ರಾಗಿ ಉತ್ಪಾದನೆಯಲ್ಲಿ ಹೆಚ್ಚಳ ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ

ಬೆಳೆಯ ಉತ್ಪಾದನೆ ಹಲವು ಅಜೀವಕ ಮತ್ತು ಜೈವಿಕ ಒತ್ತಡಗಳಿಗೆ ಸಿಲುಕುತ್ತವೆ. ಹವಾಮಾನದಲ್ಲುಂಟಾಗುವ ಬದಲಾವಣೆಗಳು ಬೆಳೆಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತವೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಸುಧಾರಿತ ಕೃಷಿ ಪದ್ಧತಿಗಳು ಮತ್ತು ಒತ್ತಡವನ್ನು ತಾಳಿಕೊಳ್ಳಬಲ್ಲ ಬೆಳೆಗಳನ್ನು ಬೆಳೆಯುವುದರಿಂದ ಉತ್ಪಾದನೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದು ಸ್ಥಿರತೆಯನ್ನು ಸಾಧಿಸುವ ಒಂದು ವಿಧಾನ. ಹಾಗಾಗಿ ರಾಗಿಯ ಉತ್ಪಾದನೆಯು ಹೆಚ್ಚಿದೆ. ಇದು ಕೊರಪುಟ್ ಬುಡಕಟ್ಟು ಕುಟುಂಬಗಳಿಗೆ ತೀವ್ರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಸಾಧಿಸಲು ನೆರವಾಗಿವೆ.

ದಕ್ಷಿಣ ಒಡಿಸ್ಸಾದ ಕೊರಪುಟ್ ಜಿಲ್ಲೆಯ ಮಳೆಯಾಧಾರಿತ ಪ್ರದೇಶಗಳಲ್ಲಿನ ರೈತಾಪಿ ಕುಟುಂಬಗಳ ಪ್ರಧಾನ ಆಹಾರಗಳಲ್ಲಿ ಭತ್ತ ಮೊದಲನೆಯ ಸ್ಥಾನದಲ್ಲಿ ಮತ್ತು ರಾಗಿ ಎರಡನೆಯ ಸ್ಥಾನದಲ್ಲಿದೆ. ಸಾಂಪ್ರದಾಯಿಕವಾಗಿ ಇದನ್ನು ಆಹಾರ ಭದ್ರತೆಗಾಗಿ ಬೆಳೆಯುತ್ತಾರೆ. ಇದು ಅವರಿಗೆ ಪೌಷ್ಟಿಕಾಂಶ ಭದ್ರತೆಯನ್ನು ಕೂಡ ನೀಡುತ್ತದೆ. ರಾಗಿಗೆ ತಾಳಿಕೆಯ ಶಕ್ತಿ ಹೆಚ್ಚು. ಮಣ್ಣು ಫಲವತ್ತಾಗಿಲ್ಲದಿರುವುದು, ಬರ ಪರಿಸ್ಥಿತಿಗಳಂತಹ ಹಲವು ವಿಧಧ ಕೃಷಿಗೆ ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳನ್ನು ರಾಗಿ ತಾಳಿಕೊಳ್ಳಬಲ್ಲುದು. ಇದನ್ನು ಬೆಳೆಯಲು ಹೆಚ್ಚಿನ ನೀರಿನ ಅಥವ ಕೀಟನಾಶಕಗಳ ಅಗತ್ಯವಿಲ್ಲ. ಜೊತೆಗೆ ಗಿಡವನ್ನು ಸಂರಕ್ಷಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆಯೂ ಈ ಬೆಳೆ ತಾಳಿ ಬೆಳೆಯಬಲ್ಲುದು. ರಾಗಿಯನ್ನು ೧೦ ವರ್ಷಗಳ ಕಾಲ ಇಟ್ಟರೂ ಅದು ಹಾಳಾಗುವುದಿಲ್ಲ. ಅದಕ್ಕೆ ಯಾವುದೇ ವಿಧದ ಕೀಟಭಾದೆ ತಟ್ಟುವುದಿಲ್ಲ. ಬೆಳೆ ಕೈಕೊಟ್ಟಾಗಲೂ ಇದು ವರ್ಷಪೂರ್ತಿ ಆಹಾರ ಒದಗಿಸಬಲ್ಲುದು. ಆದ್ದರಿಂದಲೇ ಇದಕ್ಕೆ ‘ಬರದ ಬೆಳೆ’ ಎಂದು ಹೆಸರು ಬಂದಿದೆ.

ಕೊರಾಪುಟ್ ಜಿಲ್ಲೆಯ ಬುಡಕಟ್ಟು ರೈತರು ರಾಗಿಯನ್ನು ಏಕಬೆಳೆಯಾಗಿಯೂ ಬೆಳೆಯುತ್ತಾರೆ ಮತ್ತು ಇತರ ಸಿರಿಧಾನ್ಯಗಳೊಂದಿಗೆ, ದ್ವಿದಳ ಧಾನ್ಯಗಳೊಂದಿಗೆ, ಮೆಕ್ಕೆಜೋಳ ಮತ್ತು ಎಣ್ಣೆ ಕಾಳುಗಳೊಂದಿಗೆ ಮಿಶ್ರಬೆಳೆಯಾಗಿಯೂ ಬೆಳೆಯುತ್ತಾರೆ. ರೈತರು ಸಾಮಾನ್ಯವಾಗಿ ಬಿತ್ತನೆಗೆ ಬೀಜವನ್ನು ಕೈಚೆಲ್ಲುವ ವಿಧಾನವನ್ನು ಅನುಸರಿಸುತ್ತಾರೆ. ಈ ವಿಧಾನದ ಬಿತ್ತನೆಯಿಂದ ತೇವಾಂಶ ಮತ್ತು ಪೌಷ್ಟಿಕಾಂಶಗಳು ಅಸಮರ್ಪಕವಾಗಿ ಬಳಕೆಯಾಗುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಕಳೆಕೀಳುವುದು, ಕೀಟ ಮತ್ತು ಪೌಷ್ಟಿಕಾಂಶ ನಿರ್ವಹಣೆ ಮಾಡುವುದರತ್ತ ಅತಿ ಕಡಿಮೆ ಗಮನ ನೀಡಲಾಗುತ್ತದೆ. ಕೈಚೆಲ್ಲುವ ವಿಧಾನದಲ್ಲಿ ಸಿಗುವ ಇಳುವರಿ ಪ್ರತಿ ಎಕರೆಗೆ ೩ -೪ ಕ್ವಿಂಟಾಲ್. ಅದೇ ಸಾಂಪ್ರದಾಯಿಕ ಕಸಿವಿಧಾನದಲ್ಲಿ ಪ್ರತಿ ಎಕರೆಗೆ ೮-೯ ಕ್ವಿಂಟಾಲ್ ಸಿಗುತ್ತದೆ. ರೈತರು ಸ್ಥಳೀಯ ಕೃಷಿಪರಿಸರ ವ್ಯವಸ್ಥೆಗೆ ಹೊಂದುವAತಹ ಬೀಜಗಳನ್ನು ಆಯ್ಕೆ ಮಾಡಿಕೊಂಡು ಸ್ಥಳೀಯ ತಳಿಗಳನ್ನು ಕಾಪಾಡಿಕೊಳ್ಳುತ್ತಾರೆ. ಪ್ರಸ್ತುತ ಮೂರು ಬಗೆಯ ರಾಗಿ ತಳಿಗಳನ್ನು (ಬಡಾ ಮಂಡಿಯ, ಕಾಲಾ ಮಂಡಿಯ ಮತ್ತು ಭೈರಬಿ) ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅವುಗಳಲ್ಲಿ ಬಡಾ ಮಂಡಿಯ ಹೆಚ್ಚು ಇಳುವರಿಯನ್ನು ಕೊಡುವುದರಿಂದ ಅದನ್ನೇ ಹೆಚ್ಚು ಬೆಳೆಯಲಾಗುತ್ತದೆ. ಗುಣಮಟ್ಟದ ಬೀಜಗಳು ಮತ್ತು ಶೇಖರಣೆ ಇವು ಇಂದಿಗೂ ರೈತರು ಎದುರಿಸುತ್ತಿರುವ ಪ್ರಮುಖ ತೊಂದರೆಗಳಾಗಿವೆ. ಈ ಎಲ್ಲ ಅಂಶಗಳು ಸಿರಿಧಾನ್ಯಗಳ ಪರಿಸರ ವ್ಯವಸ್ಥೆಗೆ ಮಾರಕವಾಗಿದೆಯಲ್ಲದೆ ಅವುಗಳ ಜೈವಿಕ ವೈವಿಧ್ಯವನ್ನು ನಷ್ಟಗೊಳಿಸಿದೆ ಮತ್ತು ಸಾಂಪ್ರದಾಯಿಕ ಆಹಾರ ಸಂಸ್ಕೃತಿಯು ಈ ಧಾನ್ಯಗಳೊಂದಿಗೆ ಹೊಂದಿದ್ದ ಸಂಬAಧ ಕೂಡ ಇಲ್ಲವಾಗಿದೆ.

ವರ್ಷಾಂತರಗಳವರೆಗೆ ರಾಗಿಯ ಬಗೆಗಿನ ಆಸಕ್ತಿ ಕಳೆಗುಂದಿತ್ತು. ಇದೇ ಕಾರಣದಿಂದ ನೆರವು ಕೂಡ ಸಿಗುತ್ತಿರಲಿಲ್ಲ. ಆದರೆ ಈಗ ನಗರದ ಆಹಾರ ಮಾರುಕಟ್ಟೆಯಲ್ಲಿ ರಾಗಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಲೇಖನವು ಪ್ರಗತಿ ಕೊರಾಪುಟ್ ಎನ್ನುವ ಎನ್‌ಜಿಒ ಸಂಸ್ಥೆಯ ಅನುಭವವನ್ನು ಕುರಿತು ಹೇಳುತ್ತದೆ. ಈ ಸಂಸ್ಥೆಯು ದಕ್ಷಿಣ ಒಡಿಸ್ಸಾದ ಕೊರಾಪುಟ್ ಜಿಲ್ಲೆಯಲ್ಲಿ ಕೃಷಿಆಧಾರಿತ ಕೃಷಿಯನ್ನು ಮಾಡುತ್ತಿದ್ದ ಸಣ್ಣ ರೈತರ ನಡುವೆ ರಾಗಿಯನ್ನು ಪುನಶ್ಚೇತನಗೊಳಿಸಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಈ ಬೆಳೆಯ ಮೂಲಕ ಸಣ್ಣ ಹೊಲಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು.

ಎಸ್ ಎಂ ಐ (Sಥಿsಣem oಜಿ ಈiಟಿgeಡಿ ಒiಟಟeಣ Iಟಿಣeಟಿsiಜಿiಛಿಚಿಣioಟಿ (SಒI)) – ರಾಗಿ ಬೇಸಾಯ ಕ್ರಮದ ಹೊಸ ಆವಿಷ್ಕಾರ

ಸುಧಾರಿತ ಬೇಸಾಯ ಕ್ರಮಗಳಾದ ಶ್ರೀ ವಿಧಾನದಲ್ಲಿ ಭತ್ತದ ಬೆಳೆಯನ್ನು ಹೆಚ್ಚಿನ ಕ್ಷಮತೆ ಮತ್ತು ಸುಸ್ಥಿರತೆಯೊಂದಿಗೆ ಯಾವುದೇ ಹೊರ ಸಾಧನಗಳನ್ನು ಅವಲಂಭಿಸಲದೆ ಬೆಳೆಯ ಅಂತರ್ವಧಕವನ್ನೇ ಆಧರಿಸಿ ಬೆಳೆಯಲಾಗುವುದು. ೨೦೦೮ರ ಶ್ರೀ ವಿಧಾನದ ಯಶಸ್ಸನ್ನು ನೋಡಿ ಪ್ರಗತಿ ಸಂಸ್ಥೆಯು ಅದೇ ತತ್ವಗಳನ್ನು ರಾಗಿ ಉತ್ಪಾದನೆಯ ಹೆಚ್ಚಳಕ್ಕೆ ಬಳಸಿತು.

೨೦೧೧ ರಲ್ಲಿ ಪ್ರಗತಿಯು ನಂದಪುರದಲ್ಲಿ ಎಸ್‌ಎಂಐನ ಪ್ರದರ್ಶನವನ್ನು ಆಯೋಜಿಸಿತು. ಆರಂಭದಲ್ಲಿ ಈ ಪದ್ಧತಿಯನ್ನು ಅನುಸರಿಸುವ ಬಗ್ಗೆ ರೈತರಲ್ಲಿ ಅನುಮಾನಗಳಿದ್ದವು. ಹಲವು ಸುತ್ತಿನ ಮಾತುಕತೆಗಳಾದ ನಂತರ ೧೧ ರೈತರು ಒಂದು ವೇಳೆ ಬೆಳೆ ನಷ್ಟವಾದರೆ ಪ್ರಗತಿ ಸಂಸ್ಥೆಯವರು ಪರಿಹಾರ ನೀಡಬೇಕು ಎನ್ನುವ ಷರತ್ತಿನೊಂದಿಗೆ ತಮ್ಮ ಅರ್ಧ ಎಕರೆಯಲ್ಲಿ ಈ ವಿಧಾನದಲ್ಲಿ ರಾಗಿಯನ್ನು ಬೆಳೆಯಲು ಒಪ್ಪಿದರು. ಎಸ್‌ಎಂಐ ಪದ್ಧತಿಯು ನರ್ಸರಿ ಆರಂಭಿಸುವುದು, ಸಸಿಗಳನ್ನು ನಾಟಿ ಮಾಡುವುದು, ಕಳೆ ಕೀಳುವುದು ಮತ್ತು ಸಾವಯವ ಗೊಬ್ಬರ ಹಾಕುವುದನ್ನು ಒಳಗೊಂಡಿದೆ.
ಏಳು ಬಗೆಯ ಬೀಜಗಳನ್ನು ಪ್ರಚುರಪಡಿಸಲಾಯಿತು. ರೈತರಿಗೆ ಬೀಜಗಳ ಆಯ್ಕೆ, ಸಂರಕ್ಷಣೆ ಮತ್ತು ಬೀಜ ದ್ವಿಗುಣಗೊಳಿಸುವಿಕೆ ಕುರಿತು ತರಬೇತಿ ನೀಡಲಾಯಿತು. ಗುಣಮಟ್ಟದ ಬೀಜಗಳನ್ನು ರೈತರು ವೈಯುಕ್ತಿಕ ಮಟ್ಟದಲ್ಲಿ ಹಾಗೂ ಸಮುದಾಯ ಬೀಜ ಬ್ಯಾಂಕುಗಳಲ್ಲಿ ಸಂರಕ್ಷಿಸಿಡುತ್ತಿದ್ದಾರೆ.

ಪ್ರಯೋಗದ ಫಲಿತಾಂಶವು ರೈತರಿಗೆ ಅಚ್ಚರಿಮೂಡಿಸುವಂತಿತ್ತು. ಪೈರಿಗೆ ಸರಾಸರಿ ೧೨ – ೧೮ ತೆಂಡೆಗಳು ಬಂದಿದ್ದವು. ಉತ್ತಮ ಜಮೀನನ್ನು ಹೊಂದಿದ್ದ ರೈತರೊಬ್ಬರ ಭೂಮಿಯಲ್ಲಿ ಪ್ರತಿ ಪೈರಿಗೆ ೪೪-೪೭ ತೆಂಡೆಗಳು ಬಂದಿದ್ದವು. ಸರಾಸರಿ ಇಳುವರಿ ಅರ್ಧ ಎಕರೆಗೆ ೧೮ ಕ್ವಿಂಟಾಲ್ ಮತ್ತು ಅತ್ಯುತ್ತಮ ಇಳುವರಿ ಅರ್ಧಎಕರೆಗೆ ೨೬ ಕ್ವಿಂಟಾಲ್ ಸಿಕ್ಕಿತು. ರೈತರಿಗೆ ಫಲಿತಾಂಶಗಳನ್ನು ತೋರಿಸಲು ಒಂದು ದಿನ ಕ್ಷೇತ್ರ ಭೇಟಿಯನ್ನು ನಿಗದಿಪಡಿಸಲಾಯಿತು. ಅಂದು ಕೃಷಿ ಇಲಾಖೆಯ ಸಿಬ್ಬಂದಿಗಳು ಕೂಡ ಭಾಗವಹಿಸಿದ್ದರು.

ಪಸರಿಸು
ಎಸ್‌ಎಂಐ ವಿಧಾನದಲ್ಲಿನ ಸರಾಸರಿ ಇಳುವರಿ ಪ್ರತಿಎಕರೆಗೆ ೧೨-೧೪ ಕ್ವಿಂಟಾಲ್‌ಗಳಷ್ಟು. ಇದು ಸಾಂಪ್ರದಾಯಿಕ ವಿಧಾನದಲ್ಲಿ ಸಿಗುವ ಇಳುವರಿಗಿಂತ ಎರಡುಪಟ್ಟು ಹೆಚ್ಚಿತ್ತು. ಎಸ್‌ಎಂಐ ವಿಧಾನವನ್ನು ಅಳವಡಿಸಿಕೊಳ್ಳಲು ರೈತರಿಗೆ ಇದು ಪ್ರೋತ್ಸಾಹದಾಯಕ ಅಂಶವಾಗಿತ್ತು. ಆದರೂ ಈ ವಿಧಾನವು ಹೆಚ್ಚು ಶ್ರಮಿಕ ಪ್ರಧಾನವಾಗಿದೆಯೇನೋ ಎನ್ನುವ ಅನುಮಾನ ರೈತರಿಗಿತ್ತು. ವಿಡಿಯೋಗಳು, ಭಿತ್ತಿ ಚಿತ್ರಗಳು, ಪೋಸ್ಟರ್‌ಗಳು, ಸಮುದಾಯದ ಸಂಪನ್ಮೂಲ ವ್ಯಕ್ತಿಗಳ ನೆರವು, ರೈತ ಮೇಳಗಳು, ಕ್ಷೇತ್ರ ದಿನಗಳು, ರೈತರಿಗೆ ಸನ್ಮಾನ ಮಾಡುವುದು ಈ ವಿಧಾನಗಳ ಮೂಲಕ ಪ್ರಗತಿ ಸಂಸ್ಥೆಯು ಎಸ್‌ಎಂಐ ವಿಧಾನವನ್ನು ಪ್ರಚುರಗೊಳಿಸಿತು.

ಪದ್ಧತಿಗಳನ್ನು ರೈತರ ಮೇಲೆ ಹೇರುವುದರ ಬದಲಿಗೆ ಪ್ರಗತಿ ಸಂಸ್ಥೆಯು ರೈತ ಆವಿಷ್ಕಾರಗಳನ್ನು ಪ್ರೋತ್ಸಾಹಿಸುತ್ತದೆ. ರೈತರು ಹೊಸ ವಿಧಾನಗಳನ್ನು ಪ್ರಯತ್ನಿಸಲು, ಸ್ಥಳೀಯ ಪರಿಸ್ಥಿತಿಗಳಿಗನುಗುಣವಾಗಿ ಅಳವಡಿಸಿಕೊಳ್ಳಲು, ಮತ್ತು ತಮ್ಮದೇ ಮೌಲ್ಯಮಾಪನದ ಆಧಾರದ ಮೇಲೆ ವಿಧಾನಗಳನ್ನು ಅನುಸರಿಸಲು ಪ್ರೋತ್ಸಾಹಿಸುತ್ತದೆ. ಉದಾಹರಣೆಗೆ ಮಣ್ಣು ಗಟ್ಟಿಯಾದರೆ ಕಳೆಯನ್ನು ಸಲಕರಣೆಗಳಿಂದ ಕೀಳುವುದು ಕಷ್ಟ. ಆಗ ರೈತರು ಕೈಯಿಂದಲೇ ಕಳೆಗಳನ್ನು ಕಿತ್ತು ನೇಗಿಲ ಸಹಾಯದಿಂದ ಭೂಮಿಯನ್ನು ಉಳಬೇಕು. ಕಳೆಗಿಡಗಳನ್ನು ಕಿತ್ತಬಳಿಕ ಕೊರಡನ್ನು ಬಳಸುವುದರಿಂದ ಸಸಿಗಳು ಚೆನ್ನಾಗಿ ಬೆಳೆದು ಇಳುವರಿ ಹೆಚ್ಚಾಗುತ್ತದೆ. ಈ ವಿಧಾನ ರೈತರ ಆವಿಷ್ಕಾರ.

ಈ ಎಲ್ಲ ಪ್ರಯತ್ನಗಳ ಫಲವಾಗಿ ರೈತರು ದೊಡ್ಡ ಮಟ್ಟದಲ್ಲಿ ಎಸ್‌ಎಂಐ ವಿಧಾನವನ್ನು ಅಳವಡಿಸಿಕೊಂಡರು. ೨೦೧೭ರ Sರಿಫ್ ವೇಳೆಗೆ ಎಸ್‌ಎಂಐ ವಿಧಾನವನ್ನು ನಂದಪುರ, ಲಾಮ್ತಪುಟ್ ಮತ್ತು ಕೊಟ್‌ಪಾಡ್‌ಗಳ ೨೧೫ ಹಳ್ಳಿಗಳ ೩೫೧೮ ರೈತರು ೯೨೭ ಹೆಕ್ಟೇರ್ ಭೂಮಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಪರಿಣಾಮ
ಎಸ್‌ಎಂಐ ವಿಧಾನವನ್ನು ಅಳವಡಿಸಿಕೊಂಡಾಗ ಬೆಳೆಗಳಿಗೆ ಅತಿಯಾದ ಮಳೆ ಹಾಗೂ ಬರಗಾಲದಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ತಾಳಿಕೊಳ್ಳುವ ಶಕ್ತಿ ಹೆಚ್ಚಿರುವುದನ್ನು ಗಮನಿಸಲಾಯಿತು. ೨೦೧೨ ಮತ್ತು ೨೦೧೩ರಲ್ಲಾದಂತೆ ಅನಿರ್ಧಿಷ್ಟ ಮಳೆ ಮತ್ತು ಬರದಂತಹ ಪರಿಸ್ಥಿತಿಗಳಲ್ಲೂ ರೈತರು ಸರಾಸರಿ ೧೨ -೧೪ ಕ್ವಿಂ/ಎ ರಾಗಿಯನ್ನು ಕೊಯ್ಲು ಮಾಡಿದರು. ೨೦೧೪ರ ಅಕ್ಟೋಬರ್‌ನಲ್ಲಿ ಉಂಟಾದ ಹುದುದ್ ಚಂಡಮಾರುತದ ಸಮಯದಲ್ಲಿ ಎಸ್‌ಎಂಐ ವಿಧಾನ ಅಳವಡಿಸಿಕೊಂಡ ಕ್ಷೇತ್ರಗಳು ಬದುಕುಳಿದವು. ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಸಲಾದ ಬೆಳೆಗಳು ಗಾಳಿಗೆ ಅಡ್ಡಲಾಗಿಬಿದ್ದು ಹಾನಿಗೊಳಗಾದವು. ನಂದಪುರದ ಮಲಿಪುಟ್ ಹಳ್ಳಿಯ ದಯಾನಿಧಿ ಖಾರ ಹೀಗೆ ಹೇಳುತ್ತಾರೆ “ರಭಸವಾದ ಗಾಳಿಗೆ ಬಹುತೇಕ ಭತ್ತ ಮತ್ತು ರಾಗಿ ಗಿಡಗಳು ಬಾಗಿಹೋದವು. ಆದರೆ ಎಸ್‌ಎಂಐ ವಿಧಾನದಲ್ಲಿ ಬೆಳೆದ ರೊಬಸ್ಟ್ ರಾಗಿ ಮಾತ್ರ ೨೦೧೪ರ ಭಯಂಕರ ಚಂಡಮಾರುತದಲ್ಲೂ ಬದುಕುಳಿಯಿತು. ನಮ್ಮ ಕುಟುಂಬಕ್ಕೆ ಬೇಕಾದಷ್ಟು ರಾಗಿ ಫಸಲು ನಮಗೆ ಸಿಕ್ಕಿತು”.

ಪೈರುಗಳನ್ನು ನಾಟಿ ಮಾಡುವುದರಿಂದ ಸಾಲುಗಳ ನಡುವೆ ಹಾಗೂ ಪೈರುಗಳ ನಡುವಿನ ಕಳೆಯನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ರೈತರು ಕಳೆ ಕೀಳಲು ರೋಲರ್ ವೀಡರ್‌ಗಳಂತಹ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಇವು ಕಳೆಗಿಡಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಮಣ್ಣಿಗೆ ಗಾಳಿ ಮೊದಲಾದ ಪೋಷಕಾಂಶಗಳು ಸರಾಗವಾಗಿ ಸೇರುವುದರಿಂದ ಗಿಡಗಳು ಹೆಚ್ಚು ಆಳವಾಗಿ, ಗಟ್ಟಿಯಾಗಿ ಬೇರುಬಿಡುತ್ತವೆ. ಇದರಿಂದ ಬಿರುಸಾದ ಗಾಳಿಯನ್ನು ತಾಳಿಕೊಳ್ಳುವ ಶಕ್ತಿ ಗಿಡಗಳಿಗಿರುತ್ತವೆ. ರೋಲರ್ ವೀಡರ್ ಬಳಕೆಯೊಂದಿಗೆ ಗಂಡಸರು ಕಳೆಕೀಳುವ ಜವಾಬ್ದಾರಿಗಳನ್ನು ಹಂಚಿಕೊಳ್ಳಲಾರAಭಿಸಿದರು. ಕಳೆ ಕೀಳಲು ಕೂಲಿಯಾಳುಗಳನ್ನು ಅವಲಂಬಿಸುವುದು ತಗ್ಗಿತು.

ಗಿಡಗಳು ಒಂದೇ ಸಮವಾಗಿರುವುದರಿಂದ ಕೊಯ್ಲು ಮಾಡಲು ಸುಲಭವಾಯಿತು. ಬಲಿತ ತೆನೆಗಳು ಒಂದಕ್ಕೊAದು ಬೆಸೆದುಕೊಳ್ಳುವುದಿಲ್ಲ. ಹೆಂಗಸರಿಗೆ ಎಸ್‌ಎಂಐ ಕ್ಷೇತ್ರಗಳಲ್ಲಿ ತೆನೆಕೊಯ್ಲು ಮಾಡುವುದು ಸುಲಭವೆನಿಸಿತು. ಸಾಂಪ್ರದಾಯಿಕವಾಗಿ ಬಿತ್ತಿದ ಹೊಲಗಳಲ್ಲಿ ಕೊಯ್ಲು ಮಾಡಲು ಬೇಕಾಗುವ ಸಮಯದಲ್ಲಿ ಅರ್ಧದಷ್ಟು ಸಮಯ ಅವರಿಗೆ ಈ ಹೊಲಗಳಲ್ಲಿ ಕೆಲಸ ಮುಗಿಸಲು ಸಾಕಾಯಿತು. ಇದರಿಂದ ಮಹಿಳೆಯರ ಶ್ರಮ ಕಡಿಮೆಯಾಯಿತು.

ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದ ದುರ್ಬಲ ಸಮುದಾಯಗಳಿಗೂ ಕೂಡ ಉತ್ಪಾದನೆ ಹೆಚ್ಚಿದ್ದರಿಂದ ಪೌಷ್ಟಿಕ ಆಹಾರ ಭದ್ರತೆ ಸಿಕ್ಕಿತು. ಈಗ ಎಸ್‌ಎಂಐ ವಿಧಾನವನ್ನು ಅಳವಡಿಸಿಕೊಂಡ ರೈತ ಕುಟುಂಬಗಳಿಗೆ ವರ್ಷಕ್ಕೆ ಸಾಕಾಗುವಷ್ಟು ಸಿರಿಧಾನ್ಯಗಳು ಸಿಗುತ್ತಿವೆ. ಇಳುವರಿ ಹೆಚ್ಚಿದ್ದರಿಂದ ತಮ್ಮ ಬಳಕೆಗೆ ಸಾಕಾಗಿ ಉಳಿದ ಧಾನ್ಯವನ್ನು ಮಾರಾಟಮಾಡುವಂತಾಗಿದೆ. ರಾಗಿಯ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿರುವುದರಿಂದ ೨೦೦೯ರಲ್ಲಿ ಕೆ.ಜಿಗೆ ರೂ.೫ -೭/ ಇದ್ದದ್ದು ೨೦೧೭ರ ವೇಳೆಗೆ ರೂ.೨೨-೨೫ರಷ್ಟಾಗಿದೆ. ಇದರಿಂದ ಉತ್ತಮ ಆದಾಯ ಸಿಗುವಂತಾಗಿದೆ.

೨೦೧೪ರಲ್ಲಿ ಅಕ್ಟೋಬರ್‌ನಲ್ಲಿ ಉಂಟಾದ ಹುದುದ್ ಚಂಡಮಾರುತದ ಸಮಯದಲ್ಲಿ ಎಸ್‌ಎಂಐ ವಿಧಾನ ಅಳವಡಿಸಿಕೊಂಡ ಕ್ಷೇತ್ರಗಳು ಬದುಕುಳಿದವು. ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಸಲಾದ ಬೆಳೆಗಳು ಗಾಳಿಗೆ ಅಡ್ಡಲಾಗಿಬಿದ್ದು ಹಾನಿಗೊಳಗಾದವು.

ಬಾಕ್ಸ್ ೧ : ಎಸ್‌ಎಂಐ ಪದ್ಧತಿಗಳು

ಪ್ರತಿ ಎಕರೆಗೆ ೪೦೦-೫೦೦ ಗ್ರಾಂ ಬೀಜ ಬೇಕಾಗುತ್ತದೆ. ಬೀಜಗಳ ಆಯ್ಕೆಯನ್ನು ಉಪ್ಪು ನೀರಿನ ದ್ರಾವಣದ ಮೂಲಕ ಮಾಡಲಾಗುತ್ತದೆ. ಬೀಜಾಮೃತದ ಮೂಲಕ ಬೀಜೋಪಚಾರ ಮಾಡಲಾಗುತ್ತದೆ. ಸೂಕ್ಷö್ಮಜೀವಿಗಳು ಹಾಗೂ ಪೌಷ್ಟಿಕಾಂಶಗಳನ್ನು ಸಸಿಗಳಿಗೆ ನೀಡುವ ಮೂಲಕ ಅವುಗಳಲ್ಲಿ ಕೀಟ ಹಾಗೂ ರೋಗ ನಿರೋಧಕ ಶಕ್ತಿ ತುಂಬಲಾಗುತ್ತದೆ.

ಮಣ್ಣು ಮತ್ತು ಗೊಬ್ಬರವನ್ನು ೨ : ೧ರ ಪ್ರಮಾಣದಲ್ಲಿ ಕಲಸಿದ ಬೆಡ್ ತಯಾರಿಸಲಾಗುತ್ತದೆ. ಬೀಜಗಳನ್ನು ನರ್ಸರಿಯ ಮಣ್ಣಿನಲ್ಲಿ ೧/೨ ಆಳ ಮತ್ತು ೩ ರಿಂದ ೪ ಇಂಚು ಅಂತರದಲ್ಲಿ ಬಿತ್ತಲಾಗುತ್ತದೆ. ಎರೆಹುಳಗೊಬ್ಬರ/ ಎಫ್‌ವೈಎಂ ಪುಡಿಯನ್ನು ಬೆಡ್ ಮೇಲೆ ಚೆಲ್ಲಿ ತೆಳುವಾಗಿ ಹುಲ್ಲಿನ ಹೊದಿಕೆಯನ್ನು ಹೊದಿಸಲಾಗುತ್ತದೆ. ನಂತರ ಇದಕ್ಕೆ ದಿನದಲ್ಲಿ ಒಂದು ಬಾರಿ ನೀರುಣಿಸಲಾಗುತ್ತದೆ. ೧೫ ದಿನಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

ಭೂಮಿಯನ್ನು ೮-೧೦ ದಿನಗಳೊಳಗೆ ೨ ರಿಂದ ೩ ಬಾರಿ ಚೆನ್ನಾಗಿ ಉಳಬೇಕು. ಭೂಮಿಯನ್ನು ಹದಮಾಡುವಾಗಲೇ ಬೇವು/ಹೊಂಗೆ ಹಿಂಡಿಯನ್ನು ಹಾಕಬೇಕು. ಭೂಮಿಯನ್ನು ಉಳುಮೆ ಮಾಡಿದ ನಂತರ ಕೊರಡಿನಿಂದ ಸಮಮಾಡಬೇಕು.

೧೫-೧೮ ದಿನಗಳಾದ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡಬಹುದು. ನಾಟಿಮಾಡಲು ಒಯ್ಯುವಾಗ ಸಸಿಗಳ ಬೇರಿಗೆ ಮಣ್ಣು ಅಂಟಿಕೊAಡಿರಬೇಕು ಹಾಗೂ ಹೊಲದಲ್ಲಿ ತೇವಾಂಶವಿರಬೇಕು. ಪ್ರತಿ ಸಸಿಯ ನಡುವೆ ೨೫ x ೨೫ ಸೆಂಮೀ ಅಂತರವನ್ನು ಗುರುತು ಮಾಡಿಕೊಳ್ಳಬೇಕು. ಕೊಟ್ಟಿಗೆಗೊಬ್ಬರ ಮತ್ತು ಎರೆಹುಳಗೊಬ್ಬರಗಳನ್ನು ಸಸಿಗಳನ್ನು ನೆಡುವಾಗ ಗುಳಿಯಲ್ಲಿ ಹಾಕಬೇಕು.

ಸಸಿಗಳನ್ನು ನಾಟಿ ಮಾಡಿದ ೧೫-೨೦ ದಿನಗಳ ನಂತರ ರೋಲರ್ ವೀಡರ್ ಅಥವ ಸೈಕಲ್ ಬಳಸಿ ಕಳೆಕೀಳಬೇಕು. ಎರಡು ಮತ್ತು ಮೂರನೇ ಬಾರಿ ಕೂಡ ಮಣ್ಣು ಗಟ್ಟಿಯಾಗಿರುವುದರಿಂದ ಕಳೆಯನ್ನು ರೋಲರ್ ವೀಡರ್ ಮೂಲಕ ಅಥವ ಕೈಯಲ್ಲಿ ಕೀಳಬೇಕು. ಎರೆಹುಳ ಗೊಬ್ಬರ ಅಥವ ಜೀವಾಮೃತ ದ್ರಾವಣವನ್ನು ಪ್ರತಿ ಬಾರಿ ಕಳೆ ಕಿತ್ತ ನಂತರ ಹಾಕಬೇಕು.

ಕೀಟ ನಿಯಂತ್ರಣಕ್ಕೆ ಬೇವಿನೆಣ್ಣೆ ದ್ರಾವಣವನ್ನು ಸಿಂಪಡಿಸಲಾಗುವುದು.

ಇಲ್ಲಿನ ಭೂಮಿಗೆ ಮಳೆನೀರು ಸಿಗುವುದರಿಂದ ನೀರಿನ ನಿರ್ವಹಣೆ ಮಾಡುವ ಅಗತ್ಯವಿಲ್ಲ.

ಕ್ರಮಿಸಬೇಕಾದ ಹಾದಿ

ಎಸ್‌ಎಂಐ ಹಸಿವಿನ ನಿವಾರಣೆಗೆ ಪರಿಹಾರ ಮಾತ್ರವಲ್ಲ ಪ್ರತಿಕೂಲ ಹವಾಮಾನ ಬದಲಾವಣೆಗಳನ್ನು ಎದುರಿಸುವ ವಿಧಾನವಾಗಿದೆ. ಹೆಚ್ಚು ಉತ್ಪಾದನೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ತಾಳಿಕೊಳ್ಳುವ ಶಕ್ತಿ, ಮಹಿಳೆಯ ಶ್ರಮ ಕಡಿಮೆಗೊಳಿಸಿರುವುದು ಈ ವಿಧಾನದ ಕೊಡುಗೆಗಳಾಗಿವೆ. ಅಂದಮಾತ್ರಕ್ಕೆ ಇದರಲ್ಲಿ ಸವಾಲುಗಳೇ ಇಲ್ಲ ಎಂದರ್ಥವಲ್ಲ. ಎಸ್‌ಎಂಐನಲ್ಲಿ ಉತ್ಪಾದನೆ ಹೆಚ್ಚಾದಂತೆ ಎದುರಾಗುವ ಮೊದಲ ಸವಾಲು ಸಂಸ್ಕರಣೆ. ಅಂದರೆ ಹೊಟ್ಟುಬಿಡಿಸಿ ಸ್ವಚ್ಛಗೊಳಿಸುವುದು. ಇದು ಹೆಚ್ಚು ಸಮಯ ಬೇಡುವ ಮತ್ತು ಮಹಿಳೆಯರಿಗೆ ತ್ರಾಸದಾಯಕ ಕೆಲಸ. ಸಿರಿಧಾನ್ಯ ಉತ್ಪಾದಕ ಸಮೂಹಗಳಲ್ಲಿ ಪ್ರಾಥಮಿಕ ಸಂಸ್ಕರಣ ಘಟಕಗಳಿಲ್ಲ. ರೈತರ ಬಳಿ ಉತ್ಪಾದನೆಯನ್ನು ಶೇಖರಿಸಿಡಲು ಅಗತ್ಯವಿರುವಷ್ಟು ಸ್ಥಳ ಇಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಈ ಒತ್ತಡವು ಮಧ್ಯವರ್ತಿಗಳಿಗೆ ಬೆಳೆ ಮಾರಾಟ ಮಾಡಲು ಕಾರಣವಾಗುತ್ತದೆ. ರೈತರನ್ನು ಸಂಘಟಿಸುವುದು, ಸರ್ಕಾರದ ಸಹಯೋಗವನ್ನು ಸಾಧಿಸುವುದು ಮತ್ತು ಸೂಕ್ತ ನೀತಿಯ ನೆರವು ಪಡೆಯುವುದು ಈ ನಿಟ್ಟಿನಲ್ಲಿ ಮುಖ್ಯವಾಗಿ ಎದುರಿಸಬೇಕಾಗಿರುವ ಸವಾಲುಗಳು.

ಕೃತಜ್ಞತೆಗಳು
ಪ್ರಗತಿ ಕೊರಾಪುಟ್ ತಮ್ಮ ಜಮೀನಿನಲ್ಲಿ ತಂತ್ರಜ್ಞಾನವನ್ನು ಪ್ರದರ್ಶಿಸಿದ ಮತ್ತು ಸಹಕಾರ ನೀಡಿದ ರೈತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಒಡಿಸ್ಸಾದ ಬುಡಕಟ್ಟು ಭಾಗಗಳಲ್ಲಿ ಸಿರಿಧಾನ್ಯಗಳನ್ನು ವಿಶೇಷ ಕಾರ್ಯಕ್ರಮದಡಿ ಪ್ರಚುರಪಡಿಸಿದ ತ್ರೊಕೈರೆ, ಎಸ್‌ಡಿಟಿಟಿ, ಭಾರತ ಸರ್ಕಾರ ಮತ್ತು ಒಡಿಸ್ಸಾ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ರೈತಸ್ನೇಹಿ ವಿಡಿಯೋಗಳನ್ನು ಮಾಡಿಕೊಡುವ ಮೂಲಕ ನಮಗೆ ತಾಂತ್ರಿಕ ನೆರವು ನೀಡಿದ ಡಿಜಿಟಲ್ ಗ್ರೀನ್‌ನವರಿಗೆ ನಮ್ಮ ಕೃತಜ್ಞತೆಗಳು.

Luna Panda

Executive Director

Muralidhar Adhikari

Team Leader

Pragati Koraput, Pujariput, Koraput- 764020

Odisha

E-mail : pragatikoraput@gmail.com

www.pragatikoraput.org

 

ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೪ , ಡಿಸಂಬರ್ ೨೦೧೭

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...