ಸ್ಥಿತಿಸ್ಥಾಪಕ ಕೃಷಿ – ಒಂದು ಎಕರೆ ಮಾದರಿ


ನೈಸರ್ಗಿಕ ವಿಧಾನಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡಲ್ಲಿ ಒಂದು ಎಕರೆ ಭೂಮಿಯಲ್ಲಿನ ಕೃಷಿ ಕೂಡ ಲಾಭದಾಯಕವಾಗಬಲ್ಲುದು. ಕರ್ನಾಟಕದ ರೈತ ತಿಮ್ಮಯ್ಯ ತನ್ನ ಒಂದು ಎಕರೆ ಮಾದರಿಯ ಮೂಲಕ ಸಣ್ಣ ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದನ್ನು ತೋರಿಸಿದ್ದಾರೆ.


ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚೌಡಿಕಟ್ಟೆ ಗ್ರಾಮದ ಶ್ರೀ ತಮ್ಮಯ್ಯ ಅವರು ನಾಲ್ಕು ದಶಕಗಳಿಂದ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರು. ರಾಸಾಯನಿಕ ಕೃಷಿ ಮಾಡುತ್ತಿದ್ದ ತಂದೆಯಿಂದ ಇವರಿಗೆ ಜಮೀನು ದತ್ತವಾಯಿತು. ತಿಮ್ಮಯ್ಯನವರು ಪದವೀಧರರಾಗಿದ್ದು ಅವರಿಗೆ ರಾಸಾಯನಿಕ ಕೃಷಿಯ ಅಪಾಯಗಳ ಬಗ್ಗೆ ತಿಳಿದಿತ್ತು. ಹಾಗಾಗಿ ನೈಸರ್ಗಿಕ ಕೃಷಿ ವಿಧಾನಗಳಿಗೆ ಹೊರಳಿದರು.

ತಮ್ಮಯ್ಯ 24 ಎಕರೆ ಜಮೀನು ಹೊಂದಿದ್ದಾರೆ. ಸುಮಾರು 16 ಎಕರೆ ತೋಟವಿದೆ. ಅದರಲ್ಲಿ ಮುಖ್ಯವಾಗಿ 800 ತೆಂಗಿನ ಮರಗಳಿದ್ದು ಅಂತರಬೆಳೆಯಾಗಿ ಸಪೋಟ, ಸಪೋಟ, ಬಾಳೆ, ಮಾವು, ಶುಂಠಿ, ಅರಿಶಿನ ಮತ್ತು ಕಾಲೋಚಿತ ಕ್ಷೇತ್ರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಾವಯವ ರೀತಿಯಲ್ಲಿ ಬೆಳೆಗಳನ್ನು ಪುನರಾವರ್ತನೆ ಮಾಡಿ ಬೆಳೆಯಲಾಗುತ್ತದೆ. ಸುಮಾರು ಒಂದು ಎಕರೆಯನ್ನು ತೋಟದ ಬೆಳೆಗಳು, ಅರಣ್ಯ ಬೆಳೆಗಳು, ಹಣ್ಣಿನ ಬೆಳೆಗಳು ಮತ್ತು ಟಿಂಬರ್‌ ಬೆಳೆಗಳು ಹಾಗೂ ನರ್ಸರಿಗಳನ್ನು ಬೆಳೆಸಲು ಮೀಸಲಿಡಲಾಗುತ್ತದೆ. ನರ್ಸರಿಯಲ್ಲಿ ಬೆಳೆಸಿದ ಸಸಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದು ರೈತರಿಗೆ ಆದಾಯ ತರುವ ಚಟುವಟಿಕೆಯಾಗಿದೆ.

ಸುಮಾರು ಆರು ಎಕರೆ ಪ್ರದೇಶದಲ್ಲಿ ಆರು ಕೃಷಿ ಹೊಂಡಗಳಿವೆ. ಬದುಗಳಲ್ಲಿ ಬಿದಿರು, ಅತ್ತಿಹಣ್ಣು ಹಾಗೂ ಮೇವಿನ ಬೆಳೆಗಳನ್ನು ಬೆಳೆಯಲಾಗಿದೆ. ಹೆಚ್ಚಾಗಿ ಅವರ ಜಮೀನಿನಲ್ಲಿ ನೈಋತ್ಯ ಮುಂಗಾರಿನ ಸಮಯದಲ್ಲಿ ಸುಮಾರು 53 ಮಳೆಯ ದಿನಗಳಲ್ಲಿ ಸರಾಸರಿ ವಾರ್ಷಿಕ 770 ಮಿಮೀ ಮಳೆಯಾಗುತ್ತದೆ. ಅವಶ್ಯಕತೆ ಇದ್ದಾಗ ಹೊಂಡದಲ್ಲಿನ ನೀರನ್ನು ನೀರಾವರಿಗೆ ಬಳಸಲಾಗುತ್ತದೆ. ಹೊಂಡದ ನೀರನ್ನು ಬಳಸದೆ ಬಿಟ್ಟಾಗ ಅದು ಅಂತರ್ಜಲವನ್ನು ಮರುಹೂರಣಗೊಳಿಸುತ್ತದೆ. ಅವರು ನೀರನ್ನು ಪಂಪ್‌ ಮಾಡಲು ಬಯಸುವುದಿಲ್ಲ. ಆದರೆ ಬೇಸಿಗೆಯಲ್ಲಿ ನೀರನ್ನು ಎತ್ತಲು 5ಎಚ್‌ಪಿ ಮೋಟಾರು ಬಳಸುತ್ತಾರೆ.

ಕೃಷಿಹೊಂಡಗಳಲ್ಲಿನ ನೀರು ಅಂತರ್ಜಲವನ್ನು ಮರುಹೂರಣಗೊಳಿಸಲು ನೆರವಾಗುತ್ತದೆ

ಆರರಲ್ಲಿ ಒಂದು ಹೊಂಡದಲ್ಲಿ ಮೀನು ಸಾಕಣೆ ಮಾಡಲಾಗುತ್ತಿದೆ. ಇದು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ. ಇದರೊಂದಿಗೆ ತಮ್ಮಯ್ಯ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಹೆಚ್ಚುವರಿ ಆದಾಯದೊಂದಿಗೆ ಇದು ಜೈವಿಕ ಕೃಷಿ ಪದ್ಧತಿಗೆ ಮುಖ್ಯ ಎಂದು ಭಾವಿಸಿದ್ದಾರೆ. ಅವರ ತೋಟದಲ್ಲಿ ಸುಮಾರು 11 ಹಸುಗಳು (8 ಮಲ್ನಾಡ್ ಗಿಡ್ಡ ಮತ್ತು 3 ಹಳ್ಳಿಕಾರ್), 4 ಕರುಗಳು, 3 ಕುರಿಗಳು, 12 ಮೇಕೆಗಳು, 2 ಟರ್ಕಿ ಕೋಳಿಗಳು ಮತ್ತು 4 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಟರ್ಕಿ ಕೋಳಿಗಳು ಹಾವುಗಳಿಗೆ ಪರಭಕ್ಷಕಗಳಂತೆ ಕಾರ್ಯನಿರ್ವಹಿಸುತ್ತವೆ.

ಒಂದು ಎಕರೆ ಮಾದರಿ ಭೂಮಿ

ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಕ್ಷೀಣಿಸುತ್ತಿರುವ ಕೃಷಿ ಭೂಮಿಯಿಂದಾಗಿ ಸಣ್ಣ ರೈತರು ಕೃಷಿಯನ್ನು ನಂಬಿ ಜೀವನ ನಡೆಸುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ತಮ್ಮಯ್ಯ ಅರಿತುಕೊಂಡರು. ಸಾಂಪ್ರದಾಯಿಕ ವಿಧಾನದಲ್ಲಿ ಏಕಬೆಳೆ ಪದ್ಧತಿ ಅನುಸರಿಸುವವರ ವಿಷಯದಲ್ಲಿ ಇದು ಸತ್ಯವಾಗಿತ್ತು.  2019 ರಲ್ಲಿ ಅವರು ಕೊಲ್ಲಾಪುರದ ಕನೇರಿಯ ಶ್ರೀ ಸಿದ್ಧಗಿರಿ ಮಠಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಒಂದು ಎಕರೆ ಮಾದರಿ ಭೂಮಿಯ ಬಗ್ಗೆ ತಿಳಿದುಕೊಂಡರು. ಒಂದು ಎಕರೆ ಜಮೀನಿನಲ್ಲಿ ಸ್ವಾವಲಂಬಿಯಾಗಿರುವುದು ಹೇಗೆ ಎಂಬುದನ್ನು ತಾನು ತೋರಿಸಿಕೊಟ್ಟರೆ, ಸೀಮಿತ ಸಂಪನ್ಮೂಲ ಹೊಂದಿರುವ ರೈತರು ಕೃಷಿಯಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕೊಂಡರು. ಇದು ಅವರ ಜಮೀನಿನಲ್ಲಿ ಒಂದು ಎಕರೆ ಮಾದರಿಯ ಅಭಿವೃದ್ಧಿಗೆ ನಾಂದಿಯಾಯಿತು.

2019 ರಲ್ಲಿ, ತಮ್ಮಯ್ಯ ಬಹುಪದರದ ಕೃಷಿ ತಂತ್ರವನ್ನು ಕಲಿತರು. ಈ ವಿಧಾನದಲ್ಲಿ, ಭೂಮಿ, ನೀರು, ಸೂರ್ಯನ ಬೆಳಕು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಏಕಕಾಲದಲ್ಲಿ ವಿವಿಧ ಎತ್ತರದ ಸಸ್ಯಗಳನ್ನು ಬೆಳೆಸಲಾಗುತ್ತದೆ. ಇದೊಂದು ಸುಸ್ಥಿರ ತಂತ್ರವಾಗಿದ್ದು ಮೊದಲ ಬೆಳೆ ಕೊಯ್ಲು ಮುಗಿಯುವ ಹೊತ್ತಿಗೆ ಎರಡನೇ ಬೆಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಗಿಡಗಳು ಒಂದಕ್ಕೊಂದು ಹತ್ತಿರದಲ್ಲಿ ಬೆಳೆಯುವುದರಿಂದ ಒಂದು ಗಿಡಕ್ಕೆ ಹಾಯಿಸಿದ ನೀರು ಎರಡು ಅಥವಾ ಹೆಚ್ಚಿನ ಬೆಳೆಗಳಿಗೆ ಸಾಕಾಗುತ್ತದೆ. ಹೀಗಾಗಿ ನೀರಿನ ಉಳಿತಾಯವಾಗುತ್ತದೆ.

ತಮ್ಮಯ್ಯನವರ ಪ್ರಯೋಗವು ತೆಂಗಿನ ಮರಗಳೊಂದಿಗೆ ಆರಂಭವಾಯಿತು. ಮೊದಲಿಗೆ ತೋಟದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ 30 ಅಡಿ ಅಂತರದಲ್ಲಿ ತೆಂಗಿನ ಮರಗಳನ್ನು ನೆಟ್ಟರು. ಎರಡು ತೆಂಗಿನ ಮರಗಳ ನಡುವೆ, ಅವರು ಸಪೋಟಾ ಮರವನ್ನು (ಮಧ್ಯಮ ಎತ್ತರದ ಹೆಚ್ಚು ಮೇಲಾವರಣ ಹೊಂದಿರುವ) ನೆಟ್ಟರು. ತೆಂಗು ಮತ್ತು ಸಪೋಟದ ನಡುವಿನ ಜಾಗದಲ್ಲಿ ಬಾಳೆಗಿಡ (ಮಧ್ಯಮ ಎತ್ತರ) (2ನೇ ಪದರ) ನೆಟ್ಟರು. ತೆಂಗಿನ ಮರಗಳ ಕೆಳಗೆ ಕರಿಮೆಣಸು, ವೀಳ್ಯದೆಲೆ ಬಳ್ಳಿ ಹಾಕಿದ್ದಾರೆ. ಈ ಮರಗಳ ನಡುವೆ, ಶುಂಠಿ ಮತ್ತು ಅರಿಶಿನವನ್ನು ನೆಟ್ಟರು. ಗದ್ದೆಯ ಉತ್ತರ ಮತ್ತು ದಕ್ಷಿಣ ಭಾಗದ ಮೂರನೇ ಪದರದಲ್ಲಿ ಮಾವು, ಪೇರಲ, ಪಪ್ಪಾಯಿ, ನೇರಳೆ, ಹಲಸು ಮುಂತಾದ ಮರಗಳನ್ನು ನೆಟ್ಟರು. ಈ ಮರಗಳ ಕೆಳಗೆ ಮುಂದಿನ ಪದರವಾಗಿ ನೋನಿ ಗಿಡ, ಪ್ಯಾಶನ್ ಹಣ್ಣು, ರಾಮ ಫಲ, ಲಕ್ಷ್ಮಣ ಫಲ, ನಿಂಬೆ ಮರ ಮತ್ತು ಚಿಕ್ಕ ಹಣ್ಣಿನ ಮರಗಳನ್ನು ನೆಡಲಾಗುತ್ತದೆ .

ಅವರು ಸೊಪ್ಪು, ಕಾಲೋಚಿತ ತರಕಾರಿಗಳು ಮತ್ತು ಧಾನ್ಯಗಳನ್ನು ಸಹ ನೆಟ್ಟಿದ್ದಾರೆ. ಇವು ಮಣ್ಣನ್ನು ಆವರಿಸುವ ಮೂಲಕ ಕಳೆಯ ಬೆಳವಣಿಗೆಯನ್ನು ತಡೆಯುತ್ತದೆ. ಭೂಮಿಯೊಳಗೆ ಬೆಳೆವ ಶುಂಠಿ, ಅರಿಶಿನ, ಗೆಣಸು, ಮರಗೆಣಸು ಮತ್ತು ಸಿಹಿ ಗೆಣಸುಗಳನ್ನು ನೆಡಲಾಗುತ್ತದೆ. ಸಿಹಿಗೆಣಸನ್ನು ಇಲಿಗಳನ್ನು ಆಕರ್ಷಿಸಲು ಉಳಿದ ಬೆಳೆಗಳನ್ನು ಕಾಪಾಡಲು ಬೆಳೆಯಲಾಗುತ್ತದೆ. ಈ ವ್ಯವಸ್ಥೆಯು ಸಹಜೀವನವನ್ನು ಒಳಗೊಂಡಿದ್ದು ಪ್ರತಿ ಸಸ್ಯವು ಇನ್ನೊಂದಕ್ಕೆ ಬೆಳೆಯಲು ಸಹಾಯ ಮಾಡುತ್ತದೆ. ಅರಿಶಿನವು ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ತರಕಾರಿಗಳು ಕಳೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಮಸಾಲೆ ಗಿಡಗಳಿಗೆ ಕಡಿಮೆ ಸೂರ್ಯನ ಬೆಳಕು ಬೇಕಾಗುವುದರಿಂದ ಅವುಗಳನ್ನು ಈ ಗಿಡಗಳ ನಡುವೆ ಬೆಳೆಯಲಾಗುತ್ತದೆ.

ಗ್ಲಿರಿಸಿಡಿಯಾ, ನುಗ್ಗೆ, ಸೆಸಬಾನಿಯ, ಹೆಬ್ಬೇವು ಇವುಗಳನ್ನು ಬೇಲಿ ಗಿಡಗಳಂತೆ ಬೆಳೆಯಲಾಗುತ್ತದೆ. ಎಲ್ಲ ಗಿಡಗಳಲ್ಲೂ ವಿವಿಧ ಗುಣಗಳಿವೆ. ಗ್ಲಿರಿಸಿಡಿಯಾವು ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರಗೊಳಿಸುತ್ತದೆ. ನುಗ್ಗೆ ಮತ್ತು ಸೀಬೆಕಾಯಿಯ ಎಲೆಗಳು ಮತ್ತು ಬೀಜಗಳನ್ನು ಪಾಕಶಾಲೆ ಮತ್ತು ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಜೊತೆಗೆ ಇದರ ಎಲೆಗಳು ಸಾವಯವ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ತಮ್ಮಯ್ಯ ಅವರು ಒಂದು ಎಕರೆ ಜಮೀನಿಗೆ ಭೇಟಿ ನೀಡಿದಾಗಲೆಲ್ಲಾ ಎಲೆಗಳನ್ನು ಕೊಯ್ದು ನೆಲದ ಮೇಲೆ ಹರವುತ್ತಾರೆ. ಇದು ಹಸಿರು ಎಲೆಗಳ ಗೊಬ್ಬರವಾಗಿ ಮತ್ತು ಹೊದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮಣ್ಣಿನ ಮೇಲೆ ಹರಡಲಾಗುವ ಸುಮಾರು ಒಂದು ಕೆಜಿ ಗ್ಲಿರಿಸಿಡಿಯಾ ಎಲೆಗಳು ಸುಮಾರು 120 ಲೀಟರ್ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆ ಮೂಲಕ ನೀರಿನ ಸಂರಕ್ಷಣೆ ಮಾಡುತ್ತದೆ.

ಗುಂಪು ಬಾಳೆ ಕೃಷಿ ಎನ್ನುವ ವಿನೂತನ ವಿಧಾನ

 

ಇತರ ಸಸ್ಯಗಳಲ್ಲಿ 80 ಔಷಧೀಯ ಸಸ್ಯಗಳು, ಕಾಫಿ ಮತ್ತು ಇತರ ಸಣ್ಣ ಹಣ್ಣುಗಳು ಸೇರಿವೆ. ತೋಟದಲ್ಲಿ ಹೇರಳವಾದ ಸಸ್ಯಗಳಿದ್ದು ಪರಾಗಸ್ಪರ್ಶವನ್ನು ಹೆಚ್ಚಿಸಲು ತಮ್ಮಯ್ಯ ಅವರು ಒಂದು ಎಕರೆ ಮಾದರಿ ಭೂಮಿಯಲ್ಲಿ ಜೇನುಗೂಡಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಜೀವಾಮೃತವನ್ನು (ನೋಡಿ ಚೌಕ ೧) ಮಾದರಿ ಭೂಮಿಯಲ್ಲಿ ಡ್ರಮ್ಮುಗಳಲ್ಲಿ ತುಂಬಿಸಿಡಲಾಗುತ್ತದೆ. ಗೊಬ್ಬರ ತಯಾರಿಕೆಗಾಗಿ ಬೆಳೆ ಅವಶೇಷಗಳನ್ನು ಸಹ ಮಾದರಿ ಜಮೀನಿನಲ್ಲಿ ಸಂಗ್ರಹಿಸಲಾಗುತ್ತದೆ. ಒಂದು ಎಕರೆ ಮಾದರಿ ಜಮೀನಿನಲ್ಲಿ ಕಳೆ ಕೀಳುವುದು, ಉಳುಮೆ ಮಾಡುವುದು, ಅಂತರ ಬೇಸಾಯ ಮಾಡುವುದು ಇಲ್ಲ.

ತಮ್ಮಯ್ಯ ಅವರು ಮಾದರಿ ಜಮೀನಿನಲ್ಲಿ ಜೈವಿಕ ಕೀಟ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಉದಾಹರಣೆಗೆ, ಅಳಲೆಕಾಯಿ ಬೀಜದ ಎಣ್ಣೆಯನ್ನು ಎರಡು ಲೀಟರ್‌ ಬಾಟಲಿಯಲ್ಲಿ ತುಂಬಿ ತೆಂಗಿನ ಮರಕ್ಕೆ ಕಟ್ಟುವುದರಿಂದ ಘೇಂಡಾಮೃಗ ದುಂಬಿಯ ಕಾಟವನ್ನು ತಡೆಯಬಹುದು. ಅಂತೆಯೇ, ಮಂಗಗಳ ಕಾಟವನ್ನು ನಿಯಂತ್ರಿಸಲು, ತಮ್ಮಯ್ಯನವರು ತೆಂಗಿನ ಮರದ ಮೇಲೆ ಮೀನಿನ ತುಂಡುಗಳೊಂದಿಗೆ ಮೀನು ಸಾಂಬಾರ್ ತುಂಬಿದ 2 ಲೀಟರ್ ನೀರಿನ ಬಾಟಲಿಯನ್ನು ಇಡುತ್ತಾರೆ. ಮೀನಿನ ವಾಸನೆಯಿಂದಾಗಿ ಮಂಗಗಳು ಹಿಮ್ಮೆಟ್ಟುತ್ತವೆ.

ಚೌಕ : ಜೀವಾಮೃತ ತಯಾರಿಕೆ

ಒಂದು ಬ್ಯಾರೆಲ್‌ಗೆ 200 ಲೀಟರ್ ನೀರನ್ನು ಹಾಕಿ ನಂತರ 10 ಕೆಜಿ ತಾಜಾ ಸಗಣಿ ಮತ್ತು 10 ಲೀಟರ್ ಗಂಜಲವನ್ನು ಸೇರಿಸಿ. ಇದಕ್ಕೆ 2 ಕೆ.ಜಿ ಬೆಲ್ಲ, 2 ಕೆ.ಜಿ ಬೇಳೆ ಹಿಟ್ಟು ಮತ್ತು ಜಮೀನಿನ ಬದುವಿನ ಒಂದು ಹಿಡಿಯಷ್ಟು ಮಣ್ಣನ್ನು ಸೇರಿಸಿ.

ದ್ರಾವಣವನ್ನು ಚೆನ್ನಾಗಿ ಕಲಸಿ ಮತ್ತು ನೆರಳಿನಲ್ಲಿ 48 ಗಂಟೆಗಳ ಕಾಲ ಹುದುಗಲು ಬಿಡಿ. ಈಗ ಜೀವಾಮೃತ ಬಳಕೆಗೆ ಸಿದ್ಧವಾಗಿದೆ. ಒಂದು ಎಕರೆ ಭೂಮಿಗೆ 200 ಲೀಟರ್ ಜೀವಾಮೃತ ಸಾಕು.

ತಮ್ಮಯ್ಯ ಅವರು ಪ್ರಯೋಗಶೀಲ ಕೃಷಿಕರಾಗಿರುವುದರಿಂದ ತಮ್ಮ ಜಮೀನಿನಲ್ಲಿ ತೆಂಗಿನ ಸಸಿಗಳ ಆಯ್ಕೆ, ಗುಂಪು ಬಾಳೆ ಕೃಷಿಯ ವಿಧಾನ ಇತ್ಯಾದಿಗಳಂತಹ ಹಲವಾರು ವಿನೂತನ ಕಲ್ಪನೆಗಳನ್ನು ಪ್ರಯತ್ನಿಸಿದ್ದಾರೆ (ಚೌಕ 2). ತಮ್ಮ ಮಾದರಿ ತೋಟಕ್ಕೆ ಭೇಟಿ ನೀಡುವ ರೈತರೊಂದಿಗೆ ಈ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಲಾಭಗಳು ಮತ್ತು ಗಳಿಕೆ

ಬಹುಪದರದ ಕೃಷಿ ಮೂಲಕ ಕೇವಲ ಒಂದು ಎಕರೆಯಲ್ಲಿ 80 ಔಷಧೀಯ ಸಸ್ಯಗಳು, ತೆಂಗು, ಸಪೋಟ, ಬಾಳೆ, ಪೇರಲ, ಹಲಸು, ಧಾನ್ಯಗಳು, ಸೊಪ್ಪು, ಮಾವು, ಬಳ್ಳಿ ಹಾಗೂ ಗಡ್ಡೆ ತರಕಾರಿಗಳು ಮತ್ತು ಮೇವು ಬೆಳೆ ಸೇರಿದಂತೆ ಸುಮಾರು 200 ಬಗೆಯ ಗಿಡಗಳನ್ನು ಬೆಳೆಯಲಾಗುತ್ತದೆ. ಬಹುಪದರ ಬೆಳೆ ಪದ್ಧತಿಗಳು ಮಣ್ಣು, ನೀರು, ಗಾಳಿ, ಸ್ಥಳಾವಕಾಶ, ಸೂರ್ಯನ ಬೆಳಕು ಮತ್ತಿತರ ಒಳಸುರಿಯುವಿಕೆಗಳ ಉತ್ತಮ ಹಾಗೂ ಸುಸ್ಥಿರ ಬಳಕೆಯನ್ನು ಗುರಿಯಾಗಿರಿಸಿಕೊಂಡಿವೆ.

ಒಂದು ಎಕರೆ ಕೃಷಿಯು ಕಡಿಮೆ ನೀರನ್ನು ಬೇಡುತ್ತದೆ. ಹಾಗಾಗಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬಹುದು. ಪೊದೆಗಳು, ಬಳ್ಳಿಗಳು ಮತ್ತು ತರಕಾರಿಗಳು ನೀರನ್ನು ಉಳಿಸಿಕೊಳ್ಳುವುದರಿಂದ ನೀರಿನ ಬಳಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ದೊಡ್ಡ ಮರಗಳ ನೆರಳು ನೀರು ಆವಿಯಾಗುವುದನ್ನು ತಡೆಯುತ್ತದೆ. ಒಂದು ಎಕರೆಯಲ್ಲಿ, ಒಬ್ಬ ಸಾಂಪ್ರದಾಯಿಕ ರೈತ 20,000 ಲೀಟರ್ಗಿಂತ ಹೆಚ್ಚು ನೀರನ್ನು ಬಳಸಿದರೆ, ನನಗೆ 6,000 ಲೀಟರ್ಗಿಂತ ಕಡಿಮೆ ಸಾಕಾಗುತ್ತದೆಎಂದು ತಮ್ಮಯ್ಯ ಹೇಳುತ್ತಾರೆ.

ಚೌಕ : ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳಲ್ಲಿ ಹೊಸತು

ತೆಂಗಿನ ಸಸಿಗಳ ಆಯ್ಕೆ ಮತ್ತು ಬೆಳೆಸುವುದು: 40 ವರ್ಷ ಹಳೆಯದಾದ ಮತ್ತು ಗೋಲಾಕಾರದ ಕಿರೀಟದಂತೆ ಕಾಣುವ ಮರಗಳನ್ನು (ಹುಣ್ಣಿಮೆಯ ಆಕಾರದಂತೆ) ತಾಯಿ ಮರವಾಗಿ ಆಯ್ಕೆ ಮಾಡಬೇಕು. ತಾಯಿ ಮರಗಳಿಂದ ಬಿದ್ದ ತೆಂಗಿನ ಕಾಯಿಗಳನ್ನು ಸಂಗ್ರಹಿಸಿ ಸಣ್ಣಹೊಂಡದಲ್ಲಿ 3 ತಿಂಗಳು ಇಡಬೇಕು. ನಂತರ ಅರ್ಧ ತೇಲಿದ, ಅರ್ಧ ಮುಳುಗಿದ ಕಾಯಿಗಳನ್ನು ಮೊಳಕೆ ಬರಿಸಲು ಆಯ್ಕೆ ಮಾಡಬೇಕು. ಕಾಯಿಗಳನ್ನು ಜೀವಾಮೃತದಲ್ಲಿ ನೆನಸಿಡಬೇಕು (ಚೌಕ 1) ಮತ್ತು ಸಂಸ್ಕರಿಸಿದ ಕಾಯಿಗಳನ್ನು ಮೊಳಕೆ ಬರಿಸಲು ನರ್ಸರಿ ಚೀಲಗಳಲ್ಲಿ ಇಡಬೇಕು.

ಗುಂಪು ಬಾಳೆ ಕೃಷಿ ವಿಧಾನ: ತಮ್ಮಯ್ಯನವರು 10 ಬಗೆಯ ಬಾಳೆ ಅಂದರೆ ರೊಬಸ್ಟ್‌, ನೇಂದ್ರ, ಏಲಕ್ಕಿ ಬಾಳೆ, ರಸಬಾಳೆ, ಸಾಂಬಾರ್‌ ಬಾಳೆ, ಕಡಬಾಳೆ, ಮರಬಾಳೆ, ಕೆಂಪು/ರಾಜಬಾಳೆ ಮತ್ತು ಜಿ9 ಬಾಳೆಯನ್ನು ಬೆಳೆಯುತ್ತಿದ್ದಾರೆ. ಗೊನೆಯನ್ನು ಕಟಾವು ಮಾಡಿದ ನಂತರ ಉಳಿಯುವ ಕಾಂಡವನ್ನು ಜಮೀನನಲ್ಲಿಯೇ ಬಿಡಲಾಗುತ್ತದೆ. ಅವುಗಳಲ್ಲಿರುವ ಪೊಟ್ಯಾಷ್‌ನ್ನು ಹೊಸದಾಗಿ ಮೊಳಕೆಯೊಡೆದ ಸಸಿ ಹೀರಿಕೊಳ್ಳುತ್ತದೆ. ಇದರಿಂದ ಗಿಡಗಳಿಗೆ ಪೊಟ್ಯಾಶ್‌ ಇಲ್ಲವೇ ಗೊಬ್ಬರದ ಅಗತ್ಯ ಬೀಳುವುದಿಲ್ಲ.

ನೆಲದ ಮೇಲೆ ಬಿದ್ದಿರುವ ಒಣಗಿದ ಎಲೆಗಳು ಹೊದಿಕೆಯಂತೆ ಕಾರ್ಯನಿರ್ವಹಿಸುತ್ತದೆ

 ಈ ಮಾದರಿಯ ಮತ್ತೊಂದು ಅನುಕೂಲವೆಂದರೆ ವರ್ಷಪೂರ್ತಿ ಇಳುವರಿ ಪಡೆಯಬಹುದು. ಏಕೆಂದರೆ ಅವರು ವಿವಿಧ ಸಮಯದಲ್ಲಿ ಕೊಯ್ಲಿಗೆ ಬರುವ ಬೆಳೆಗಳನ್ನು ಬೆಳೆಯುತ್ತಾರೆ. ಈ ಮಾದರಿಯು ಆಹಾರ, ಪೌಷ್ಟಿಕಾಂಶ ಮತ್ತು ಆದಾಯ ಭದ್ರತೆಯನ್ನು ಒದಗಿಸುತ್ತದೆ. ಉದಾಹರಣೆಗೆ, ತಿಮ್ಮಯ್ಯನವರು ರಾಗಿ ಮೊದಲಾದ ಧಾನ್ಯಗಳನ್ನು ಮನೆ ಬಳಕೆಗೆ ಇಟ್ಟುಕೊಳ್ಳುತ್ತಾರೆ. ಇದು ಕುಟುಂಬಕ್ಕೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುತ್ತದೆ. ರಾಗಿಯಂತಹ ಧಾನ್ಯಗಳ ಸ್ವಲ್ಪ ಭಾಗವನ್ನು ಮೌಲ್ಯವರ್ಧನೆಗಾಗಿ ಬಳಸಲಾಗುತ್ತದೆ. ಅವರು ಸಾಂಪ್ರದಾಯಿಕ ವಿಧಾನದಲ್ಲಿ ರಾಗಿಯನ್ನು ಬೀಸಿ 20-25ಕೆಜಿಯಷ್ಟು ಹಿಟ್ಟನ್ನು ಮಾಡುತ್ತಾರೆ. ಇದರಿಂದ ಪೌಷ್ಟಿಕಾಂಶಗಳು ನಷ್ಟವಾಗುವುದಿಲ್ಲ. ಇದನ್ನು ಅವರು ಆರೋಗ್ಯ ಸ್ಪೂರ್ತಿ ಎನ್ನುವ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು ವಾರ್ಷಿಕ ರೂ. 50,000 ಗಳಿಸುತ್ತಿದ್ದಾರೆ. ಒಂದು ಎಕರೆ ಮಾದರಿಯಲ್ಲಿ ತೋಟಗಾರಿಕೆ ಬೆಳೆಗಳಾದ ತೆಂಗು, ಸಪೋಟ, ಬಾಳೆ, ಕಪ್ಪುಮೆಣಸಿನಿಂದ ವಾರ್ಷಿಕ ಸರಿಸುಮಾರು ರೂ. 10 ಲಕ್ಷ ಗಳಿಸುತ್ತಿದ್ದಾರೆ. ಜೊತೆಗೆ ಔಷಧೀಯ ಸಸ್ಯಗಳಿಂದ ತಯಾರಿಸಲಾಗದ “ಕಫ ಚೂರ್ಣ” ಹಾಗೂ ಮಾರಾಟವಾಗದೆ ಉಳಿದ ಬಾಳೆಹಣ್ಣನ್ನು ಒಣಗಿಸಿ ಮಾರುವ ಮೂಲಕವೂ ಹಣ ಗಳಿಸುತ್ತಿದ್ದಾರೆ.

ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳು, ಮಾವು, ಹಲಸನ್ನು ತನ್ನ ತೋಟಕ್ಕೆ ಬರುವವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ.

ಸಾವಯವ ರೀತಿಯಲ್ಲಿ ಬೆಳೆದಿರುವುದರಿಂದ ಅವರ ತೋಟದ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯಕರವಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಹೊರ ಒಳಸುರಿಯುವಿಕೆಗಳ ಮಿತವ್ಯಯ ಬಳಕೆ ಹಾಗೂ ಸಾಧ್ಯವಿದ್ದಲ್ಲಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಮೂಲಕ ಒಂದು ಎಕರೆ ಭೂಮಿಯಲ್ಲೂ ಲಾಭದಾಯಕ ಕೃಷಿ ಮಾಡಬಹುದು ಎನ್ನುವುದನ್ನು ತಮ್ಮಯ್ಯನವರು ತೋರಿಸಿಕೊಟ್ಟಿದ್ದಾರೆ.

ಕೃಷಿಯನ್ನು ಮೀರಿ

ತಮ್ಮಯ್ಯ ಅವರು ಸುಸ್ಥಿರ ಮಾದರಿಯನ್ನು ರೂಪಿಸಿದ್ದು ಮಾತ್ರವಲ್ಲದೆ, ತಮ್ಮ ಜಮೀನಿಗೆ ಭೇಟಿ ನೀಡುವ ರೈತರಿಗೆ ಅದನ್ನು ಅಭ್ಯಾಸ ಮಾಡಲು ಪ್ರೇರೇಪಿಸುತ್ತಿದ್ದಾರೆ. ಪ್ರತಿವಾರ ಅವರ ತೋಟಕ್ಕೆ 20-30 ಮಂದಿ ಭೇಟಿ ನೀಡುತ್ತಾರೆ. ಇತ್ತೀಚೆಗೆ ಮೈಸೂರಿನ ವಿದ್ಯಾವರ್ಧನ ಕಾಲೇಜು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ ನೀಡಿದ್ದರು.

ತಮ್ಮಯ್ಯನವರು ತಾವು ಅನುಸರಿಸುವ ಪದ್ಧತಿಗಳ ಕುರಿತು ಅರಿವು ಮೂಡಿಸುತ್ತಾರೆ. ಆಸಕ್ತರಿಗೆ ತಿಂಗಳಿಗೊಮ್ಮೆ ತರಬೇತಿ ಕಾರ್ಯಕ್ರಮ ನಡೆಸುತ್ತಾರೆ. ಸಾಮಾನ್ಯವಾಗಿ 50-100 ರೈತರು ಅವರ ತೋಟದಲ್ಲಿ ತರಬೇತಿ ಪಡೆಯುತ್ತಾರೆ. ಹುಣಸೂರಿನ ಸುತ್ತಮುತ್ತಲಿರುವ ಯುವಕರಿಗೆ ಅವರು ತೋಟ ನಿರ್ವಹಣೆಯ ಕುರಿತು ತರಬೇತಿ ನೀಡುತ್ತಾರೆ. ಈ ಯುವಕರಿಗೆ ತರಬೇತಿ ನೀಡುವುದರೊಂದಿಗೆ ದಿನಕ್ಕೆ ರೂ. 500 ಭತ್ಯೆ ನೀಡುತ್ತಾರೆ.

ಅವರು 70 ರೈತರಿಗೆ ಒಂದು ಎಕರೆ ಮಾದರಿಯನ್ನು ಅಳವಡಿಸಿಕೊಳ್ಳುವಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಇದರಲ್ಲಿ ಕನಕಪುರ, ನಂಜನಗೂಡಿನ, ಮೈಸೂರು ಹಾಗೂ ಚನ್ನಪಟ್ಟಣ ತಾಲ್ಲೂಕಿನ ರೈತರು ಸೇರಿದ್ದಾರೆ.

ಬಿ ಎಂ ಸಂಜನ


B M Sanjana

Assistant Editor, LEISA India

AME Foundation

No. 204, 100 Feet Ring Road

3rd Phase, Banashankari 2nd Block, 3rd Stage

Bangalore – 560 085, India.

E-mail: sanjana@amefound.org

 

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೪; ಸಂಚಿಕೆ : ‌೩ ; ಸೆಪ್ಟಂಬರ್ ೨೦‌೨೨

Recent Posts

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ...