ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳು ಸ್ವಾವಲಂಬನೆಯ ಹಾದಿ


ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ (ಡಿಆರ್) ರೈತರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವುದರೊಂದಿಗೆ ತಳಮಟ್ಟದಲ್ಲಿ ಪ್ರಮುಖ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಲೇಖನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಮತ್ತು ಸುಸ್ಥಿರ ಇಂಧನ ಆಯ್ಕೆಗಳ ಕೆಲವು ಸ್ಪೂರ್ತಿದಾಯಕ ಕತೆಗಳನ್ನು ನೀಡಲಾಗಿದೆ.


ಭಾರತೀಯ ಕೃಷಿಯ ಬಗ್ಗೆ ಮಾತನಾಡುವಾಗ, ಅನಿರೀಕ್ಷಿತ ಹವಾಮಾನ, ಏರುತ್ತಿರುವ ರಸಗೊಬ್ಬರದ ಬೆಲೆಗಳು, ಕುಂಠಿತ ಮಾರುಕಟ್ಟೆ ಬೆಲೆಗಳು, ಸಾಲದ ಬಾಕಿ ಪಾವತಿಸದಿರುವುದು, ಸಾಲದ ಹೊರೆ ಮತ್ತು ರೈತರ ಆತ್ಮಹತ್ಯೆಗಳು – ಇವುಗಳ ಮಸುಕಾದ ಚಿತ್ರ ಬರುತ್ತದೆ. ನಮಗೆ ಅಗತ್ಯವಾದ ಆಹಾರವನ್ನು ಪೂರೈಸುವ ನಮ್ಮ ಮಹಾನ್‌ ಭಾರತೀಯ ರೈತ ನಿರಂತರವಾಗಿ ಹವಾಮಾನ ವೈಪರಿತ್ಯಗಳಿಂದ ಬಳಲುತ್ತಿರುವಾಗ ಮತ್ಯಾರೋ ಈ ಕೃಷಿ ಸರಪಳಿಯಲ್ಲಿ ಲಾಭ ಪಡೆಯುತ್ತಿದ್ದಾರೆ. ಈ ಸಾಲದ ಸರಪಳಿ, ಕಡಿಮೆ ಗಳಿಕೆಯ ಕೆಡುಕಿನ ಚಕ್ರವನ್ನು ಮುರಿದು ಹಸಿರಾದ ಭವಿಷ್ಯವನ್ನು ರೈತರಿಗೆ ನೀಡಲು ಸಾಧ್ಯವಿಲ್ಲವೇ?

ಅದೃಷ್ಟವಶಾತ್, ಸ್ವಚ್ಛತಾ ತಂತ್ರಜ್ಞಾನವು ಈ ವಿಷವರ್ತುಲವನ್ನು ಮುರಿಯಲು ನೆರವಾಗುತ್ತಿದೆ. ಇದರಿಂದ ನಮ್ಮ ರೈತರು ತಮ್ಮ ಹಳ್ಳಿಗಳಲ್ಲಿ ಸ್ವಾವಲಂಬಿಗಳಾಗಬಹುದು.  ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ (ಡಿಆರ್‌ಇ) ರೈತರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವುದು ಮಾತ್ರವಲ್ಲದೆ ತಳಮಟ್ಟದಲ್ಲೇ ಪ್ರಮುಖ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ.

DRE ಪರಿಕಲ್ಪನೆಯು ಫಲಾನುಭವಿಗಳಿಗೆ ಇಂಧನ ಶಕ್ತಿಯು ಕೈಗೆಟುಕುವಂತೆ ಮಾಡುತ್ತದೆ. ಮುಂಬರುವ ವರ್ಷಗಳಲ್ಲಿ ಸುಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ. ಸೂಕ್ತವಾದ ಸ್ವಚ್ಛತಾ ತಂತ್ರಜ್ಞಾನಗಳೊಂದಿಗೆ ಗ್ರಾಮೀಣ ಸಮುದಾಯಗಳನ್ನು ಸಕ್ರಿಯಗೊಳಿಸುತ್ತಿರುವ ಕೆಲವು ವಿನೂತನ DRE ಕಂಪನಿಗಳನ್ನು ಕುರಿತಾದ ಕೆಲವು ಅಧ್ಯಯನಗಳು ಇಲ್ಲಿವೆ. ಈ ಕಂಪನಿಗಳು DRE ಅನ್ನು ಜನಪ್ರಿಯಗೊಳಿಸಿ, ಅದನ್ನು ಕಾರ್ಯಗತಗೊಳಿಸಲು ಕ್ಲೀನ್ ಎನರ್ಜಿ ಆಕ್ಸೆಸ್ ನೆಟ್‌ವರ್ಕ್ (CLEAN) ಎನ್ನುವ ದೇಶವ್ಯಾಪಿ ಜಾಲದ ಸದಸ್ಯರಾಗಿದ್ದಾರೆ.

 ಫಾರಂಗೇಟಿನಲ್ಲಿ ಆಹಾರ ಸಂರಕ್ಷಣೆ

20-30% ಉತ್ಪಾದನೆಯಾದ ಆಹಾರವು ಅಂತಿಮ ಬಳಕೆದಾರರನ್ನು ತಲುಪುವ ಮೊದಲೇ ತೋಟದಲ್ಲೇ (ಫಾರ್ಮ್‌ಗೇಟ್‌) ನಾಶವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದ್ದರೂ ಮೂಲಸೌಕರ್ಯ ಮತ್ತು ಬಂಡವಾಳದ ಕೊರತೆಯಿಂದಾಗಿ ಇವು ಸುಧಾರಿಸಿಲ್ಲ. DRE ಕೊಯ್ಲಿನ ನಂತರ, ಸಂಗ್ರಹಣೆ, ಸಾರಿಗೆ ಮತ್ತು ವಿತರಣೆಯ ಸಮಯದಲ್ಲಿ ಆಹಾರ ಸಂರಕ್ಷಣೆ ಮತ್ತು ಶೈತ್ಯೀಕರಣಕ್ಕೆ ಪರಿಹಾರಗಳನ್ನು ಒದಗಿಸುತ್ತದೆ.

S4S ಟೆಕ್ನಾಲಜೀಸ್ ಕೃಷಿ ಉತ್ಪನ್ನಗಳು ನಷ್ಟವಾಗುವುದನ್ನು ತಪ್ಪಿಸಲು ಫಾರಂಗೇಟ್‌ನಲ್ಲಿ ಸಂಗ್ರಹಿಸಿ ಸಂಸ್ಕರಿಸುತ್ತದೆ. ಇವೆಲ್ಲವನ್ನೂ ಮಹಿಳಾ ಉದ್ಯಮಿಗಳೇ ಮಾಡುತ್ತಾರೆ. S4S ಭೂರಹಿತ ಮಹಿಳೆಯರು ಮತ್ತು ಕೃಷಿಕರಿಗೆ ಸರಿಯಾದ ರೀತಿಯಲ್ಲಿ ತಂತ್ರಜ್ಞಾನ, ಹಣಕಾಸು ಮತ್ತು ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರನ್ನು ಸಣ್ಣ ಉದ್ಯಮಿಗಳನ್ನಾಗಿಸುತ್ತದೆ.  S4S ಟೆಕ್ನಾಲಜೀಸ್‌ ಆಹಾರ ವರ್ಥವಾಗುವುದು ಹಾಗೂ ಕೊಯ್ಲಿನ ನಂತರ ಉಂಟಾಗುವ ನಷ್ಟವನ್ನು ತಡೆಯುವ ಮೂಲಕ ಈಗಾಗಲೇ ೬ ದೇಶಗಳಲ್ಲಿನ ೧೦೦೦ ರೈತರಿಗೆ ಲಾಭ ತಂದುಕೊಟ್ಟಿದೆ. ಸೌರಶಕ್ತಿಚಾಲಿತ ಸುಸ್ಥಿರ ತಂತ್ರಜ್ಞಾನದಿಂದ ಹಾನಿಕಾರಕ ಹೊರಸೂವಿಕೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಜೀವನಮಟ್ಟವನ್ನು ಸುಧಾರಿಸುವುದರೊಂದಿಗೆ ಉದ್ಯಮಿಗಳನ್ನು ಸೃಷ್ಟಿಸುತ್ತದೆ.

S4S ಅವರ ಪ್ರಮುಖ ಉತ್ಪನ್ನವಾದ ಸೋಲಾರ್ ಕಂಡಕ್ಷನ್ ಡ್ರೈಯರ್‌ನೊಂದಿಗೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ವಡಾಲಿಯಲ್ಲಿ 29 ಗ್ರಾಮೀಣ ಮಹಿಳೆಯರನ್ನು ತಲುಪಿತು.  ಸೋಲಾರ್ ಕಂಡಕ್ಷನ್ ಡ್ರೈಯರ್ (SCD) ಸೌರ-ಚಾಲಿತ ಡ್ರೈಯರ್‌ ಆಗಿದ್ದು ಯಾವುದೇ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಬಳಸದೆ ಕೃಷಿ-ಉತ್ಪನ್ನಗಳನ್ನು ಸಂರಕ್ಷಿಸಿಡಲು ಅದರಲ್ಲಿನ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಕೃಷಿ ಉತ್ಪನ್ನಗಳನ್ನು ೧ ವರ್ಷದವರೆಗೆ ಸಂರಕ್ಷಿಸಬಹುದಾಗಿದೆ. SCD ಮೊದಲ ಸೌರ ಡ್ರೈಯರ್ ಆಗಿದ್ದು ಅದು ಶಾಖ ವರ್ಗಾವಣೆಯ ಎಲ್ಲಾ ವಿಧಾನಗಳನ್ನು (ವಹನ, ಶಾಖಸಾಗಣೆ ಮತ್ತು ಪ್ರಸರಣ)  ಒಟ್ಟಿಗೆ ಬಳಸಿ ಶೇ. 22% ರಷ್ಟು ಒಣಗಿಸುತ್ತದೆ.

ಮಹಿಳೆಯರಿಗೆ ಸುರಕ್ಷತೆ, ನೈರ್ಮಲ್ಯ, ಸಮಯ ನಿರ್ವಹಣೆ, ಆಹಾರ ಸುರಕ್ಷತಾ ಪ್ರೋಟೋಕಾಲ್ ಮತ್ತು ಈರುಳ್ಳಿ ಹಾಗೂ ಶುಂಠಿಯನ್ನು ನಿರ್ಜಲೀಕರಣಗೊಳಿಸುವಂತಹ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಬಗ್ಗೆ ತರಬೇತಿ ನೀಡಲಾಯಿತು. ಆಹಾರವನ್ನು ನಿರ್ಜಲೀಕರಣಗೊಳಿಸುವ ಪ್ರಕ್ರಿಯೆಯ ಬಗ್ಗೆ ಅರಿತ ನಂತರ ಈ ಮಹಿಳೆಯರಿಗೆ ತಾವು ಸಣ್ಣ ಉದ್ಯಮಿಗಳಾಗಲು ಇರುವ ಅನಂತ ಅವಕಾಶಗಳ ಅರಿವಾಯಿತು. ದೃಢವಿಶ್ವಾಸದೊಂದಿಗೆ ೩೦ ಮಂದಿ ಮಹಿಳೆಯರು  S4Sನೊಂದಿಗೆ ಕೈಜೋಡಿಸಿದರು. ಧುರ್ಪಾದ ಶೇವರೆ ಅನುಭವವನ್ನು ಬಾಕ್ಸ್ 1 ರಲ್ಲಿ ವಿವರಿಸಲಾಗಿದೆ.

ಬಾಕ್ಸ್‌ ೧: ಧುರ್ಪಾದ ಶೇವರೆ

ನಲವತ್ತೈದು ವರ್ಷ ವಯಸ್ಸಿನ ಧುರ್ಪಾದ ಶೇವರೆ ಯಾವಾಗಲೂ ಸಂತೃಪ್ತ ಜೀವನಕ್ಕಾಗಿ ಹಂಬಲಿಸುತ್ತಿದ್ದರು. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ವಡಾಲಿ ಎಂಬ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಆಕೆ ಬಾಲ್ಯದಿಂದಲೇ ಹಲವು ಸವಾಲುಗಳನ್ನು ಎದುರಿಸಿದರು. ಶಾಲೆಯ ಫೀಸ್‌ ಕಟ್ಟಲು ಹಣವಿಲ್ಲದಿದ್ದರಿಂದ ಅವಳ ತಂದೆತಾಯಿ ೨ನೆಯ ತರಗತಿಗೆ ಅವಳನ್ನು ಶಾಲೆಯಿಂದ ಬಿಡಿಸಿದರು. ಕೆಲವು ವರ್ಷಗಳ ತರುವಾಯ ಧುರ್ಪಾದಳ ಮದುವೆಯಾಯಿತು. ಇದರಿಂದಾಗಿ ಸಣ್ಣ ವಯಸ್ಸಿಗೆ ಎರಡು ಗಂಡು ಎರಡು ಹೆಣ್ಣುಮಕ್ಕಳ ತಾಯಿಯಾದಳು. ಅವಳು ಮತ್ತವಳ ಗಂಡ ಕುಟುಂಬ ನಿರ್ವಹಣೆಗಾಗಿ ತಮ್ಮ ಕೃಷಿಭೂಮಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅನುಕೂಲಕರ ವಾತಾವರಣವಿದ್ದ ದಿನಗಳಲ್ಲಿ (ವರ್ಷದಲ್ಲಿ ೪ ತಿಂಗಳು) ತಿಂಗಳಿಗೆ ರೂ. ೩೦೦೦ ಗಳಿಸುತ್ತಿದ್ದರು. ಮಕ್ಕಳು ದೊಡ್ಡವರಾಗಿ, ಮದುವೆಯಾಗಿ ತಂತಮ್ಮ ಕುಟುಂಬಗಳೊಡನೆ ಪ್ರತ್ಯೇಕವಾಗಿ ವಾಸಿಸಲು ಹೊರಟುಹೋದರು. ೪೫ನೇ ವಯಸ್ಸಿಗೆ ಧುರ್ಪಾದಾಗೆ ೧೭ ವರ್ಷದ ಮೊಮ್ಮಗನಿದ್ದ. ಇವೆಲ್ಲವೂ ಅವಳನ್ನು ದೈಹಿಕವಾಗಿ, ಮಾನಸಿಕವಾಗಿ ಹೈರಾಣಗೊಳಿಸಿತ್ತು. ಸುಸ್ಥಿರ ಬದುಕಿನ ಕನಸು ಕರಗುತ್ತಿರುವಾಗಲೇ ಅವಳಿಗೆ S4S ಬಗ್ಗೆ ತಿಳಿಯಿತು. ಅಲ್ಲಿ ತರಬೇತಿ ಪಡೆದ ನಂತರ ಪ್ರತಿದಿನ 45-90 ಕೆಜಿ ತಾಜಾ ಕಚ್ಚಾ ವಸ್ತುಗಳನ್ನು ಒಣಗಿಸಲು ಪ್ರಾರಂಭಿಸಿದಳು. ಇದರಿಂದ ದಿನಕ್ಕೆ 10-12 ಕೆಜಿ ಒಣಗಿದ ಶುಂಠಿ ದಕ್ಕಿತು. ತರಬೇತಿಯಿಂದಾಗಿ ಬಳಕೆಗೆ ಉತ್ತಮ ಗುಣಮಟ್ಟದ ಉತ್ಪನ್ನವನ್ನು ತಯಾರಿಸಲು ಸಹಾಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ, ಇದು ಆರ್ಥಿಕವಾಗಿ ಲಾಭದಾಯಕವಾಗಿತ್ತು. ಅವಳು ಹೊಸದಾಗಿ ಸಂಪಾದಿಸಿದ ಕೌಶಲ್ಯದಿಂದ, ಈಗ ತಿಂಗಳಿಗೆ ರೂ. 5,000 ಗಳಿಸಲು ಸಾಧ್ಯವಾಯಿತು. ಇದು ಅವಳ ಜೀವನವನ್ನು ಬದಲಿಸಿತು. ಇದರಿಂದಾ ಅವಳು ತನ್ನ ಗಂಡನೊಡನೆ ಹೊಸ ಹುಮ್ಮಸ್ಸಿನಿಂದ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು.

ಅಡುಗೆ ಮಾಡಲು ಬಯೋಮಾಸ್‌ ಇಂಧನ

ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳು ದಶಕಗಳಿಂದ ಪ್ರಯತ್ನಪಡುತ್ತಿದ್ದರೂ ಇಂದಿಗೂ ಗ್ರಾಮೀಣ ಮಹಿಳೆಯರು ಅಡುಗೆಗಾಗಿ ಶುದ್ಧ ಇಂಧನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಬಯೋಮಾಸ್‌ ಇಂಧನ ಸಂಪನ್ಮೂಲಗಳು ದೇಶಾದ್ಯಂತ ಹೇರಳವಾಗಿ ಇರುವುದರಿಂದ DRE ಮೂಲಕ ದೂರದ ಗ್ರಾಮೀಣ ಪ್ರದೇಶಗಳಿಗೆ ಸ್ವಾವಲಂಬನೆಯನ್ನು ತರಲು ಕೆಲವು ಕ್ಲೀನ್‌ಟೆಕ್ ಸ್ಟಾರ್ಟ್‌ಅಪ್‌ಗಳು ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರು ಮೂಲದ TIDE (ಟೆಕ್ನಾಲಜಿ ಇನ್ಫರ್ಮ್ಯಾಟಿಕ್ಸ್ ಡಿಸೈನ್ ಎಂಡೀವರ್) ಎನ್ನುವ ಕ್ಲೀನ್‌ಟೆಕ್ ಕಂಪನಿಯು ಮುಖ್ಯವಾಗಿ ಕರ್ನಾಟಕ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಬಯೋಮಾಸ್‌ ಉತ್ಪನ್ನಗಳು ಮತ್ತು ಕ್ಲೀನ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸಹಭಾಗಿ ಸಂಸ್ಥೆಗಳೊಂದಿಗೆ ಸೇರಿ ಕಾಡಿನಂಚಿನಲ್ಲಿರುವ ಪ್ರದೇಶಗಳಲ್ಲಿನ ಬುಡಕಟ್ಟು ಸಮುದಾಯಗಳ ನಡುವೆ ವ್ಯಾಪಕವಾಗಿ ಪ್ರಸಾರಮಾಡುತ್ತದೆ. TIDE ಪರಿಸರವನ್ನು ಸಂರಕ್ಷಿಸಲು ಮತ್ತು ಜೀವನೋಪಾಯಗಳನ್ನು ಸೃಷ್ಟಿಸಲು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವಾದ ಸ್ವಚ್ಛತಾ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. WWF ಇಂಡಿಯಾ (ವರ್ಲ್ಡ್ ವೈಡ್ ಫಂಡ್) ಪಶ್ಚಿಮ ಘಟ್ಟಗಳ ನೀಲಗಿರಿ ಲ್ಯಾಂಡ್‌ಸ್ಕೇಪ್ ವಿಭಾಗದ ಮೂಲಕ, ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿಸಂರಕ್ಷಿತ ಪ್ರದೇಶದಲ್ಲಿನ (STR) ಹಳ್ಳಿಗಳಲ್ಲಿ ಸರಳಾ ಎನ್ನುವ ಸುಧಾರಿತ ಅಡುಗೆ-ಒಲೆಯನ್ನು ಉತ್ತೇಜಿಸಲು TIDE ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಸಹಭಾಗಿತ್ವವು ಸ್ಥಳೀಯರಿಗೆ ಒಲೆ ನಿರ್ಮಾಣದಲ್ಲಿ ತರಬೇತಿ ನೀಡುವ ಮೂಲಕ ಕಾಡಿನಂಚಿನಲ್ಲಿರುವ ಮನೆಗಳ ಅಡುಗೆಮನೆಗಳನ್ನು ಸ್ವಚ್ಛ ಮತ್ತು ಹೊಗೆ-ಮುಕ್ತವಾಗಿ ಪರಿವರ್ತಿಸಲು ಸಹಾಯ ಮಾಡಿತು. ಇದರ ವೈಶಿಷ್ಟ್ಯತೆಯೆಂದರೆ ಕುಟುಂಬಗಳು ನಿರ್ಮಾಣ ಪ್ರಕ್ರಿಯೆಗೆ ಕೊಡುಗೆ ನೀಡುತ್ತವೆ. ಇದರಿಂದಾಗಿ ಒಲೆ ನಿರ್ಮಾಣ ತರಬೇತಿಯ ಮೂಲಕ ಸ್ಥಳೀಯ ಉದ್ಯೋಗವನ್ನು ಸಹ ಸೃಷ್ಟಿಸಲಾಗುತ್ತದೆ.

ಹಿಂದಿನ ಜನಗಣತಿ ಗಣತಿದಾರರಾದ ಆರ್‌ ಶೇಖರ್‌ ಈ ಕಾರ್ಯಕ್ರಮದ ಫಲಾನುಭವಿಗಳಲ್ಲಿ ಒಬ್ಬರು. ಅವರು ಸ್ಕಿಲ್‌ ಕೌನ್ಸಿಲ್‌ ಫಾರ್‌ ಗ್ರೀನ್‌ ಜಾಬ್ಸ್‌ನಿಂದ ಸುಧಾರಿತ ಅಡುಗೆ ಒಲೆ ಇನ್‌ಸ್ಟಾಲರ್‌ ಎಂದು ಪ್ರಮಾಣೀಕರಣವನ್ನು ಪಡೆದಿದ್ದಾರೆ. ನೀಲಗಿರಿ ಪ್ರದೇಶದಲ್ಲಿ 120ಕ್ಕೂ ಹೆಚ್ಚು ಒಲೆಗಳನ್ನು ನಿರ್ಮಿಸಿದ್ದಾರೆ. 2019 ರಲ್ಲಿ, ಸರಳಾ ಸುಧಾರಿತ ಸ್ಟೌವ್ ನಿರ್ಮಾಣದಲ್ಲಿ TIDE ನಿಂದ ತರಬೇತಿ ಪಡೆದ ನಂತರ ಅವರ ಅದೃಷ್ಟ ಬದಲಾಯಿತು. ತಾವು ಹೊಸದಾಗಿ ಕಲಿತ ಈ ಕೌಶಲದ ಬಗ್ಗೆ ಅವರಿಗೆ ಹೆಮ್ಮೆಯಿದೆ. “ಇದರಿಂದಾಗಿ ಈಗ ತಿಂಗಳಿಗೆ ರೂ. 2,000 ಉಳಿಸಲು ಸಾಧ್ಯವಾಗುತ್ತಿದೆ. ಅದನ್ನು ಮಗಳ ಉನ್ನತ ಶಿಕ್ಷಣಕ್ಕಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದೇನೆ,” ಎಂದು ಹೇಳುತ್ತಾರೆ. ತೋಟಗಳಲ್ಲಿ ಕೆಲಸಗಳಿಲ್ಲದ ಸಮಯದಲ್ಲಿ ಅಂತಹ ಕೆಲಸಗಾರರಿಗಾಗಿ ಅವರು ಒಲೆ ನಿರ್ಮಾಣದ ಯೋಜನೆಗಳನ್ನು ಸಂಸ್ಥೆಯೊಂದಿಗೆ ಸೇರಿ ಮುನ್ನಡೆಸಿದ್ದಾರೆ.

ಶೇಖರ್‌ ಹಲವು ಮಂದಿ ಒಲೆ ನಿರ್ಮಿಸಿರುವವರಿಗೆ ತರಬೇತಿ ನೀಡುವ ಮೂಲಕ ಅವರ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗಿದ್ದಾರೆ. ಇಂದು, ಈರೋಡ್ ಜಿಲ್ಲೆಯಲ್ಲಿ ಇಂತಹ 15 ಮಂದಿ ಪ್ರಮಾಣೀಕೃತ ಒಲೆ ನಿರ್ಮಾಣಕಾರರಿದ್ದಾರೆ. ಇವರೆಲ್ಲರೂ ಸುಧಾರಿತ ಕಡಿಮೆ ವೆಚ್ಚದ ಅಡುಗೆ ಒಲೆ ನಿರ್ಮಾಣದಲ್ಲಿ TIDE ನಿಂದ ತರಬೇತಿ ಪಡೆದಿದ್ದಾರೆ. ತರಬೇತಿಯ ನಂತರ, ಈ ನುರಿತ ಒಲೆ ತಯಾರಕರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಅನೇಕ ಸಣ್ಣ ಹಳ್ಳಿಗಳಲ್ಲಿ ಸರಳಾ ಒಲೆಗಳನ್ನು ನಿರ್ಮಿಸಿದ್ದಾರೆ. ಒಲೆ ತಯಾರಕರು ದಿನವೊಂದಕ್ಕೆ 3-5 ಒಲೆಗಳನ್ನು ತಯಾರಿಸಿದಲ್ಲಿ ಸುಮಾರು ರೂ. 300-500 ಗಳಿಸಬಹುದು. ಈ ಸುಧಾರಿತ ಅಡುಗೆ ಒಲೆಗಳ ಅಂತಿಮ ಫಲಾನುಭವಿಗಳು ಕೂಡ ತಮ್ಮ ಅಡುಗೆಮನೆಗಳು ಅಂತಿಮವಾಗಿ ಹೊಗೆ ಮುಕ್ತವಾಗಿದ್ದು, ಕಾಡಿನಲ್ಲಿ ಉರುವಲುಗಾಗಿ ಸಮಯ ಕಳೆಯುವಂತಿಲ್ಲ ಎಂದು ಸಂತೋಷಪಡುತ್ತಾರೆ.

“TIDE ಮತ್ತು WWF-India ನಡುವಿನ ಈ ಕೌಶಲ್ಯ ತರಬೇತಿ ಸಹಭಾಗಿತ್ವವು STR ಪ್ರದೇಶದಲ್ಲಿ ಉರುವಲನ್ನು ಆಯ್ದುಕೊಂಡು ಬರುವುದು ಬಹುಮಟ್ಟಿಗೆ ತಗ್ಗಿದೆ. ಈ ಕಡಿಮೆ ಜನಸಂಖ್ಯೆಯ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸರಳಾ ಒಲೆಗಳನ್ನು ನಿರ್ಮಿಸಲಾಗಿದೆ. 1,000 ಒಲೆಗಳ ಪ್ರಾಯೋಗಿಕ ಯೋಜನೆಯು STR ವ್ಯಾಪ್ತಿಯ ಅಡಿಗೆಮನೆಗಳಲ್ಲಿ ವಾರ್ಷಿಕವಾಗಿ 1,440 ಟನ್‌ಗಳಿಗಿಂತ ಹೆಚ್ಚು ಅರಣ್ಯ ಉರುವಲು ಬಳಕೆಯನ್ನು ತಡೆಯುತ್ತದೆ. ಇದಲ್ಲದೆ, ಸರಳಾ ಒಲೆಯ ಭವಿಷ್ಯದ ಸುಮಾರು 9,000 ಸಂಭಾವ್ಯ ಫಲಾನುಭವಿಗಳನ್ನು ನಾವು ಗುರುತಿಸಿರುವುದರಿಂದ ಈ ಚಟುವಟಿಕೆಯನ್ನು ದೊಡ್ಡದಾಗಿ ವಿಸ್ತರಿಸಬಹುದಾಗಿದೆ,” ಎಂದು WWF-India, WGNLನ ಹಿರಿಯ ಕಾರ್ಯಕ್ರಮ ಅಧಿಕಾರಿ ಆರ್‌ ಜೆ ಎ ಸ್ಟೆಫನ್‌ ಅಜಯ್‌ ಹೇಳುತ್ತಾರೆ. TIDE ಡಾಬಾಗಳು ಮತ್ತು ಹೋಟೆಲ್‌ಗಳಿಗೆ ಅಡುಗೆ ಒಲೆಗಳ ನಿರ್ಮಾಣದ ಕುರಿತು STR ಪ್ರದೇಶದಲ್ಲಿ ಶೇಖರ್‌ನಂತಹ ಕೆಲವು ಆಯ್ದ ಒಲೆ ತಯಾರಕರಿಗೆ ತರಬೇತಿ ನೀಡಲಿದೆ. ಇದು ಅವರ ಆದಾಯವನ್ನು ಹೆಚ್ಚಿಸುವುದಲ್ಲದೆ, ಪ್ರತಿ ಯೂನಿಟ್ ಕನಿಷ್ಠ 2.5 ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿರುವ ವಾಣಿಜ್ಯ ಅಡುಗೆ-ಒಲೆಗಳಂತಹ DRE ಪರಿಹಾರಗಳಿಗಾಗಿ ವಹಿವಾಟು ಯೋಜನೆಯನ್ನು ಸಹ ರಚಿಸುತ್ತದೆ.

ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಮತ್ತು ಬುಡಕಟ್ಟು ಸಮುದಾಯಗಳ ಜೀವನವನ್ನು ಸುಧಾರಿಸುವ ಅಡುಗೆಗೆ DRE ಸುಸ್ಥಿರ ಪರಿಹಾರ ಎನ್ನುವುದರ ಬಗ್ಗೆ TIDEಗೆ ಖಾತ್ರಿಯಿರುವುದರಿಂದ STR ವ್ಯಾಪ್ತಿಯ ಸಮುದಾಯ ಮತ್ತು ವನ್ಯಜೀವಿ ಎರಡರ ಭವಿಷ್ಯವು ಉತ್ತಮವಾಗಿದೆ.

 ಕೃಷಿ ತ್ಯಾಜ್ಯದಿಂದ ಸಂಪತ್ತು

ಬಹುಪಾಲು ಭಾರತೀಯ ರೈತರು ತಮ್ಮ ಕೃಷಿ ಉತ್ಪನ್ನಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಬೆಲೆ ನೀಡುವುದಿಲ್ಲ. ಕೊಯ್ಲು ಮಾಡಿದ ನಂತರ ರೈತರು ಭತ್ತ, ಕಬ್ಬು ಮತ್ತು ಗೋಧಿಯ ಬೆಳೆಗಳ ತ್ಯಾಜ್ಯವನ್ನು ಸುಡುತ್ತಾರೆ. ಏಕೆಂದರೆ ಆ ತ್ಯಾಜ್ಯವನ್ನು ಮೇವಾಗಿ ಬಳಸಲು ಕಾರ್ಮಿಕ ಸಂಪನ್ಮೂಲಗಳು ಮತ್ತು ಸಮಯ ಬೇಕಾಗುತ್ತದೆ. ತ್ಯಾಜ್ಯವನ್ನು ಸುಡುವುದರಿಂದ ಮೌಲ್ಯಯುತ ಸಂಪನ್ಮೂಲನ ವ್ಯರ್ಥವಾಗುವುದರೊಂದಿಗೆ ವಾಯುಮಾಲಿನ್ಯಕ್ಕೂ ಕಾರಣವಾಗುತ್ತದೆ.

ಈ ರೀತಿಯ ಬೆಳೆ ದಹನವನ್ನು ನಿರ್ವಹಿಸಲು ಕೆಲವು ಹೊಸ ಬಗೆಯ ಪರಿಹಾರಗಳಿವೆ. ವಿವಿಧ ಬಗೆಯ ಕೃಷಿ ಯಂತ್ರಗಳಾದ ಹ್ಯಾಪಿ ಸೀಡರ್, ರೋಟವೇಟರ್, ಪ್ಯಾಡಿ ಸ್ಟ್ರಾ ಚಾಪರ್, ಮ್ಯಾನ್ಯುಯಲ್ ಬ್ರಿಕೆಟಿಂಗ್ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ರೈತರು ಸುಲಭವಾಗಿ ಬೆಳೆಗಳು ಮತ್ತು ಬೆಳೆತ್ಯಾಜ್ಯವನ್ನು ನಿರ್ವಹಿಸಬಹುದು. ರೈತರಿಗೆ ಈ ಯಂತ್ರಗಳನ್ನು ಕೊಳ್ಳಲು ಅನುಕೂಲವಾಗುವಂತೆ ಸರ್ಕಾರಗಳು ಇವುಗಳ ಮೇಲೆ ಸಬ್ಸಿಡಿ ನೀಡುತ್ತದೆ. ಸಾರಿಗೆ ಅಥವಾ ಉತ್ಪಾದನೆಗೆ ಜೈವಿಕ ಇಂಧನವಾಗಿ ಕೃಷಿ ತ್ಯಾಜ್ಯಗಳ ಬಳಕೆಯು ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

2011 ರಲ್ಲಿ ತಂತ್ರಜ್ಞರ ತಂಡವೊಂದು ವಾಪಿಯಲ್ಲಿ ಎಸ್‌ ಕೆ ಇಂಜಿನಿರ್ಸ್‌ ಎನ್ನುವ ಕಂಪನಿಯೊಂದನ್ನು ಸ್ಥಾಪಿಸಿತು. ಅವರು ಕೃಷಿ ತ್ಯಾಜ್ಯವನ್ನು ಬ್ರಿಕೆಟ್‌ ಆಗಿ ಪರಿವರ್ತಿಸುವ ಹಸ್ತಚಾಲಿತ ಯಂತ್ರವೊಂದನ್ನು ಆವಿಷ್ಕರಿಸಿದರು. ಇದು ಗ್ರಾಮೀಣ ಭಾರತಕ್ಕೆ ವರದಾನವಾಗಿದೆ. ಎನ್‌ಎಂ ಸದ್ಗುರು ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ, ಎಸ್‌ಕೆ ಇಂಜಿನಿಯರ್ಸ್‌ನ ವ್ಯವಸ್ಥಾಪಕ ಪಾಲುದಾರರಾದ ದರ್ಶಿಲ್ ಪಾಂಚಾಲ್ ಅವರು ಗ್ರಾಮೀಣ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಆಗ ವಿಶ್ವಾಸಾರ್ಹ ಅಡುಗೆ ಇಂಧನ ಮೂಲದ ಕೊರತೆಯನ್ನು ಗಮನಿಸಿದರು. ಈ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ದರ್ಶಿಲ್‌ ಅವರಿಗೆ ಕಲ್ಲಿದ್ದಲಿಗೆ ಬದಲಿಗೆ ಬ್ರಿಕೆಟ್‌ಗಳನ್ನು ಬಳಸುತ್ತಿದ್ದ ಬಾಯ್ಲರ್‌ಗಳು ಕಂಡಿತು.

ಬ್ರಿಕೆಟ್‌ ತಯಾರಿಸುವ ಘಟಕದ ಮಾಲೀಕರು ಯಥೇಚ್ಛವಾಗಿ ಉತ್ಪಾದಿತವಾಗುವ ಕೃಷಿತ್ಯಾಜ್ಯವನ್ನು ಗ್ರಾಮೀಣ ಸಮುದಾಯಗಳಿಂದ ಸಂಗ್ರಹಿಸುತ್ತಿದ್ದರು. ಅವರು ಆ ತ್ಯಾಜ್ಯದಿಂದ ಬ್ರಿಕೆಟ್‌ಗಳನ್ನು ತಯಾರಿಸಿ ಬಾಯ್ಲರ್‌ ಘಟಕಗಳಿಗೆ ಪೂರೈಸುತ್ತಿದ್ದರು. ಇದನ್ನು ನೋಡಿ ದರ್ಶಿಲ್ ಕೃಷಿ ತ್ಯಾಜ್ಯವನ್ನು ನಿರ್ವಹಿಸಲು ಹಸ್ತಚಾಲಿತ ಬ್ರಿಕೆಟ್ಟಿಂಗ್ ಯಂತ್ರದ ತಯಾರಿಕೆಯ ಕುರಿತು ಯೋಚಿಸಿದರು. ವಿವಿಧ ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ ಅವರು ಕೃಷಿ ತ್ಯಾಜ್ಯ, ಮೇವು, ಅಡುಗೆಮನೆ ತ್ಯಾಜ್ಯ, ಪೇಪರ್/ಪ್ಲಾಸ್ಟಿಕ್/ರಟ್ಟಿನ ತ್ಯಾಜ್ಯ ಇತ್ಯಾದಿ ವಿವಿಧ ರೀತಿಯ ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡರು. ಸಾಮಾನ್ಯವಾಗಿ, ಪ್ಲಾಸ್ಟಿಕ್ ತ್ಯಾಜ್ಯ, ಬಹು-ಪದರದ ಪ್ಲಾಸ್ಟಿಕ್ ಪ್ಯಾಕೇಜಿಂಗ್, ಕಾಗದ, ರಟ್ಟಿನ ತ್ಯಾಜ್ಯ, ಕೃಷಿ ತ್ಯಾಜ್ಯ ಇತ್ಯಾದಿಗಳಿಗೆ ಹೆಚ್ಚು ಬೆಲೆ ಇರುವುದಿಲ್ಲ. ಏಕೆಂದರೆ ಅವು ಭಾರವಾಗಿದ್ದು ಸುಲಭವಾಗಿ ಸಾಗಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಅರ್ಥಮಾಡಿಕೊಂಡ ದರ್ಶಿಲ್ ಪಾಂಚಾಲ್ ಅವರು ಇಂತಹ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಂಘಟಿತ ರೀತಿಯಲ್ಲಿ ಸಾಗಿಸಲು ಸಹಾಯವಾಗುವಂತೆ ಹೊಸ ರೀತಿಯ ಮ್ಯಾನುಯಲ್ ಬೇಲರ್ ಯಂತ್ರವನ್ನು ಕಂಡುಹಿಡಿದರು.

ಬಾಕ್ಸ್ 2: ಬ್ರಿಕೆಟ್ ತಯಾರಿಸುವ ಪ್ರಕ್ರಿಯೆ

ಎಲ್ಲಾ ರೀತಿಯ ಕೃಷಿ-ತ್ಯಾಜ್ಯ ವಸ್ತುಗಳನ್ನು ಮೊದಲು ಸಣ್ಣ ತುಂಡುಗಳಾಗಿ ಚೂರುಚೂರು ಮಾಡಲಾಗುತ್ತದೆ. ಈ ಮಿಶ್ರಣವನ್ನು ಸ್ವಲ್ಪ ನೀರು ಮತ್ತು ಹಸುವಿನ ಸಗಣಿಯೊಂದಿಗೆ ಬೆರೆಸಿ ಸ್ಲರಿಯನ್ನು ರಚಿಸಲಾಗುತ್ತದೆ. ಸ್ಲರಿ ಸಿದ್ಧವಾದ ನಂತರ, ಅದನ್ನು BLP ಯಂತ್ರದ ಸಿಲಿಂಡರಾಕಾರದ ಬಾಯೊಳಗೆ ಸುರಿಯಲಾಗುತ್ತದೆ ಮತ್ತು ಕಂಪ್ರೆಶನ್‌ (ಸಂಕೋಚನ) ಪ್ರಕ್ರಿಯೆಯನ್ನು ಪ್ರಾರಂಭಿಸಲು ಲಿವರ್ ಅನ್ನು ಒತ್ತಲಾಗುತ್ತದೆ. ನಂತರ ಸಂಕುಚಿತ ಸ್ಲರಿ ತೆಗೆದು ಬಿಸಿಲಿನಲ್ಲಿ ಒಣಗಿಸಿದರೆ ಬ್ರಿಕೆಟ್ ಸಿದ್ಧವಾಗಿದೆ.

 

ಈ ಮ್ಯಾನುಯಲ್ ಬೇಲರ್ ಯಂತ್ರಕ್ಕೆ ಚಕ್ರಗಳಿರುವುದರಿಂದ ಸುಲಭವಾಗಿ ಸಾಗಿಸಬಹುದು. ಯಾವುದೇ ನಿರ್ವಹಣೆಯ ಅಗತ್ಯವಿಲ್ಲದಿರುವುದರಿಂದ ಇದರ ಕಾರ್ಯನಿರ್ವಹಣೆ ಸುಲಭವಾಗಿದ್ದು ಹೆಚ್ಚು ಖರ್ಚಾಗುವುದಿಲ್ಲ. ಈ ಯಂತ್ರಗಳು ವಿಶಿಷ್ಟವಾಗಿವೆ ಏಕೆಂದರೆ ಇದಕ್ಕೆ ವಿದ್ಯುತ್‌ ಅಗತ್ಯವಿಲ್ಲ, ಹೆಚ್ಚಿನ ಮಾನವ ಶಕ್ತಿ ಬೇಡುವುದಿಲ್ಲ, ಸುಲಭವಾಗಿ ಸ್ಥಾಪಿಸಿ ನಿರ್ವಹಿಸಬಹುದಾಗಿದೆ. ಬ್ರಿಕ್ವೆಟಿಂಗ್ ಯಂತ್ರದೊಂದಿಗೆ, ಕೃಷಿ ತ್ಯಾಜ್ಯವನ್ನು ಬ್ರಿಕೆಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ಈ ಬ್ರಿಕೆಟ್‌ಗಳನ್ನು ಮನೆಯಲ್ಲಿಯೇ ಅಡುಗೆಗೆ ಪರ್ಯಾಯ ಇಂಧನವಾಗಿ ಬಳಸಬಹುದು ಅಥವಾ ಹೆಚ್ಚುವರಿ ಆದಾಯವನ್ನು ಗಳಿಸಲು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ. 10ರ ದರದಲ್ಲಿ ಮಾರಾಟ ಮಾಡಬಹುದು.

ಈಗಾಗಲೇ ಹಲವಾರು ಎನ್‌ಜಿಒಗಳು ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಈ ಯಂತ್ರಗಳನ್ನು ಖರೀದಿಸಿ ತ್ಯಾಜ್ಯ ನಿರ್ವಹಣೆ ಮತ್ತು ಆದಾಯ ಉತ್ಪಾದನೆಗೆ ಬಳಸಿಕೊಳ್ಳುತ್ತಿವೆ.

ಲೆವಿನ್ ಲಾರೆನ್ಸ್


Levine Lawrence

Content Director

Ecoideaz Ventures

#24, 1st Cross, 2nd Stage, Gayathripuram,

 Udayagiri, Mysuru,

Karnataka – 570019, India.

Email: editor@ecoideaz.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೪; ಡಿಸೆಂಬರ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...