ಸುಸ್ಥಿರ ಕೃಷಿಗಾಗಿ ಸೌರ ಶಕ್ತಿಯ ಮಾದರಿಗಳು


ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದು ಅತ್ಯಗತ್ಯ. ಇದು ಸುಧಾರಿತ ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಖಾತ್ರಿಗೊಳಿಸುತ್ತದೆ. ಹೀಗಿದ್ದೂ, ಪೂರ್ವಾಪೇಕ್ಷಿತ ವಿಶ್ವಾಸಾರ್ಹ ಶಕ್ತಿ ಆಧಾರಿತ ವ್ಯವಸ್ಥೆಯು ನೀರನ್ನು ಸಮಯಕ್ಕೆ ಸರಿಯಾಗಿ ಹೊರತೆಗೆಯಲು ಮತ್ತು ವಿತರಿಸಲು ನೆರವಾಗುತ್ತದೆ. ಸೌರ ಶಕ್ತಿಯ ಮಾದರಿಗಳು ಇದಕ್ಕೆ ಹಾದಿಯಾಗಿವೆ.


ಗ್ರಾಮೀಣ ಪ್ರದೇಶಗಳಲ್ಲಿ ಜಮೀನಿನ ಶಕ್ತಿ ಸಂಪನ್ಮೂಲದ ಅಗತ್ಯಗಳನ್ನು ಸಾರ್ವಜನಿಕ ವಿದ್ಯುತ್‌ಶಕ್ತಿಯ ವಿತರಣಾ ವ್ಯವಸ್ಥೆಯು ಮೂಲಕ ಪೂರೈಸಲಾಗುತ್ತದೆ. ಇದು ವಿವಿಧ ಉಪಕರಣಗಳನ್ನು ಬೆಂಬಲಿಸುತ್ತದೆ. ಅನಿಶ್ಚಿತ ವಿದ್ಯುತ್ ಕಡಿತಗಳು, ಅಪಾಯಕಾರಿ ವಿದ್ಯುತ್‌ ಏರಿಳಿತಗಳಿಂದಾಗಿ ಮೋಟಾರುಗಳು ಸುಟ್ಟುಹೋಗುವ, ಹಾನಿಗೊಳಗಾಗುವಂತಹ ಸವಾಲುಗಳನ್ನು ರೈತರು ಎದುರಿಸುತ್ತಿದ್ದಾರೆ. ಇವು ಹವಾಮಾನ ವೈಪರಿತ್ಯಗಳು ಮತ್ತು ಮಾರುಕಟ್ಟೆಯ ಏರಿಳಿತಗಳ ಜೊತೆಗೆ ಎದುರಾಗುವ ಸಮಸ್ಯೆಗಳಾಗಿವೆ. ಸಾಕಷ್ಟು ಅಂತರ್ಜಲವಿದ್ದರೂ, ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ರೈತರು ತಮ್ಮ ಸಂಪೂರ್ಣ ಭೂಮಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ.

ಈ ಸವಾಲುಗಳನ್ನು ಮಿತಗೊಳಿಸಲು, ಸಸ್ಟೈನ್ ಪ್ಲಸ್, ಸೆಲ್ಕೊ ಮತ್ತು ವಿಲ್ಗ್ರೋ ಫೌಂಡೇಶನ್‌ನ ಬೆಂಬಲದೊಂದಿಗೆ ಕಲಿಕೆ ಲೈವ್ಲಿಹುಡ್ಸ್ ತಂಡವು ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಆಧರಿಸಿದ ಪರಿಕಲ್ಪನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಸಮುದಾಯಗಳ ಉತ್ಸಾಹದಿಂದ ಪ್ರೇರಿತರಾಗಿ ಸೂಕ್ತವಾದ ಭೌಗೋಳಿಕತೆಯ ಬೆಂಬಲದೊಂದಿಗೆ ಟ್ರಸ್ಟ್‌ ಪರ್ಯಾಯ ಸೌರಶಕ್ತಿ ಚಾಲಿತ ಯೋಜನೆಯ ಮಾದರಿಗಳನ್ನು ಜಾರಿಗೆ ತಂದಿತು.

ರೈತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುವುದು ಇದರ ಒಟ್ಟಾರೆ ಉದ್ದೇಶವಾಗಿತ್ತು.

1)  ವಿಶ್ವಾಸಾರ್ಹ ಸೌರ ಮಾದರಿಗಳನ್ನು ಸ್ಥಾಪಿಸುವ ಮೂಲಕ ಬೆಳೆ ವೈವಿಧ್ಯತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನೀರಿನ ಪೂರೈಕೆಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.

2) ಉತ್ತಮ ಮೇವನ್ನು ಪಡೆಯಲು ಸೌರಚಾಲಿತ ಹೈಡ್ರೋಫೋನಿಕ್ಸ್‌ ಮತ್ತು ಬೆಳೆಗಳಿಗೆ ಸುಧಾರಿತ ಪೋಷಕಾಂಶ ನಿರ್ವಹಣೆಗಾಗಿ ಪಂಚಗವ್ಯ ಘಟಕಗಳಂತಹ ಹೊಸ ಉದ್ಯಮಗಳ ಅಭಿವೃದ್ಧಿಯನ್ನು ಅನ್ವೇಷಿಸುವುದು.

3) ರೈತ ರೈತರ ನಡುವೆ ಸಾಮುದಾಯಿಕ ಲಾಭ ಹಂಚಿಕೆ ಕಾರ್ಯವಿಧಾನಗಳನ್ನು ಉತ್ತೇಜಿಸುವುದು.

4) ಬ್ಯಾಂಕಿನಿಂದ ಸಾಲ ಪಡೆದು ಸ್ವಲ್ಪ ಮಟ್ಟಿಗಿನ ಹಣಕಾಸು ನೆರವಿನೊಂದಿಗೆ ಮುಖ್ಯ ರೈತ ಮಾದರಿಯನ್ನು ಸ್ಥಾಪಿಸಿಕೊಳ್ಳುವಂತೆ ಮಾಡುವುದು.

ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ.

  1. ನೀರಿನ ಸಮರ್ಥ ಬಳಕೆಗಾಗಿ ಮತ್ತು ಆದಾಯವನ್ನು ಹೆಚ್ಚಿಸುವುದಕ್ಕಾಗಿ ಸಮುದಾಯ ಸೌರ ನೀರಾವರಿ ಮಾದರಿ (CSIM 5 HP ಮಾದರಿ)

ಸೋಲಾರ್ ಪಂಪ್ ಅಳವಡಿಕೆ, ಬೆಳೆಗಳ ಮಲ್ಟಿ ಲೇಯರಿಂಗ್, ಮಣ್ಣು ಮತ್ತು ನೀರಿನ ಸಂರಕ್ಷಣೆ ಅಭ್ಯಾಸಗಳು ಮತ್ತು ಸರ್ಕಾರಿ ಇಲಾಖೆಗಳೊಂದಿಗೆ ಹೊಂದಾಣಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ಈ ಮಾದರಿಯನ್ನು ಸಮಗ್ರವಾಗಿ ಯೋಜಿಸಿ ಕಾರ್ಯಗತಗೊಳಿಸಲಾಗಿದೆ.

ಸಮಯಕ್ಕೆ ಸರಿಯಾಗಿ ನೀರಾವರಿಯನ್ನು ಒದಗಿಸುವುದು ಮತ್ತು ನೀರಾವರಿ ಪ್ರದೇಶವನ್ನು ವಿಸ್ತರಿಸಲು ಸೋಲಾರ್‌ ಪಂಪುಗಳನ್ನು ಅಳವಡಿಸುವುದು ಮೊದಲ ಕ್ರಮವಾಗಿತ್ತು. ಕ್ರಮೇಣ, ರೈತರ ಆದಾಯವನ್ನು ಹೆಚ್ಚಿಸಲು ಒಂದೇ ಕ್ಷೇತ್ರದಲ್ಲಿ ಬಹು ಬೆಳೆಗಳನ್ನು ಪರಿಚಯಿಸುವ ಮೂಲಕ ಮಲ್ಟಿ ಕ್ರಾಪ್‌ ಲೇಯರಿಂಗ್‌ ಅಳವಡಿಸಿಕೊಳ್ಳಲು ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಯಿತು. ಅದರೊಂದಿಗೆ, ಸೂಕ್ಷ್ಮ(ಮೈಕ್ರೋ) ನೀರಾವರಿ ವ್ಯವಸ್ಥೆಗಳ ಅಳವಡಿಕೆ ಮತ್ತು ಸೂಕ್ತವಾದ NRM ಕ್ರಮಗಳ ಮೂಲಕ ಮಣ್ಣು ಮತ್ತು ನೀರಿನ ಸಂರಕ್ಷಣೆ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಮಾರ್ಗದರ್ಶನ ನೀಡಲಾಯಿತು. ಹೆಚ್ಚು ನೀರಿನ ಅಗತ್ಯವಿರುವ ಬೆಳೆಗಳನ್ನು ಬೆಳೆಯುವುದನ್ನು ತಪ್ಪಿಸಲಾಯಿತು. ಸೌರಶಕ್ತಿ ಅನ್ವಯಕ್ಕೆ ಆದ್ಯತೆಯ ಆಧಾರದ ಮೇಲೆ ಸೂಕ್ತ ಸರ್ಕಾರಿ ಯೋಜನೆಗಳು/ಸೌಲಭ್ಯಗಳನ್ನು ಸರ್ಕಾರಿ ಇಲಾಖೆಗಳಿಂದ ಪಡೆಯಲು ರೈತರಿಗೆ ಸಂಪರ್ಕ ಕಲ್ಪಿಸಲಾಯಿತು.

8-10 ಎಕರೆ ಭೂಮಿಗೆ ಸಾಕಾಗುವಂತೆ 4 ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಮುದಾಯ ಆಧಾರಿತ ಮಾದರಿಯನ್ನು ರೂಪಿಸಲಾಗಿದೆ. ಸೋಲಾರ್ ಪಂಪ್ ಅಳವಡಿಸಿಕೊಂಡ ರೈತನನ್ನು ಮುಖ್ಯ ರೈತ(ಲೀಡ್ ಫಾರ್ಮರ್) ಎಂದು ಕರೆಯಲಾಗುತ್ತದೆ. ಅವನು 3 ಸಹ ರೈತರಿಗೆ ಕಡ್ಡಾಯವಾಗಿ ನೀರು ಒದಗಿಸಬೇಕು. ನೀರಿನ ಸೇವೆಯು ಮುಖ್ಯ ಹಾಗೂ ಸಹ ರೈತರ ನಡುವಿನ ಆಂತರಿಕ ಬದ್ಧತೆಯನ್ನು ಆಧರಿಸಿದೆ. ಈ ಸೇವೆಗೆ ಪರಸ್ಪರರ ಒಡಂಬಡಿಕೆಯಂತೆ ಹಣದ ಮೂಲಕ ಇಲ್ಲವೇ ವಸ್ತುಗಳನ್ನು (ಬೆಳೆಯನ್ನು ಹಂಚಿಕೊಳ್ಳುವುದು) ಹಂಚಿಕೊಳ್ಳುವ ಮೂಲಕ ಪಾವತಿಸಬಹುದು. ಇದು ರೈತನಿಗೆ ಸೋಲಾರ್‌ ಪಂಪ್‌ನ ಸಾಲವನ್ನು ತೀರಿಸಲು ಸಹಾಯಮಾಡುತ್ತದೆ.

ಇಂಜಿನಿಯರ್‌ಗಳು/ವೃತ್ತಿಪರರು ಮಾಡಿದ ಹಳ್ಳಿಯ ಜಲಮೂಲ/ಜಲಕುಹರಗಳ ಮ್ಯಾಪಿಂಗ್‌ನ ಫಲಿತಾಂಶಗಳ ಆಧಾರದ ಮೇಲೆ ಪ್ರತಿ ಸೌರ ಪಂಪನ್ನು ರೂಪಿಸಲಾಗುತ್ತದೆ. ಅಕ್ಟೋಬರ್ 2020 ರಲ್ಲಿ, ಪ್ರಾಯೋಗಿಕ ಆಧಾರದ ಮೇಲೆ, 3 HP ಪಂಪ್‌ನೊಂದಿಗೆ ಸಮುದಾಯ ಸೌರ ನೀರಾವರಿ ಮಾದರಿಯನ್ನು ಸ್ಥಾಪಿಸಲಾಯಿತು. ಪಂಪ್ ಅನ್ನು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಕನಿಷ್ಠ ತಾಪಮಾನ 21 ° C ನೊಂದಿಗೆ ನಿರ್ವಹಿಸಬಹುದು. ಹನಿ ನೀರಾವರಿ ಮತ್ತು ತುಂತುರು ನೀರಾವರಿಗಳಿಗೆ ಈ ಪಂಪ್‌ ಸಾಕಾಗುತ್ತದೆ.

ಯಾದಗಿರಿ ಜಿಲ್ಲೆಯ ಯಾದಗಿರಿ, ಗುರ್ಮಿಟ್ಕಲ್ ಮತ್ತು ವಡಿಗೇರಾ ಬ್ಲಾಕ್‌ಗಳಲ್ಲಿ ಒಟ್ಟು 125 ಸಿಎಸ್‌ಐಎಂ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಅನುಸ್ಥಾಪನ ವೆಚ್ಚ ಪ್ರತಿ ಯೂನಿಟ್‌ಗೆ ರೂ. 3,60,000, ಇದರಲ್ಲಿ ಯೋಜನೆಯ ಕೊಡುಗೆ ರೂ.1,49,000. ರೈತರು ರೂ. 36,000 ಕೊಡುಗೆ ನೀಡಿದರೆ ಉಳಿದದ್ದನ್ನು ಸಾಲವಾಗಿ ಬ್ಯಾಂಕ್‌ ರೂ. 1,75,000 ನೀಡಿದೆ. ಸಾಲವನ್ನು 5 ವರ್ಷಗಳ ಅವಧಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ರೂ.  24,000ದಂತೆ ಹತ್ತು ಕಂತುಗಳಲ್ಲಿ ಮರುಪಾವತಿಸಬೇಕು. ಸುಕೊ ಬ್ಯಾಂಕು ಮತ್ತು ಎಸ್‌ಬಿಐ ಹೀಗೆ ಹಲವು ಪಾಲುದಾರರ ಮೂಲಕ ಸಸ್ಟೈನ್‌ ಪ್ಲಸ್‌ ಫೌಂಡೇಶನ್‌ ಹಣಕಾಸಿನ ನೆರವನ್ನು ಒದಗಿಸಿತು. ಮಾರಾಟದ ನಂತರ ಸೇವೆಗಳನ್ನು 5 ವರ್ಷಗಳವರೆಗೆ ಖಾತ್ರಿಯಾಗಿ ಒದಗಿಸಲಾಗುತ್ತದೆ. ಇದು 48 ಗಂಟೆಗಳ ಒಳಗೆ ಉಂಟಾಗುವ ಸಣ್ಣ/ದೊಡ್ಡ ರಿಪೇರಿಗಳನ್ನು ಒಳಗೊಂಡಂತೆ ವಿಮಾ ರಕ್ಷಣೆಯ ಅವಧಿಯೊಳಗೆ ಯಾವುದೇ ಭಾಗಕ್ಕೆ ಹಾನಿಯಾದಲ್ಲಿ ಅದನ್ನು ಬದಲಿಸಿ ಕೊಡಲಾಗುತ್ತದೆ. ಈ ಸೇವೆಯನ್ನು ಬೆಂಗಳೂರಿನ ಕದಮ್ ಅಗ್ರಿ. ಪ್ರೈವೇಟ್ ಲಿಮಿಟೆಡ್‌ನವರು ಒದಗಿಸಿದ್ದಾರೆ.

ಮುಖ್ಯ ರೈತರು

ವೈವಿಧ್ಯಮಯ ಬೆಳೆಗಳಿಗೆ ನೀರುಣಿಸುವ ಜೊತೆಗೆ, ಮುಖ್ಯ ರೈತರು ಸಹವರ್ತಿ ರೈತರಿಗೆ ವರ್ಷದಲ್ಲಿ ಕನಿಷ್ಠ ಎರಡು ಬೆಳೆಗಳಿಗೆ  ಪಾವತಿ ಆಧಾರದ ಮೇಲೆ “ನೀರಿನ ಸೇವೆಯನ್ನು” ಒದಗಿಸುತ್ತಾರೆ. ಇದನ್ನು ಬ್ಯಾಂಕ್ ಕಂತುಗಳ ಮರುಪಾವತಿಗೆ ಬಳಸಿಕೊಳ್ಳಲಾಗುತ್ತದೆ.

ಸಹ ರೈತರು

ವರ್ಷವಿಡೀ ನೀರು ಸಿಗುವುದರಿಂದ, ಸಹ ರೈತರು ತಮ್ಮ ಸಂಪೂರ್ಣ ಪ್ರದೇಶವನ್ನು ವೃತ್ತಿಪರರ ತಾಂತ್ರಿಕ ಬೆಂಬಲದೊಂದಿಗೆ ವಿವಿಧ ಬೆಳೆಗಳನ್ನು ಬೆಳೆಸುತ್ತಾರೆ.

ಉತ್ತಮ ತಾಂತ್ರಿಕ ವಿಶೇಷತೆಗಳಿಂದ ಬೆಂಬಲಿತವಾದ ಮಾದರಿಯನ್ನು (ಚೌಕ 1 ನೋಡಿ) ನೀರಾವರಿ ಅಗತ್ಯತೆಗಳು ಮತ್ತು ಹೂಡಿಕೆ ಮಾಡುವ ಇಚ್ಛೆಯ ಆಧಾರದ ಮೇಲೆ ಮುಖ್ಯ ರೈತರ ಜಮೀನಿನಲ್ಲಿ ಸ್ಥಾಪಿಸಲಾಗುತ್ತದೆ. ನೀರಿನ ಹಂಚಿಕೆಗಾಗಿ ಗುಂಪಿನಲ್ಲಿ ಆಯ್ಕೆ ಮಾಡಲಾಗುವ ರೈತರ ಜಮೀನು ನೀರಿನ ಪಂಪ್‌ ಪಕ್ಕದಲ್ಲಿರಬೇಕು ಅಥವಾ ಪಂಪ್‌ ನೀರನ್ನು ಒದಗಿಸಬಹುದಾದ ಪ್ರದೇಶದ ಮಿತಿಯೊಳಗೆ ಇರಬೇಕು. ಗುಂಪಿನಲ್ಲೇ ನಿರ್ದೇಶನಗೊಂಡ ನಿರ್ವಾಹಕರೊಬ್ಬರು ವಿವಿಧ ಸದಸ್ಯರ ಸೌರ ಪಂಪ್‌ನ ಬಳಕೆಯನ್ನು ದಾಖಲಿಸಿಕೊಂಡು ಸದಸ್ಯರಿಗೆ ವಿತರಿಸಿದ ನೀರಿನ ಪ್ರಮಾಣವನ್ನು ಆಧರಿಸಿ ಸೇವಾ ಶುಲ್ಕವನ್ನು ವಿಧಿಸುತ್ತಾರೆ.

ಚೌಕ 2: ಸ್ಪೂರ್ತಿದಾಯಕ ಪ್ರಕರಣಗಳು

ಯಾದಗಿರಿಯ ಬೆಳಗೇರಾ ಗ್ರಾಮ ವೆಂಕಟೇಶ ರಾಯಪ್ಪ ದಶಕಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 6 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರು ಹೆಸರುಕಾಳು, ನೆಲಗಡಲೆ, ಭತ್ತ ಮತ್ತು ಸೊಪ್ಪನ್ನು ಬೆಳೆಯುತ್ತಾರೆ. ಟಾಟಾ ಟ್ರಸ್ಟ್‌ನ ಕಲಿಕೆ ನಡೆಸಿದ ತರಬೇತಿಯಲ್ಲಿ ಭಾಗವಹಿಸಿದ ನಂತರ, ಅವರು ಸೋಲಾರ್ ಪಂಪ್ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಯೋಜನೆಯ ಕ್ಷೇತ್ರ ಸಮನ್ವಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೃಷಿಯ ವಿವಿಧ ತಂತ್ರಗಳನ್ನು ಕಲಿತರು. ವೆಂಕಟೇಶ ರಾಯಪ್ಪ ಈ ರೀತಿಯ ಪ್ರಯತ್ನ ಮಾಡಿದವರಲ್ಲಿ ಮೊದಲಿಗರು. ಸೋಲಾರ್ ಪಂಪ್‌ ಅನ್ನು 6-7 ಗಂಟೆಗಳ ಕಾಲ ಚಾಲೂ ಮಾಡಲಾಗುತ್ತದೆ. ಇದರ ಮೂಲಕ ಪ್ರತಿದಿನ ನೀರನ್ನು ಅವರ (ಆರು ಎಕರೆ) ಮತ್ತು ಇತರ ರೈತರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸೋಲಾರ್‌ ಪಂಪ್‌ ಹಾಕಿಸಿಕೊಂಡ ಬಳಿಕ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ʼಬೆಳೆಗಳಿಗೆ ಸೂಕ್ತ ಸಮಯದಲ್ಲಿ ನೀರುಣಿಸಿದ್ದರಿಂದ ಇಳುವರಿಯು 30-40% ಹೆಚ್ಚಿತುʼ ಎಂದು ಅವರು ಹೇಳುತ್ತಾರೆ. ಸಹ ರೈತರ 7 ಎಕರೆ ಭೂಮಿಗೆ ನೀರನ್ನು ಹಂಚುವ ಮೂಲಕ ಎಕರೆಯೊಂದಕ್ಕೆ ರೂ. 6,500 ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

ರಾಮಲಿಂಗಪ್ಪ ಎಂಟು ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರು 5hp ಮೋಟಾರ್‌ ಇರುವ ಕೊಳವೆಬಾವಿಯನ್ನು ಹೊಂದಿದ್ದಾರೆ. ಇದನ್ನು ಹಾಕಿಸಿಕೊಳ್ಳುವುದಕ್ಕೆ ಮೊದಲು ಅವರು ಖಾರಿಫ್‌ ಮತ್ತು ರಾಬಿ ಋತುಗಳಲ್ಲಿ ನೆಲಗಡಲೆ ಮತ್ತು ಹತ್ತಿಯನ್ನು ಬೆಳೆಯುತ್ತಿದ್ದರು. ನಿಯಮಿತ ವಿದ್ಯುತ್‌ ಕಡಿತ ಮತ್ತು ಏರಿಳಿತಗಳಿಂದಾಗಿ ಮೋಟಾರ್‌ ಹಾಳಾಗುತ್ತಿತ್ತು. ಸೋಲಾರ್‌ ಪಂಪ್‌ಗಳಿಂದಾಗಿ ವೈವಿಧ್ಯಮಯ ಬೆಳೆಯನ್ನು ಬೆಳೆಯುತ್ತಿದ್ದು ಅವಶ್ಯಕತೆಯಿದ್ದಾಗ ಬೆಳೆಗಳಿಗೆ ನೀರನ್ನು ಒದಗಿಸುತ್ತಿದ್ದಾರೆ. ಅವರು ಸೊಪ್ಪು, ಈರುಳ್ಳಿ, ಮೂಲಂಗಿ, ಮೆಣಸಿನ ಕಾಯಿ, ಬೆಂಡೆಕಾಯಿ, ಹೀರೆಕಾಯಿ ಮತ್ತು ಕಲ್ಲಂಗಡಿ ಬೆಳೆಯಲಾರಂಭಿಸಿದ್ದಾರೆ. ಮನೆ ಬಳಕೆಗಾಗಿ ಖಾರಿಫ್‌ ಋತುವಿನಲ್ಲಿ ಸಾವಯವ ಭತ್ತವನ್ನು ಬೆಳೆಯುತ್ತಿದ್ದಾರೆ. ಸೋಲಾರ್‌ ಪಂಪ್‌ ಅಳವಡಿಕೆಗೆ ಮುನ್ನ ಅವರ ವಾರ್ಷಿಕ ಆದಾಯ ರೂ. 3,00,000ದಷ್ಟಿತ್ತು. ಈಗ ಈ ವ್ಯವಸ್ಥೆಯೊಂದಿಗೆ ಅವರು ಸುಮಾರು ಆರು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಸಹ ರೈತರೊಂದಿಗೆ ನೀರನ್ನು ಹಂಚಿಕೊಳ್ಳುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ. ತಮ್ಮ 8 ಎಕರೆ ಮತ್ತು ಇತರ ರೈತರ 4 ಭೂಮಿಗೆ ನೀರನ್ನು ಒದಗಿಸುತ್ತಿದ್ದಾರೆ.

ಯಾದಗಿರಿ ತಾಲೂಕಿನ ಬಾಳಿಚಕ್ರ ಗ್ರಾಮದ ಈರಪ್ಪ ಭೀಮಣ್ಣ ಮೂರು ದಶಕಗಳಿಂದ ಬೇಸಾಯ ಮಾಡುತ್ತಿದ್ದರು, 6 ಎಕರೆ ಜಮೀನು ಹೊಂದಿದ್ದಾರೆ. ಸೋಲಾರ್ ಅಳವಡಿಕೆಯ ನಂತರ, ಡಿಸೆಂಬರ್ 2020 ರಲ್ಲಿ, ಅವರು ತೋಟಗಾರಿಕೆ ಬೆಳೆಗಳನ್ನು ಅಂದರೆ ಮೆಣಸಿನಕಾಯಿ, ಬದನೆ, ಟೊಮೆಟೊ, ಕಲ್ಲಂಗಡಿ ಇತ್ಯಾದಿಗಳನ್ನು ಬೆಳೆಯಲು ಪ್ರಾರಂಭಿಸಿದರು, “ಸುಲಭವಾದ ವಿದ್ಯುತ್‌ ನಿರ್ವಹಣೆ, ನಿರಂತರ ವಿದ್ಯುತ್‌ ಪೂರೈಕೆಗಳಿಂದಾಗಿ ತೋಟದಲ್ಲಿ ಸೋಲಾರ್‌ ಚಾಲಿತ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರಿಂದ 100% ತೃಪ್ತನಾಗಿದ್ದೇನೆ,” ಎಂದು ಈರಪ್ಪ ಹೇಳುತ್ತಾರೆ. ಬೇಸಿಗೆಯಲ್ಲಿ ಅವರು 4.6 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು, 1.4 ಲಕ್ಷ ರೂಪಾಯಿ ಆದಾಯ ಗಳಿಸಿದರು. 0.6 ಎಕರೆ ಜಮೀನಿನಲ್ಲಿ ಸೌತೆಕಾಯಿ ಮತ್ತು ಬೆಂಡೆಕಾಯಿ ಬೆಳೆದು ರೂ. 25,000 ನಿವ್ವಳ ಲಾಭ ಗಳಿಸಿದ್ದಾರೆ. ರಾಬಿಯಲ್ಲಿ ಮೆಣಸಿನಕಾಯಿ ಬೆಳೆದು ರೂ. 45,000 ಮತ್ತು ಈರುಳ್ಳಿಯಿಂದ ರೂ. 25,000 ಆದಾಯ ಗಳಿಸಿದರು. ತೋಟಗಾರಿಕೆ ಇಲಾಖೆಯ ನೆರವಿನಿಂದ ಅವರ ಜಮೀನಿನಲ್ಲಿ ಆರು ಸೋಲಾರ್‌ ಪಂಪ್‌ಗಳನ್ನು ಅಳವಡಿಸಲಾಯಿತು. ಅವರು ತಮ್ಮ ಜಮೀನಿನಲ್ಲಿ ಕೀಟ ಬಲೆಗಳನ್ನು ಸ್ಥಾಪಿಸಿದರು. ಕೀಟನಾಶಕಗಳನ್ನು ಬಳಸದೆ ನೈಸರ್ಗಿಕವಾಗಿ ಕೀಟನಿಯಂತ್ರಣ ಮಾಡಲಾಗಿದೆ. ನೀರನ್ನು ಮೂವರು ರೈತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.  ಒಪ್ಪಂದದ ಪ್ರಕಾರ, ಆ ರೈತರು ಬೆಳೆಗಳ ಮಾರಾಟದಿಂದ ಬರುವ ಹಣದಲ್ಲಿ ಕಾಲುಭಾಗವನ್ನು ನೀರು ಹಂಚಿಕೊಂಡದ್ದಕ್ಕೆ ಪ್ರತಿಯಾಗಿ ನೀಡುತ್ತಿದ್ದಾರೆ.

ದಿನವೂ ತಾಂತ್ರಿಕ ಹಾಗೂ ಇನ್ನಿತರ ನೆರವನ್ನು ನೀಡುವ ಮೂಲಕ ಕಲಿಕೆ – ಟಾಟಾ ಟ್ರಸ್ಟ್‌ ಸದಾ ಜೊತೆಯಲ್ಲಿರುತ್ತದೆ. ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ವೈವಿಧ್ಯಮಯ ಬೆಳೆಗಳ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಲು ರೈತರಿಗೆ ಅನುವು ಮಾಡಿಕೊಡಲು, ಯೋಜನಾ ತಂಡವು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯಗಳು, KVK ಗಳು ಮತ್ತು ಇತರ ಪ್ರಧಾನ ಸಂಸ್ಥೆಗಳೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಸಮಯಕ್ಕೆ ಸರಿಯಾಗಿ ಒಳಸುರಿಯುವಿಕೆಗಳ ಪೂರೈಕೆ ಮತ್ತು ಸೇವೆಗಳನ್ನು ಒದಗಿಸಲು ಸಂಬಂಧಿತ ಇಲಾಖೆಗಳೊಂದಿಗೆ ಸಂಪರ್ಕವನ್ನು ಏರ್ಪಡಿಸಲಾಯಿತು.

ನೀರಾವರಿ ಪೂರೈಕೆಯೊಂದಿಗೆ ಬೇಸಾಯದ ಭೂಮಿಯು ವಿಸ್ತರಣೆಯಾಗಿ ರೈತರ ಆದಾಯ ಸುಧಾರಿಸಿರುವುದನ್ನು ಗಮನಿಸಲಾಯಿತು. ಸೋಲಾರ್ ಮಾದರಿಯನ್ನು ಅಳವಡಿಸಿಕೊಂಡ ಮುಖ್ಯ ರೈತರಲ್ಲದೆ, ಸಹ ರೈತರು ನೀರಾವರಿ ನೆರವಿನೊಂದಿಗೆ ಬಹು ಬೆಳೆಯಿಂದ ಪ್ರಯೋಜನ ಪಡೆದಿದ್ದಾರೆ (ಚೌಕ 2 ನೋಡಿ).

2) ಹಸಿರು ಮೇವು ಬೆಳೆಸಲು ಸೌರಶಕ್ತಿ ಚಾಲಿತ ಹೈಡ್ರೋಪೋನಿಕ್ ಘಟಕ

ಗ್ರಾಮೀಣ ಸಮುದಾಯಗಳಲ್ಲಿ, ಮೇಕೆಗಳು, ಎಮ್ಮೆಗಳು, ಹಸುಗಳು, ಎತ್ತುಗಳು ಇತ್ಯಾದಿ ಜಾನುವಾರುಗಳಿಗೆ ಸೂಕ್ತವಾದ ಮತ್ತು ಸಾಕಷ್ಟು ಮೇವನ್ನು ಪಡೆಯಲು ರೈತರು ಸಾಕಷ್ಟು ಕಷ್ಟಪಡುತ್ತಾರೆ. ಸಿರೋಹಿ ತಳಿಗಳ ವಿಷಯದಲ್ಲಿ ಗಂಭೀರವಾದ ಮೇವಿನ ಕೊರತೆಯನ್ನು ಎದುರಿಸಲಾಯಿತು. ಅವುಗಳನ್ನು ಸಲಹಲು ಹೆಚ್ಚು ಬೆಲೆಯ ಮೇವನ್ನು ಖರೀದಿಸಿ ಹೆಚ್ಚುವರಿ ವೆಚ್ಚದಲ್ಲಿ ಸಾಗಾಣಿಕೆ ಮಾಡಲಾಯಿತು.

ಈ ಸಮಸ್ಯೆಯನ್ನು ಪರಿಹರಿಸಲು ವಡಿಗೇರ ಯಾದಗಿರಿಯ ಗೊಂಡೆನೂರ ಮತ್ತು ಜೋಳದಡಗಿ ಗ್ರಾಮಗಳಲ್ಲಿ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಯಿತು. 15 ವರ್ಷಕ್ಕೂ ಹೆಚ್ಚು ಕಾಲ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪಿಡ್ಡಪ್ಪ ಹಾಗೂ ರಾಜಶೇಖರ್ ಪಾಟೀಲ್ ಅವರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಾಯೋಗಿಕ ಯೋಜನೆಯು ಸಾಕಣೆ ಮತ್ತು ಸಂತಾನೋತ್ಪತ್ತಿಗಾಗಿ ಐದು ಸಿರೋಹಿ ತಳಿಯ ಮೇಕೆಗಳೊಂದಿಗೆ ಸೌರ ಫಲಕ ಚಾಲಿತ ಹೈಡ್ರೋಪೋನಿಕ್ ವ್ಯವಸ್ಥೆಯನ್ನು ಒಳಗೊಂಡಿತ್ತು. ಇದು ಸಮರ್ಥವಾದ ಶಕ್ತಿ ಮೂಲವನ್ನು ಹೊಂದಿದೆ. ಕಡಿಮೆ – ಮಣ್ಣು ಕೃಷಿ ತಂತ್ರವನ್ನು ಆಧರಿಸಿದ, ಈ ಘಟಕಕ್ಕೆ ಕನಿಷ್ಠ ಪ್ರಮಾಣದ ನೀರು ಬೇಕಾಗುತ್ತದೆ. ಇದು ಸೌರಶಕ್ತಿಯನ್ನು ಆಧರಿಸಿದ್ದು ವಿದ್ಯುತ್‌ ಅಭಾವವಿರುವ ಪ್ರದೇಶಗಳಿಗೆ ಸೂಕ್ತವಾಗಿದೆ. ಉತ್ಪನ್ನದ ವೈಶಿಷ್ಟ್ಯವೆಂದರೆ ಅದರ ವಿನ್ಯಾಸ ಮತ್ತು ಮೇವು ಉತ್ಪಾದನೆಗೆ ತೆಗೆದುಕೊಳ್ಳುವ ಸಮಯ. ಭವಿಷ್ಯದಲ್ಲಿ ಮೇವಿನ ಮಾರಾಟವನ್ನು ಉದ್ಯಮವಾಗಿ ಕೂಡ ಪರಿಗಣಿಸಬಹುದು. ಇದು ಹೈಡ್ರೋಫೋನಿಕ್‌ ರೈತರಿಗೆ ಹೆಚ್ಚುವರಿ ಆದಾಯವನ್ನು ಒದಗಿಸುತ್ತದೆ. ಇದನ್ನು ಅಣಬೆ ಬೇಸಾಯಕ್ಕೂ ಬಳಸಬಹುದು.

ಸೌರಶಕ್ತಿ ಹುದುಗುವ ಘಟಕ: ಪಂಚಗವ್ಯ ಮತ್ತು ಜೀವಾಮೃತದ ಬೃಹತ್ ಉತ್ಪಾದನೆ

ಪಂಚಗವ್ಯ ಮತ್ತು ಜೀವಾಮೃತವನ್ನು ತಯಾರಿಕೆಗೆ ಸೌರಶಕ್ತಿ ಚಾಲಿತ ಹುದುಗುವ ಘಟಕವು ಯೋಜನೆಯಿಂದ ಪ್ರಯೋಗಿಸಲ್ಪಟ್ಟ ಮತ್ತೊಂದು ಮಾದರಿಯಾಗಿದೆ.

ಹಸಿರು ಕ್ರಾಂತಿ ನಡೆದಂದಿನಿಂದ, ಹೆಚ್ಚಿನ ಕೃಷಿ ವೆಚ್ಚ ಮತ್ತು ಕೀಟನಾಶಕ ಮುಕ್ತ ಆಹಾರ ಉತ್ಪಾದನೆಯು ರೈತರಿಗೆ ಸವಾಲಾಗಿದೆ. 80%ಗಿಂತ ಹೆಚ್ಚು ರೈತರು ಸಣ್ಣಭೂಮಿಯನ್ನು ಹೊಂದಿರುವಂತಹ ಯಾದಗಿರಿಯಂತಹ ಪ್ರದೇಶದಲ್ಲಿ ಿದು ಇನ್ನೂ ಕಷ್ಟ. ಸಣ್ಣ ಭೂಮಿಯಲ್ಲಿ ರೈತರು ತರಕಾರಿಗಳನ್ನು ಮತ್ತು ಹೆಚ್ಚು ಬೆಲೆಯ ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿಯನ್ನು ಬೆಳೆಯುತ್ತಾರೆ. ಇದು ಹೆಚ್ಚು ವೆಚ್ಚದ ಒಳಸುರಿಯುವಿಕೆಗಳನ್ನು ಬೇಡುತ್ತದೆ.

ಪಂಚಗವ್ಯ ಮತ್ತು ಜೀವಾಮೃತದಂತಹ ದ್ರವರೂಪದ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸೌರಶಕ್ತಿ ಚಾಲಿತ ಹುದುಗುವಿಕೆಯನ್ನು ಪರಿಚಯಿಸಲಾಗಿದೆ. ಸೌರಶಕ್ತಿ ಚಾಲಿತ ಸ್ಟಿರರ್ ಯಂತ್ರವನ್ನು ಡ್ರಮ್‌ನಲ್ಲಿ ಇರಿಸಲಾಗಿದೆ. ಈ ಯಂತ್ರವು ಸೋಲಾರ್‌ ಚಾರ್ಜ್‌ ಬ್ಯಾಟರಿಗಳಿಂದ ಗಂಟೆಗೊಮ್ಮೆ ಕಾರ್ಯನಿರ್ವಹಿಸುತ್ತದೆ. ದಿನವೊಂದಕ್ಕೆ ಆರು ಬಾರಿ ಇದನ್ನು ಮಾಡಲಾಗುತ್ತದೆ.  ಈ ಪ್ರಕ್ರಿಯೆಯನ್ನು ಹತ್ತು ದಿನಗಳವರೆಗೆ ಮುಂದುವರೆಸಲಾಗುತ್ತದೆ. ಹತ್ತು ದಿನಗಳ ನಂತರ ಹುದುಗಿಸಿದ ಪದಾರ್ಥಗಳನ್ನು ಯಂತ್ರಕ್ಕೆ ಸಂಪರ್ಕಿಸಿರುವ ಫಿಲ್ಟರ್ ಟ್ಯೂಬ್‌ಗಳನ್ನು ಬಳಸಿ ಫಿಲ್ಟರ್ ಮಾಡಲಾಗುತ್ತದೆ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಲಾಗುತ್ತದೆ. ರೈತರಿಗೆ ಪಂಚಗವ್ಯವನ್ನು ಪ್ರತಿ ಲೀಟರ್‌ಗೆ ರೂ. 80 ರಂತೆ ಮಾರಾಟ ಮಾಡಲಾಗುತ್ತದೆ. ಬಿತ್ತನೆ, ಹೂವುಬಿಡುವ ಸಮಯ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಬೆಳೆಗೆ ಅನ್ವಯಿಸಲಾಗುತ್ತದೆ.

ಉಪಸಂಹಾರ

ಭಾರತದಲ್ಲಿನ ಶಕ್ತಿಸಂಪನ್ಮೂಲಗಳ ಬೇಡಿಕೆಗಳ ಪ್ರಕಾರ, ಸೌರಶಕ್ತಿ ಚಾಲಿತ ವ್ಯವಸ್ಥೆಗಳು ರೈತರಿಗೆ ಉತ್ತಮವಾದ ಹಾಗೂ ಸೂಕ್ತವಾದ ಪರ್ಯಾಯ ಶಕ್ತಿ ಆಧಾರಿತ ವ್ಯವಸ್ಥೆಯಾಗಿದೆ. ಕೆಲವು ಪ್ರಾಥಮಿಕ ಹೂಡಿಕೆಯ ಅಗತ್ಯವಿದ್ದರೂ, ಅವು ಪರಿಸರ ಸ್ನೇಹಿಯಾಗಿದ್ದು ಯೋಜಿತ ವೈವಿಧ್ಯೀಕರಣದ ಮೂಲಕ ದೀರ್ಘಾವಧಿಯಲ್ಲಿ ಹೆಚ್ಚುವರಿ ಆದಾಯವನ್ನು ಪಡೆಯಲು ರೈತರಿಗೆ ಅನುವು ಮಾಡಿಕೊಡುತ್ತದೆ.

ಅರುಣಕುಮಾರ ಶಿವರಾಯ್‌


Arunkumar Shivaray

Program Manager, Livelihoods

Kalike- Tata Trusts

Sri Laxmi Nivas, Plot No. 14&15,

Behind Balaji Kalayana Mantap

Near Vanakeri Layout

Yadgir, 585201

ashivaray@tatatrusts.org


 ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ :೪; ಡಿಸೆಂಬರ್‌ ೨೦೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...