗಳು, ಎಣ್ಣೆ ಕಾಳುಗಳು ಹೀಗೆ 23 ಬಗೆಯ ಬೆಳೆ ಬೆಳೆಯುವ ಮೂಲಕ ಅವರು ತಮ್ಮ ಆದಾಯದಲ್ಲಿ ಸರಿಸುಮಾರು 60% ಉಳಿಸಿದರು.ಇಂದು ಅರ್ಚನ ಭಾಷಣಕಾರ್ತಿ ಹಾಗೂ ತರಬೇತಿಗಾರ್ತಿ. ಅವಳ ಅನುಭವವು ಉಳಿದ ಮಹಿಳೆಯರಿಗೆ ಒಂದು ಎಕರೆ ಮಾದರಿಯನ್ನು ಅಳವಡಿಸಿಕೊಳ್ಳಲು ಸ್ಪೂರ್ತಿಯಾಗಿದೆ. “ಮಹಿಳೆಯಾಗಿ, ತಾಯಿಯಾಗಿ, ರೈತಳಾಗಿ ನನ್ನ ಕುಟುಂಬದ ಹಾಗೂ ನನ್ನ ಭೂಮಿಯ ಆರೋಗ್ಯವು ನನಗೆ ಮುಖ್ಯ. ಒಂದು ಎಕರೆ ಮಾದರಿಯು ನನ್ನ ಗುರಿ ತಲುಪಲು ಸಹಾಯಮಾಡುತ್ತದೆ. ಇದನ್ನೇ ಉಳಿದ ಮಹಿಳೆಯರೊಂದಿಗೆ ಹಂಚಿಕೊಳ್ಳುತ್ತೇನೆ,” ಎಂದು ಅರ್ಚನ ಹೇಳುತ್ತಾಳೆ.

ಪರಿಣಾಮ

ಈ ಕಾರ್ಯಕ್ರಮವು ರೈತಾಪಿ ಮಹಿಳೆಯರ ಬದುಕಿನ ಮೇಲೆ ಪ್ರಭಾವ ಬೀರಿದೆ. ಮಹಿಳೆಯರು ಭೂಮಿಯನ್ನು ಪಡೆದಿದ್ದು ಕೃಷಿಯ ಹಕ್ಕನ್ನು ಪಡೆದು ಕುಟುಂಬದ ಆಹಾರ, ಪೌಷ್ಟಿಕಾಂಶ ಹಾಗೂ ಆದಾಯ ಭದ್ರತೆಯನ್ನು ಸಾಧಿಸಿದ್ದಾರೆ (ನೋಡಿ ಚೌಕ 3). ಜೈವಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಕೊಡುಗೆ ನೀಡಿದ್ದಾರೆ.  ಕೃಷಿಯಿಂದ ಹಿಡಿದು ಆಹಾರ ಸಂಸ್ಕರಣೆ, ಪೂರೈಕೆ, ವಿತರಣೆ ಮತ್ತು ಗ್ರಾಹಕರವರೆಗಿನ ಮೌಲ್ಯ ಸರಪಳಿಯಲ್ಲಿ ಭಾಗವಹಿಸುವಿದ್ದು ಮಹಿಳೆಯರನ್ನು ಹೆಚ್ಚು ಆತ್ಮವಿಶ್ವಾಸಿಗಳನ್ನಾಗಿ ಹಾಗೂ ಸಬಲರನ್ನಾಗಿ ಮಾಡಿತು. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿದ್ದರಿಂದ ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸ್ವತಂತ್ರರಾದರು. ಕುಟುಂಬದಲ್ಲಿ ಹಾಗೂ ಸಮುದಾಯದಲ್ಲಿ ಮಹಿಳೆಯರು ಕೃಷಿಕರಾಗಿ, ನಿರ್ಧಾರ ತೆಗೆದುಕೊಳ್ಳುವವರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಚೌಕ 3: ಮಹಿಳಾ ರೈತರ ಭೂಮಿಯ ಒಡೆತನ

ಮರಾಠವಾಡದಲ್ಲಿ ಮರುಕಳಿಸುವ ಬರಗಾಲವು ರೈತರನ್ನು ದೊಡ್ಡ ನಷ್ಟದೊಂದಿಗೆ ಸಂಕಷ್ಟಕ್ಕೆ ಸಿಲುಕಿಸಿತು. ಉಸ್ಮಾನಾಬಾದ್‌ನ ಕಲ್ಲಂಬ್‌ನ ಎಕುರ್ಗಾ ಗ್ರಾಮದ ರೈತ ಮಹಿಳೆಯರು ಪರಿಸ್ಥಿತಿಯನ್ನು ತಮ್ಮ ಕೈಗೆತ್ತಿಕೊಂಡು ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾದರು.

 ಬರಗಾಲದ ಸಂಕಷ್ಟದೊಂದಿಗೆ ಈ ಪ್ರದೇಶದಲ್ಲಿ ಗಂಡಸರ ಮದ್ಯವ್ಯಸನವು ಮಿತಿಮೀರಿತು. ನನ್ನ ಗಂಡ ಡ್ರೈವರ್ಕೆಲಸ ಮಾಡುತ್ತಿದ್ದು ಮನೆಯಿಂದ ಹೆಚ್ಚು ಸಮಯ ದೂರವೇ ಉಳಿಯುತ್ತಿದ್ದ. ಮಿತಿಮೀರಿ ಕುಡಿಯುತ್ತಿದ್ದ. ಅವನು ಭೂಮಿಯನ್ನು ಮಾರಿಬಿಡಬಹುದೆಂದು ಅತ್ತೆ ಮಾವ ಹೆದರಿದರು. ಪರಿಸ್ಥಿತಿಯಿಂದ ಹೊರಬರಲು ಭೂಮಿಯನ್ನು ನನ್ನ ಹೆಸರಿಗೆ ಮಾಡಲು ಅವರನ್ನು ಒಪ್ಪಿಸಿದೆ,” ಎಂದು ಮನೀಷ ಯಾದವ್‌ ಹೇಳಿದಳು. ಇಂದು ಮನೀಷ ಒಂದು ಎಕರೆ ಭೂಮಿಯನ್ನು ಹೊಂದಿದ್ದು ತರಕಾರಿ ಬೆಳೆಯುವ ಮೂಲಕ ರೂ. 2,50,000  ಗಳಿಸುತ್ತಿದ್ದಾಳೆ.

 ಹವಾಮಾನ ಸ್ಥಿತಿಸ್ಥಾಪಕ ಕೃಷಿ ಮಾದರಿಯಲ್ಲಿ ಎಸ್‌ಎಸ್‌ಪಿ ಎಕುರ್ಗಾದಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಈ ತರಬೇತಿಯ ಅವಧಿಯಲ್ಲಿ ಮಹಿಳೆಯರು ಸರ್ಕಾರಿ ಕೃಷಿ ಯೋಜನೆಗಳು ಹಾಗೂ ಸಂಪನ್ಮೂಲಗಳನ್ನು ಪಡೆಯಲು ಭೂಮಿಯ ಒಡೆತನದ ಹಕ್ಕು ಮುಖ್ಯ ಎನ್ನುವುದನ್ನು ಅರಿತರು. ಅವರು ಭೂಮಿಯ ಹಕ್ಕನ್ನು ಪಡೆಯಲು 400 ಮಹಿಳಾ ರೈತರ ಗುಂಪನ್ನು ರೂಪಿಸಿಕೊಂಡರು.

ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ಮಾತನಾಡಿ ತಮ್ಮ ಹೆಸರಿಗೆ ಭೂಮಿಯನ್ನು ಮಾಡುವುದರ ಲಾಭಗಳನ್ನು ಮನವರಿಕೆ ಮಾಡಿಕೊಟ್ಟರು. ಸವಿತಾ ತಾಯಿ ಬೋರೆ ತನ್ನ ಪತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ಮಹಿಳೆ. ತಹಶೀಲ್ದಾರ್‌ ಬ್ಲಾಕ್‌ನಲ್ಲಿ ಯಾವುದೇ ವೆಚ್ಚವಿಲ್ಲದೆ ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಸವಿತಾ ಅವರು ಎಕುರ್ಗಾ ಗ್ರಾಮದಲ್ಲಿ ಮಹಿಳಾ ಭೂ ಮಾಲೀಕತ್ವದ ವಕೀಲರಾಗಿದ್ದು ಭೂ ಮಾಲೀಕತ್ವ ಹೊಂದುವ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಆಕೆ 50ಕ್ಕೂ ಹೆಚ್ಚು ಮಹಿಳೆಯರಿಗೆ ತಮ್ಮ ಕುಟುಂಬದೊಂದಿಗೆ ಒಪ್ಪಂದ ಮಾಡಿಕೊಂಡು ಭೂ ಮಾಲೀಕತ್ವ ಪಡೆಯಲು ನೆರವು ನೀಡಿದ್ದಾರೆ.

ಮಾಪನ

 

 ಎಸ್‌ಎಸ್‌ಪಿ ಈ ಮಾದರಿಯನ್ನು ಮೊದಲು ಒಸ್ಮಾನಾಬಾದ್‌ನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದರು. ಅಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಆಹಾರ ಬೆಳೆಗಳ ಕೃಷಿಯನ್ನು ಪರಿಚಯಿಸಿದರು. ಒಂದು ಎಕರೆ ಭೂಮಿಯನ್ನು ರಾಸಾಯನಿಕದಿಂದ ಜೈವಿಕ ಕೃಷಿ ಪದ್ಧತಿಗೆ ಬದಲಿಸಿದರು. WCRFನ ಈ ಮಾದರಿಯು ಒಂದು ಎಕರೆ ಮಾದರಿ ಎಂದು ಜನಪ್ರಿಯವಾಗಿದೆ.  ಮಹಿಳೆಯರು ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯ ಒಡೆತನವನ್ನು ಪಡೆದಿದ್ದು ಕೃಷಿ ಪದ್ಧತಿಗಳನ್ನು ಬದಲಿಸಿಕೊಂಡು ಆಹಾರ ಬೆಳೆಗಳನ್ನು ಬೆಳೆಯಲಾರಂಭಿಸಿದ್ದಾರೆ.

ಮಾದರಿಯನ್ನು ಸಮರ್ಥವಾಗಿ ಬಳಕೆಗೆ ತರಲು ಒಗ್ಗೂಡಿದ ಪ್ರಯತ್ನ ಮಾಡಬೇಕಿದೆ. ಎಸ್‌ಎಸ್‌ಪಿ UMED -ಮಹಾರಾಷ್ಟ್ರ ಸ್ಟೇಟ್‌ ರೂರಲ್‌ ಲೈವ್ಲಿಹುಡ್ಸ್‌ ಮಿಷನ್‌, ಮಹಾರಾಷ್ಟ್ರ ಸರ್ಕಾರ, ಮಿಸೊರಿಯರ್‌ ಜರ್ಮನಿ, ಹೌರೊ ಕಮಿಷನ್‌, Welthungerhilfe-GIZ, ಹಿಂದುಸ್ತಾನ್ ಯೂನಿಲಿವರ್ ಫೌಂಡೇಶನ್, ಕಮಲ್ ಉದ್ವಾಡಿಯಾ ಫೌಂಡೇಶನ್, ಮ್ಯಾಕ್‌ಆರ್ಥರ್ ಫೌಂಡೇಶನ್, ಅಶೋಕ, HSBC ಮತ್ತು ನಬಾರ್ಡ್‌ಯಂತಹ ಪರಿಸರವ್ಯವಸ್ಥೆಯ ಪಾಲುದಾರರೊಂದಿಗೆ ಮಾದರಿಯನ್ನು ಪರಿಣಾಮಕಾರಿಯಾಗಿಸುತ್ತಿದೆ. ಈ ಪಾಲುದಾರರು ಎಸ್‌ಎಸ್‌ಪಿಯ ಸಹಯೋಗದೊಂದಿಗೆ ಮಹಿಳೆಯರು ತಮ್ಮ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತಿವೆ.

 2014ರಲ್ಲಿ ಎಸ್‌ಎಸ್‌ಪಿ ತಂಡಗಳು ಮಹಿಳೆಯರ ನಾಯಕತ್ವದಲ್ಲಿ ಸಣ್ಣ ರೈತ ಕುಟುಂಬಗಳ ಆಹಾರ ಹಾಗೂ ಆದಾಯ ಭದ್ರತೆಯನ್ನು ಉತ್ತಮಗೊಳಿಸುವ ಗುರಿಯೊಂದಿಗೆ ಈ ವಿಧಾನವನ್ನು ಹುಟ್ಟುಹಾಕಿದವು. 2016 ರಲ್ಲಿ, ಸಿಕ್ಕ ಮಹಾರಾಷ್ಟ್ರ ಸರ್ಕಾರದ ಸಹಭಾಗಿತ್ವವು ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಸಮುದಾಯದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡುವ ಮೂಲಕ ಕೃಷಿ ನಾಯಕಿಯರ ತಂಡವನ್ನು ಕಟ್ಟಿ ಈ ವಿಧಾನವನ್ನು ಪ್ರಚುರಗೊಳಿಸುವ ಅವಕಾಶ ನೀಡಿತು.

ಏಳು ವರ್ಷಗಳಲ್ಲಿ, ಮಹಾರಾಷ್ಟ್ರದ ಉಸ್ಮಾನಾಬಾದ್, ಲಾತೂರ್, ಸೊಲ್ಲಾಪುರ ಮತ್ತು ನಾಂದೇಡ್ ಜಿಲ್ಲೆಗಳಾದ್ಯಂತ 750 ಕ್ಕೂ ಹೆಚ್ಚು ಹಳ್ಳಿಗಳಲ್ಲಿ 75,000 ಮಹಿಳಾ ರೈತರು ಮತ್ತು ಕುಟುಂಬಗಳು ಹವಾಮಾನ ಸ್ಥಿತಿಸ್ಥಾಪಕ ಕೃಷಿಗೆ ಬದಲಾಗಿದ್ದಾರೆ. ಪ್ರಸ್ತುತ ಇದನ್ನು ಜಲ್ನಾ, ಅಹ್ಮದ್‌ನಗರ ಮತ್ತು ಔರಂಗಾಬಾದ್ ಜಿಲ್ಲೆಗಳಿಗೆ ಮತ್ತು ಭಾರತದಲ್ಲಿ ಬಿಹಾರ ಮತ್ತು ಕೇರಳ ರಾಜ್ಯಗಳಿಗೆ ವಿಸ್ತರಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ, ವಿಶೇಷ ಜೈವಿಕ ಒಳಸುರಿಯುವಿಕೆಗಳನ್ನು ಬಳಸಿಕೊಂಡು ಆಹಾರ ಬೆಳೆಗಳನ್ನು ಬೆಳೆಯುವ ಮೂಲಕ ಕಾರ್ಯಕ್ರಮವು 65,000 ಎಕರೆ ಕೃಷಿಭೂಮಿಯನ್ನು ಪರಿವರ್ತಿಸಿದೆ. ಈ ವಿಶಿಷ್ಟ ವಿಧಾನವು ಅಳತೆಗೆ ದಕ್ಕುವಂತಿದ್ದು, ಪುನರಾವರ್ತನೆ ಮಾಡಬಹುದಾಗಿದ್ದು ಪರಿಣಾಮಕಾರಿಯಾಗಿದೆ.

 

Upmanyu Patil

Swayam Shikshan Prayog

102, First Floor

Gayatri Building, Orchid School Lane

Balewadi Phata, Baner, Pune 411045

Maharashtra.

E-mail: sspindia1@gmail.com

 

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೩ ; ಸೆಪ್ಟಂಬರ್ ೨೦‌೨೨

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...