ಸಾವಯವ ರೀತಿಯಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಾಣ


ಸ್ವಲ್ಪ ನೆರವು ಹಾಗೂ ಮಾರ್ಗದರ್ಶನ ನೀಡಿದರೆ ರೈತರು ಹವಾಮಾನ ಹಾಗೂ ಮಾರುಕಟ್ಟೆಯ ಬದಲಾವಣೆಗಳಿಗೆ ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸಿಕೊಂಡು ತಮ್ಮ ಬದುಕನ್ನು ಬದಲಾಯಿಸಿಕೊಳ್ಳುತ್ತಾರೆ. ಪೀತರ್ಸಬರ್ಎನ್ನುವ ಬುಡಕಟ್ಟು ರೈತ WOTR ನೆರವಿನೊಂದಿಗೆ ತನ್ನ ಕೃಷಿವಿಧಾನವನ್ನು ಬದಲಿಸಿಕೊಂಡು, ಆದಾಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ತನ್ನ ಪ್ರದೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗುತ್ತಾನೆ.


ಪೀತರ್‌ ಸಬರ್‌ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದ ತಾರ್ಗಿಸಿಂಗ್ ಗ್ರಾಮದಲ್ಲಿ ವಾಸವಾಗಿದ್ದಾನೆ. ಅವನೊಬ್ಬ ಸಣ್ಣ ರೈತನಾಗಿದ್ದು ತನ್ನ ಜೀವನಕ್ಕಾಗಿ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಆಧರಿಸಿದ್ದಾನೆ. ಅವನು ತನ್ನ ಹೆಂಡತಿ ಸಂಜನಿತಾ ಸಬರ್‌ಳೊಂದಿಗೆ ವಾಸಿಸುತ್ತಿದ್ದಾನೆ. ಅವನ ಬಳಿ ೭ ಎಕರೆ ಭೂಮಿಯಿದ್ದು ಅದರಲ್ಲಿ ಒಂದು ಎಕರೆಯಲ್ಲಿ ಮಳೆ ಬಂದಾಗ ಖಾರಿಫ್‌ ಬೆಳೆಯನ್ನು ಬೆಳೆಯುತ್ತಾನೆ. ಉಳಿದ ಆರು ಎಕರೆಯಲ್ಲಿ ಹುಲ್ಲುಗಾವಲಿನಂತಹ ಪ್ರದೇಶವಾಗಿದ್ದು ಅದರಲ್ಲಿ ಗೋಡಂಬಿಯ ಕಾಡು ತಳಿಯನ್ನು ಬೆಳೆಯುತ್ತಿದ್ದಾನೆ. ಅದು ಕಡಿಮೆ ಇಳುವರಿಯನ್ನು ಕೊಡುತ್ತದೆ.

ಅವನು ವರ್ಷಕ್ಕೆ ಒಂದು ಬೆಳೆಯನ್ನು ಅಂದರೆ ಖಾರಿಫ್ ಸಮಯದಲ್ಲಿ ಭತ್ತವನ್ನು ಮಾತ್ರ ಬೆಳೆಯುತ್ತಾನೆ. ಚಳಿಗಾಲದಲ್ಲಿ ಭೂಮಿಯನ್ನು ಪಾಳು ಬಿಡುತ್ತಾನೆ. ಬೆಳೆದ ಭತ್ತವನ್ನು ಮನೆ ಬಳಕೆಗೆ ಇಟ್ಟುಕೊಳ್ಳಲಾಗುತ್ತದೆ. ಗೋಡಂಬಿ ಮಾರಾಟ ಮತ್ತು ಕೂಲಿ ಕೆಲಸದಿಂದ ಗಳಿಸಿದ ಹಣದಿಂದ ಮನೆಯ ಉಳಿದ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.

SRI ಭತ್ತದ ಬಯೊಮೆಟ್ರಿಕ್ ದತ್ತಾಂಶ ಸಂಗ್ರಹ

ಗ್ರಾಮದ ಇತರರೊಂದಿಗೆ, ಪಿಟಾರ್ ಸುಮಾರು ನಾಲ್ಕರಿಂದ ಆರು ತಿಂಗಳ ಕಾಲ ಅರುಣಾಚಲ ಪ್ರದೇಶ, ತಮಿಳುನಾಡು ಮತ್ತು ಪುಣೆಯಂತಹ ರಾಜ್ಯಗಳಿಗೆ ಕೂಲಿ ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗುತ್ತಾನೆ.

ಕೈಗೊಂಡ ಉಪಕ್ರಮ

ಆಗಸ್ಟ್ 2018 ರಲ್ಲಿ, WOTR ಬುಡಕಟ್ಟು ಸಮುದಾಯಗಳಿಗೆ ಜೀವನೋಪಾಯದ ಸಾಧ್ಯತೆಗಳನ್ನು ಸುಧಾರಿಸುವ ಮತ್ತು ವಿಸ್ತರಿಸುವ ಗುರಿಯೊಂದಿಗೆ ಗುಣಪುರ್ ಬ್ಲಾಕ್‌ನ 11 ಹಳ್ಳಿಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿತು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಇದನ್ನು ಬ್ರೆಡ್ ಫಾರ್ ದಿ ವರ್ಲ್ಡ್ ಬೆಂಬಲಿಸಿತು.

ಹವಾಮಾನ ಸ್ಥಿತಿಸ್ಥಾಪಕ ಕೃಷಿ ಯೋಜನೆಯಲ್ಲಿ ಅಳವಡಿಸಲಾದ ಘಟಕಗಳಲ್ಲಿ ಒಂದಾಗಿದೆ. ಈ ಘಟಕವು ಹೊಂದಾಣಿಕೆಯ, ಸುಸ್ಥಿರ ಕೃಷಿ ಪದ್ಧತಿಗಳಾದ ಸಿಸ್ಟಂ ಆಫ್ ಕ್ರಾಪ್ ಇಂಟೆನ್ಸಿಫಿಕೇಶನ್ (SCI) ಮತ್ತು ಸುಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸಾವಯವ ಉಪಚಾರ ಕ್ರಮಗಳನ್ನು ಉತ್ತೇಜಿಸುವುದು, ತರಕಾರಿಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವುದು ಮತ್ತು ಕೃಷಿ ಒಳಸುರಿಯುವಿಕೆಗಳ ವೆಚ್ಚವನ್ನು ಕಡಿಮೆ ಮಾಡುವುದು ಈ ಉಪಕ್ರಮದ ಪ್ರಮುಖ ಚಟುವಟಿಕೆಗಳಾಗಿವೆ.

WOTR ಆಯೋಜಿಸಿದ ನಾಲ್ಕು ಕೃಷಿ ತರಬೇತಿಗಳಲ್ಲಿ ಪಿಟಾರ್ ಭಾಗವಹಿಸಿದರು. ಈ ತರಬೇತಿಯು ಬೀಜ ಆಯ್ಕೆಯಿಂದ ಬೆಳೆ ಕೊಯ್ಲು ಮಾಡುವವರೆಗೆ ಸುಧಾರಿತ ಕೃಷಿ ತಂತ್ರಗಳನ್ನು ಒಳಗೊಂಡಿತ್ತು. ಮೊದಲ ತರಬೇತಿಯಲ್ಲಿ, ಬೀಜಗಳನ್ನು ಆಯ್ಕೆ, ಬೀಜ ಸಂಸ್ಕರಣೆ ಮತ್ತು ಸೀಡ್ಬೆಡ್ತಯಾರಿಕೆಯನ್ನು ತೋರಿಸಿದರು. ಎರಡನೇ ತರಬೇತಿಯಲ್ಲಿ, SCI ಕುರಿತು ತಿಳಿಸಲಾಯಿತು. ಗರಿಷ್ಠ ಇಳುವರಿ ಪಡೆಯಲು ಬೆಳೆಗೆ ಅಗತ್ಯವಾದ ಸೂರ್ಯನ ಬೆಳಕು ಮತ್ತು ಇತರ ಪೋಷಕಾಂಶಗಳನ್ನು ಖಚಿತಪಡಿಸಿಕೊಳ್ಳಲು ಲೈನ್ ವಿಧಾನವನ್ನು ಬಳಸಿಕೊಂಡು ಕಸಿ ಮಾಡುವ ಬಗ್ಗೆ ತಿಳಿಸಲಾಯಿತು. ಮೂರನೇ ತರಬೇತಿಯಲ್ಲಿ ಪೌಷ್ಠಿಕಾಂಶ ನಿರ್ವಹಣೆ ಮತ್ತು ದಶಪರ್ಣಿ ಆರ್ಕ್, ಜೀವಾಮೃತ, ನೀಮಾಸ್ತ್ರ ಮುಂತಾದ ಸಾವಯವ ಒಳಸುರಿಯುವಿಕೆಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ನಾಲ್ಕನೇ ತರಬೇತಿಯು ಕಟಾವು ಮತ್ತು ಕೊಯ್ಲಿನ ನಂತರದಲ್ಲಿನ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿದೆ,” ಎಂದು ಪಿಟಾರ್ ಹೇಳುತ್ತಾನೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ಈರುಳ್ಳಿ ಬೆಳೆಯು ಆದಾಯ ತಂದಿತು

ಸ್ಥಿತಿಸ್ಥಾಪಕತ್ವ ನಿರ್ಮಾಣ

ಈ ತರಬೇತಿಯಲ್ಲಿ ಕಲಿಸಲಾದ ಕೆಲವು ಚಟುವಟಿಕೆಗಳನ್ನು ಪಿಟಾರ್ ಉತ್ಸಾಹದಿಂದ ಅನುಸರಿಸಿದ್ದು, ಅದು ಪ್ರಯೋಜನಕಾರಿ ಎಂದು ಸಾಬೀತಾಯಿತು. ವಸುಂಧರಾ ಸೇವಕ್ ಮತ್ತು WOTR ಸಿಬ್ಬಂದಿ ಈ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಳೆ ಋತುವಿನ ಉದ್ದಕ್ಕೂ ಪ್ರತಿ ರೈತನೊಂದಿಗೆ ಇದ್ದರು.

ಎಲ್ಲಾ ಶಿಫಾರಸು ವಿಧಾನಗಳನ್ನು ಅನ್ವಯಿಸಲು ಪ್ರಾತ್ಯಕ್ಷಿಕಾ ಕ್ಷೇತ್ರವನ್ನು  ಹೊಂದಲು WOTR ರೈತರಿಗೆ ಬೆಂಬಲ ನೀಡಿದೆ. ಇದನ್ನು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಅನುಸರಿಸುವ ನಿಯಂತ್ರಿತ ಕ್ಷೇತ್ರದೊಂದಿಗೆ ಹೋಲಿಸಲಾಗುತ್ತದೆ. ಎರಡೂ ಕ್ಷೇತ್ರಗಳ ನಡುವಿನ ವ್ಯತ್ಯಾಸವು ಎದ್ದುಕಾಣುವಂತಿದೆ. WOTR ಸಸ್ಯಗಳ ಬೆಳವಣಿಗೆ, ಪಕ್ವತೆ, ಶಿಖರ ರಚನೆ ಇತ್ಯಾದಿಗಳ ವಿವರವಾದ ದಾಖಲೆಗಳನ್ನು ನಿರ್ವಹಿಸಲು ಸಹಾಯ ಮಾಡಿದೆ. ಇಳುವರಿಯನ್ನು ಹೇಗೆ ಲೆಕ್ಕ ಹಾಕಬೇಕೆಂದು ತೋರಿಸಿದೆ. ವಿವರವಾದ ದಾಖಲೆಯನ್ನು ಇಟ್ಟುಕೊಳ್ಳುವುದರಿಂದ ಬೆಳೆಯ ಪ್ರತಿಯೊಂದು ಹಂತದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ತಿಳಿಯಬಹುದು. ನಿಯಂತ್ರಿತ ಕ್ಷೇತ್ರ ಹಾಗೂ ಪ್ರಾತ್ಯಕ್ಷಿಕಾ ಕ್ಷೇತ್ರದ ದತ್ತಾಂಶವನ್ನು ಹೋಲಿಕೆ ಮಾಡಿ ನೋಡುವುದರಿಂದ ಸಾಂಪ್ರದಾಯಿಕ ವಿಧಾನಗಳಿಗಿಂತ ವಿಧಾನಗಳು ಹೇಗೆ ಪರಿಣಾಮಕಾರಿ ಎನ್ನುವುದನ್ನು ತಿಳಿಯಲು ಸಹಾಯಮಾಡುತ್ತದೆ,” ಎಂದು ಪಿಟಾರ್ ಹೇಳುತ್ತಾನೆ.

ಮಾರ್ಗದರ್ಶನ ಪಡೆದ ನಂತರ ಪಿಟಾರ್‌ ಮೊದಲ ಬಾರಿಗೆ 2019ರಲ್ಲಿ ಟೊಮೆಟೊಗಳನ್ನು ಬೆಳೆದ. ಅವನು ತನ್ನ ಟೊಮೆಟೊ ಬೆಳೆಗೆ ಸ್ಟಾಕಿಂಗ್ ವಿಧಾನವನ್ನು ಬಳಸಿದನು, ಇದರಲ್ಲಿ ಪ್ರತ್ಯೇಕ ಸಸ್ಯಗಳನ್ನು ಕೋಲುಗಳಿಂದ ಬಿಗಿಯಾಗಿ ಕಟ್ಟಲಾಗುತ್ತದೆ. ಈ ವಿಧಾನವು ಗಿಡಗಳು ನೆಲದತ್ತ ಬಾಗದಂತೆ ತಡೆಯುವುದರಿಂದ ಹಣ್ಣುಗಳು ಹಾಳಾಗುವುದು ತಪ್ಪುತ್ತದೆ. ಟೊಮೆಟೊ ಮಾರಾಟದಿಂದ ಅವನು ರೂ. 8,000 ಗಳಿಸಿದ. ಸಾವಯವಾಗಿ ಬೆಳೆದ ಈ ಟೊಮೆಟೊಗಳಿಗೆ ದಶಪರ್ಣಿ ಆರ್ಕಾ, ನೀಮಾಸ್ತ್ರ, ಅಮೃತಪಾನಿ ಬಳಸಿರುವುದರಿಂದ ಇವು ರಾಸಾಯನಿಕ ಮುಕ್ತವಾಗಿದ್ದು ರುಚಿಕರವಾಗಿದೆ.

2020 ರಲ್ಲಿ, ಇಡೀ ಜಿಲ್ಲೆ ಕೋವಿಡ್-19 ರ ಸಾಂಕ್ರಾಮಿಕ ಪರಿಸ್ಥಿತಿಯಿಂದ ತತ್ತರಿಸಿದಾಗ, ಪಿಟಾರ್ ಅವರು ತಮ್ಮ ಹೊಲದಲ್ಲಿ ಬೆಳೆದ ಟೊಮೆಟೊ ಮತ್ತು ಈರುಳ್ಳಿಯಂತಹ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದರು.

ಪಿಟಾರ್ 2020-21 ರ ಖಾರಿಫ್ ಋತುವಿನಲ್ಲಿ ರೈಸ್ ಇಂಟೆನ್ಸಿಫಿಕೇಶನ್ (SRI) ವಿಧಾನವನ್ನು ಅನುಸರಿಸಿದರು. ರಬಿ ಋತುವಿನಲ್ಲಿ ನೀರಾವರಿ ಸಾಕಷ್ಟಿಲ್ಲದಿರುವುದನ್ನು ಗಮನಿಸಿ ಪಿಟಾರ್‌ ಸ್ಪ್ರಿಂಕ್ಲರ್‌ಗಳ ನೆರವಿನಿಂದ ಆ ಕೊರತೆಯನ್ನು ನೀಗಿಸಿಕೊಂಡರು. ಎರಡು ಸಾವಿರ ಕೊಟ್ಟು ಸ್ಪ್ರಿಕ್ಲಂರ್‌ ಸೆಟ್‌ ಹಾಕಿಸಿದರು. ಅದನ್ನು ಬಳಸುವುದು ಹೇಗೆ ಎನ್ನುವುದರ ಕುರಿತು ತರಬೇತಿ ಪಡೆದಿದ್ದರು. ಅಂತಿಮವಾಗಿ ನಿಯಂತ್ರಿತ ಕ್ಷೇತ್ರದಲ್ಲಿ ಎಕರೆಗೆ 1700 ಕೆಜಿ ಹಾಗೂ ಪ್ರಾತ್ಯಕ್ಷಿಕಾ ಕ್ಷೇತ್ರದಲ್ಲಿ 2000 ಕೆಜಿಯಷ್ಟು ಇಳುವರಿ ಪಡೆದರು. ನಿಯಂತ್ರಿತ ಕ್ಷೇತ್ರಕ್ಕಿಂತ 18% ಹೆಚ್ಚುವರಿ ಇಳುವರಿ ಪಡೆದಿದ್ದರು. ನಂತರ ಈರುಳ್ಳಿ, ಟೊಮೆಟೊ ಕೃಷಿ ಆರಂಭಿಸಿ ರೂ.8530 ಲಾಭ ಗಳಿಸಿದರು. ಈ ಹಿಂದೆ ರಬಿ ಋತುವಿನಲ್ಲಿ ಬೆಳೆ ಬೆಳೆಯದ ರೈತ ಈಗ ಆ ಋತುವಿನಲ್ಲೂ ಸರಾಸರಿ ರೂ. 8000 ಆದಾಯ ಗಳಿಸುತ್ತಿದ್ದಾನೆ.

ಎರಡನೇ ಬೆಳೆಯಾಗಿ ಸೂರ್ಯಕಾಂತಿ, ಸಿಹಿ ಜೋಳ ಹಾಗೂ ಮೆಣಸಿನಕಾಯಿ, ಹೂಕೋಸು, ಬದನೆ, ಹಾಗಲಕಾಯಿ, ಸೋರೆಕಾಯಿ, ಈರುಳ್ಳಿ ಮುಂತಾದ ತರಕಾರಿಗಳನ್ನು ಬೆಳೆಯಲು ಪಿಟಾರ್ ಎದುರು ನೋಡುತ್ತಿದ್ದಾರೆ. ನಾನೀಗ ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗುತ್ತಿಲ್ಲ. ಟೊಮೆಟೊ, ಈರುಳ್ಳಿ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತೇನೆ. ಮಹುವ ಬೀಜಗಳನ್ನು ಗೋಡಂಬಿಯನ್ನು ಸಂಗ್ರಹಿಸುತ್ತೇನೆ. ಜೊತೆಗೆ ಹೆಚ್ಚುರಿ ಸಾವಯವ ಮಿಶ್ರಣಗಳನ್ನು ಬೇರೆ ರೈತರಿಗೆ ಮಾರುತ್ತೇನೆ,” ಎಂದು ಪಿಟಾರ್‌ ಹೇಳುತ್ತಾನೆ.

ಪಿಟಾರ್‌ ತಾನು ಕಲಿತದ್ದನ್ನು ಹಂಚಿಕೊಳ್ಳಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಯಾರು ಕಲಿಯಲು ಬಯಸುತ್ತಾರೋ ಅವರಿಗಾಗಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುತ್ತಾನೆ. ಹತ್ತಿರದ ಹಳ್ಳಿಗಳಲ್ಲಿರುವ ತನ್ನ ಪರಿಚಯಸ್ಥರು ಮತ್ತು ಸಂಬಂಧಿಕರಿಗೆ ಸಾವಯವ ಮಿಶ್ರಣಗಳನ್ನು ತಯಾರಿಸುವ ತಂತ್ರವನ್ನು ಕಲಿಸಿದ. ಸಾವಯವ ಮಿಶ್ರಣಗಳ ತಯಾರಿಕೆಗೆ ಬೇಡಿಕೆ ಇರುವುದರಿಂದ WOTR ಪಿಟಾರ್‌ ಸಂಪನ್ಮೂಲ ವ್ಯಕ್ತಿಯಾಗಿ ಉಳಿದವರಿಗೆ ತರಬೇತಿ ನೀಡಲು ನೆರವು ನೀಡಿದೆ. ಪಿಟಾರ್‌ ಉಳಿದ ಬುಡಕಟ್ಟು ಹಳ್ಳಿಗಳಲ್ಲೀಗ ತರಬೇತುದಾರ. ವಲಸಿಗನಿಂದ ತರಬೇತುದಾರನಾದದ್ದು ಪಿಟಾರ್‌ನ ಬಹುದೊಡ್ಡ ಸಾಧನೆ.

ಹರ್ಷಲ್‌ ಖಾಡೆ


 Harshal Khade

Communications Officer

Watershed Organisation Trust (WOTR)

The Forum, 2nd Floor

Pune – Satara Road, Padmavati Corner

above Ranka Jewellers, Pune – 411009

Maharashtra.

E-mail: harshal.khade@wotr.org.in

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ೩ ; ಸೆಪ್ಟಂಬರ್ ೨೦‌೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...