ನಗರಗಳ ಡೈರಿಗಳನ್ನು ಇನ್ನಷ್ಟು ಸುಸ್ಥಿರವಾಗಿಸುವುದು


ಕಲ್ಲಿದ್ದಲು, ತೈಲ ಮತ್ತು ಅನಿಲಗಳಂತಹ ನವೀಕರಿಸಲಾಗದ ಶಕ್ತಿ ಮೂಲಗಳ ಮೇಲೆ ಮಾನವಕುಲದ ಅವಲಂಬನೆಯು ವಿಶ್ವಾದ್ಯಂತ ಹೆಚ್ಚುತ್ತಿದೆ. ಸುಲಭವಾಗಿ ಲಭ್ಯವಿರುವ, ಆರ್ಥಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿರುವ ನವೀಕರಿಸಬಹುದಾದ ಶಕ್ತಿ ಮೂಲಗಳಾದ ಸಗಣಿಯಂತಹವು ಯಥೇಚ್ಛವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳು ಇದು ಸಕಾಲವಾಗಿದೆ.


ದೇವಾಲಯಗಳ ನಗರವಾದ ಜಮ್ಮುವಿನಲ್ಲಿ ಅನೇಕ ಸಣ್ಣ ನಗರ ಡೈರಿಗಳಿವೆ. ತಾಜಾ ಹಾಲನ್ನು ಸಂಗ್ರಹಿಸುವಲ್ಲಿ ಸ್ಥಳೀಯ ಸಮುದಾಯಗಳಿಗೆ ಈ ಫಾರಂಗಳು ಬಹಳ ಮುಖ್ಯವಾದದ್ದು. ಈ ಡೈರಿಗಳು ಕಳವಳಕ್ಕೆ ಕಾರಣವಾಗಿವೆ. ಸಗಣಿಯನ್ನು ಆಯಾ ಪ್ರದೇಶಗಳ ಒಳಚರಂಡಿಗಳಿಗೆ ಸುರಿಯಲಾಗುತ್ತಿದೆ. ಇದರಿಂದ ಮೊದಲೇ ತುಂಬಿತುಳುಕುತ್ತಿರುವ ಒಳಚರಂಡಿಗಳ ಮೇಲೆ ಮತ್ತಷ್ಟು ಹೊರೆಯನ್ನು ಹೊರೆಸಿದಂತಾಗಿದೆ. ಸಗಣಿಯನ್ನು ಶೇಖರಿಸಲು ಸ್ಥಳದ ಕೊರತೆಯಿರುವುದರಿಂದ ಇದು ಅನಿವಾರ್ಯವಾಗಿದೆ. ನಗರದ ಡೈರಿಗಳಿಂದ ಈ ಸಗಣಿ ಹಾಗೂ ಗಂಜಲವನ್ನು ಹಣ ನೀಡಿ ಸಂಗ್ರಹಿಸಿ ಅವುಗಳನ್ನು ಮರುಬಳಕೆ ಮಾಡಿ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಅಗತ್ಯವಿದೆ.

ದನದ ಸಗಣಿಯನ್ನು ಹಲವು ವಿಧಗಳಲ್ಲಿ ಮರುಬಳಕೆ ಮಾಡಬಹುದು. ಇದನ್ನು ಜೈವಿಕ ಅನಿಲವಾಗಿ ಸಂಸ್ಕರಿಸಬಹುದು. ಸಂಕುಚಿತ ಜೈವಿಕ ಅನಿಲ (CBG) / ಸಂಕುಚಿತ ನೈಸರ್ಗಿಕ ಅನಿಲ (CNG)ವಾಗಿ ಪರಿವರ್ತಿಸಬಹುದು. ಇದನ್ನು ಡೈರಿ/ಹಾಲು ಸಂಸ್ಕರಣ ಘಟಕಗಳು ತಮ್ಮ ಬಾಯ್ಲರ್‌ಗಳನ್ನು ಚಾಲಿಸಲು, ರೆಸ್ಟೊರೆಂಟ್‌ಗಳು, ವಿದ್ಯುತ್‌ಗಾಗಿ ಜನರೇಟರ್‌ಗಳನ್ನು ಚಲಾಯಿಸಲು, ಬೀದಿ ದೀಪಗಳಿಗೆ ಹಾಗೂ ಇತರ ಕೈಗಾರಿಕೆಗಳಿಗೆ ಬೇಡಿಕೆಯ ಆಧಾರದ ಮೇಲೆ ಪೂರೈಸಬಹುದು. ಉಳಿದ ಸಗಣಿ ಮತ್ತು ಜೈವಿಕ ಅನಿಲ ಸ್ಥಾವರದಿಂದ ಪಡೆದ ದೊಡ್ಡ ಪ್ರಮಾಣದ ಸ್ಲರಿಯನ್ನು ಎರೆಹುಳಗೊಬ್ಬರ, ಸ್ಮಶಾನಕ್ಕೆ ಬೇಕಾಗುವ ದಿಮ್ಮಿಗಳು, ಪರಿಸರ ಸ್ನೇಹಿ ದೀಪಗಳು, ಬಣ್ಣಗಳು, ವಿಗ್ರಹಗಳು / ಮೂರ್ತಿಗಳು, ಹೂವಿನ ಕುಂಡಗಳು, ಜೈವಿಕ ಗೊಬ್ಬರಗಳು, ಬೆರಣಿ ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು. ದೊಡ್ಡ ಪ್ರಮಾಣದಲ್ಲಿ ಇದನ್ನು ಉತ್ಪಾದಿಸಬಹುದು. ಇದಕ್ಕೆ ವಾಣಿಜ್ಯ ಮೌಲ್ಯವಿದ್ದು ಸುಸ್ಥಿರ ವ್ಯಾಪಾರದ ಅವಕಾಶವಿದೆ. ಸಂಗ್ರಹಿಸಿದ ಗಂಜಲವನ್ನು ಜೈವಿಕ ಕೀಟನಾಶಕಗಳು, ನಿವಾರಕಗಳು, ಔಷಧಗಳು ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು.

ಹಸುವಿನ ಸಗಣಿ ಮರುಬಳಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ – ಡೈರಿ ರೈತರ ಆದಾಯವನ್ನು ಹೆಚ್ಚಿಸುತ್ತದೆ; ಪರಿಸರ ಸ್ನೇಹಿ ಉದ್ಯೋಗಗಳ ಸೃಷ್ಟಿ; ಸುಸ್ಥಿರ ಕೃಷಿ ಮತ್ತು ಜಾನುವಾರು ಅಭಿವೃದ್ಧಿ, ಸ್ವಚ್ಛ ಮತ್ತು ಪರಿಸರ ಸ್ನೇಹಿ ನಗರಗಳ ಸೃಷ್ಟಿಯಾಗುತ್ತದೆ. ILO ಅಧ್ಯಯನದ ಪ್ರಕಾರ, ಸಗಣಿ ಉತ್ಪಾದನೆಯ ಬಳಕೆಯು ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 2 ಮಿಲಿಯನ್ ಹಸಿರು ಮತ್ತು ಸೂಕ್ತ ಉದ್ಯೋಗಗಳನ್ನು ಬೆಂಬಲಿಸುತ್ತದೆ. ಒಂದು ಕೆಜಿ ಸಗಣಿಯನ್ನು ಗರಿಷ್ಠ ಮಟ್ಟಕ್ಕೆ ಬಳಸಿದಲ್ಲಿ ಅದರ ಮೌಲ್ಯವು ಹತ್ತುಪಟ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಸಗಣಿಯನ್ನು ಸಂಸ್ಕರಿಸಿ ಈ ಕೆಲವು ಉತ್ಪನ್ನಗಳನ್ನು ತಯಾರಿಸಬಹುದು.

ಜೈವಿಕ ಸಂಕುಚಿತ ನೈಸರ್ಗಿಕ ಅನಿಲ (ಜೈವಿಕಸಿಎನ್ಜಿ) ಅಥವಾ ಸಂಕುಚಿತ ಜೈವಿಕ ಅನಿಲ (ಸಿಬಿಜಿ) ತ್ಯಾಜ್ಯವಾದ ಸಗಣಿಯಿಂದ ಪಡೆದ ಶುದ್ಧ ಮತ್ತು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ. ಜೈವಿಕ-CNG ಸುಮಾರು 92-98 % ಮೀಥೇನ್ ಮತ್ತು 2-8 % ಕಾರ್ಬನ್ ಡೈಆಕ್ಸೈಡ್ ಅನ್ನು ಹೊಂದಿರುತ್ತದೆ. ಬಯೋ-ಸಿಎನ್‌ಜಿಯ ಕ್ಯಾಲೋರಿಫಿಕ್ ಮೌಲ್ಯವು ಪ್ರತಿ ಕೆಜಿಗೆ ಸುಮಾರು 52,000 ಕಿಲೋಜೌಲ್‌ಗಳು (ಕೆಜೆ) ಆಗಿದೆ, ಇದು ಜೈವಿಕ ಅನಿಲಕ್ಕಿಂತ 167% ಹೆಚ್ಚಾಗಿದೆ.

ಪ್ರಸ್ತುತ, ಭಾರತದಲ್ಲಿ ಹದಿನೇಳು ಬಯೋ-ಸಿಎನ್‌ಜಿ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ 46,178 ಕೆ.ಜಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಜೈವಿಕ-ಸಿಎನ್‌ಜಿ ಸ್ಥಾವರವು 40 ಟನ್ ಹಸಿ ತ್ಯಾಜ್ಯದಿಂದ 1.6 ಟನ್ ಜೈವಿಕ-ಸಿಎನ್‌ಜಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಪ್ರಾಕೃತಿಕ/ವೈದಿಕ ಬಣ್ಣ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ) ಹಸುವಿನ ಸಗಣಿಯಿಂದ ತಯಾರಿಸಿದ ‘ಖಾದಿ ಪ್ರಾಕೃತಿಕʼ ಬಣ್ಣದ ನವೀನ ತಂತ್ರಜ್ಞಾನದಿಂದ ಜಾನುವಾರು ಬೆಳೆಗಾರರಿಗೆ ಹೆಚ್ಚುವರಿ ಆದಾಯದ ಸ್ಥಿರ ಮೂಲವನ್ನು ಒದಗಿಸುತ್ತಿದೆ. ಹಸುವಿನ ಸಗಣಿಯಿಂದ ಅಭಿವೃದ್ಧಿಪಡಿಸಲಾದ ಪ್ರಾಕೃತಿಕ / ವೈದಿಕ ಬಣ್ಣವು ‘ಆರೋಗ್ಯಕರ ಉತ್ಪನ್ನವಾಗಿದೆ.’ ಏಕೆಂದರೆ ಇದರಲ್ಲಿ ಪ್ಲಾಸ್ಟಿಕ್ ಅಥವಾ ಸಂಶ್ಲೇಷಿತ ಪದಾರ್ಥಗಳಿರುವುದಿಲ್ಲ. ಸೀಸ, ಪಾದರಸ, ಕ್ರೋಮಿಯಂ, ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂತಹ ಭಾರವಾದ ಲೋಹಗಳಿಂದ ಮುಕ್ತವಾಗಿದೆ. ಸಾಮಾನ್ಯವಾಗಿ ಬಳಸುವ ಸಿಂಥೆಟಿಕ್ ಬಣ್ಣಗಳಲ್ಲಿರುವ ಭಾರೀ ಲೋಹಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಹಸುವಿನ ಸಗಣಿ ಬಣ್ಣವು, ರೈತರಿಗೆ ಸಂಭಾವ್ಯ ಹೆಚ್ಚುವರಿ ಆದಾಯ ಸಾಧನವಾಗಿದೆ. ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಪರಿಸರ ಸ್ನೇಹಿ, ವಿಷಕಾರಿಯಲ್ಲದ, ವಾಸನೆಯಿಲ್ಲದ ಉತ್ಪನ್ನವು ವಾರ್ಷಿಕವಾಗಿ ಒಂದು ಹಸುವಿನಿಂದ ಹೆಚ್ಚುವರಿ ರೂ 30,000 ಗಳಿಸಲು ಅನುವು ಮಾಡಿಕೊಡುತ್ತದೆ. ಕೆವಿಐಸಿ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಈ ಬಣ್ಣಗಳ ಅಂದಾಜು ಮಾರಾಟ 6,000 ಕೋಟಿ ರೂಪಾಯಿ. ರೈತರು ಈಗ ವ್ಯರ್ಥವಾಗುತ್ತಿರುವ ಹಸಿ ಸಗಣಿ ಮಾರಾಟ ಮಾಡುವ ಮೂಲಕ 1,000 ಕೋಟಿ ರೂಪಾಯಿಗಳನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

500 ಲೀಟರ್‌ಗಳಷ್ಟು ನೈಸರ್ಗಿಕ ಬಣ್ಣವನ್ನು ತಯಾರಿಸಲು ಸುಮಾರು 150-170 ಕೆಜಿ ಸಗಣಿ ಬೇಕಾಗುತ್ತದೆ. ದಿನಕ್ಕೆ 500-ಲೀಟರ್ ಉತ್ಪಾದನಾ ಸಾಮರ್ಥ್ಯದ ಸ್ಥಾವರವನ್ನು ಸ್ಥಾಪಿಸಲು, 20 ಲಕ್ಷ ರೂಪಾಯಿ ಹೂಡಿಕೆಯ ಅಗತ್ಯವಿದೆ. ಇದಕ್ಕೆ ಸರ್ಕಾರದ MSME ವಲಯಕ್ಕೆ ಸೇರಿದ ಯೋಜನೆಯಿಂದ ಹಣ ನೀಡಲಾಗುತ್ತದೆ. ಅಂತಹ ಪ್ರತಿಯೊಂದು ಸ್ಥಾವರವು 11 ಮಂದಿಗೆ ನೇರ ಉದ್ಯೋಗವನ್ನು ನೀಡುತ್ತದೆ. ಹೀಗೆ ಖಾದಿ ಪ್ರಾಕೃತಿಕ ಬಣ್ಣವು ಬಡವರ ಸುಸ್ಥಿರ ಅಭಿವೃದ್ಧಿಯನ್ನು ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ.

ಎರೆಹುಳಗೊಬ್ಬರ

ಸರಳ ತಂತ್ರಜ್ಞಾನದ ಮೂಲಕ, ಮಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಣ್ಣಿನ ಉತ್ಪಾದಕತೆಯು ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ರೈತರು ಎರೆಹುಳುಗೊಬ್ಬರ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುವ ಕಾರಣದಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಜಮ್ಮುವಿನಲ್ಲಿ ಅನೇಕ ಪ್ರಗತಿಪರ ರೈತರು ಎರೆಹುಳು ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ವಿಧಾನದಿಂದ ಸಾವಯವ/ನೈಸರ್ಗಿಕ ಕೃಷಿಗೆ ಬದಲಾಗಲು ಬಯಸುವ ದೊಡ್ಡ ಜಮೀನು ಹೊಂದಿರುವ ರೈತರಿಗೆ ಅಗತ್ಯವಿರುವಷ್ಟು ಎರೆಹುಳುಗೊಬ್ಬರವು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿಲ್ಲ.

ಹಸುವಿನ ಸಗಣಿಯ ದಿಮ್ಮಿಗಳು ಸಗಣಿಯ ಮರುಬಳಕೆಯ ಮತ್ತೊಂದು ವಿಧಾನ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಶವಸಂಸ್ಕಾರಕ್ಕೆ ಇಂಧನವಾಗಿ ಬಳಸಲೆಂದು ಸುಮಾರು ಐದು ಕೋಟಿ ಮರಗಳನ್ನು ಕಡಿಯಲಾಗುತ್ತದೆ. ಹೀಗಿದ್ದೂ ಸಗಣಿಯ ದಿಮ್ಮಿಗಳನ್ನು ಮರಕ್ಕೆ ಬದಲಾಗಿ ಉಪಯೋಗಿಸಲು ಸಾಧ್ಯವಾಗಿಸುವಂತಹ ಸರ್ಕಾರದ ಯಾವುದೇ ದೊಡ್ಡ ಯೋಜನೆಗಳಿಲ್ಲ. ಜಮ್ಮುವಿನಲ್ಲಿ ವಿದ್ಯುತ್‌ ಚಿತಾಗಾರಗಳಿಲ್ಲ. ಅಲ್ಲಿನ ಚಿತಾಗಾರದಲ್ಲಿ ಸಂಸ್ಕಾರಕ್ಕೆ ಕಟ್ಟಿಗೆಯನ್ನೇ ಬಳಸಲಾಗುತ್ತದೆ. ಮರಕ್ಕೆ ಬದಲಾಗಿ ಸಗಣಿಯ ದಿಮ್ಮಿಗಳನ್ನು ಬಳಸಲು ಇಲ್ಲೊಂದು ಸುವರ್ಣಾಕಾಶವಿದೆ.

    ಸಗಣಿಯ ಕುರಿತಾದ ಕೆಲವು ಸಂಗತಿಗಳು

  • ಒಂದು ಅಂದಾಜಿನ ಪ್ರಕಾರ, ಒಂದು ಹಸು ವರ್ಷಕ್ಕೆ 3500 ಕೆಜಿ ಸಗಣಿ, 2000 ಲೀಟರ್ ಗಂಜಲ ನೀಡುತ್ತದೆ. ಇದು 4500 ಘನ ಅಡಿ ಜೈವಿಕ ಅನಿಲ, 100 ಟನ್ ಸಾವಯವ ಗೊಬ್ಬರವನ್ನು ಒದಗಿಸುತ್ತದೆ. ಸಾವಯವ ಗೊಬ್ಬರದಿಂದ ಬೆಳೆಯ ಇಳುವರಿಯು 20 ರಿಂದ 30% ರಷ್ಟು ಹೆಚ್ಚಾಗುತ್ತದೆ.
  • ಒಂದು ಕೆಜಿ ಸಗಣಿ ಗೊಬ್ಬರವನ್ನು 24-26 °C ತಾಪಮಾನದಲ್ಲಿ 55-60 ದಿನಗಳವರೆಗೆ ಹೈಡ್ರಾಲಿಕ್‌ ರಿಟೆನ್ಷನ್‌ ಟೈಂ(HRT)ನಲ್ಲಿ ಸಮ ಪ್ರಮಾಣದ ನೀರಿನೊಂದಿಗೆ ಬೆರೆಸಿದಾಗ 35-40 ಲೀಟರ್ ಜೈವಿಕ ಅನಿಲವನ್ನು ಉತ್ಪಾದಿಸಬಹುದು (ಕಾಲಿಯಾ ಮತ್ತು ಸಿಂಗ್ 2004).
  • ದಿನಕ್ಕೆ 3-5 ಜಾನುವಾರುಗಳಿಂದ ಉತ್ಪತ್ತಿಯಾಗುವ ಹಸುವಿನ ಸಗಣಿಯಿಂದ ಸರಳವಾದ 8-10 ಘನ ಮೀಟರ್ ಜೈವಿಕ ಅನಿಲ ಘಟಕವನ್ನು ನಡೆಸಬಹುದು. ಇದರಿಂದ5-2 ಘನ ಮೀಟರ್ ಜೈವಿಕ ಅನಿಲವನ್ನು ಉತ್ಪಾದಿಸಬಹುದು. ಇದು 6-8 ಮಂದಿಯ ಕುಟುಂಬಕ್ಕೆ ಸಾಕಾಗುತ್ತದೆ. ಇದರಿಂದ ಇಬ್ಬರಿಗೆ ಅಡುಗೆ ಮಾಡಬಹುದು. ಮೂರು ಹೊತ್ತು ಅಥವಾ ಎರಡು ದೀಪಗಳನ್ನು ಮೂರು ಗಂಟೆಗಳ ಕಾಲ ಉರಿಸಬಹುದು ಅಥವಾ ಇಡೀ ದಿನ ರೆಫ್ರಿಜಿರೇಟರ್‌ ಚಾಲನೆಯಲ್ಲಿಡಬಹುದು. ಒಂದು ಗಂಟೆ ಕಾಲ 3-KW ಮೋಟಾರ್-ಜನರೇಟರ್ ಅನ್ನು ಸಹ ನಿರ್ವಹಿಸಬಹುದು (ವರ್ನರ್ ಮತ್ತು ಇತರರು. 1989).

ಉಪಸಂಹಾರ

ಸಗಣಿ ಮತ್ತು ಗಂಜಲ ಆಧಾರಿತ ಉದ್ಯಮವನ್ನು ಮಾದರಿ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಬಹುದು. ಇಲ್ಲಿಗೆ ಭಾರತದಾದ್ಯಂತ ಇರುವ ಆಸಕ್ತ ಉದ್ಯಮಿಗಳು (ಜಮ್ಮುವಿಗೆ ಬರುವ ಪ್ರವಾಸಿಗರು ಮತ್ತು ಭಕ್ತರು) ಬಂದು ಈ ಉತ್ಪನ್ನಗಳ ತಯಾರಿಕೆಯನ್ನು ಕಲಿಯಬಹುದು. ಇದರೊಂದಿಗೆ ಈ ತರಬೇತಿ ಕೇಂದ್ರವು ಸಗಣಿ ಮತ್ತು ಗಂಜಲ ಆಧಾರಿತ ಉತ್ಪನ್ನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಬಹುದು.

ಪ್ರಣವ್ಕುಮಾರ್ಮತ್ತು ಮಣಿಂದರ್ಸಿಂಗ್


 Pranav Kumar

Senior Assistant Professor

E-mail: vet_pranav@rediffmail.com

Maninder Singh

MVSc Scholar

Division of Veterinary & Animal Husbandry

Extension Education,

Sher-e-Kashmir University of Agricultural Sciences &

Technology of Jammu (SKUAST-Jammu),

R.S. Pura, Jammu (UT of J&K)

India – 181102

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೪ ; ಡಿಸೆಂಬರ್‌ ೨೦‌೨೨

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...