ಪ್ರವಾಹ ಪೀಡಿತ ಸಮುದಾಯಗಳ ಸಹಿಷ್ಣುತೆಯ ಗುಣವನ್ನು ಹೆಚ್ಚಿಸುವುದು


ಪ್ರವಾಹ ಬಂದು ಹೂಳು ತುಂಬಿದಾಗ ಕೃಷಿ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಇದು ರೈತರ ಬದುಕು ಮತ್ತು ಹವಾಮಾನ ಎರಡನ್ನೂ ದುರ್ಬಲಗೊಳಿಸುತ್ತದೆ.


ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಘಾ 1, ಬಾಘಾ 2, ಮಧುಬನಿ, ಭಿಟ್ಟಾ, ಪಿಪ್ರಾಸಿ ಬ್ಲಾಕ್‌ಗಳು ಮತ್ತು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರ ಜಿಲ್ಲೆಗಳ ನಿಚ್ಲೌಲ್ ಮತ್ತು ಖಡ್ಡಾ ಬ್ಲಾಕ್‌ಗಳಲ್ಲಿ ಹಲವಾರು ಗ್ರಾಮಗಳು ಗಂಡಕ್ ನದಿಯ ದಡದಲ್ಲಿ ಗಂಡಕ್ ಅಣೆಕಟ್ಟಿಗೆ ಸಮೀಪದಲ್ಲಿವೆ. ಆ ಪ್ರದೇಶಗಳು ಮತ್ತು ನದಿಯ ನಡುವೆ ಯಾವುದೇ ಅಡ್ಡಕಟ್ಟೆಗಳು ಇಲ್ಲದಿರುವುದರಿಂದ, ಪ್ರತಿ ವರ್ಷ ಪ್ರವಾಹ ಮತ್ತು ಜಲಾವೃತದಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರೀ ಮಳೆ ಮತ್ತು ಹತ್ತಿರದ ಪರ್ವತ ಪ್ರದೇಶದಿಂದ ಹರಿದು ಬರುವ ನೀರು, ಖಾರಿಫ್ ಬೆಳೆಗಳು ಮತ್ತು ಋತುಮಾನದ ತರಕಾರಿ ಬೆಳೆಗಳನ್ನು ಹಾಳುಮಾಡುತ್ತದೆ. ವಾಲ್ಮೀಕಿ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದಲ್ಲಿರುವುದರಿಂದ, ಈ ಪ್ರದೇಶದಲ್ಲಿ ಪ್ರಾಣಿಗಳು ಹೇರಳವಾಗಿ ಕಂಡುಬರುತ್ತವೆ.

ಇಲ್ಲಿನ ಹಳ್ಳಿಗರಿಗೆ ಕೃಷಿಯು ಪ್ರಾಥಮಿಕ ಆದಾಯ ಮೂಲವಾಗಿದೆ. ಖಾರಿಫ್ ಅವಧಿಯಲ್ಲಿ ಕೇವಲ 15-20% ಭೂಮಿಯಲ್ಲಿ ಮಾತ್ರ ಬೆಳೆ ಬೆಳೆಯಲಾಗುತ್ತದೆ. ರಾಬಿ ಋತುವಿನಲ್ಲಿ ಗೋಧಿ, ಸಾಸಿವೆ, ಉದ್ದು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಸುಮಾರು ಆರು ತಿಂಗಳ ಕಾಲ ಭೂಮಿಯಲ್ಲಿ ನೀರು ನಿಲ್ಲುವುದರಿಂದ ಭತ್ತದ ಕೃಷಿ ಮಾಡುವುದು ಕಷ್ಟ. ಕಬ್ಬು ಈ ಪ್ರದೇಶದ ಮುಖ್ಯ ಬೆಳೆ.  ರೈತರು ತಮ್ಮ ಕಬ್ಬನ್ನು ಸ್ಥಳೀಯ ಎರಡು ಸಕ್ಕರೆ ಕಾರ್ಖಾನೆಗಳಿಗೆ ಅಥವಾ ಮಾರಾಟಗಾರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕೆಂದು ಒತ್ತಾಯಿಸಲಾಗುತ್ತದೆ. ರೈತರು ತಮ್ಮ ಕಬ್ಬನ್ನು ಉತ್ತರ ಪ್ರದೇಶದ ಕುಶಿ ನಗರ ಜಿಲ್ಲೆಯ ಬೆಲ್ಲ ತಯಾರಕರಿಗೆ ಮಾರಾಟ ಮಾಡುತ್ತಾರೆ. ಅದು ಅವರಿಗೆ ಒಳ್ಳೆಯ ಬೆಲೆಯನ್ನು ತಂದುಕೊಡುವುದಿಲ್ಲ.

2018 ರಲ್ಲಿ, ಗೋರಖ್‌ಪುರ ಎನ್ವಿರಾನ್ಮೆಂಟಲ್ ಆಕ್ಷನ್ ಗ್ರೂಪ್ (GEAG) ಎನ್ನುವ ಎನ್‌ಜಿಒ, ಪಶ್ಚಿಮ ಚಂಪಾರಣ್‌ನ ರಾಜ್‌ವತಿಯಾ ಗ್ರಾಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು. ಸಮುದಾಯಕ್ಕೆ ಸ್ಥಿತಿಸ್ಥಾಪಕತ್ವ/ಸಹಿಷ್ಣುತೆಯ ಗುಣವನ್ನು ರೂಪಿಸಲು ಹಲವಾರು ಉಪಕ್ರಮಗಳನ್ನು LWR ಬೆಂಬಲಿತ “ಕಾಂಗ್ರೆಗೇಷನಲ್ ಟ್ರಾನ್ಸ್‌ಬೌಂಡರಿ ಫ್ಲಡ್ ರೆಸಿಲಿಯನ್ಸ್ ಪ್ರಾಜೆಕ್ಟ್, ಗಂಡಕ್ ರಿವರ್ ಬೇಸಿನ್” ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಗ್ರಾಮ ವಿಪತ್ತು ನಿರ್ವಹಣಾ ಸಮಿತಿ, ರೈತ ಕ್ಷೇತ್ರ ಶಾಲೆ, ಸ್ವ-ಸಹಾಯ ಗುಂಪುಗಳು ಮುಂತಾದ ಗ್ರಾಮ ಮಟ್ಟದ ಸಂಸ್ಥೆಗಳನ್ನು ಸಂಘಟನೆಯು ಇದರಲ್ಲಿ ಸೇರಿದೆ. ಈ ಯೋಜನೆಯ ಲಾಭ ಪಡೆದ ಕೃಷಿಕರಾದ ಶ್ರೀಮತಿ ನಿಶಾದೇವಿ ಅವರ ವಿವರ ಹೀಗಿದೆ.

 ನಿಶಾದೇವಿ, ಮಾದರಿ ವ್ಯಕ್ತಿ

ನಿಶಾ ದೇವಿ, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ರಾಜವತಿಯಾ ಗ್ರಾಮದವರು. ನಿಶಾ 1.5 ಎಕರೆ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದು ಅದರಲ್ಲಿ 0.4 ಎಕರೆ ಜಮೀನು ಗಂಡಕ್ ನದಿಯ ಬಳಿ ಪ್ರವಾಹ ಮತ್ತು ಜಲಾವೃತ ಪ್ರದೇಶದಲ್ಲಿದೆ. ವರ್ಷಕ್ಕೆ 6 ತಿಂಗಳ ಕಾಲ ಹೊಲಗಳು ಮುಳುಗಡೆಯಾಗುವುದರಿಂದ ಕುಟುಂಬಕ್ಕೆ ಅಗತ್ಯವಿರುವಷ್ಟು ಆಹಾರ ಸಿಗುವ ಭರವಸೆ ಇಲ್ಲದಂತಾಗಿದೆ. ಅವಳ ಗಂಡ ಕುಟುಂಬಕ್ಕೆ ನೆರವಾಗಲು ಹಣ ಸಂಪಾದನೆ ಮಾಡಲು ದೆಹಲಿ, ಬೆಂಗಳೂರು ಇತ್ಯಾದಿ ಮಹಾನಗರಗಳಿಗೆ ವಲಸೆ ಹೋಗುತ್ತಾನೆ.

2020 ರಲ್ಲಿ, COVID-19 ಸಾಂಕ್ರಾಮಿಕ ಸಮಯದಲ್ಲಿ, ನಿಶಾ ಕಠಿಣ ಪರಿಸ್ಥಿತಿಯನ್ನು ಎದುರಿಸಿದಳು. ಜೂನ್ ತಿಂಗಳಿನಲ್ಲಿ ಅವಳ ಹೊಲಕ್ಕೆ ಪ್ರವಾಹಕ್ಕೆ ಸಿಲುಕಿದ್ದರಿಂದ  ಬೆಳೆದು ನಿಂತಿದ್ದ ಬೆಳೆ ನಾಶವಾಯಿತು. ಇದರ ಜೊತೆಗೆ, ಸಾಂಕ್ರಾಮಿಕ ಪರಿಸ್ಥಿತಿಗಳಿಂದಾಗಿ ಅವಳ ಪತಿ ನಗರದಿಂದ ಹಿಂತಿರುಗಬೇಕಾಯಿತು. ಇದು ಅವರನ್ನು ಸಂಕಷ್ಟಕ್ಕೆ ತಳ್ಳಿತು.

ನಿಶಾ ದೇವಿ ಅವರು ಎಫ್‌ಜಿಡಿ ಸಭೆಯಲ್ಲಿ GEAG ತಂಡದ ಸದಸ್ಯರನ್ನು ಭೇಟಿಯಾದರು, ಅಲ್ಲಿ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೃಷಿಯನ್ನು ಹೆಚ್ಚಿಸುವ ಸರಳವಾದ ಹಾಗೂ ಸ್ಥಿತಿಸ್ಥಾಪಕತ್ವ ಗುಣಹೊಂದಿದ ಪದ್ಧತಿಗಳ ಬಗ್ಗೆ ತಿಳಿದುಕೊಂಡರು. ಇದರಲ್ಲಿ ಸೆಣಬಿನ ಚೀಲ ಕೃಷಿ, ಬಿದಿರಿನ ರಚನೆಗಳ ಬಳಕೆ, ದಿಬ್ಬ, ಬದು ಬೇಸಾಯ, ರೈಸ್ಡ್ ಬೆಡ್ ಫಾರ್ಮಿಂಗ್, ನರ್ಸರಿ ಮೊದಲಾದ ವೈಶಿಷ್ಟ್ಯಗಳಿದ್ದವು. ಅವಳು ರೈತ ಕ್ಷೇತ್ರ ಶಾಲೆಗಳಲ್ಲಿ ಭಾಗವಹಿಸಿದಳು ಮತ್ತು ಮಟ್ಕಾ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಪರಿಣಾಮ ಮತ್ತು ಅವುಗಳ ದೀರ್ಘಕಾಲೀನ ಆರೋಗ್ಯ, ಪರಿಸರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡಳು. ಮಟ್ಕಾ ಗೊಬ್ಬರ ಮತ್ತು ಮಟ್ಕಾ ಕೀಟನಾಶಕಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಸಹ ಕಲಿತರು. ಅವಳು ತನ್ನ ಕೃಷಿಭೂಮಿಯಲ್ಲಿ GEAG ತಂಡದ ಮೂಲಕ FFS ಅವಧಿಗಳಲ್ಲಿ ಕಲಿತ ವಿವಿಧ ಕೃಷಿ ತಂತ್ರಗಳನ್ನು ಕಾರ್ಯಗತಗೊಳಿಸಿದಳು. ವಾಟ್ಸಾಪ್ ಸಂದೇಶಗಳು, ಎಸ್ಎಂಎಸ್ ಸಂದೇಶಗಳು ಮತ್ತು ಸಮುದಾಯ ಸ್ಥಳಗಳಲ್ಲಿ ಸ್ಥಾಪಿಸಲಾದ ಪ್ರದರ್ಶಕ(ಡಿಸ್ಪ್ಲೇ) ಬೋರ್ಡ್ ಮೂಲಕ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಸಲಹೆಯಿಂದ ಪಡೆದ ಮಾಹಿತಿಯನ್ನು ತನ್ನ ಕೃಷಿ ಚಟುವಟಿಕೆಯನ್ನು ಯೋಜಿಸಲು ಬಳಸಿದಳು.

ಸೆಪ್ಟೆಂಬರ್ 2020 ರಲ್ಲಿ, ಅವರು GEAG ಯೋಜನಾ ತಂಡದಿಂದ ಸಿಂಪಿ ಮಶ್ರೂಮ್ ಕೃಷಿಯ ಬಗ್ಗೆ ತಿಳಿದುಕೊಂಡರು. 18 ಚೀಲಗಳಷ್ಟು ಸಬ್ಸ್ಟ್ರಾಟ್‌ (ತಲಾಧಾರ) ಅನ್ನು ರೂ. 1250 ವೆಚ್ಚದಲ್ಲಿ ತಯಾರಿಸಿದರು. ಸುಮಾರು ರೂ.  840ರ ವೆಚ್ಚದಲ್ಲಿ 40 ದಿನಗಳ ನಂತರ 7 ಕೆಜಿಯಷ್ಟು ಅಣಬೆಯನ್ನು ಬೆಳೆಸಿದರು. ಕ್ರಮೇಣ ಅಣಬೆಯು ಮೂರು ನಾಲ್ಕು ದಿನಕ್ಕೊಮ್ಮೆ ಅಣಬೆ ಬರಲಾರಂಭಿಸಿತು. ಡಿಸೆಂಬರ್‌ ವೇಳೆಗೆ ಒಟ್ಟು 45 ಕೆಜಿಯಷ್ಟು ಬೆಳೆ ಬಂದಿತು. ಕುಟುಂಬವು 15 ಕೆಜಿಯಷ್ಟು ಅಣಬೆಯನ್ನು ಬಳಸಿಕೊಂಡಿತು. ಇದು ಅವರ ಕುಟುಂಬದ ಪೌಷ್ಟಿಕಾಂಶಕ್ಕೆ ಕೊಡುಗೆ ನೀಡಿತು. ಉಳಿದ 30 ಕೆಜಿ ಅಣಬೆಯನ್ನು ಪ್ರತಿ ಕೆಜಿಗೆ 150.00 ರೂ ದರದಲ್ಲಿ ಮಾರಾಟ ಮಾಡುವ ಮೂಲಕ ಅವಳು ಹೆಚ್ಚುವರಿ ರೂ. 4500.00 ಆದಾಯ ಗಳಿಸಿದಳು. ಹೀಗೆ ಮೂರು ತಿಂಗಳಲ್ಲಿ ನಿಶಾ ಸ್ವಲ್ಪ ಮಟ್ಟಿಗಿನ ಆದಾಯ ಗಳಿಸಿದಳು.

FFS ತರಗತಿಗಳಲ್ಲಿ ಕಲಿತ ಕೃಷಿ ಸಲಹೆ ಮತ್ತು ಹೊಸ ಕೃಷಿ ತಂತ್ರಗಳನ್ನು ಬಳಸಿಕೊಂಡು ನಿಶಾ ತರಕಾರಿ ಬೇಸಾಯವನ್ನು ಆರಂಭಿಸಿದರು. ಅವಳು ತನ್ನ 0.30 ಎಕರೆ ಜಮೀನಿನಲ್ಲಿ ರಾಬಿ ಋತುವಿನಲ್ಲಿ ಎರಡು ಸಾಲು ಬೆಳ್ಳುಳ್ಳಿಯ ನಡುವೆ ಮೆಂತ್ಯ ಬೀಜವನ್ನು ಬಿತ್ತಿದಳು ಮತ್ತು ಹೊಲದ ಬದುಗಳಲ್ಲಿ ಮೂಲಂಗಿಯನ್ನು ಬೆಳೆಸಿದಳು. ಇದರಿಂದ ಅವಳು 7.5 ಕ್ವಿಂಟಾಲ್ ಬೆಳ್ಳುಳ್ಳಿ, 3.8 ಕ್ವಿಂಟಾಲ್ ಮೆಂತ್ಯ ಮತ್ತು 60 ಕೆ.ಜಿ. ಮೂಲಂಗಿಯನ್ನು ಇಳುವರಿಯಾಗಿ ಪಡೆದಳು. ಹೀಗೆ ಮೂರು ಬೆಳೆಗಳಿಂದ ಹತ್ತು ಸಾವಿರ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದಳು. ಒಳಸುರಿಯುವಿಕೆಗಳ ವೆಚ್ಚವೂ ಕಡಿಮೆಯಾಯಿತು. ಅವಳು ಬಳಸಿದ ಮಟ್ಕಾ ಖಾಡ್ ಮತ್ತು ಕೀಟನಾಶಕಗಳಿಗೆ ತಗುಲಿದ ವೆಚ್ಚ ರೂ. 1980.

ಅಂತರ ಬೆಳೆ ಪದ್ಧತಿ ಅನುಸರಿಸಿ ಹೆಚ್ಚುವರಿ ಆದಾಯವನ್ನೂ ಗಳಿಸಿದಳು. ಅವಳು ಬೆಳ್ಳುಳ್ಳಿಯೊಂದಿಗೆ ಬೆಂಡೆಕಾಯಿ, ತುಪ್ಪೀರೆ ಮತ್ತು ಜೋಳವನ್ನು ಅಂತರಬೆಳೆಯಾಗಿ ಬೆಳೆಸಿದಳು. ಇದಕ್ಕೆ ಹೆಚ್ಚುವರಿ ರೂ. 12600 ವೆಚ್ಚವಾಯಿತು. ಇವುಗಳಿಂದ 1.1 ಕ್ವಿಂಟಾಲ್‌ ತುಪ್ಪೀರೆ, 1.5 ಕ್ವಿಂಟಾಲ್‌ ಬೆಂಡೆಕಾಯಿ ಇಳುವರಿ ಪಡೆದಳು. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರುವ ಮೂಲಕ ರೂ. 7800 ಆದಾಯ ಗಳಿಸಿದಳು.

“ಈ ಯಶಸ್ಸನ್ನು ನೋಡಿದ ನನ್ನ ಪತಿ ನನ್ನ ಕೃಷಿ ಚಟುವಟಿಕೆಗಳಲ್ಲಿ ನನಗೆ ಬೆಂಬಲ ನೀಡಲು ಪ್ರಾರಂಭಿಸಿದರು. ಇದು ಡಿಸೆಂಬರ್‌ನಲ್ಲಿ 1 ಎಕರೆ ಹೂಳು ತುಂಬಿದ ಭೂಮಿಯಲ್ಲಿಯೂ ಕೃಷಿ ಮಾಡಲು ನನಗೆ ಉತ್ತೇಜನ ನೀಡಿತು. ಮಣ್ಣಿನ ಫಲವತ್ತತೆಯನ್ನು ಮರಳಿ ಪಡೆಯಲು ವಿವಿಧ ಕೃಷಿ ಆಧಾರಿತ ತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ. ಇವುಗಳಲ್ಲಿ ನಾವೇ ತಯಾರಿಸಿದ ಗೊಬ್ಬರ ಬಳಕೆ, ಸಾಲು ಬಿತ್ತನೆ ವಿಧಾನ, ಮಣ್ಣಿನ ತೇವಾಂಶ ಉಳಿಸಲು ಗಿಡಗಳ ಎಲೆಗಳ ಮುಚ್ಚಳಿಕೆಯನ್ನು ಹಾಕುವುದು ಸೇರಿವೆ,” ಎಂದು ನಿಶಾ ಹೇಳುತ್ತಾರೆ.

ಅವಳು 12 ಇಂಚುಗಳಷ್ಟು ಅಗಲ ಮತ್ತು ಒಂದು ಇಂಚು ಆಳದ ಹೊಂಡವನ್ನು ಅಗೆದು ಅದರಲ್ಲಿ ಮನೆಯಲ್ಲಿ ತಯಾರಿಸಿದ ಗೊಬ್ಬರವನ್ನು ಹಾಕಿದಳು. ನಂತರ ತುಪ್ಪೀರೆ ಮತ್ತು ಸೋರೆಕಾಯಿಯನ್ನು ಕಲ್ಲಂಗಡಿಯೊಂದಿಗೆ ಅಂತರ ಬೆಳೆಯಾಗಿ ಸಾಲು ಬಿತ್ತನೆ ವಿಧಾನದಲ್ಲಿ ಬಿತ್ತನೆ ಮಾಡಲಾಯಿತು (ಒಂದು ಬದಿಯಲ್ಲಿ 2-ಮೀಟರ್ ಅಂತರವನ್ನು ಕಾಯ್ದುಕೊಳ್ಳಲಾಯಿತು). ತೇವಾಂಶವನ್ನು ಉಳಿಸಲು ಕಲ್ಲಂಗಡಿಯ ಕೊಂಬೆಗಳನ್ನು ಕತ್ತರಿಸಿ ½ ಇಂಚು ದಪ್ಪದ ಹೊದಿಕೆಯಾಗಿ ನೆಲದ ಮೇಲೆ ಹರಡಲಾಯಿತು. ಇದು ನೀರಾವರಿ ವೆಚ್ಚವನ್ನು ತಗ್ಗಿಸಿತು. ಮುಚ್ಚಳಿಕೆಯನ್ನು ಬಳಸಿದ್ದರಿಂದ ಕಳೆ ಕೀಳುವ ಕೂಲಿ ಉಳಿತಾಯವಾಯಿತು. ಈ ಪದ್ಧತಿಯಿಂದಾಗಿ ಬೆಳೆಗಳು ಮಣ್ಣು ಮತ್ತು ಮರಳಿಗೆ ತಗಲುವುದು ತಪ್ಪಿ ಬೆಳೆ ಕೊಳೆಯುವುದು ಕಡಿಮೆಯಾಯಿತು.

ಹವಾಮಾನ ಸಂಬಂಧಿ ಮಾಹಿತಿಯನ್ನು ಬಳಸಿಕೊಳ್ಳುವ ಮೂಲಕ ಅವಳು ತನ್ನ ನೀರಾವರಿ ವೆಚ್ಚ ಮತ್ತು ಮಳೆಹಾನಿಯನ್ನು ಕಡಿಮೆಗೊಳಿಸಿಕೊಂಡಳು. ಇದರ ಪರಿಣಾಮವಾಗಿ, ಲಾಕ್‌ಡೌನ್‌ ಸಮಯದಲ್ಲಿ, ಅವಳು ಕಲ್ಲಂಗಡಿ, ಸೋರೆಕಾಯಿ, ತುಪ್ಪೀರೆಯನ್ನು ಹೂಳು ತುಂಬಿದ ಭೂಮಿಯಲ್ಲೇ ಬೆಳೆದು ಮಾರುವ ಮೂಲಕ ರೂ. 28500 ಗಳಿಸಿದಳು.

ಇಂದು ನಿಶಾ ದೇವಿ ರಾಜವತಿಯಾ ಗ್ರಾಮದ ಮುಖ್ಯ ತರಬೇತುದಾರಳಾಗಿದ್ದಾಳೆ. ಅಣಬೆ ಬೇಸಾಯದ ಸುಲಭ ವಿಧಾನದಿಂದ ಪ್ರೇರಿತಳಾಗಿ, ಖುಷಿಯಿಂದ, ಉತ್ಸಾಹದಿಂದ ಬದಲಿ ಆದಾಯ ಮೂಲವಾಗಿ ಅಣಬೆ ಬೇಸಾಯ ಮಾಡಲು ಉತ್ತೇಜಿಸುತ್ತಾಳೆ. ಅಣಬೆ ಬೇಸಾಯವು ರೈತರ ಸಾಮಾಜಿಕಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದು ಸಾಕ್ಷರ ಮತ್ತು ಅನಕ್ಷರಸ್ಥ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಮಹಿಳೆಯರಿಗೆ ಇದು ವರದಾನವಾಗಿದೆ. ಇದು ಮಹಿಳಾ ಸ್ನೇಹಿ ವೃತ್ತಿಯಾಗಿದ್ದು, ಮಹಿಳೆಯರು ತಮ್ಮ ಮನೆಯ ಜವಾಬ್ದಾರಿಗಳನ್ನು ಬಿಟ್ಟುಕೊಡದೆ ತಮ್ಮ ಸಮಯವನ್ನು ಬಳಸಿಕೊಳ್ಳಬಹುದುಎಂದು ಅವಳು ಹೇಳುತ್ತಾಳೆ.

ಹವಾಮಾನ ಮುನ್ಸೂಚನೆ ಮತ್ತು ಕೃಷಿ ಸಲಹೆಯು ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಋತುಮಾನದ ಬೆಳೆಗಳನ್ನು ಯೋಜಿಸುವಲ್ಲಿ ಅವಳಿಗೆ ಸಹಾಯ ಮಾಡಿತು. ನಿಶಾದೇವಿಯು ತನ್ನ ಹೂಳು ತುಂಬಿದ ಭೂಮಿಯಲ್ಲಿ ಸ್ಥಿತಿಸ್ಥಾಪಕ ಪದ್ಧತಿಗಳು, ಡಿಜಿಟಲ್‌ ತಂತ್ರಜ್ಞಾನ, ನೈಸರ್ಗಿಕ ಸಂಪನ್ಮೂಲಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಬೇಸಾಯ ಮಾಡುವ ಮೂಲಕ ಉಳಿದ ರೈತರಿಗೆ ಮಾದರಿಯಾಗಿದ್ದಾಳೆ.

ಅರ್ಚನಾ ಶ್ರೀವಾಸ್ತವ ಮತ್ತು ಬಿಜಯ್ ಪ್ರಕಾಶ್


 Archana Srivastava

Project Coordinator

Email: archanasri844@gmail.com

Bijay Prakash

Environmental Planner

Email: bijay.plan@gmail.com

Gorakhpur Environmental Action Group

224, Purdilpur, M G College Road

Gorakhpur - 273 001, Uttar Pradesh

INDIA

www.geagindia.org

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೩ ; ಸೆಪ್ಟಂಬರ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...