ಕರ್ನಾಟಕದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸುವುದು


ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ರಾಜ್ಯದ ʼತೊಗರಿ ಕಣಜʼ ಎಂದು ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಆದರೆ ಪ್ರತಿ ವರ್ಷ 330,000 ಹೆಕ್ಟೇರ್ ಭೂಮಿಯಲ್ಲಿ ತೊಗರಿಯನ್ನು ಬೆಳೆಯುತ್ತಿದ್ದರೂ ಪ್ರತಿವರ್ಷವೂ ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣವೆಂದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಇದು ಬೆಳೆಯನ್ನು ಬರ, ಅನಿಯಮಿತ ಮಳೆ, ಕೀಟಬಾಧೆಗಳಿಗೆ ಒಡ್ಡುತ್ತಿದೆ. ಇದರಿಂದಾಗಿ ರೈತರು ತಮ್ಮ ಬೆಳೆಗೆ ಹಾಕಿದ ಬಂಡವಾಳಕ್ಕೆ ತಕ್ಕ ಆದಾಯವನ್ನು ಪಡೆಯುತ್ತಿಲ್ಲ.


ಸಾಂಪ್ರದಾಯಿಕ ವಿಧಾನದಲ್ಲಿ ತೊಗರಿಯನ್ನು ಕೂರಿಗೆಯಲ್ಲಿ ನೆಲವನ್ನು ಉಳುತ್ತಾ ಬಿತ್ತನೆ ಮಾಡಲಾಗುತ್ತದೆ. ದುರದೃಷ್ಟವಶಾತ್‌, ಬೀಜ ಬಿತ್ತನೆ ಮಾಡುವಾಗ ಬೀಜಗಳ ನಡುವಿನ ಅಂತರದ ಬಗ್ಗೆ ಗಮನನೀಡುವುದಿಲ್ಲ. ಗೊಬ್ಬರಗಳನ್ನು ಕೂಡ ಸರಿಯಾಗಿ ಸಿಂಪಡಿಸುವುದಿಲ್ಲ. ಈ ಎಲ್ಲ ಕಾರಣಗಳಿಂದ, ಮಳೆ ತಡವಾದಲ್ಲಿ ಬೆಳೆಯ ಇಳುವರಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಜೊತೆಗೆ ಕೀಟಬಾಧೆಯ ಅಪಾಯವೂ ಹೆಚ್ಚಿರುತ್ತದೆ.

ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಯ ಇಳುವರಿಯನ್ನು ಸುಧಾರಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು. ಈ ಹೊಸ ವಿಧಾನದಲ್ಲಿ ರೈತರು ಪ್ರತ್ಯೇಕ ನರ್ಸರಿಯನ್ನು ಸಿದ್ಧಪಡಿಸಿಕೊಂಡು ತೊಗರಿಯ ಸಸಿಗಳನ್ನು ಬೆಳೆಸುತ್ತಾರೆ. ಅದನ್ನು ವೈಜ್ಞಾನಿಕ ವಿಧಾನದಲ್ಲಿ ಹೊಲದಲ್ಲಿ ನಾಟಿ ಮಾಡುತ್ತಾರೆ. ಉದಾಹರಣೆಗೆ, ಸಸಿಗಳನ್ನು ನೆಡುವಾಗ ರೈತರು ಸಸಿಗಳ ಪ್ರತಿ ಸಾಲಿನ ನಡುವೆ 5 ಅಡಿ ಅಂತರವನ್ನು ಮತ್ತು ಸಸಿಗಳ ನಡುವೆ ಕನಿಷ್ಠ 2 ಅಡಿ ಅಂತರವನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಜೋಳ ಅಥವ ಚೆಂಡುಹೂವನ್ನು ಅಂತರ ಬೆಳೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ವೃತ್ತಿ ಜೀವನೋಪಾಯ ಸಂಪನ್ಮೂಲ ಕೇಂದ್ರವು  ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಬೆಂಬಲದೊಂದಿಗೆ ಮತ್ತು ಕೃಷಿ ಇಲಾಖೆ, ಕರ್ನಾಟಕ ಮತ್ತು ಸಣ್ಣ ರೈತರ ಕೃಷಿ-ವ್ಯಾಪಾರ ಒಕ್ಕೂಟದ (ಎಸ್‌ಎಫ್‌ಎಸಿ) ಆರ್ಥಿಕ ಬೆಂಬಲದೊಂದಿಗೆ – ಗುಲ್ಬರ್ಗದ ರೈತರಿಗೆ ಈ ಹೊಸ ತೊಗರಿ ನಾಟಿ ವಿಧಾನವನ್ನು ಪರಿಚಯಿಸಿದೆ. ರೈತರಿಗೆ ಈ ಹೊಸ ತಂತ್ರಜ್ಞಾನದಿಂದ ಬಹಳ ಪ್ರಯೋಜನವಾಗಿದೆ. ಇದು ಒಳಸುರಿಯುವಿಕೆಗಳ ವೆಚ್ಚವನ್ನು ಕಡಿಮೆಗೊಳಿಸಿದೆ, ಇಳುವರಿಯನ್ನು ಹೆಚ್ಚಿಸಿದೆ ಮತ್ತು ಮಳೆ ತಡವಾಗುವುದರಿಂದ ಉಂಟಾಗುವ ಬೆಳೆ ನಷ್ಟದ ಸಂಭವನೀಯ ಅಪಾಯವನ್ನು ತಗ್ಗಿಸಿದೆ.

ಈ ಹೊಸ ತಂತ್ರಜ್ಞಾನದ ಫಲಾನುಭವಿಯಾಗಿರುವ ಗುಲ್ಬರ್ಗದ ಪ್ರಗತಿಪರ ರೈತ ಮಲ್ಲಿಕಾರ್ಜುನ ಪಾಟೀಲರು ಇದಕ್ಕೊಂದು ನಿದರ್ಶನ. ಆಳಂದ ತಾಲ್ಲೂಕಿನ ಕಿನ್ನಿಸುಲ್ತಾನ ಹಳ್ಳಿಯ ರೈತನನ್ನು ವೃತ್ತಿಯ ಕ್ಷೇತ್ರ ಸಿಬ್ಬಂದಿಗಳು ಭೇಟಿ ಮಾಡಿ ಸಸಿ ನಾಟಿ ಮಾಡುವ ವಿಧಾನವನ್ನು ಪರಿಚಯಿಸಿದರು. ಆರಂಭದಲ್ಲಿ, ಅವರು ತಮ್ಮ ಹತ್ತು ಎಕರೆ ಜಮೀನಿನ ಒಂದು ಭಾಗದಲ್ಲಿ ತೊಗರಿ ಸಸಿ ನಾಟಿ ವಿಧಾನವನ್ನು ಪ್ರಯತ್ನಿಸಿದರು. ಈ ಪ್ರಯೋಗದಲ್ಲಿ ಬಂಡವಾಳಕ್ಕೆ ಪ್ರತಿಆದಾಯ ಕುರಿತು ಹೇಳುತ್ತಾ ಪಾಟೀಲರು, “ಸಾಂಪ್ರದಾಯಿಕ ವಿಧಾನದಲ್ಲಿ, ಪ್ರತಿ ಎಕರೆಗೆ ಋತುವೊಂದಕ್ಕೆ ಒಳಸುರಿಯುವಿಕೆಗಳಿಗಾಗಿ ರೂ. 10,420 ವೆಚ್ಚ ಮಾಡುತ್ತೇನೆ. ಪ್ರತಿಯಾಗಿ 4 ಕ್ವಿಂಟಾಲ್‌ ಇಳುವರಿ ಸಿಗುತ್ತದೆ. ಮಾರಾಟ ಮಾಡಿದಾಗ ಪ್ರತಿ ಕ್ವಿಂಟಾಲ್‌ಗೆ ರೂ. 4,000 ಸಿಗುತ್ತದೆ. ಒಟ್ಟು ಉತ್ಪನ್ನದ ಮಾರಾಟದಿಂದ ರೂ. 16,000 ಗಳಿಸುತ್ತೇನೆ. ಇದರೊಂದಿಗೆ, ಅಂತರ ಬೆಳೆಯಾಗಿ ಹೆಸರುಕಾಳನ್ನು ಬೆಳೆಯುವ ಮೂಲಕ ರೂ. 3,000 (ಹೆಚ್ಚು) ಗಳಿಸುತ್ತೇನೆ. ಹೀಗೆ ಒಂದು ಎಕರೆಯಿಂದ ರೂ. 8,760 ನಿವ್ವಳಲಾಭ ಗಳಿಸುತ್ತೇನೆ,” ಎನ್ನುತ್ತಾರೆ. ಹೊಸ ವಿಧಾನದಲ್ಲಿ ನರ್ಸರಿಗಳನ್ನು (ಸಸಿಗಳನ್ನು ಬೆಳೆಸಲು) ಸ್ಥಾಪಿಸಲು ಹೆಚ್ಚುವರಿ ವೆಚ್ಚವಾದರೂ, ಇಳುವರಿಯಲ್ಲಿನ ಹೆಚ್ಚಳ, ಬೀಜಗಳು ಮತ್ತು ರಾಸಾಯನಿಕಗಳ ಸಿಂಪಡಣೆಯ ವೆಚ್ಚ

ಕಡಿಮೆಯಾಗುವುದರಿಂದ ಇದು ಸರಿದೂಗಿಸಲ್ಪಡುತ್ತದೆ. ಈ ಅಂಶವನ್ನು ಪಾಟೀಲರಂತೆ ಮತ್ತೊಬ್ಬ ರೈತನ ಹೊಸ ತಂತ್ರಜ್ಞಾನದ ಯಶಸ್ವಿ ಅನುಭವವು ವಿವರಿಸುತ್ತದೆ. “ಕಸಿ ವಿಧಾನದಲ್ಲಿ ಒಳಸುರಿಯುವಿಕೆಗಳ ವೆಚ್ಚವು ಪ್ರತಿ ಎಕರೆಗೆ ರೂ. 10,260. ಇದು ನಾವು ಬಳಸುತ್ತಿದ್ದ ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿಲ್ಲ.  ಇಳುವರಿಯಲ್ಲಿ ಬಹಳ ದೊಡ್ಡ ವ್ಯತ್ಯಾಸವಿತ್ತು. ಹೊಸ ವಿಧಾನದಲ್ಲಿ 7 ಕ್ವಿಂಟಾಲ್‌ ತೊಗರಿ ಉತ್ಪಾದಿಸಿದೆ. ಇದರಿಂದ ರೂ. 28,000 ಗಳಿಸಿದೆ. ಇದರೊಂದಿಗೆ ಜೋಳವನ್ನು ಅಂತರಬೆಳೆಯಾಗಿ ಬೆಳೆದು ರೂ. 4000 ಹೆಚ್ಚುವರಿ ಆದಾಯ ಗಳಿಸಿದೆ. ಎಕರೆಯೊಂದಕ್ಕೆ ರೂ. 21,240 ನಿವ್ವಳ ಲಾಭ ಗಳಿಸಿದೆ. ಅದು ಸಾಂಪ್ರದಾಯಿಕ ವಿಧಾನಕ್ಕಿಂತ ದುಪ್ಪಟ್ಟು ಆದಾಯವಾಗಿದೆ,” ಎಂದು ಅವರು ಹೇಳುತ್ತಾರೆ.

ಈ ಹೊಸ ವಿಧಾನದ ಕಾರ್ಯಸಾಧ್ಯತೆಯು ಮಲ್ಲಿಕಾರ್ಜುನ್ ಮತ್ತು ಈ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತರ ಹಿತಾಸಕ್ತಿ ಗುಂಪುಗಳು ಮತ್ತು ರೈತ ಉತ್ಪಾದಕರ ಸಂಘಟನೆಯ ಸದಸ್ಯರು ಮತ್ತು ಇತರ ಅನೇಕ ರೈತರ ಯಶಸ್ಸಿನ ಕಥೆಗಳಲ್ಲಿ ಪ್ರತಿಫಲಿಸುತ್ತದೆ. ಬೆಳೆಗಳ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಕಡಿಮೆ ಮಳೆಯಾದರೂ, ಸಸ್ಯಗಳು ಶುಷ್ಕ ಪರಿಸ್ಥಿತಿಯನ್ನು ತಡೆದುಕೊಳ್ಳಬಲ್ಲವು. ಏಕೆಂದರೆ ಅವು ನರ್ಸರಿಯಲ್ಲಿ ಸಮಗ್ರ ಪೋಷಣೆಯ ವಾತಾವರಣದಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ರೈತರು ಈಗ ಮಳೆಯಿಲ್ಲದ ತಿಂಗಳುಗಳಲ್ಲಿ ನಷ್ಟದ ಭಯವಿಲ್ಲದೆ ಕಾಯಬಹುದು. ಅಲ್ಲದೆ, ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದಲ್ಲಿ ಅವರು ಹೆಚ್ಚು ಕೊಂಬೆಗಳು ಮತ್ತು ಹೂವುಗಳನ್ನು ಪಡೆಯುತ್ತಾರೆ. ಹೊಸ ತಂತ್ರಜ್ಞಾನದ ಪ್ರಭಾವದಿಂದಾಗಿ ಮುಂದಿನ ವರ್ಷ ಉತ್ಪಾದನಾ ಪ್ರದೇಶವನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ.

ಈ ಉಪಕ್ರಮವು ಬರ ಮತ್ತು ಅನಿಯಮಿತ ಮಳೆಯಿರುವ ತೊಗರಿ ಬೆಳೆಯುವ ಇತರ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರೈತರಿಗೆ ವ್ಯವಸ್ಥಿತ ತರಬೇತಿ ಮತ್ತು ಅದರ ಫಲಿತಾಂಶಗಳನ್ನು ಪ್ರದರ್ಶಿಸುವ ಮೂಲಕ ಗುಲ್ಬರ್ಗ ಜಿಲ್ಲೆಯಲ್ಲಿ ಈ ಉಪಕ್ರಮದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ರೈತ ಉತ್ಪಾದಕ ಸಂಘದ ವಿಳಾಸ: ಕೃಷಿಕಬಂಧು ರೈತ ಉತ್ಪಾದಕ ಕಂಪನಿ ಲಿ, ಹಳ್ಳಿ: ಕಿನ್ನಿಸುಲ್ತಾನ್‌, ಆಳಂದ ತಾಲ್ಲೂಕು, ಜಿಲ್ಲೆ: ಗುಲ್ಬರ್ಗಾ, ಕರ್ನಾಟಕ.
ದೂರವಾಣಿ: ಬಾಬುರಾವ್‌ ಪಾಟೀಲ್-‌ 09740621115.
ಸಂಪನ್ಮೂಲ ಕೇಂದ್ರದ ವಿಳಾಸ: ವೃತ್ತಿ ಜೀವನೋಪಾಯ ಸಂಪನ್ಮೂಲ ಕೇಂದ್ರ, ನಂ. 19, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಆರ್‌ಎಂವಿ 2ನೇ ಹಂತ, ಅಶ್ವತ್ಥನಗರ, ಬೆಂಗಳೂರು, ಕರ್ನಾಟಕ- 560094. ದೂರವಾಣಿ: 080-23419616, 23517241.
ಇ ಮೇಲ್‌: bala@vrutti.org
ವೆಬ್‌ಸೈಟ್‌: www.vrutti.org.

ಮೂಲ: ಈ ಲೇಖನವು “ಕೃಷಿ ಸೂತ್ರ 2 ಸಕ್ಸಸ್‌ ಸ್ಟೋರೀಸ್‌ ಆಫ್‌ ಫಾರ್ಮರ್‌ ಪ್ರೊಡ್ಯೂಸರ್‌ ಆರ್ಗನೈಸೇಶನ್ಸ್‌ ”ನಲ್ಲಿ ಪ್ರಕಟವಾಗಿದೆ.


ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೫; ಸಂಚಿಕೆ : ೪ ; ಡಿಸಂಬರ್ ೨೦‌೨‌೩

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...