ಸಣ್ಣ ಉದ್ಯಮಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿ


ಬಹುತೇಕ ಗ್ರಾಮೀಣ ಮಹಿಳೆಯರು ಭೂರಹಿತರು. ಅವರು ಹೊಲದಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಾರೆ. ಸಂಸ್ಕೃತಿ ಸಂವರ್ಧನ ಮಂಡಲ, ಎನ್ನುವ ಎನ್ಜಿಒ ಮಹಾರಾಷ್ಟ್ರದ ಸರ್ಗೋಲಿಯದ ಮಹಿಳೆಯರಿಗೆ ಅವರ ಉದ್ಯಮಗಳನ್ನು ನಡೆಸಲು ಸಾಲ ನೀಡುವ ಮೂಲಕ ಅವರು ಆರ್ಥಿಕವಾಗಿ ಸಬಲರಾಗಲು ಸಹಾಯ ನೀಡಿತು.


ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿಯಲ್ಲಿರುವ ಸಗ್ರೋಲಿಯು 2046 ಕುಟುಂಬಗಳನ್ನು ಹೊಂದಿರುವ ದೊಡ್ಡ ಹಳ್ಳಿ. 2011 ರ ಜನಗಣತಿಯ ಪ್ರಕಾರ, ಒಟ್ಟು ಜನಸಂಖ್ಯೆ  8494 ರಲ್ಲಿ 3796 ಮಂದಿ ಮಹಿಳೆಯರಿದ್ದಾರೆ. ಪ್ರತಿಯೊಬ್ಬರ ಬಳಿ ಇರುವ ಭೂಮಿ ಸರಾಸರಿ 1.24 ಎಕರೆ. ಇಲ್ಲಿನ ಕೃಷಿಯು ಮಳೆಯಾಶ್ರಿತವಾಗಿದ್ದು  ಎರಡು ಋತುಗಳವರೆಗೆ ಮಾತ್ರ ಅವರಿಗೆ ಕೆಲಸವಿರುತ್ತದೆ. ಉಳಿದ ಸಮಯದಲ್ಲಿ ಅವರು ನಿರುದ್ಯೋಗಿಗಳಾಗಿರುತ್ತಾರೆ.

ಸಂಸ್ಕೃತಿ ಸಂವರ್ಧನ ಮಂಡಲವು (SSM) ನಿರಂತರವಾಗಿ ಶಿಕ್ಷಣ, ಜೀವನೋಪಾಯ, ಕೌಶಲ್ಯ ಅಭಿವೃದ್ಧಿ, ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಇದು 500 ಮಹಿಳಾ ಸ್ವಸಹಾಯ ಗುಂಪುಗಳ (SHG) ರಚನೆಗೆ ಅನುವು ಮಾಡಿಕೊಟ್ಟಿತು. SSM ನಡೆಸುವ ಕೃಷಿ ವಿಜ್ಞಾನ ಕೇಂದ್ರದ (KVK) ಗೃಹ ವಿಜ್ಞಾನ ವಿಭಾಗವು ಆರೋಗ್ಯ ಮತ್ತು ಉದ್ಯಮಶೀಲತೆಯಲ್ಲಿ ಸ್ವಯಂಸಹಾಯಕ ಸಂಘಗಳಿಗೆ ತಾಂತ್ರಿಕ ಬೆಂಬಲವನ್ನು ನೀಡುತ್ತದೆ. ಕೆವಿಕೆ ನಿಯಮಿತವಾಗಿ ಸಿದ್ಧುಉಡುಪುಗಳು, ಆಹಾರ ಸಂಸ್ಕರಣೆ, ಕೃಷಿಉತ್ಪನ್ನ ಸಂಸ್ಕರಣೆ, ಪ್ಯಾಕೇಜಿಂಗ್‌, ಕೋಳಿ ಸಾಕಣೆ, ಮೇಕೆ ಸಾಕಣೆ, ಹೈನುಗಾರಿಕೆ ಇತ್ಯಾದಿಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ರೀತಿಯ ತರಬೇತಿ ಕಾರ್ಯಕ್ರಮಗಳ ಅವಧಿ ಒಂದು ದಿನದಿಂದ ಮೂರು ತಿಂಗಳವರೆಗೆ ಇರುತ್ತದೆ.

ಸರಳ ಮರುಪಾವತಿ ವಿಧಾನಗಳನ್ನು ಒಳಗೊಂಡಂತೆ, 2015-16 ರಿಂದ ಗ್ರಾಮದಲ್ಲಿನ 5-10 ಸಣ್ಣ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಹೆಚ್ಚಿಸಲು SSM ಬಡ್ಡಿ ರಹಿತ ಆರ್ಥಿಕ ಬೆಂಬಲವನ್ನು ನೀಡುತ್ತಿದೆ. SSM ಅವರಿಗೆ ಹಣಕಾಸು ಮತ್ತು ಮಾರ್ಕೆಟಿಂಗ್‌ಗೆ ನೆರವು ನೀಡಿತು. ಇದು ಪ್ರತಿ ವರ್ಷ ಉದ್ಯಮಿಗಳ ಆದಾಯದಲ್ಲಿ 20-40% ಹೆಚ್ಚಳಕ್ಕೆ ಕಾರಣವಾಗಿದೆ. ಮುಂಬಯಿಯ ದೃಷ್ಟಿಯ ಎಂಬ್ರೇಸ್‌ ಎನ್ನುವ ಯೋಜನೆಯು ಇದಕ್ಕೆ ಬೆಂಬಲವನ್ನು ನೀಡುತ್ತಿದೆ. ಯೋಜನೆಯ ಮುಖ್ಯ ಉದ್ದೇಶಗಳು: ಗ್ರಾಮೀಣ ಮಹಿಳೆಯರು ತಮ್ಮ ಕುಟುಂಬವನ್ನು ಬೆಂಬಲಿಸಲು ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು; ಅಗತ್ಯವಿರುವ ಗ್ರಾಮೀಣ ಮಹಿಳೆಯರು/ಯುವಕರಿಗೆ ಉದ್ಯಮಗಳನ್ನು ಪ್ರಾರಂಭಿಸಲು ಹಣಕಾಸಿನ ನೆರವು ನೀಡುವುದು; ಗ್ರಾಮೀಣ ಯುವಕರಲ್ಲಿ ಸ್ವಯಂ ಉದ್ಯೋಗವನ್ನು ಹೆಚ್ಚಿಸುವುದು; ಗ್ರಾಮೀಣ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವುದು.

ಉಪಕ್ರಮ

SSM ಅಕ್ಟೋಬರ್ 2019 ರಿಂದ ಸಾವಿತ್ರಿಬಾಯಿ ಫುಲೆ ಮಹಿಳಾ ವಿಕಾಸ ಮಂಡಲದ ಮೂಲಕ ಗ್ರಾಮದ 42 ಸಣ್ಣ ಪ್ರಮಾಣದ ಉದ್ಯಮಿಗಳನ್ನು ಬೆಂಬಲಿಸಿದೆ. ಸಣ್ಣ ಉದ್ಯಮಿಗಳು ಮತ್ತು ಉದ್ಯಮ ಆರಂಭಿಸಲು ಆಸಕ್ತರಾಗಿರುವ ಮಹಿಳೆಯರಿಗೆ ವಾರ್ಷಿಕ 3% ಬಡ್ಡಿಯೊಂದಿಗೆ ಸಣ್ಣ ಪ್ರಮಾಣದ ಹಣಕಾಸಿನ ನೆರವನ್ನು ನೀಡಿತು. ಅಂತಹ ಉದ್ಯಮಿಗಳನ್ನು ಗುರುತಿಸುವ ಕೆಲಸವನ್ನು ಮಹಿಳಾ ಮಂಡಲ ಮಾಡಿತು.

ಸಗ್ರೋಳಿ ಗ್ರಾಮ ಹಾಗೂ ಅದರ ಸುತ್ತಮುತ್ತಲಿನಲ್ಲಿರುವ ಒಟ್ಟು 51 ಮಹಿಳೆಯರು ಮತ್ತು ಯುವಕರು ಮಹಿಳಾ ಮಂಡಳಕ್ಕೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು. ಫಲಾನುಭವಿಗಳನ್ನು ಆಯ್ಕೆ ಮಾಡಲು ಮಂಡಲವು ಮೂವರು ಸದಸ್ಯರ ಸಮಿತಿಯನ್ನು ನೇಮಿಸಿದೆ. ಅಕ್ಟೋಬರ್ 2019 ರಲ್ಲಿ, 15 ಮಂದಿ ಫಲಾನುಭವಿಗಳ ಮೊದಲ ಬ್ಯಾಚ್ ಅನ್ನು ಗುರುತಿಸಲಾಯಿತು. ಅದೇ ರೀತಿ ಕ್ರಮವಾಗಿ 20 ಮತ್ತು 7 ಫಲಾನುಭವಿಗಳನ್ನು ಹೊಂದಿರುವ ಎರಡನೇ ಮತ್ತು ಮೂರನೇ ಬ್ಯಾಚ್ ಅನ್ನು ಗುರುತಿಸಲಾಗಿದೆ. ಈ ರೀತಿ 42 ಮಂದಿ ಎಂಬ್ರೇಸ್‌ ಯೋಜನೆಯ ಲಾಭ ಪಡೆದಿದ್ದಾರೆ.

ಕಾನೂನು ಒಪ್ಪಂದದೊಂದಿಗೆ ಫಲಾನುಭವಿಗಳನ್ನು ಅವರ ವ್ಯಾಪಾರದ ವ್ಯಾಪ್ತಿ, ಮರುಪಾವತಿ ಸಾಮರ್ಥ್ಯ ಮತ್ತು ಹಿನ್ನೆಲೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಸಾಲದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಯಿತು. 

ಫಲಾನುಭವಿಗಳನ್ನು ವಿವಿಧ ವಹಿವಾಟುಗಳಡಿಯಲ್ಲಿ ವಿಂಗಡಿಸಲಾಗಿದೆ (ನೋಡಿ ಕೋಷ್ಟಕ 1). ಇದರಲ್ಲಿ ಉಡುಪುಗಳು (ಟೈಲರಿಂಗ್‌, ಬಟ್ಟೆ ವ್ಯಾಪಾರ), ಚಿಲ್ಲರೆ ವ್ಯಾಪಾರ (ಕಿರಾಣಿ ಅಂಗಡಿ, ಜನರಲ್‌ ಸ್ಟೋರ್‌, ಲೇಡೀಸ್‌ ಎಂಪೋರಿಯಂ, ಬ್ಯಾಂಗಲ್‌ ಸ್ಟೋರ್‌ ಇತ್ಯಾದಿ), ಪಶುಸಂಗೋಪನೆ (ಆಡು/ಮೇಕೆ ಸಾಕಣೆ, ಹೈನುಗಾರಿಕೆ, ಮೀನುಸಾಕಣೆ), ಕರಕುಶಲ ವಸ್ತುಗಳು (ಬುಟ್ಟಿ), ಪೀಠೋಪಕರಣ ಮತ್ತು ಆಹಾರ ಸಂಸ್ಕರಣೆ (ಬೇಳೆ ಮಿಲ್‌, ಮಸಾಲೆ ಪದಾರ್ಥ ತಯಾರಿ ಘಟಕ, ಹಿಟ್ಟಿನ ಗಿರಣಿ, ಎಣ್ಣೆಗಾಣ ಇತ್ಯಾದಿ). 2019-20ರಲ್ಲಿ 35 ಮಹಿಳೆಯರು ಮತ್ತು 2021ರಲ್ಲಿ 7 ಮಂದಿ ತಮ್ಮ ವ್ಯಾಪಾರವನ್ನು ಆರಂಭಿಸಿದರು.

2019-20ನೇ ಸಾಲಿನಲ್ಲಿ 35ರಲ್ಲಿ 16 ಮಂದಿ ಕಿರಾಣಿ ಅಂಗಡಿ, ಕ್ಷೌರ, ಎಲೆಕ್ಟ್ರಿಕಲ್, ಮೊಬೈಲ್, ಬಳೆ ಅಂಗಡಿ, ಜನರಲ್ ಸ್ಟೋರ್ ಮುಂತಾದ ಚಿಲ್ಲರೆ ವ್ಯಾಪಾರ ಆರಂಭಿಸಿದರು. 10 ಮಂದಿ ಹೈನುಗಾರಿಕೆ, ಕೋಳಿ ಮತ್ತಿತರ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡರು. ಗಾರ್ಮೆಂಟ್ ವಲಯದಲ್ಲಿ (7), ಕರಕುಶಲ ಮತ್ತು ಪೀಠೋಪಕರಣ ಉದ್ಯಮಗಳಲ್ಲಿ (2) ತೊಡಗಿಸಿಕೊಂಡರು.

2021 ರಲ್ಲಿ, 7 ಮಂದಿ ಉದ್ಯಮಿಗಳಲ್ಲಿ 5 ಮಂದಿ ಆಹಾರ ಸಂಸ್ಕರಣಾ ವಲಯಕ್ಕೆ ಸೇರಿದವರು. ಅವರು ದಾಲ್-ಮಿಲ್‌ಗಳು, ಹಿಟ್ಟಿನ ಗಿರಣಿಗಳು, ಮಸಾಲೆ ತಯಾರಿಕೆ ಘಟಕಗಳು, ಆಹಾರ ಪ್ಯಾಕೇಜಿಂಗ್ ಮತ್ತು ತೈಲ ಹೊರತೆಗೆಯುವ ಘಟಕಗಳನ್ನು ಆರಂಭಿಸಿದರು. ಒಬ್ಬರು ಬಟ್ಟೆ ಅಂಗಡಿಯನ್ನು ಆರಂಭಿಸಿದರು. ಇನ್ನೊಬ್ಬರು ತಮ್ಮ ಮೀನುಗಾರಿಕೆ ವ್ಯವಹಾರಕ್ಕಾಗಿ ಮೀನು ಬಲೆಗಳನ್ನು ಖರೀದಿಸಿದರು.

ಕೋಷ್ಟಕ 1. ವ್ಯಾಪಾರ ಮತ್ತು ಉದ್ಯಮಗಳು

ಕ್ರ.ಸಂ ವಹಿವಾಟು/ವ್ಯಾಪಾರ ಉದ್ಯಮಗಳ ಸಂಖ್ಯೆ
2019-20 2021
1 ಗಾರ್ಮೆಂಟ್‌ 7 1
2 ಚಿಲ್ಲರೆ 16
3 ಪಶುಸಂಗೋಪನೆ 10
4 ಕರಕುಶಲ ಮತ್ತು ಪೀಠೋಪಕರಣ 2
5 ಆಹಾರ ಸಂಸ್ಕರಣೆ 5
6 ಮೀನುಸಾಕಣೆ 1
ಒಟ್ಟು 35 7

 

ಸಾಲದ ಮೊತ್ತವನ್ನಾಧರಿಸಿದ ವರ್ಗಗಳು: ಎಲ್ಲಾ ಉದ್ಯಮಗಳನ್ನು ಸಾಲದ ಮೊತ್ತವನ್ನಾಧರಿಸಿ  ವಿವಿಧ ಶ್ರೇಣಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಗಾರ್ಮೆಂಟ್ ವ್ಯಾಪಾರದ ಅಡಿಯಲ್ಲಿ, ಹೆಚ್ಚಿನ ಉದ್ಯಮಿಗಳಿಗೆ (ಶೇ. 14.28)  ರೂ. 40,001 – 70,000 ಸಾಲವನ್ನು ನೀಡಲಾಗಿದೆ. 7.14 ರಷ್ಟು ಉದ್ಯಮಿಗಳು ಮಾತ್ರ ರೂ 20,001 – 40,000 ವರೆಗೆ ಸಾಲವನ್ನು ಪಡೆದಿದ್ದಾರೆ. ಚಿಲ್ಲರೆ ವ್ಯಾಪಾರದಡಿಯಲ್ಲಿ ಗರಿಷ್ಠ ಅಂದರೆ ಶೇ. 21.42ರಷ್ಟು ಉದ್ಯಮಿಗಳು ರೂ. 20,001 ರಿಂದ 40,000ವರೆಗೆ, ಶೇ. 9.52ರಷ್ಟು ಮಂದಿ ರೂ. ರೂ. 40,001 ರಿಂದ 70,000ರದವರೆಗೆ ಮತ್ತು ಕೇವಲ ಶೇ. 4.76ರಷ್ಟು ಮಂದಿ ರೂ. 20000ಗಿಂತ ಕಡಿಮೆ ಮೊತ್ತದ ಸಾಲವನ್ನು ಪಡೆದಿದ್ದಾರೆ. ಪಶುಸಂಗೋಪನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಲ್ಲಿ ಶೇ.19.04ರಷ್ಟು ಉದ್ಯಮಿಗಳು ರೂ. 40,001 ರಿಂದ 70,000 ಮತ್ತು ಶೇ. 7.14ರಷ್ಟು ಮಂದಿ ರೂ. 20,001 ರಿಂದ 40,000 ಸಾಲ ಪಡೆದಿದ್ದಾರೆ. ಆಹಾರ ಸಂಸ್ಕರಣಾ ವಲಯದಲ್ಲಿ ಶೇ.7.14ರಷ್ಟು ಉದ್ಯಮಿಗಳಿಗೆ ರೂ. 40,001 ರಿಂದ 70,000 ವರೆಗೆ ,ಶೇ. 2.38 (ಒಬ್ಬರಿಗೆ) ಸಾಲ ರೂ. 20,001 ರಿಂದ 40,000 ಮತ್ತು ಶೇ. 2.38 (ಒಬ್ಬರಿಗೆ) ರೂ. 70,001ಕ್ಕಿಂತ ಕಡಿಮೆ ಸಾಲ ಪಡೆದಿದ್ದಾರೆ. ಕರಕುಶಲ ಮತ್ತು ಪೀಠೋಪಕರಣ ವ್ಯಾಪಾರಕ್ಕಾಗಿ, ಇಬ್ಬರು ಉದ್ಯಮಿಗಳಲ್ಲಿ ಒಬ್ಬರು (ಶೇ. 2.38) ರೂ. 20,001 ರಿಂದ 40,000 ಮತ್ತು ಮತ್ತೊಬ್ಬರು (ಶೇ. 2.38) ರೂ. 40,001 ರಿಂದ 70,000 ಸಾಲ ಪಡೆದಿದ್ದಾರೆ.

 ಕೋಷ್ಟಕ 2. ಸಾಲದ ಮೊತ್ತದ ವಿವಿಧ ವರ್ಗಗಳ ಅಡಿಯಲ್ಲಿ ಶೇಕಡಾವಾರು EMBRACE ಉದ್ಯಮಿಗಳು

ಕ್ರ. ಸಂ ವಹಿವಾಟು/ವ್ಯಾಪಾರ EMBRACE ಸಾಲದಿಂದ (ರೂ.)  ಲಾಭ ಪಡೆದ ಶೇಕಡವಾರು ಉದ್ಯಮಿಗಳು  (N = 42)
< 20000/- 20001 – 40000/- 40001 – 70000/- >70000/-
1 ಗಾರ್ಮೆಂಟ್ 0 7.14 (3) 14.28 (6) 0
2 ‌ ಚಿಲ್ಲರೆ 4.76 (2) 21.42 (9) 9.52 (4) 0
3 ಪಶುಸಂಗೋಪನೆ 0 7.14 (3) 19.04 (8) 0
4 ಕರಕುಶಲ ಮತ್ತು ಪೀಠೋಪಕರಣ 0 2.38 (1) 2.38 (1) 0
5 ಆಹಾರ ಸಂಸ್ಕರಣೆ 0 2.38 (1) 7.14 (3) 2.38 (1)

35 ಉದ್ಯಮಿಗಳಲ್ಲಿ 21 ಮಂದಿ ವಾರ್ಷಿಕ ರೂ. 24,000 ರಿಂದ 1,80,000 ನಿವ್ವಳ ಲಾಭವನ್ನು (ಸರಾಸರಿ ರೂ. 47,714.29) ಅವರು ನಡೆಸುತ್ತಿದ್ದ ಉದ್ಯಮಗಳಿಂದ ಪಡೆದರು. ಇತರರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದರಿಂದ ಯಾವುದೇ ಆದಾಯವನ್ನು ಪಡೆಯಲಿಲ್ಲ. EMBRACE ಯೋಜನೆಯಿಂದ ಸಾಲವನ್ನು ಪಡೆದ ನಂತರ, ಎಲ್ಲಾ ಉದ್ಯಮಿಗಳು ಹೊಸ ಉದ್ಯಮವನ್ನು ಆರಂಭಿಸಿದರು ಅಥವಾ ಈಗಾಗಲೇ ನಡೆಸುತ್ತಿರುವ ವ್ಯಾಪಾರವನ್ನು ವಿಸ್ತರಿಸಿದರು ಮತ್ತು ವಾರ್ಷಿಕ ಸರಾಸರಿ ರೂ. 88,514.29 (ರೂ. 24,000 ರಿಂದ 2,20,000) ಲಾಭವನ್ನು ಪಡೆದರು. ಹೀಗಿದ್ದೂ, ಎಲ್ಲ ಉದ್ಯಮಿಗಳ ಆದಾಯವು ಸುಮಾರು ರೂ. 40,800.00 ರಷ್ಟಿತ್ತು.

 ಸ್ಪೂರ್ತಿ ಕತೆಗಳು

 ಮಹಾದೇವಿ ಸಂಜಯ್ ಕೊಟ್ನೋಡ್ ತನ್ನ ಗಂಡ, ಇಬ್ಬರು ಮಕ್ಕಳೊಂದಿಗೆ ಸಗ್ರೋಲಿಯಲ್ಲಿ ವಾಸಿಸುತ್ತಿದ್ದಾರೆ. ಅವಳ ಗಂಡ ಶಾಲೆಯೊಂದರಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ, ಅವನ ಸಂಬಳವು ಕುಟುಂಬದ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ ಅವಳು ತನ್ನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದಳು. ಅವಳಿಗೆ ಟೈಲರಿಂಗ್‌ ಚೆನ್ನಾಗಿ ಬರುತ್ತಿತ್ತು. ಅವಳು ಬಟ್ಟೆ ಹೊಲೆದುಕೊಡಲು ಶುರುಮಾಡಿದಳು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಅವಳ ವ್ಯಾಪಾರ ಹೆಚ್ಚಿದಂತೆ ಮಾರ್ಕೆಟ್‌ ಬಳಿ ಅಂಗಡಿ ಇಡಲು ನಿರ್ಧರಿಸಿದಳು. ಅದಕ್ಕೆ ಒಂದು ಲಕ್ಷ ಬಂಡವಾಳದ ಅಗತ್ಯವಿತ್ತು.  ರೂ. ಐವತ್ತು ಸಾವಿರದಷ್ಟು ಮಾತ್ರ ಹೊಂದಿಸಲು ಅವಳಿಗೆ ಸಾಧ್ಯವಾಯಿತು. ಉಳಿದ ಹಣಕ್ಕಾಗಿ EMBRACE ಯೋಜನೆಯ ಸಂಸ್ಕೃತಿ ಸಂವರ್ಧನ ಮಂಡಳಕ್ಕೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಳು. ಈಗ ಮಹಿಳೆಯರ ಎಲ್ಲ ಬಗೆಯ ಬಟ್ಟೆಗಳನ್ನು ಹೊಲಿದು ಕೊಡುವ ಮೂಲಕ ತನ್ನ ವ್ಯಾಪಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾಳೆ. ಅವಳ ಅಂಗಡಿಯ ಹೆಸರು “ಗೌರಿ ಲೇಡೀಸ್‌ ಎಂಪೋರಿಯಂ.” ಅವಳ ಗಂಡ ಅಂಗಡಿಗೆ ಅಗತ್ಯವಾದ ವಸ್ತುಗಳನ್ನು ನಾಂದೇಡ್ ಮತ್ತು ನಿಜಾಮಾಬಾದ್‌ನಿಂದ ತರಲು ಸಹಾಯಮಾಡುತ್ತಾನೆ. ಅಂಗಡಿ ಇಡುವುದಕ್ಕೆ ಮುಂಚೆ ತಿಂಗಳಿಗೆ ರೂ. 1,000 ಸಂಪಾದಿಸುತ್ತಿದ್ದಳು. ಈಗ ತಿಂಗಳಿಗೆ ರೂ. 6,000 ಗಳಿಸುತ್ತಿದ್ದಾಳೆ. ಅವಳ ಆತ್ಮವಿಶ್ವಾಸವೂ ಹೆಚ್ಚಿದ್ದು ಖುಷಿಯಾಗಿದ್ದಾಳೆ. ತನಗೆ ಲಾಭವನ್ನು ಅಂಗಡಿಗೆ ಹೆಚ್ಚುವರಿ ವಸ್ತುಗಳನ್ನು ತರಲು ಬಳಸುತ್ತಿದ್ದಾಳೆ.

ಪ್ರಗತಿ ಟೆಕ್ಸ್ಟೈಲ್ಸ್2015ರಲ್ಲಿ ಆರಂಭವಾದ ಟೈಲರಿಂಗ್‌ ಘಟಕ. ಶ್ರೀಮತಿ ಶಾಂತಾ ಹರಳೆ, ಸುಶಾಮಾ ಮುಟ್ಟೆಪೋಡ್, ಸುನಿತಾ ಕೊಳ್ನೂರೆ ಮತ್ತು ಮೋಸಿನ ಕೊರಬೊ ಎನ್ನುವ ನಾಲ್ವರು ಮಹಿಳೆಯರ ಗುಂಪು ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ಬಗೆಯ ಬ್ಯಾಗ್‌ ತಯಾರಿಕೆಯ ತರಬೇತಿ ಪಡೆದ ನಂತರ ಈ ಘಟಕವನ್ನು ಆರಂಭಿಸಿದರು. ಇವರುರು ಸಮವಸ್ತ್ರ, ವಿವಿಧ ರೀತಿಯ ಬ್ಯಾಗ್‌ಗಳು, ಕಿಚನ್ ಏಪ್ರಾನ್‌ಗಳು, ಸೀರೆ ಪೆಟಿಕೋಟ್, ಸನ್ ಕೋಟ್‌ಗಳು ಮತ್ತು ಹತ್ತಿ ಆರಿಸುವಾಗ ಬಳಸುವ ಏಪ್ರನ್, ಸೋಯಾಬೀನ್ ಕೊಯ್ಲು ಮಾಡುವಾಗ ಹಾಕಿಕೊಳ್ಳುವ ಕೈಗವಸುಗಳನ್ನು ಹೊಲಿಯಲು ಆರಂಭಿಸಿದರು. ಇವುಗಳೊಂದಿಗೆ ಮಹಿಳೆಯರಿಗೆ ಬೇಕಾಗುವ ದಿನನಿತ್ಯದ ವಸ್ತುಗಳನ್ನು ಅಂಗಡಿಯಲ್ಲಿ ಇಡಲು ಬಯಸಿದರು. ಆದರೆ ಅಂಗಡಿ ಚಿಕ್ಕದಾದ್ದರಿಂದ ಅದು ಸಾಧ್ಯವಾಗಲಿಲ್ಲ. EMBRACE ಯೋಜನಡಿಯಲ್ಲಿನ ದೃಷ್ಟಿಯ ಮೂಲಕ ಅವರಿಗೆ ರೂ. 50,000 ಹಣಕಾಸಿನ ನೆರವು ಸಿಕ್ಕಾಗ ಅವರು ಬಾಡಿಗೆಗೆ ಹೊಸ ಅಂಗಡಿಯೊಂದನ್ನು ಡಿಸಂಬರ್‌ 2019ರಲ್ಲಿ ತೆಗೆದುಕೊಂಡರು.

ಅವರು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಬೇಕಾಗುವ ದೈನಂದಿನ ವಸ್ತುಗಳನ್ನು ಖರೀದಿಸಿದರು.  ಬ್ಯಾಗುಗಳ ತಯಾರಿಕೆಗೆ ಹೆಚ್ಚಿನ ವಸ್ತುಗಳನ್ನು ಖರೀದಿಸಿದರು. ಮೊದಲು ಅವರು ಸಮವಸ್ತ್ರಗಳನ್ನು ಹೊಲಿದುಕೊಡುವ ಮೂಲಕ ವರ್ಷಕ್ಕೆ ರೂ. 1,50,000 ಸಂಪಾದಿಸುತ್ತಿದ್ದರು. ಈಗ ದಿನವೊಂದಕ್ಕೆ ಸರಾಸರಿ ರೂ. 1,000 ಮೌಲ್ಯದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರಗತಿ ಟೆಕ್ಸ್‌ಟೈಲ್‌ ಘಟಕವು ಉಳಿದ ಮಹಿಳೆಯರಿಗೂ ತರಬೇತಿ ನೀಡಿದೆ. ದುರದೃಷ್ಟವಶಾತ್‌, ಕೋವಿಡ್‌ 19ರ ಲಾಕ್‌ಡೌನ್‌ನಿಂದಾಗಿ ಅವರು ನಷ್ಟವನ್ನು ಅನುಭವಿಸಬೇಕಾಯಿತು.

ಜುಲೈ 2020ರಲ್ಲಿ ಸೋಯಾಬಿನ್‌ ಕೊಯ್ಲಿಗೆ ಕೈಗವಸುಗಳು ಮತ್ತು ಹತ್ತಿ ಆರಿಸಲು ಬೇಕಾಗುವ ಕೋಟ್‌ಗಳ ಅಗತ್ಯವನ್ನು ಪರಿಗಣಿಸಿ ರಾಜ್ಯ ಕೃಷಿ ಇಲಾಖೆಯು (ಮರಾಠವಾಡ ಮತ್ತು ವಿದರ್ಭ ವಲಯದಲ್ಲಿ) ಕೃಷಿಯಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವದ ಯೋಜನೆಯ ಅಡಿಯಲ್ಲಿ ಅವುಗಳನ್ನು ಹೊಲಿಯುವ ಆರ್ಡರ್‌ ನೀಡಿತು. 1563 ಹತ್ತಿ ಆರಿಸಲು ಬೇಕಾಗುವ ಕೋಟ್‌ಗಳು ಮತ್ತು 1606 ಕೈಗವಸುಗಳನ್ನು ಹೊಲಿಯಲು ಸರ್ಗೋಲಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಆರ್ಡರ್‌ ನೀಡಿತು. ಪ್ರಗತಿ ಘಟಕದ ಮಹಿಳೆಯರ ನೇತೃತ್ವದಲ್ಲಿ ಎಲ್ಲ ಮಹಿಳೆಯರು ಒಟ್ಟಾಗಿ ಕೆಲಸ ಮಾಡಿ ತಿಂಗಳೊಳಗೆ ಕೆಲಸ ಮುಗಿಸಿದರು. ಕೋಟ್‌ಗೆ ರೂ. 270 ಮತ್ತು ಕೈಗವಸಿಗೆ ರೂ. 170 ದರ ನಿಗದಿ ಮಾಡಿತು. ಒಂದು ಕಾಟನ್‌ ಕೋಟಿಗೆ ರೂ. 80 ಮತ್ತು ಒಂದು ಜೊತೆ ಕೈಗವಸಿಗೆ ರೂ. 50 ಹೊಲಿಗೆ ದರವನ್ನು ನೀಡಲಾಯಿತು. ಹೀಗೆ, ಈ ಕೋಟ್ ಮತ್ತು ಕೈಗವಸುಗಳನ್ನು ಹೊಲಿದ 54 ಮಹಿಳೆಯರ ಈ ಗುಂಪಿಗೆ ಒಟ್ಟು ರೂ. 2,50,000 ಹೊಲಿಗೆ ಶುಲ್ಕವಾಗಿ ಮತ್ತು ಪ್ರಗತಿ ಜವಳಿ ಸಮೂಹಕ್ಕೆ ರೂ. 1,50,000 ಶುಲ್ಕ ನೀಡಿತು. ಅವರೆಲ್ಲರಿಗೂ ಇದರಿಂದ ಸಂತೋಷವಾಯಿತು. ಅವರು ಭವಿಷ್ಯದಲ್ಲಿ ತಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಬಯಸಿದ್ದಾರೆ.

ಮಾಧುರಿ ರೇವಾನ್ವಾರ್ 


Madhuri Revanwar

Scientist (home Science)

Sanskriti Samvardhan Mandal’s

Krishi Vigyan Kendra, Sagroli.

Tq. Biloli Dist. Nanded

Maharashtra, INDIA

E-mail: madhuri.kvksagroli@gmail.com

 ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೪; ಡಿಸೆಂಬರ್‌ ೨೦೨೨

 

 

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...