ಸಹಜ ಕೃಷಿಯಿಂದ ತೋಟದ ಸ್ಥಿತಿಸ್ಥಾಪಕತ್ವ ಹೆಚ್ಚಳ


ಸಹಜ ಕೃಷಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರಮುಖ ಮಾರ್ಗವೆಂದು ಗುರುತಿಸಲಾಗಿದೆ. ಸಹಜ ಕೃಷಿಯ ಸಾಮರ್ಥ್ಯವನ್ನು ಸಮರ್ಥನೀಯ ಕೃಷಿ ಮಾದರಿಯಾಗಿ ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ಕೈಗೊಳ್ಳಲಾಯಿತು. ಸಹಜ ಕೃಷಿ ವ್ಯವಸ್ಥೆಗಳು ರೈತರ ಸುಸ್ಥಿರ ಪರಿಸರ ಆಯಾಮಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತವೆ ಎನ್ನುವುದನ್ನು ಕ್ಷೇತ್ರ ಮೌಲ್ಯಮಾಪನವು ತೋರಿತು. ಇದು ಆರ್ಥಿಕ ಆಯಾಮದ ಮೇಲೂ ಪರಿಣಾಮ ಬೀರುತ್ತದೆ. ಸಹಜ ಕೃಷಿಗಾಗಿ ಸಾಂಸ್ಥಿಕ, ಆಡಳಿತ ಮತ್ತು ಮಾರುಕಟ್ಟೆ ಅಂಶಗಳನ್ನೊಳಗೊಂಡಂತಹ ಕಾರ್ಯತಂತ್ರವನ್ನಾಧರಿಸಿದ ಮಧ್ಯಸ್ಥಿಕೆಯ ವಿಧಾನವನ್ನು ಒಳಗೊಳ್ಳುವಂತೆ ಅಧ್ಯಯನವು ಶಿಫಾರಸ್ಸು ಮಾಡುತ್ತದೆ. ರೀತಿಯ ಒಳಗೊಳ್ಳುವಿಕೆಯ ಕೃಷಿ ಬೆಳವಣಿಗೆಯು ಹೊಸ ಮಾದರಿಯಾಗಿ ಪ್ರಚುರಗೊಳ್ಳುತ್ತದೆ.


ಸುಸ್ಥಿರ ಕೃಷಿ ಎನ್ನುವುದನ್ನು ವಿವಿಧ ಭಾಗಿದಾರರು ವಿಭಿನ್ನ ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಿದ್ದಾರೆ. ಇದರ ಪರಿಣಾಮವಾಗಿ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆ ಎಂದು ಹೇಳಲಾಗುವ ವಿವಿಧ ಬಗೆಯ ವ್ಯವಸ್ಥೆಗಳನ್ನು ಮತ್ತು ಪದ್ಧತಿಗಳನ್ನು ಪ್ರಚುರಗೊಳಿಸಲಾಗಿದೆ (LEISA, ಆಗ್ರೊಇಕಾಲಜಿ, ಪರ್ಮಕಲ್ಚರ್‌, ನ್ಯಾಚುರಲ್‌ ಫಾರ್ಮಿಂಗ್‌ ಇತ್ಯಾದಿ). ಕೃಷಿ ಎನ್ನುವುದು ಮನುಷ್ಯರಿಗೆ ಸಂಬಂಧಿಸಿದ್ದು. ಸುಸ್ಥಿರ ಕೃಷಿಯ ಪರಿಕಲ್ಪನೆಯು ರೈತನನ್ನೇ ತನ್ನೆಲ್ಲ ಚಿಂತನೆಗಳ ಕೇಂದ್ರವಾಗಿರಿಸಿಕೊಂಡಿದೆ.

ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಸಹಜ ಕೃಷಿ ಪದ್ಧತಿಯು ಅಂತಹ ಒಂದು ಕೃಷಿ ಪದ್ಧತಿಯಾಗಿದ್ದು ಸುಸ್ಥಿರ ಕೃಷಿಯ ಮಾದರಿಯಾಗಿ ಜನಪ್ರಿಯವಾಗುತ್ತಿದೆ. ಈ ಮಾದರಿಯು ಸ್ಥಿತಿಸ್ಥಾಪಕ ತತ್ವಗಳನ್ನು ಹೊಂದಿದೆ. ಈ ಕೃಷಿ ವ್ಯವಸ್ಥೆಗಳು ಪರಿಸರ ಸಿದ್ಧಾಂತಗಳನ್ನು ಆಧರಿಸಿದೆಯೇ ಹೊರತು ಇದಮಿತ್ಥಂ ಎನ್ನುವಂತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ಜನ ಮತ್ತು ನಿಸರ್ಗದ ನಡುವಿನ ಕೊಡುಕೊಳುವಿಕೆಯ ಸಂಬಂಧ ಕೇಂದ್ರಿತವಾಗಿದ್ದು ಸಾಮಾಜಿಕ ಚಳುವಳಿಗಳು ಇದಕ್ಕೆ ಒತ್ತು ನೀಡಿವೆ.

ಸಹಜ ಕೃಷಿ ವ್ಯವಸ್ಥೆಯ ಉದ್ದೇಶ (i) ಬಾಹ್ಯ ಒಳಸುರಿಯುವಿಕೆಗಳು ಮತ್ತು ಕೃಷಿ ಸಾಲದ ಅವಲಂಬನೆಯನ್ನು ಕೊನೆಗೊಳಿಸುವುದು (ii) ಮಣ್ಣಿನ ಪರಿಸ್ಥಿತಿಯನ್ನು ಸುಧಾರಿಸುವುದು (iii) ಸ್ಥಳೀಯ ಸಂಪನ್ಮೂಲಗಳನ್ನೇ ಒಳಸುರಿಯುವಿಕೆಗಳನ್ನು ಪಡೆಯುವುದು (iv) ಜೀವವೈವಿಧ್ಯದ ಸಂರಕ್ಷಣೆಗೆ ಒತ್ತುನೀಡುವುದು (v) ನೀರಾವರಿ ಅವಲಂಬನೆಯನ್ನು ಕಡಿಮೆಗೊಳಿಸುವುದು (vi) ಮಣ್ಣಿನ ತೇವಾಂಶವನ್ನು ರಕ್ಷಿಸುವುದು. ನೈಸರ್ಗಿಕ ಪದ್ಧತಿಗಳೆಂದರೆ (i) ಸಗಣಿ ಮತ್ತು ಗಂಜಲ ಬಳಸಿ (ಬೀಜಾಮೃತ) ಬೀಜೋಪಚಾರ ಮಾಡುವುದು (ii) ನೀರು, ಸಗಣಿ, ದೇಸಿ ತಳಿ ಹಸುವಿನ ಗಂಜಲ, ಸಕ್ಕರೆ, ಕಾಳಿನ ಹಿಟ್ಟು, ಮಣ್ಣು ಬಳಸಿ ಸಿದ್ಧಪಡಿಸಿದ ಜೀವಾಮೃತ (iii) ಮುಚ್ಚಳಿಕೆ: ಮಣ್ಣು ಮತ್ತು ಹುಲ್ಲು ಮುಚ್ಚಳಿಕೆ ಬಳಸಿ ಮಣ್ಣಿನ ತೇವಾಂಶ ಸಂರಕ್ಷಣೆ (iv) ವಾಪಸಾ: ಮಣ್ಣಿನೊಳಗೆ ಸರಾಗವಾಗಿ ಗಾಳಿಯಾಡುವಂತೆ ಮಾಡುವುದು – ಮಣ್ಣಿನ ಹ್ಯೂಮಸ್‌ ನಿರ್ಮಿಸುವುದು. ಕ್ಷೇತ್ರಗಳನ್ನು ‘ಐದು-ಪದರಗಳ ಬಹು-ಬೆಳೆ’ ಮಾದರಿಯನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಸಹಜ ಕೃಷಿ ಪದ್ಧತಿಯ ವೈಶಿಷ್ಟ್ಯತೆಯೆಂದರೆ ದೇಸಿ ತಳಿ ಹಸುಗಳ ಸಗಣಿ ಮತ್ತು ಗಂಜಲವನ್ನು ಪ್ರಾಥಮಿಕ ಒಳಸುರಿಯುವಿಕೆಯಾಗಿ ಬಳಸಲಾಗುತ್ತದೆ. ಆದ್ದರಿಂದ, ಸಹಜ ಕೃಷಿಯ ಗುರಿಗಳು ಮತ್ತು ಪ್ರಕ್ರಿಯೆಗಳು ಕೃಷಿಪರಿಸರ ಸಿದ್ಧಾಂತ, ಮನುಷ್ಯ ಮತ್ತು ಪರಿಸರದ ನಡುವಿನ ಕೊಡುಕೊಳುವಿಕೆಯ ಸಂಬಂಧ ಮತ್ತು ಮಾರುಕಟ್ಟೆ ವಿಕೇಂದ್ರೀಕರಣವನ್ನು ಒಳಗೊಂಡಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಜ ಕೃಷಿಯು ಪ್ರಮುಖ ಮಾರ್ಗವೆಂದು ಗುರುತಿಸಲ್ಪಟ್ಟಿದ್ದು, SDGಗಳ 169 ಗುರಿಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ಎಲ್ಲಾ ವರ್ಗದ ರೈತರನ್ನು ಒಳಗೊಂಡ ಚಳವಳಿಯಾಗಿದೆ. ಭಾರತದಲ್ಲಿ ಸಹಜ ಕೃಷಿ ಆಂದೋಲನವು ಲಾ ವಯಾ ಕ್ಯಾಂಪೆಸಿನಾ, ಕೃಷಿ-ಆಧಾರಿತ ಜಾಗತಿಕ ರೈತ ಚಳುವಳಿಯ ಭಾಗವಾಗಿದೆ. ಈ ವ್ಯವಸ್ಥೆಯು ಕೇಂದ್ರ ಸರ್ಕಾರದಿಂದ ಮಾತ್ರವಲ್ಲದೆ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಗಳ ಗಮನ ಸೆಳೆಯಿತು. ಸಾಂಪ್ರದಾಯಿಕ ಸ್ಥಳೀಯ ಪದ್ಧತಿಗಳ ಉತ್ತೇಜನಕ್ಕಾಗಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ (PKVY) ಉಪ ಯೋಜನೆಯಾಗಿ 2020-21 ಬಜೆಟ್‌ನಲ್ಲಿ ಪರಿಚಯಿಸಲಾದ ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿ (BPKP), ಸಹಜ ಕೃಷಿ ಮತ್ತು ಕೃಷಿವಿಜ್ಞಾನದ ತತ್ವಗಳನ್ನು ಪ್ರತಿಪಾದಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಪದ್ಧತಿಯು 2019-20 (ಮೂಲಕ್ಕೆ ಹಿಂತಿರುಗುವುದು) ಮತ್ತು 2020-21ರ ಕೇಂದ್ರ ಬಜೆಟ್‌ನಲ್ಲಿ ಉಲ್ಲೇಖಿತವಾಗಿದೆ. ಅಲ್ಲದೆ, ಭಾರತ ಸರ್ಕಾರದ ಚಿಂತಕರ ಚಾವಡಿಯಾದ ನೀತಿ ಆಯೋಗವು ಸಹಜ ಕೃಷಿಯು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಾಧನ ಎಂದು ಹೇಳುತ್ತದೆ. ಇತ್ತೀಚಿನ ನೀತಿ ಆಯೋಗವು ಸಹಜ ಕೃಷಿಯನ್ನು (ಕೃಷಿ ಪರಿಸರ ವಿಜ್ಞಾನ) ಕೃಷಿ ಬೆಳವಣಿಗೆಯ ಹೊಸ ಮಾದರಿ ಎಂದು ಶ್ಲಾಘಿಸಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿನ ಸಹಜ ಕೃಷಿಗೆ ಸಂಬಂಧಿಸಿದ ರಾಜ್ಯದ ಉಪಕ್ರಮಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಆರ್ಥಿಕ ಬೆಂಬಲವನ್ನು ಪಡೆದಿವೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರಗಳು ಸಹಜ ಕೃಷಿಗಾಗಿ ನಿರ್ದಿಷ್ಟ ಹಂಚಿಕೆಗಳನ್ನು ಹೊಂದಿದ್ದರೆ, ರಾಜಸ್ಥಾನ, ಗುಜರಾತ್ ಮತ್ತು ಮೇಘಾಲಯ ಸರ್ಕಾರಗಳು ಅದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿವೆ.

ಸಹಜ ಕೃಷಿ ವ್ಯವಸ್ಥೆ ಕುರಿತಾದ ಅಧ್ಯಯನಗಳು ಕೃಷಿ ವೆಚ್ಚಗಳ ಮೇಲಿನ ಕಡಿತದಿಂದ ಉಳಿತಾಯ, ಮಾರುಕಟ್ಟೆ ಅಪಾಯಗಳ ಇಳಿಕೆ ಮತ್ತು ಕೃಷಿ ಭೂಮಿಯ ಸುಧಾರಣೆ ಆಗಿರುವುದನ್ನು ತೋರಿಸುತ್ತಿವೆ. ಸಹಜ ಕೃಷಿಯ ಸಂಭಾವ್ಯ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಪ್ರಭಾವವನ್ನು ನಿರ್ದಿಷ್ಟ ಪ್ರಕರಣ ಅಧ್ಯಯನಗಳ ಆಧಾರದ ಮೇಲೆ 17 SDGಗಳ ಅಡಿಯಲ್ಲಿ ನಿರ್ದಿಷ್ಟ ಗುರಿಗಳ ರೂಪುರೇಷೆಯನ್ನು ರೂಪಿಸಲಾಗಿದೆ. ಆದರೂ, ಸಹಜ ಕೃಷಿಯಲ್ಲಿ ನೈಸರ್ಗಿಕ ಉತ್ಪನ್ನಗಳ ಉತ್ಪಾದನೆಗೆ ಹಾಕಬೇಕಾದ ಕಠಿಣ ಶ್ರಮದ ಬಗ್ಗೆ ಟೀಕೆಗಳನ್ನು ಎದುರಿಸಿದೆ. ಈ ರೀತಿಯ ಕೃಷಿಯಲ್ಲಿ ಹೆಚ್ಚಿನ ಪಾಲು ಕುಟುಂಬದವರೇ ಶ್ರಮಿಕರಾಗಿರುತ್ತಾರೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಸವಾಲನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸಹಜ ಕೃಷಿಯಿಂದಾಗುವ ಪರಿಸರದ ಲಾಭಗಳು ಆರ್ಥಿಕ ಕಾರ್ಯಸಾಧ್ಯತೆಗಳು ವ್ಯಾಪಾರ ವಹಿವಾಟಿನೊಂದಿಗೆ ಸೇರಿವೆ ಎಂದು ಹೇಳಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ಸಮಗ್ರ ಮೌಲ್ಯಮಾಪನ ಚೌಕಟ್ಟಿನಲ್ಲಿ ಸುಸ್ಥಿರತೆಯ ವಿವಿಧ ನಿಯತಾಂಕಗಳ ಆಧಾರದ ಮೇಲೆ ಸಹಜ ಕೃಷಿ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಅಳೆಯಲು ಕ್ಷೇತ್ರ ಅಧ್ಯಯನವನ್ನು ನಡೆಸಲಾಯಿತು. ಶ್ರೀ ಸತ್ಯಸಾಯಿ ಜಿಲ್ಲೆಯ (ಹಿಂದೆ ಅನಂತಪುರ ಜಿಲ್ಲೆಯ ಭಾಗ) ರೊದ್ದಂ ಬ್ಲಾಕ್‌ನ (ಮಂಡಲ) ರಾಚೂರು ಗ್ರಾಮದಲ್ಲಿ 15 ರೈತರ ಮೌಲ್ಯಮಾಪನವನ್ನು ನಡೆಸಲಾಯಿತು.

ಹಿನ್ನೆಲೆ

ಅನಂತಪುರ ಪ್ರದೇಶವು ದೇಶದ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಶ್ರೀ ಸತ್ಯಸಾಯಿ ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶದಲ್ಲಿ 34.7% ಬಿತ್ತನೆ ಪ್ರದೇಶದಲ್ಲಿ 604 ಮಿಮೀ ಸರಾಸರಿ ವಾರ್ಷಿಕ ಮಳೆಯನ್ನು ದಾಖಲಿಸುತ್ತದೆ. ಸಣ್ಣ ಮತ್ತು ಅತಿಸಣ್ಣರೈತರ ಒಟ್ಟು 79% ಹಿಡುವಳಿಗಳಿದ್ದು ಅದರಲ್ಲಿ ಜಿಲ್ಲೆಯ ಒಟ್ಟು ಬೆಳೆ ಪ್ರದೇಶದಲ್ಲಿ 22.7% ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ. ನೈರುತ್ಯ ಮಾರುತಗಳಲ್ಲಿ ವ್ಯತ್ಯಯವಾದರೆ ಇಲ್ಲಿ ಬೇಸಾಯಕ್ಕೆ ಅಡ್ಡಿಯಾಗುತ್ತದೆ.

ರಾಚೂರು ಗ್ರಾಮದ ಅನೇಕ ರೈತರು ತಿಂಬಕ್ಟು ಸಮೂಹದ ಧರಣಿ ಕೃಷಿ ಮತ್ತು ಮಾರುಕಟ್ಟೆ ಸಹಕಾರಿ ಸಂಘದ ಭಾಗವಾಗಿದ್ದಾರೆ. ಧರಣಿ ಸಹಕಾರ ಸಂಘವು ಅನಂತಪುರದ ಎಂಟು ಬ್ಲಾಕ್‌ಗಳಿಂದ (ಮಂಡಲಗಳು) 2000 ಕ್ಕೂ ಹೆಚ್ಚು ಸಣ್ಣ ಹಿಡುವಳಿದಾರ ರೈತರ ಉತ್ಪಾದಕ-ಮಾಲೀಕತ್ವದ ಉದ್ಯಮ. ಬೆಳೆಯನ್ನು ಯೋಜಿಸುವುದರಲ್ಲಿ ರೈತರಿಗೆ ಬೆಂಬಲ ನೀಡುವುದು ಮತ್ತು ಸುಸ್ಥಿರ ಕೃಷಿ ವಿಧಾನಗಳ ಕುರಿತು ತರಬೇತಿ ನೀಡುವುದರ ಜೊತೆಗೆ, ಸಹಕಾರ ಸಂಘವು ಸದಸ್ಯರ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕೇಜಿಂಗ್ ಮತ್ತು ಮಾರಾಟವನ್ನು ಕೈಗೊಳ್ಳುತ್ತದೆ. ರಾಗಿ, ಕಡಲೆಕಾಯಿ, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಗ್ರಾಮದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ. ರೇಷ್ಮೆಹುಳು ಸಾಕಣೆ ಇಲ್ಲಿನ ಪ್ರಮುಖ ಉದ್ಯಮವಾಗಿದ್ದು, ರೈತರು ಇದಕ್ಕಾಗಿ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಾರೆ.

ಸುಸ್ಥಿರತೆಯ ಮೌಲ್ಯಮಾಪನದ ಚೌಕಟ್ಟು

ಸುಸ್ಥಿರತೆಯ ಮೌಲ್ಯಮಾಪನ ಚೌಕಟ್ಟು ಆರ್ಥಿಕ, ಪರಿಸರ, ಸಾಮಾಜಿಕ ಮತ್ತು ಆಡಳಿತ ಮತ್ತು ಹವಾಮಾನ ಬದಲಾವಣೆಯಂತಹ ಸುಸ್ಥಿರತೆಯ ಪ್ರಮುಖ ವಲಯಗಳನ್ನು ಒಳಗೊಂಡಿರುವ ನಿರ್ದಿಷ್ಟ ಸೂಚಕಗಳನ್ನು ಹೊಂದಿದೆ (ಕೋಷ್ಟಕ 1). ಸೂಚಕಗಳನ್ನು ಸಮಾನವಾಗಿ ಪರಿಗಣಿಸಲಾಗಿದ್ದು ಸುಸ್ಥಿರತೆಯ ಆಯಾಮಗಳಿಗೆ ಚೌಕಟ್ಟಿನೊಳಗೆ ಸಮಾನ ಮಾನ್ಯತೆ ನೀಡಲಾಗಿದೆ. ಸೂಚ್ಯಂಕಗಳಲ್ಲಿ ಒಂದು, ಮೂರು ಮತ್ತು ಐದು ರೇಟಿಂಗ್‌ ನೀಡಲಾಗಿದ್ದು, ಐದು ಎನ್ನುವುದು ಗರಿಷ್ಠ (ಅತ್ಯುತ್ತಮ ಗುಣಮಟ್ಟ) ಮತ್ತು ಒಂದು ಎನ್ನುವುದು ಕನಿಷ್ಠ (ಕಡಿಮೆ ಗುಣಮಟ್ಟ) ಎನ್ನುವುದನ್ನು ಸೂಚಿಸುತ್ತದೆ.

ಕೋಷ್ಟಕ 1: ಸುಸ್ಥಿರತೆಯ ಮೌಲ್ಯಮಾಪನದ ಚೌಕಟ್ಟು
 ಆಯಾಮಗಳು/ಸೂಚ್ಯಂಕಗಳು  ರೇಟಿಂಗ್ ಮಾನದಂಡಗಳು
ಪರಿಸರ 1 3 5
1  

ತೋಟದಲ್ಲಿ ಹೊರ ಒಳಸುರಿಯುವಿಕೆ ಬಳಕೆ

 

ರಾಸಾಯನಿಕ

 

ಎರಡೂ

 

ನೈಸರ್ಗಿಕ

2  

ಎರೆಹುಳುಗಳ ಉಪಸ್ಥಿತಿ

 

ಇಲ್ಲ

 ಇದೆ
3  

ಜೇನ್ನೊಣಗಳ ಉಪಸ್ಥಿತಿ

 ಇಲ್ಲ  ಇದೆ
4 ಮಣ್ಣಿನ ಬಗೆ  ಮರಳು  ಜೇಡಿ ಮಣ್ಣು ಜಂಬಿಟ್ಟಿಗೆ
5  ಕಳೆದ ದಶಕದಲ್ಲಾದ ಅಂತರ್ಜಲ ಮಟ್ಟ ಬದಲಾವಣೆ  ಆಳ/ತಳ  ಇದ್ದಂತೆ ಇದೆ  ನೆಲಮಟ್ಟಕ್ಕೆ ಹತ್ತಿರದಲ್ಲಿದೆ
6   ಮೇಲ್ಮಟ್ಟದಲ್ಲಿ ನೀರಿನ ಲಭ್ಯತೆಯಲ್ಲಾದ ಬದಲಾವಣೆಗಳು  ಹಿಂದಿಗಿಂತ ಕಡಿಮೆಯಾಗಿದೆ  ಇದ್ದಂತೆ ಇದೆ  before ಹಿಂದಿಗಿಂತ ಹೆಚ್ಚಾಗಿದೆ
 ಆರ್ಥಿಕ 1 3 5
1  ಪ್ರಮುಖ ಬೆಳೆಗಳ ಸರಾಸರಿ ಇಳುವರಿ?  

ಸಂಭಾವ್ಯ ಇಳುವರಿಗಿಂತ <

 ಸಂಭಾವ್ಯ ಇಳುವರಿಯಷ್ಟು  

ಸಂಭಾವ್ಯ ಇಳುವರಿಗಿಂತ >

2  ಮನೆಯ ಆದಾಯದಲ್ಲಿ ಕೃಷಿ ಆದಾಯದ ಪಾಲು <25% 25-50% =/>50%
3  ವರ್ಷವೊಂದರಲ್ಲಿ ಬೆಳೆದ ಬೆಳೆಗಳ ಸಂಖ್ಯೆ  ಒಂದು ಅಥವಾ ಎರಡು  ಮೂರು  ಮೂರಕ್ಕಿಂತ ಹೆಚ್ಚು
4  ಸಾಲದ ಮೂಲ  ಯಾವದೇ ಮೂಲವಿಲ್ಲ  ಅನೌಪಚಾರಿಕ  ಔಪಚಾರಿಕ
5  ಬದಲಿ ಜೀವನೋಪಾಯಗಳ ಅವಕಾಶಗಳು  ಯಾವುದೂ ಇಲ್ಲ  ಬೆಳೆಯಾಧಾರಿತ ಕೃಷಿಯೊಂದಿಗೆ ಎರಡು  ಬೆಳೆಯಾಧಾರಿತ ಕೃಷಿಯೊಂದಿಗೆ ಎರಡಕ್ಕಿಂತ ಹೆಚ್ಚು
6 ಹಿಡುವಳಿ ಭೂಮಿಯ ಗಾತ್ರ  

2.5 ಎಕರೆಗಿಂತ ಕಡಿಮೆ

 

2.6 ಇಂದ 5 ಎಕರೆ

 

5 ಎಕರೆಗಿಂತ ಹೆಚ್ಚು

 ಸಾಮಾಜಿಕ 1 3 5
1  ಭೂಮಿಯ ಮಾಲೀಕತ್ವ  ಗುತ್ತಿಗೆ  ಕುಟುಂಬದೊಂದಿಗೆ ಜಂಟಿ ಮಾಲೀಕತ್ವ  ಒಬ್ಬರಿಗೆ ಸೇರಿದ್ದು/ಗಂಡ ಹೆಂಡತಿಯರ ಹೆಸರಿನಲ್ಲಿ/ ಸ್ವಂತ
2  ಜಮೀನು ಯಾರ ಹೆಸರಿನಲ್ಲಿ ನೋಂದಣಿಯಾಗಿದೆ  ಗಂಡು ಹೆಣ್ಣು
 ಗಂಡಸರು ಮಾತ್ರ  ಪುರುಷರು ಮಹಿಳೆಯರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ  ಒಮ್ಮತದ ಮೂಲಕ ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ
4  ಗಂಡಾಳು ಮತ್ತು ಹೆಣ್ಣಾಳುಗಳ ನಡುವಿನ ವೇತನ ತಾರತಮ್ಯ  ದ್ವಿಗುಣ  ದ್ವಿಗುಣ  ವ್ಯತ್ಯಾಸವಿಲ್ಲ
5  ಸಂಘಗಳ ಸದಸ್ಯತ್ವ  ಇಲ್ಲ  ಹೌದು
6  ಉತ್ಪಾದನಾ ಸಂಪನ್ಮೂಲಗಳ ಲಭ್ಯತೆಯಲ್ಲಿ ಜಾತಿಯ ಪ್ರಾಬಲ್ಯ  ಯಾವಾಗಲೂ  ಕೆಲವೊಮ್ಮೆ ಎಂದಿಗೂ ಇಲ್ಲ
 ಆಡಳಿತ ಮತ್ತು ಹವಾಮಾನ ಬದಲಾವಣೆಗಳ ತಿಳಿವು 1 3 5
1  ಕಳೆದ ಎರಡು ಋತುಗಳಲ್ಲಿ ರೂಪಿಸಲಾದ ಕೃಷಿಯೋಜನೆಗಳ ಸಂಖ್ಯೆ  ಯಾವುದೂ ಇಲ್ಲ  ಒಂದು ಅಥವ ಎರಡು  ಎರಡಕ್ಕಿಂತ ಹೆಚ್ಚು
2 ಕಳೆದ ಎರಡು ಕೃಷಿ ಋತುಗಳಲ್ಲಿ ವಿಸ್ತರಣಾ ಅಧಿಕಾರಿಯೊಂದಿಗೆ ನಡೆಸಲಾದ ಸಂವಾದಗಳ ಸಂಖ್ಯೆ  ಯಾವುದೂ ಇಲ್ಲ  ಒಂದು ಅಥವ ಎರಡು  ಎರಡಕ್ಕಿಂತ ಹೆಚ್ಚು
3  PHCಗಿರುವ ದೂರ > 5 ಕಿಮೀ  5ಕಿಮೀ ಒಳಗೆ  ಹಳ್ಳಿಯಲ್ಲಿದೆ
4  ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗಿರುವ ದೂರ > 5 ಕಿಮೀ  1 ರಿಂದ 5ಕಿಮೀ < 1 ಕಿಮೀ
5 ? ಮಳೆ ವಿನ್ಯಾಸದ ತಿಳಿವು – ಹಿಂದಿನ ಕಾಲಕ್ಕೆ ಹೋಲಿಸಿದಾಗ  ಭಿನ್ನ  ಅದೇ ರೀತಿ ಇದೆ
6  ಕೃಷಿ ಆಧಾರಿತ ಜೀವನೋಪಾಯಗಳ ಮೇಲೆ ಹವಾಮಾನದ ಪ್ರಭಾವದ ತಿಳಿವು  ನೇತ್ಯಾತ್ಮಕ  ಯಾವುದೂ ಇಲ್ಲ e ಇತ್ಯಾತ್ಮಕ

ಸುಸ್ಥಿರತೆಯ ಚೌಕಟ್ಟಿನ ಆಯಾಮಗಳ ಕಾರ್ಯಕ್ಷಮತೆಯು ಆ ಆಯಾಮದ ಪ್ರತ್ಯೇಕ ಸೂಚ್ಯಂಕಗಳ ಸಂಚಿತ ಮೌಲ್ಯವಾಗಿದೆ. ಹೀಗಾಗಿ, ಪ್ರತಿಯೊಂದು ಆಯಾಮವು ಆರರಿಂದ 30 ರ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಮೌಲ್ಯವು 30ಕ್ಕೆ ಹತ್ತಿರವಾಗಿದ್ದರೆ, ಸುಸ್ಥಿರತೆಯ ಚೌಕಟ್ಟಿನಲ್ಲಿ ಅದರ ಕಾರ್ಯಕ್ಷಮತೆ ಹೆಚ್ಚು ಎಂದರ್ಥ.

 ಫಲಿತಾಂಶಗಳು

ಕ್ಷೇತ್ರಗಳನ್ನು ಗಮನಿಸಿದಾಗ, ಚೌಕಟ್ಟಿನೊಳಗೆ ಪರಿಸರ ದೃಷ್ಟಿಯಿಂದ ಉತ್ತಮ ಫಲಿತಾಂಶ ಕಂಡುಬಂದಿದ್ದು, ಸಾಮಾಜಿಕ, ಆರ್ಥಿಕ, ಆಡಳಿತ ಮತ್ತು ಹವಾಮಾನ ಬದಲಾವಣೆಗಳನ್ನು ಗಮನಿಸಲಾಗಿದೆ. ರೈತರ ಹೊಲಗಳನ್ನು ಪರಿಸರದ ಆಯಾಮದ ದೃಷ್ಟಿಯಿಂದ 22 ರಿಂದ 24ರಷ್ಟು ಮೌಲ್ಯಾಂಕಗಳನ್ನು ಗಳಿಸಿದೆ. ಪರಿಸರದ ಆಯಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸೂಚ್ಯಂಕಗಳು ಮಣ್ಣು-ಜೈವಿಕ ವೈವಿಧ್ಯತೆ ಮತ್ತು ನೈಸರ್ಗಿಕ ಒಳಹರಿಯುವಿಕೆಗಳ ಬಳಕೆಯನ್ನು ಆಧರಿಸಿದ್ದವು. ಹೀಗಿದ್ದೂ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೂಲಗಳ ಲಭ್ಯತೆ ಹಾಗೂ ಪೋಷಣೆಗಳ ಸೂಚ್ಯಂಕಗಳನ್ನು ಮೌಲ್ಯಮಾಪನದ ಚೌಕಟ್ಟಿನಲ್ಲಿ ಕಳಪೆ ಮಟ್ಟದಲ್ಲಿರುವುದನ್ನು ಗಮನಿಸಲಾಗಿದೆ.

ಆರ್ಥಿಕ ಆಯಾಮಗಳ ಅಂಕಗಳು 14-20 ವ್ಯಾಪ್ತಿಯಲ್ಲಿವೆ. ಸಾಲದ ಲಭ್ಯತೆಯು ಆರ್ಥಿಕ ಆಯಾಮದ ಏಕೈಕ ಸೂಚ್ಯಂಕವಾಗಿದ್ದು ಅದು ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ತೋರಿದೆ. ಪ್ರತ್ಯೇಕ ತೋಟಗಳು ಮತ್ತು ಕೃಷಿ ಕುಟುಂಬಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚು ಪ್ರತಿಬಿಂಬಿಸುವ ಇತರ ಸೂಚ್ಯಂಕಗಳು ಚೌಕಟ್ಟಿನಲ್ಲಿ ಕಡಿಮೆ ಅಂಕಗಳನ್ನು ಪಡೆದಿವೆ. ಸಾಲದ ಲಭ್ಯತೆಯನ್ನು ರೈತರ ಸಾಮಾಜಿಕ ಬಂಡವಾಳದ ಸೂಚ್ಯಂಕದೊಂದಿಗೆ ಜೋಡಿಸಬಹುದು. ಆರ್ಥಿಕ ಆಯಾಮದಲ್ಲಿ ʼಸಾಲ ಲಭ್ಯತೆʼ ಸೂಚ್ಯಂಕದಲ್ಲಿ ಹೆಚ್ಚಿನ ಮೌಲ್ಯಾಂಕವನ್ನು ಗಳಿಸಿದ ರೈತರೇ ಸಾಮಾಜಿಕ ಆಯಾಮದಲ್ಲಿನ ʼಸಂಘಗಳ ಸದಸ್ಯತ್ವʼ ಸೂಚ್ಯಂಕದಲ್ಲೂ ಹೆಚ್ಚಿನ ಮೌಲ್ಯಾಂಕ ಗಳಿಸಿರುವುದನ್ನು ಮೌಲ್ಯಮಾಪನದಲ್ಲಿ ಗಮನಿಸಲಾಯಿತು.

ಸಾಮಾಜಿಕ ಆಯಾಮದ ಇತರ ಸೂಚ್ಯಂಕಗಳಾದ ʼಕೃಷಿ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಲಿಂಗ ಸಂಬಂಧಿ ಅಂಶಗಳುʼ, ʼಲಿಂಗಾಧಾರಿತ ವೇತನ ವ್ಯತ್ಯಾಸಗಳುʼ, ʼಲಿಂಗಾಧಾರಿತ ಭೂಮಿಯ ಒಡೆತನʼ ಇವುಗಳ ಮೌಲ್ಯಾಂಕವು ಕಳಪೆಯಾಗಿದೆ. ಇದರಲ್ಲಿ ʼನಿರ್ಧಾರ ತೆಗೆದುಕೊಳ್ಳುವʼ ಮೌಲ್ಯಾಂಕವು ಉಳಿದವಕ್ಕಿಂತ ಕಳಪೆಯಾಗಿದೆ. ಆಡಳಿತ ಸೂಚ್ಯಂಕಗಳಾದ – ʼಸರ್ಕಾರಿ ಯೋಜನೆಗಳ ಅರಿವು ಮತ್ತು ಅವುಗಳನ್ನು ಪಡೆಯಲು ಬೇಕಾದ ಅರ್ಹತೆʼ ಮತ್ತು ʼವಿಸ್ತರಣಾ ಕಾರ್ಯಕರ್ತರು ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆʼ ಇವುಗಳು ಮಧ್ಯಮ ಕ್ಷಮತೆಯನ್ನು ತೋರಿದೆ (ಮೌಲ್ಯಾಂಕ 3). ಜೊತೆಗೆ, ಈ ಆಯಾಮಕ್ಕೆ ಸಂಬಂಧಿಸಿದ ಉಳಿದ ಸೂಚ್ಯಂಕಗಳಲ್ಲಿ ಹವಾಮಾನ ಬದಲಾವಣೆಯ ಕುರಿತಾದ ರೈತರ ತಿಳಿವು ಮತ್ತು ಕೃಷಿ ಸಂಪನ್ಮೂಲಗಳ ಮೇಲೆ ಇದರಿಂದಾಗುವ ಪರಿಣಾಮ ಇವು ಕಡಿಮೆ ಮೌಲ್ಯಂಕವನ್ನು ಪಡೆದಿದೆ.

ಕ್ಷೇತ್ರ ಮೌಲ್ಯಮಾಪನವು ರಾಚೂರು ಗ್ರಾಮದ ಸುಸ್ಥಿರ ಪರಿಸರದ ಆಯಾಮಗಳಿಗೆ ಸಹಜ ಕೃಷಿಯು ಹೆಚ್ಚಿನ ಕೊಡುಗೆ ನೀಡಿರುವುದನ್ನು ತೋರುತ್ತದೆ.  ಆರ್ಥಿಕ ಆಯಾಮದ ಮೇಲಿನ ಪರಿಣಾಮವು ಈ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಸಾಲ ಸೌಲಭ್ಯ, ಸರ್ಕಾರಿ ಯೋಜನೆಗಳು, ಅರ್ಹತೆಗಳು ಮತ್ತು ವಿಸ್ತರಣಾ ಸೇವೆಗಳು ಸಂಘಗಳ ಸದಸ್ಯತ್ವದೊಂದಿಗೆ ತಳುಕುಹಾಕಿಕೊಂಡಿದ್ದು ಇವೆಲ್ಲವೂ ಸೂಚ್ಯಂಕಗಳ ಸಕಾರಾತ್ಮಕ ಫಲಿತಾಂಶಕ್ಕೆ ಕಾರಣವಾಗಿದೆ. ಈ ಪ್ರದೇಶದ ಸಣ್ಣಹಿಡುವಳಿಯನ್ನು ಹೊಂದಿರುವ ರೈತರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವಲ್ಲಿ ಧರಣಿ ಸಹಕಾರ ಸಂಘವು ಮಹತ್ವದ ಪಾತ್ರ ವಹಿಸಿದೆ. ಪರಿಸರ ಆಯಾಮಗಳ ಕಾರ್ಯಕ್ಷಮತೆಯ ಶ್ರೇಯ ಸಹಕಾರಿ ಸಂಘಗಳಿಗೆ ಸಲ್ಲಬೇಕು. ಜೀವಾಮೃತ, ಬೀಜಾಮೃತಗಳ ತಯಾರಿಕೆ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಆಧಾರ ಸ್ತಂಭಗಳಾದ ವಾಪಾಸಾ ಮತ್ತು ಬಹು ಬೆಳೆ ಮಾದರಿಗಳಂತಹ ತಂತ್ರಗಳನ್ನು ಕಲಿಯುವ ಮೂಲಕ ಸದಸ್ಯರ ಸಾಮರ್ಥ್ಯ ನಿರ್ಮಾಣವಾಗುವುದರಿಂದ ಪರಿಸರ ಆಯಾಮಗಳಲ್ಲಿನ ಕಾರ್ಯಕ್ಷಮತೆಗೆ ಸಂಘದ ಸದಸ್ಯತ್ವ ಕೂಡ ಕಾರಣವೆಂದು ಹೇಳಬಹುದು.

ಗ್ರಾಮದಲ್ಲಿ ನೈಸರ್ಗಿಕ ಒಳಹರಿಯುವಿಕೆಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ವಿಕೇಂದ್ರೀಕೃತ ಘಟಕವನ್ನು ಹೊಂದಿದೆ. ನೈಸರ್ಗಿಕ ಕೃಷಿ ಪದ್ಧತಿಯ ಉತ್ಪನ್ನಗಳ ಮೌಲ್ಯವರ್ಧನೆ, ಬ್ರ್ಯಾಂಡಿಂಗ್‌ ಮತ್ತು ಮಾರಾಟದಲ್ಲಿ ಧರಣಿ ಸಹಕಾರ ಸಂಘದ ಪಾತ್ರವು ಎಣ್ಣೆ ಕಾಳುಗಳು, ಬೇಳೆ ಕಾಳುಗಳು ಮತ್ತು ಧಾನ್ಯಗಳಿಗೆ ಸೀಮಿತವಾಗಿದೆ. ತೋಟಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರು ಬ್ರ್ಯಾಂಡಿಂಗ್‌ನಿಂದಾಗುವ ಆರ್ಥಿಕ ಪ್ರಯೋಜನಗಳನ್ನು ಅರಿಯುವ ಸವಾಲನ್ನು ಎದುರಿಸುತ್ತಾರೆ. ಸಹಕಾರ ಸಂಘಗಳ ಸದಸ್ಯತ್ವವು ಸಮುದಾಯದಲ್ಲಾಗಲಿ ಅಥವ ಕುಟುಂಬ ಮಟ್ಟದಲ್ಲಾಗಲಿ ಲಿಂಗಾಧಾರಿತ ಪಾತ್ರಗಳಲ್ಲಿ ಬದಲಾವಣೆಯಾಗಿಲ್ಲ ಎನ್ನುವುದು ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.

ಅಧ್ಯಯನವು ಸಹಜ ಕೃಷಿಯ ಸಾಮರ್ಥ್ಯವನ್ನು ಸಮರ್ಥನೀಯ ಕೃಷಿ ಮಾದರಿಯಾಗಿ ಅರಿಯುವ ಪ್ರಯತ್ನವಾಗಿದೆ. ಗಾತ್ರದಲ್ಲಿ ಸಣ್ಣದಾದರೂ ಈ ಮಾದರಿಗಳ ಫಲಿತಾಂಶಗಳ ಅಧ್ಯಯನವು ಪ್ರಸ್ತುತ ಕೃಷಿ ನೀತಿ ಮತ್ತು ಸಂದರ್ಭದಲ್ಲಿ ಪ್ರಸ್ತುತತೆಯನ್ನು ಪಡೆದಿದೆ. ನೀತಿ ಆಯೋಗದ ಇತ್ತೀಚಿನ ಪತ್ರಿಕೆಯಲ್ಲಿ ಕೃಷಿಪರಿಸರ/ನೈಸರ್ಗಿಕ ಕೃಷಿಯನ್ನು ಹೊಸ ಕೃಷಿ ಮಾದರಿ ಎಂದು ಪ್ರಶಂಸಿಸಲಾಗಿದೆ. ಭಾರತ ಸರ್ಕಾರವು ಈಗಾಗಲೇ BPKPಗಾಗಿ ಬಜೆಟ್ ನಿಬಂಧನೆಗಳನ್ನು ಮಾಡುತ್ತಿದೆ. ಸಹಜ ಕೃಷಿಯನ್ನು ಅಂತರ್ಗತ ಕೃಷಿ ಬೆಳವಣಿಗೆಯ ಹೊಸ ಮಾದರಿಯಾಗಿ ಉತ್ತೇಜಿಸಲು ಸಾಂಸ್ಥಿಕ, ಆಡಳಿತ ಮತ್ತು ಮಾರುಕಟ್ಟೆಯ ಅಂಶಗಳ ಮೇಲೆ ಬಹು ಹಂತದ ಕಾರ್ಯತಂತ್ರದ ಮಧ್ಯಸ್ಥಿಕೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.

 ಕೃತಜ್ಞತೆಗಳು

ಸುಸ್ಥಿರತೆಯ ಆಯಾಮಗಳ ಮೇಲಿನ ಸಂಚಿತ ಅಂಕಗಳು ಏಪ್ರಿಲ್ 2022 ರಲ್ಲಿ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸುಸ್ಥಿರ ಕೃಷಿಯ ಕೋರ್ಸ್ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ತಂಡವು ನಡೆಸಿದ ಕ್ಷೇತ್ರ ಮೌಲ್ಯಮಾಪನವನ್ನು ಆಧರಿಸಿವೆ. ಶ್ರೀ ಸತ್ಯಸಾಯಿ ಜಿಲ್ಲೆಯ ರೊದ್ದಾಂ ಬ್ಲಾಕ್ನಲ್ಲಿರುವ ತಿಂಬಕ್ಟು ಸಹಕಾರಿ ಸಂಘ, ಧರಣಿ ಸಹಕಾರಿ ಸಂಘ ಮತ್ತು ರೈತ ಸಮುದಾಯದಿಂದ ಪಡೆದ ಬೆಂಬಲವನ್ನು ಲೇಖಕರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಎಂ. ಮಂಜುಳ, ವಿ. ಮಣಿಕಂಠನ್‌ ಮತ್ತು ದಿವ್ಯ ಶರ್ಮ


 ಪರಾಮರ್ಶನಗಳು

Bharucha, Z. P., Mitjans, S. B., & Pretty, J., Towards redesign at scale through zero budget natural farming in Andhra Pradesh, India, 2020, International Journal of Agricultural Sustainability, 18:1, 1-20

Tripathi, S., Shahidi, T., Nagbhushan,S., & Gupta, N., Zero Budget Natural Farming for the Sustainable Development Goals, Andhra Pradesh, India, 2018, Council on Energy, Environment and Water. New Delhi.

https://srisathyasai.ap.gov.in/document-category/district-profile/


M. Manjula, V. Manikandan and Divya Sharma

Faculty, School of Development, Azim Premji University,

Survey No 66, Burugunte Village, Bikkanahalli Main Road, Sarjapura,

Bangalore, Karnataka – 562125

Email: manjula.m@apu.edu.in 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೩; ಸೆಪ್ಟಂಬರ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...